Friday, September 6, 2013

ಇಂಬು ನೀಡಿತೇ ನಂಬಿಕೆ?!

 
ಹೌದು ಕಣಪ್ಪಾ, ನಿನಗನ್ನಿಸಿದಂತೆ ಇತ್ತೀಚೆಗೆ ನನಗೂ ನಿನ್ನಿಂದ ನಾನು಼ ಸ್ವಲ್ಪ ದೂರ ಬಂದಿರುವಂತೆ ಅನ್ನಿಸುತ್ತಿದೆ. ಹೇಳುತ್ತಾರಲ್ಲಾ, ನಮ್ಮ ಆತ್ಮಸಾಕ್ಷಿ ನಮ್ಮನ್ನು ಒಪ್ಪದಿದ್ದಾಗ ಯಾರನ್ನೂ ಸುಲಭವಾಗಿ ತಲುಪಲಾಗುವುದಿಲ್ಲವೆಂದು-ಹಾಗಾಗಿದೆ ಈಗ. ಮೊದಲೆಲ್ಲ ನಿನ್ನ ಮುದ್ದು ಮುಖದ ನೆನಪಾದಾಗಲೆಲ್ಲ ನನ್ನ ಮನಃಪಟಲದಲ್ಲಿ ಬಂದು ಪ್ರತಿಷ್ಠಾಪಿತನಾಗುತ್ತಿದ್ದೆ. ಅನಿನ್ನ ಸುಂದರವಾದ , ಕಪಟವಿಲ್ಲದ , ಸಾಂತ್ವನವೀಯುವ ಆತ್ಮೀಯನೋಟ ಹಾಗೂ ತಂಪೆರೆಯುವ ನಗುವಿನಿಂದ ನನ್ನತನವನ್ನೆಲ್ಲ ಆವರಿಸಿ "ನಿನಗೇಕೆ ಚಿಂತೆ ಅನು, ನಾನಿದ್ದೇನೆ " ಎಂಬ ಮಾತುಗಳಿಂದ ನನ್ನ ಮೈಮರೆಸುತ್ತಿದ್ದೆ. ಈಗ ಮಾತ್ರ ನಿನ್ನನ್ನೇ ನೆನೆಯುತ್ತಾ "ಒಮ್ಮೆ ಬಾರೋ, ನಿನ್ನ ಆ ನಗುವಿನ ತಂಪಿಂದ ನನ್ನೊಳಗಿನ ಎಲ್ಲ ಉರಿಯನ್ನು ಆರಿಸೋ. ಅದಿಲ್ಲದಿದ್ದರೆ ಬೇಡ-ನನಗೇನೂ ಕೊಡಬೇಡ ಬಿಡು, ಸುಮ್ಮನೆ ನನ್ನ ಮನದಲ್ಲಿ ಮತ್ತೆ ಸಾಕ್ಷಾತ್ಕಾರವಾಗೋ" ಎಂದು ಕೂಗಿ ಕರೆದರೂ ನೀ ಬರುತ್ತಿಲ್ಲ. ನೀ ಬರುತ್ತಿಲ್ಲ ಅನ್ನುವುದಕ್ಕಿಂತಲೂ, ಮುಂಚಿನಷ್ಟು ಪ್ರಾಮಾಣಿಕವಾಗಿ ನಾ ನಿನ್ನ ಕೂಗಲಾಗುತ್ತಿಲ್ಲ ಎಂದರೇನೇ ಸರಿಯಾಗಿರುತ್ತದೆ ಅನ್ನಿಸುತ್ತದೆ.ಯಾಕೋ ನಾನು ತಪ್ಪು ಮಾಡಿ ಬಿಟ್ಟೆನೇನೋ ಅನ್ನಿಸುತ್ತಿದೆ. ಆ ತಪ್ಪಿತಸ್ಥ ಭಾವನೆಯ ಮುಸುಕಿದ ಮೋಡ ನನ್ನೆಲ್ಲ ಚಿಂತನೆಗಳನ್ನು ಕೊನೆಗೆ ಅತ್ಯಂತ ಪ್ರಾಮಾಣಿಕವಾಗಿದ್ದ ನಿನ್ನಬಗೆಗಿನ ಆಲೋಚನೆಯನ್ನೂ ಮಬ್ಬಾಗಿಸಿದೆ.ಹೌದು ಮುದ್ದೂ, ಆ ಅನಿಶ್ಚಿತತೆಯ ಗಳಿಗೆಗಳಲ್ಲಿ ನೀನು ಸ್ಪಷ್ಟವಾಗಿ ನನ್ನೊಳಗಿನ ನಿನ್ನ ಧ್ವನಿಯ ಸೂಚನೆಯಂತೆ ನಿರ್ಧಾರ ತೆಗೆದುಕೊಳ್ಳಲು ಸೂಚಿಸಿದ ನಂತರವೇ ನಾನು ಮುಂದುವರೆದದ್ದು. ಅದೂ ಸರಿಯಿಲ್ಲವೆಂದೆನಿಸಿದ ಒಂದು ಕ್ಷಣ -ಆ ಸೂಚನೆಯನ್ನೂ ಮೀರಿ ನಕಾರಾತ್ಮಕ ನಿಲುವನ್ನು ಆ ಕಡೆಗೆ ತೋರಿದ್ದೂ ಆಯಿತು. ಆದರೆ ನನ್ನ ಆಸೆಯನ್ನು ಮೆಟ್ಟಿ ನಿಂತು ಅದರ ತೀವ್ರತೆಯನ್ನೂ ಮೀರಿದ್ದ ಈ ಬೇಡವೆಂಬ ನಿಲುವು ದೃಢವಾಗದಂತೆ ಮಾಡಿದ್ದು ಯಾರೋ ಮುಕುಂದಾ? ಸರಿ, ನಾನು ಮುಂದುವರೆದೆ. ಅದು ತಪ್ಪಾಗಿರಲಾರದೆಂಬ ಭರವಸೆಯಲ್ಲೇ, ಆ ನಿಟ್ಟಿನಲ್ಲೇ ಯಾಕೆ ಆಲೋಚಿಸಿದೆ ಗೊತ್ತಾ? ನೀನು ನನ್ನನ್ನು ಆಧರಿಸಿರುವೆ , ನಿನ್ನ ಆಧಾರದ ತಳಪಾಯದ ಮೇಲೆ ತೆಗೆದುಕೊಳ್ಳುವ ಯಾವ ನಿರ್ಧಾರವೂ ತಪ್ಪಲ್ಲ ಎಂಬುವುದು ನನ್ನ ಅಂದಿನ ಹಾಗೂ ಇಂದಿನ ನಂಬಿಕೆಯೂ ಹೌದು. ಇದು ಸುಳ್ಳಲ್ಲವಲ್ಲಾ? ಹಾಗಾದರೆ ನೀನೇಕೆ ದೂರ ಹೋದೆ? ವಂಚನೆಯಿದ್ದಲ್ಲಿ ನಾನಿರಲಾರೆ ಎಂದೆಯಾ? ಅದು ಮಾತ್ರ ಸುಳ್ಳು. ಎಷ್ಟೋ ಬಾರಿ ಕೆಟ್ಟದರ ಹಾವಳಿಯಿಂದ ಮನುಷ್ಯತ್ವ ನಾಶವಾಗುವ ಘಟ್ಟದಲ್ಲೂ ನೀನಲ್ಲಿರುವುದನ್ನು ನಾನು ನೋಡಿದ್ದೇನೆ. ನಮ್ಮ ನೆರೆಯ ಸಾಧು, ಭೂಗತ ಜಗತ್ತಿನ ಅನಭಿಷಿಕ್ತ ದೊರೆ ಅನಿಸಿಕೊಂಡಿದ್ದವನು, ನಮ್ಮ ಮನೆಯ ಸಾತ್ವಿಕ ವಾತಾವರಣಕ್ಕೆ ಬಾಗಿ ಹಬ್ಬ ಹರಿದಿನಗಳಲ್ಲಿ ಬಂದ್ದು ನಮ್ಮ ತಂದೆಯ ಅಡಿಗಳಿಗೆರಗುತ್ತಿದ್ದ. ಅವನು ತನ್ನ ಭವಿಷ್ಯ ಉಜ್ವಲವಾಗಲೆಂದೋ , ತನಗೆ ದೀರ್ಘಾಯುಷ್ಯ ಸಿಗಲಿ ಎಂದೋ ಬಯಸಲಾಗದು. ಮರುಕ್ಷಣದ ತನ್ನ ಜೀವಿತ ಇನ್ಯಾವನದೋ ಕತ್ತಿಯೇಟಿನ ಹೆಸರಿಗೋ , ಯಾವುದೋ ಪೋಲೀಸನ ಬಂದೂಕದ ಹೆಸರಿಗೋ ಬರೆಯಲ್ಪಡಬಹುದೆಂಬ ಅನಿಶ್ಚಿತತೆ ಅವನಿಗೆ ಚೆನ್ನಾಗಿ ಗೊತ್ತಿತ್ತು. ರೌಡಿಯೊಬ್ಬ ಅಶೀರ್ವಾದದ ಆಶಯವಿಲ್ಲದೆ, ಮುಂದಿರುವ ಚೇತನದ ಅಡಿಗೆರಗುವ ವಿನಯದಲ್ಲಿರುವುದು ನೀನಲ್ಲದೆ ಇನ್ನೇನೋ ಹರಿ? ಕಣ್ಣೆದುರು ಯಾವುದೋ ವಾಹನದಡಿ ಬೀಳಹೊರಟಿದ್ದ ಮಗುವನ್ನು ಅವನು ಹಾರಿ ಬಂದು ಎತ್ತಿಹಿಡಿದು, "ನಾ ನೋಡಿರದಿದ್ದರೆ ನಿನ್ನ ಪಾಡೇನಾಗುತ್ತಿತ್ತೋ ಮರೀ?" ಎನ್ನುತ್ತಾ ಕಣ್ಣೀರಿಳಿಸುತ್ತಿದ್ದಾಗ ಅವನ ಕಂಬನಿಯ ಕಣಕಣದಲ್ಲೂ ನಾ ಕಂಡದ್ದು ನಿನ್ನನ್ನೇ. ಎಷ್ಟೋ ಕೊಲೆಗಳನ್ನು ನಿರ್ದಾಕ್ಷಿಣ್ಯವಾಗಿ ಮಾಡಿ ಮುಗಿಸಿದ್ದ ಆ ಕ್ರೂರಿ ಯಾವುದೋ ಒಂದು ಮಗುವಿಗಾಗಿ ಅಳುತ್ತಿದ್ದುದಕ್ಕೆ ಕಾರಣವಾದ ಆ ನಿಸ್ವಾರ್ಥ ಕಳಕಳಿ, ನಿಷ್ಕಲ್ಮಷ ಪ್ರೇಮ ನಿನ್ನ ಸ್ವರೂಪವಲ್ಲದೇ ಇನ್ನೇನು? ಆ ಅಮಾನುಷ ವ್ಯಕ್ತಿತ್ವದಲ್ಲೂ ನೀನಿದ್ದೀಯ ಎಂದದ ಮೇಲೆ ನನ್ನಿಂದ ಅತ್ತತ್ತ ಯಾಕೋ ಸಾಗಿತ್ತಿರುವೆ? ಅವನಿಗಿಂತ ಕಡೆಯೇ ನಾನು? ನಾನು ಮಾಡಿದ್ದು ತಪ್ಪೆನ್ನುತ್ತೀಯಾ? ಅಯ್ಯೋ ನನ್ನ ಬಂಗಾರೂ, ಕ್ಷಣ ಕ್ಷಣವೂ "ನನ್ನಿಂದ ತಾಪ್ಪು ಮಾತ್ರ ಮಾಡಿಸಬೇಡ"ಎಂದು ಕೇಳಿಕೊಂಡದ್ದೆಲ್ಲ ನಿನ್ನನ್ನು ತಲುಪಿರಲೇ ಇಲ್ಲವೇ ಹಾಗಾದರೆ? ನಾ ಹೀಗೆ ಕೇಳಿಕೊಂಡಾಗಲೆಲ್ಲ "ನಾ ತಪ್ಪಾಗಗೊಡೆನು" ಅಂತ ನೀನಂದದ್ದೂ ಸುಳ್ಳೇ ಹಾಗಾದರೆ? ಅಥವಾ ನೀನು ಹಾಗಂದಂತೆ ನನಗನಿಸಿದ್ದು ನನ್ನ ಭ್ರಮೆಯೇ? ಅಲ್ಲವೆಂದಾದರೆ ನಾ ಮಾಡಿದ್ದೇ ತಪ್ಪಾದರೆ ಆ ಹೆಜ್ಜೆ ಇಡಲು ನೀ ಪ್ರೇರೇಪಿಸಿದ್ದೇಕೆ? ನಾನು ಹೆಜ್ಜೆ ಊರಲು ಕಾಲೆತ್ತಿದ್ದಾಗಕೆಳಗೆ ಮೃದುವಾದ ಹೂ ಹಾಸಿನ ಮೆತ್ತೆಯೇ ಕಾಣುವಂತೆ ಮಾಡಿದ್ದೇಕೆ? ಮುಳ್ಳಿರುವಂತೆ ತೋರಿಸಬಾರದಿತ್ತೇ? ಆ ಹೆಜ್ಜೆಗಳು ನಾನು ಸಫಲವಾಗುವತ್ತಲೇ ನನ್ನನ್ನು ಕೊಂಡೊಯ್ಯುವವೆಂಬ ನನ್ನ ನಂಬಿಕೆಗೆ ಒತ್ತು ಕೊಟ್ಟಂತೆ ನನ್ನ ಪ್ರಯತ್ನಗಳಿಗೆ ಅನುಕೂಲವಾಗುವ ಸಂದರ್ಭಗಳನ್ನೇ ಒದಗಿಸಿದ್ದೇಕೆ? ಆಗೆಲ್ಲ ನಾನು ಹೀಗೇ ಆಗುತ್ತದೆಂದುಕೊಂಡಾಗಲೆಲ್ಲ ಹಾಗಾಗದಂತೆ ನೋಡಿಕೊಂಡು ಒಂದೆರದು ನಿದರ್ಶನಗಳಿಂದ ನಿನ್ನ ವಿರೋಧವನ್ನು ನನಗರಿವಾಗಿಸುತ್ತಿದ್ದರೆ, ಬಹುಶಃ ಈ ಯೋಚನೆಯೊಂದು ಯೋಜನೆಯಾಗುತ್ತಿರಲಿಲ್ಲವೆನೋ! ಆದ್ರೆ ನೀನು ಪ್ರತಿಬಾರಿಯೂ ನನ್ನನ್ನು ಪ್ರೋತ್ಸಾಹಿಸಿದೆ. ಅನುಕೂಲ ಸಂದರ್ಭಗಳನ್ನೊದಗಿಸಿದೆ. ನಾನು ಮುಚ್ಚಿಡಬೇಕಾದ್ದನ್ನೆಲ್ಲ ನಿನ್ನ ಲೀಲೆಯಿಂದ ಮರೆಮಾಚಿದೆ. ನನಗೆ ಪೂರಕವಾಗಿದ್ದ ಸಂದರ್ಭಗಳಲ್ಲೆಲ್ಲ ನಿನ್ನ ಒಲವಿನ ಭಾಗವಹಿಸುವಿಕೆಯನ್ನು ನಾ ಕಾಣುತ್ತಿದ್ದೆನಲ್ಲೋ ಮುಕುಂದಾ?ಇದು ನನ್ನ ತಪ್ಪೇ? ಇಲ್ಲವೆನ್ನುತ್ತೀಎಯಾ? ಹಾಗಾದರೆ ನೀ ನನ್ನಿಂದ ದೂರ ಹೋಗಲು ಕಾರಣವಾದ ನನ್ನ ತಪ್ಪೇನು ಹೇಳಿಬಿಡಪ್ಪಾ.
ಓಹೋ! ಆಸೆಯೇ ತಪ್ಪೆನ್ನುತ್ತೀಯಾಹರೀ ? ಸರಿ ಬಿಡು, ಅಣುರೇಣುತೃಣಕಾಷ್ಠಗಳಲ್ಲೂ ಹೊಮ್ಮಿರುವ ನಿನಗೆ ಹೆಣ್ಣಿನ ಮನದೊಳಗೆ ಹೊಕ್ಕಿ ನೋಡಲಾಗಲಿಲ್ಲವೆ? ಹೊಕ್ಕಿದ್ದರೂ ಅಲ್ಲಿದ್ದ ಅತಿಸಹಜ ಬಯಕೆಯೊಂದು ಕಾಣಲಿಲ್ಲವೇ? ಕಂಡಿದ್ದರೂ ಅದರ ತೀವ್ರತೆಯನ್ನು ಮಾತ್ರ ನೀನು ಅರಿತುಕೊಳ್ಳಲಾಗಲಿಲ್ಲವೆಂದಾಯಿತು.ಹೌದು ಕಂದಾ, ನಾನು ಆ ಆಸೆಯ ಬಗ್ಗೆ ನಿನ್ನಲ್ಲಿ ತೋಡಿಕೊಂಡಾಗಲೆಲ್ಲ ಮತ್ತೆ ನೀನಂದಿದ್ದು ಅದೇ ಮಾತು- "ನಾನಿಲ್ಲವೇ ನಿನಗೆ?" ನನ್ನ ಪಾಲಿಗೆ ನೀನಿದ್ದೀಯ ಅಂದುಕೊಂಡು ನಾನು ಮತ್ತೆ ಮತ್ತೆ ನನ್ನ-ನಿನ್ನ ಒಡನಾಟದ ಲೋಕದೊಳಗೆ ಕಳೆದು ಹೋದೆ. ಆ ಭಾವತರಂಗದೊಳಗೆ ಮುಳುಗಿ ತಳದವರೆಗೂ ಹೋಗಿ ಹುಡುಕಾಡಿದೆ. "ಮನುಷ್ಯರ ಮಧ್ಯೆ ವ್ಯಕ್ತಿಸ್ವರೂಪದಲ್ಲಿ ನಾನಿರಲಾರೆ -ನಿನ್ನ ಭಾವನೆಗಳಿಗನುಸಾರವಾಗಿ ನನ್ನನ್ನು ಕಲ್ಪಿಸಿಕೊ" ಎಂದೆಯಲ್ಲಾ ಎಂದು ಕ್ಷಣ ಕ್ಷಣ ನಿನ್ನ ಸಂಗವನ್ನೇ ಕಲ್ಪಿಸಿಕೊಂಡದ್ದಾಯಿತು. ಆದ್ರೆ ನಾನು ತಾಯಿಯಾಗಿ ನಿನ್ನನ್ನು ಕಂದನನ್ನಾಗಿಸಿ ನನ್ನ ಪಾತ್ರವನ್ನು ನಾನು ನಿರ್ವಹಿಸಿದೆನೇ ಹೊರತು ನ್ನಿನ್ನಿಮ್ದ ಯಾವ ಪ್ರತಿಕ್ರಿಯೆಯೂ ಬರಲೇ ಇಲ್ಲ. ಬೆಳಿಗ್ಗೆ ನಿನ್ನನ್ನೆಬ್ಬಿಸುತ್ತಿದ್ದೇನೆಂದುಕೊಳ್ಳುತ್ತಿದ್ದಾಗ-ರಮಿಸಿ, ಓಲೈಸಿ ಏನೇನು ಮಾಡಿದರೂ ನೀನೇಳುತಿಲ್ಲವೆನ್ನಿಸಿ ಕೊನೆಗೆ ನನ್ನ ಮುತ್ತಿನ ಮಾಲೆಯ ಆಮಿಷವೊಡ್ಡಿದಾಗ ಮಣಿದು ನೀನೆದ್ದೆ ಎಂದುಕೊಳ್ಳುತ್ತಿದ್ದೆ. ಎಣೆಯಿಲ್ಲ ಮೌಲ್ಯದ ಮುತ್ತೊಂದು ನನ್ನ ಮುತ್ತಿಗೆ ಹಂಬಲಿಸುವುದು ನನಗೇ ಹೆಮ್ಮೆಯೆಂದೆನಿಸುತ್ತಿದ್ದಾದರೂ ನಾ ನಿನಗೆ ಮುತ್ತಿಡಲಾಗಲೇ ಇಲ್ಲ, ನೀನೇಳಲೇ ಇಲ್ಲ. ಮತ್ತೆ ನಿನ್ನ ತುಂಟಾಟಗಳಿಂದ ಸುಸ್ತಾಗಿ ನಿನ್ನನ್ನೆಳೆದುಕೊಂಡು ಸ್ನಾನಕ್ಕೆ ಕರೆದುಕೊಂಡು ಹೋಗುತ್ತಿದ್ದೇನೆಂದುಕೊಂಡ ಸಂದರ್ಭ- ಬಿಸಿನೀರು ಕಾಯಿಸಿ ನಿನ್ನ ಮುದ್ದುಶರೀರವನ್ನು ಸ್ನಾನ ಮಾಡಿಸುತ್ತಿದ್ದೇನೆಂದುಕೊಂಡಾಯಿತು, ಸುಂದರಪಾದಗಳ ತೊಳೆಯುವಾಗ ಜಗದೋಧ್ಧಾರನ ಪಾದಗಳನ್ನು ತೊಳೆಯುವ ಭಾಗ್ಯ ನನ್ನದೆಂದು ಧನ್ಯತೆಯನ್ನನುಭವಿಸಿದ್ದೂ ಆಯಿತು. ನಿನ್ನ ಮೈ ಒರೆಸಿ, ನನ್ನ ಕಂದನಿಗೆ ಎಂದುಕೊಂಡು ಅಂಗಡಿಗಳಲ್ಲಿ ಆಸೆಯಿಂದ ನೋಡುತ್ತಿದ್ದ ಅಂಗಿಗಳಲ್ಲೊಂದನ್ನು ನಿನಗೆ ತೊಡಿಸಿದ್ದೂ ಆಯಿತು, ಆದರೆ ಆ ಬಟ್ಟೆಯಿಂದಾವೃತನಾಗಿ ನೀನುಮಾತ್ರ ನನ್ನ ಕಣ್ಣ ಮುಂದೆ ಬರಲೇ ಇಲ್ಲ. ನಿನಗುಣಿಸಲೆಂದು ಬಗೆಬಗೆಯ ತಿಂಡಿಗಳನ್ನು ತಯಾರಿಸಿದ್ದೆನಾದರೂ, ನೀನು ತಿನ್ನಬರಲೇಇಲ್ಲ. ಯಾಕೋ ಕಂದ? ನನ್ನಿಂದ ನಿನಗೆ ಸಮರ್ಪಿತವಾದ ನನ್ನ ಜೀವಿತದ ಪ್ರತಿಗಳಿಗೆಯನ್ನೂ ನೀನು ಉಢಾಫೆಯಾಗಿ ಕಂಡದ್ದೇಕೋ ಮುಕುಂದಾ? ಕಂದಾ, ಮುದ್ದೂ, ಚಿನ್ನಾ, ಬಂಗಾರೂ, ನನ್ನ ಜೀವವೇ, ನನ್ನ ಉಸಿರೇ.... ಎಂದ್ದೆಲ್ಲ ಬಾಯಿನೋಯುವಷ್ಟು ಬಾರಿ ಕರೆದದ್ದಾಯಿತು. ನೀನು ಮಾತ್ರ ಒಮ್ಮೆಯೂ ನನ್ನನ್ನು ಅಮ್ಮಾ ಎನ್ನಲಿಲ್ಲ. ಆ ಕರೆಯನ್ನು ಇನ್ನೆಲ್ಲಿಂದಾದ್ದರೂ ಕೇಳಿಸುವೆಯೇನೋ ಎಂದು ಕಾದೇ ಕಾದೆ. ನೀನೇ ಹೇಳಿದ್ದೆಯಲ್ಲಾ, "ನಿನ್ನ ಕಲ್ಪನೆಯಲ್ಲೇ ನನ್ನನ್ನು ಕಲ್ಪಿಸಿಕೋ. ಎಂದಾದರೊಮ್ಮೆ ಅದು ಸಾಕ್ಷಾತ್ಕಾರ ರೂಪ ತಳೆದೀತು" ಅಂತ? ಹಾಗಾಗಿ ಇನ್ನೆಲ್ಲಿಂದ್ದಾದರೂ ಆ ಕರೆ ಕೇಳಿಸಿದ್ದರೆ ಅದು ನೀನೇ ಎಂದು ನಂಬಿಯೇ ಬಿಡುತ್ತಿದ್ದೆ. ಇನ್ಯಾರಾದರೂ ಇದು ಹೀಗೇ ಎಂದು ನುಡಿದಾಗ ಹಾಗಲ್ಲದಿರಬಾರದೇಕೆ ಎಂದು ಪ್ರಶ್ನಿಸುವ ಮನ ನಿನ್ನ ಮುಂದೆ ಸದಾ ಒಪ್ಪಿಕೊಳ್ಳುತ್ತಿರುತ್ತದೆ ಕಣೊ. ನೂರುಬಾರಿ ನೀನಂದಂತೆ ನಡೆಯದಿದ್ದರೂ, ನೂರೊಂದನೇ ಬಾರಿಯೂ ನಿನ್ನನ್ನು ನಂಬುವಲ್ಲಿ ಮೊದಲಬಾರಿಯ ಶ್ರಧ್ಧೆಯೇ ಇರುವುದು ಅನ್ಯಥಾ ಶರಣಮ್ ನಾಸ್ತಿ ಎಂದಂತೆ ಅಲ್ಲದೆ ಇನ್ನೇನು ಹೇಳೋ ಹರೀ. ಅದಿರಲಿ ಬಿಡು.
ನನ್ನನ್ನೇ ಪೂರ್ತಿಯಾಗಿ ಅವಲಂಬಿಸಿರುವ , ನನ್ನನ್ನು ನಾನೆಂಬ ಒಂದೇ ಕಾರಣಕ್ಕಾಗಿ ಮಾತ್ರ ಪ್ರೀತಿಸುವ ಪುಟ್ಟ ಜೀವವೊಂದಕ್ಕಾಗಿ ಹಂಬಲಿಸಿದ್ದು ತಪ್ಪೇನೋ ಕಂದಾ? ಸಣ್ಣಂದಿನಿಂದಲೂ "ನೀನೇನಾಗುತ್ತೀಯೇ" ಅಂದವರಿಗೆಲ್ಲಾ "ಅಮ್ಮನಾಗುತ್ತೇನೆ" ಅನ್ನುವಷ್ಟು ಪ್ರಬಲ ಆಸೆಯ ಬೀಜವನ್ನು ನನ್ನೊಳಗೆ ಆಗಲೇ ಬಿತ್ತಿದ್ದು ನೀನೇ ಅಲ್ಲವೇನೋ ದೊರೆ? ಅವೇ ದಿನಗಳಲ್ಲೊಂದು ಸಲ ಹಾಲುಗಲ್ಲದ ಹಸುಳೆಯಂತೆ ನಾನು, ಉತ್ಸವದ ದಿನ ತೇರನ್ನೇರಿ ನೀನು ಬರುತ್ತಿದ್ದಾಗ ಅಲ್ಲಿ ನಿಜವಾಗಿಯೂ ನಿನ್ನನ್ನೇ ಕಂಡವಳಂತೆ "ದೇದು, ದೇದು" ಎಂದು ತೇರಿನೆಡೆಗೆ ಓಡಿದ ಘಟನೆಯ ಬಗ್ಗೆ ನಾನು ಕೇಳಿಬಲ್ಲೆ, ನೀನು ನೋಡಿರಬೇಕಲ್ಲಾ? ಮರದ ನಿರ್ಜೀವ ತೇರಿನೊಳಗೆ ಲೋಹದ ಬೊಂಬೆಯೊಂದರಲ್ಲಿ ಅದ್ಯಾವ ಜೀವಂತಿಕೆ ಕಂಡೆನೋ ಗೊತ್ತಿಲ್ಲ, ಇದೂ ನಿನ್ನಾಟವೇ- ಬಲ್ಲೆ ನಾನು.ಆ ವಯಸ್ಸಿನ ಸಹಜಜನಿತ ಭಾವನೆಗೆ ನೀರೆರೆದು ಇಂದಿಗೂ ನಿನ್ನ ರಥೋತ್ಸವದಲ್ಲಿ ತೇರಿನೊಳಗೆ ಕೂತುನಗುತ್ತಾ ನಮ್ಮೆಲ್ಲರನ್ನು ನೋಡುವಂತೆ ಭಾಸವಾಗುವಷ್ಟು ಪರಿಶುಧ್ಧತೆ ನನ್ನೊಳಗಿರಿಸಿರಿವುದು ನೀನೇ ಆದರೆ, ನಾನು ತಾಯಾಗುವ ಆಸೆಯನ್ನೂ ನೀನೇ ನೀರೆರೆದು ಪೋಷಿಸಿದ್ದು ತಾನೇ? ಆಸೆ ತಪ್ಪಾದರೆ ಅದನ್ನು ಪೋಷಿದ್ದೇಕೊ ಹೇಳೋ ದೊರೆ? ಹೇಳಪ್ಪಾ, ಏನಾದರೂ ಹೇಳೋ ಕಂದಾ....."
ನಾನಿದ್ದೇನೆ ಚಿಂತಿಸದಿರು" ಎಂಬ ನಿನ್ನ ಆಶ್ವಾಸನೆ ನನ್ನ ಕಿವಿಗೆ ಬಿದ್ದೂ ಬಿದ್ದೂ ಅದಿಲ್ಲದೆ ಬದುಕಲಾರೆನೆಂಬಂತಾಗಿದೆ ಈಗ. ಬಿಮ್ಮನೆ ಕೂತು ಅತ್ತೆತ್ತಲೋ ಬೇರೆ ಕೆಲಸದಲ್ಲಿ ಮಗ್ನನಾದಂತೆ, ಮಧ್ಯೆ ಒಮ್ಮೊಮ್ಮೆ ನನ್ನತ್ತ ಕಿರುಗಣ್ಣಲ್ಲಿ ನೋಡುತ್ತಿದ್ದರೂ ವಿಮುಖನಾಗಿರುವ ಹಠಮಾರಿ ಕೂಸಿನಂತೆಯೇ ಕಾಣಿಸಿಕೊಳ್ಳುತ್ತಿರುವುದೇಕೋ ಮರಿ? ಅರ್ಥವಿಲ್ಲದ ಈ ಮುನಿಸೇಕೋ ನನ್ನಲ್ಲಿ ಕೂಸೇ? ನಗುತ್ತಾ ಒಮ್ಮೆ ನನ್ನ ಮನದೊಳಗೆ ಬಾರೋ, ನಿನಗೆ ನನ್ನ ಮಡಿಲು ತುಂಬುವ ಇಚ್ಛೆ ಇಲ್ಲದಿದ್ದರೆ ಬೇಡ ಬಿಡು. ಆದರೆ ನನ್ನ ಮನತುಂಬಿದ್ದ ನಿನ್ನ ನಗುಮೊಗದ ಬಿಂಬ ಮಾತ್ರ ಮರೆಮಾಡಬೇಡ, ನಿನ್ನ ದಮ್ಮಯ್ಯ ನನ್ನಪ್ಪಾ.
ನಿನ್ನ ದೇವಸ್ಠಾನ ನಿನ್ನ ಅಸ್ತಿತ್ವವನ್ನು ಕಲ್ಪಿಸಿಕೊಳ್ಳಲು ಪ್ರಶಸ್ತವಾದ ಜಾಗ.ಅಲ್ಲಿಗೆ ಬರುವಾಗಲೆಲ್ಲಾ ನನ್ನ ಮಡಿಲು ತುಂಬ ಬಾರೋ ಎಂದು ಕೇಳಿಕೊಳ್ಳಲೆಂದು ಬರುತ್ತಿದ್ದೆ. ಆದರೆ ನನ್ನೊಳಗಿನ ನಿನ್ನೆಡೆಗಿನ ಶ್ರಧ್ಧೆ ನಿನ್ನ ಮೂರ್ತಿಯೊಳ ಹೊಕ್ಕೊಡನೆ ನನಗೇನೋ ಮೋಡಿಯಾದಂತಾಗಿ ಏನೂ ಬೇಡಿಕೊಳ್ಳಲಾಗದೇ ಕೊಟ್ಟದ್ದ್ಯಾವುದೂ ಕಿತ್ತುಕೊಳ್ಳದಿರೋ ಹರೀ ಎಂದಷ್ಟೇ ಕೇಳಿಕೊಂಡು ಹಿಂದಿರುಗುತ್ತಿದ್ದೆ. ಆದರೆ ನಾನು ಕೇಳಿದ್ದು ನೀನು ಗಮನಕ್ಕೇ ತಂದುಕೊಂಡಿರಲಿಲ್ಲವೆಂದಾಯಿತು.ಯಾಕೆಂದರೆ ಮನದೊಳಗೆ ಕರೆದೊಡನೆ ಪ್ರತ್ಯಕ್ಷವಾಗುವ ವರವಿತ್ತಿದ್ದವನು ಈಗ ಕಿತ್ತ್ತುಕೊಂಡಿರುವೆಯಲ್ಲಾ?"
ಈಗೇನಾಗಿಬಿಟ್ಟಿದೆ?" ಎಂಬ ಗೇಲಿಯ ನೋಟ ನನ್ನತ್ತ ಎಸೆದೆಯಲ್ಲೋ ಮುರಾರೀ? ನೀನಿಲ್ಲದೇ ನನ್ನದೇನಿಲ್ಲ ಎನ್ನುವ ನನ್ನ ಜೀವಮಂತ್ರ ನನ್ನ ನಿದ್ದೆಗೆಡಿಸಿದೆ. ನೀನಿಲ್ಲ ಅನ್ನುವುದು ಸುಳ್ಳು ಎಂದೆಯಾ? ಅದೂ ಹೌದು.ಅದರೂ ನಿನ್ನನ್ನು ನನ್ನೊಳಗೆ ಕಾಣಲಾರದಾಗಿದ್ದೇನೆ ಎಂದರೆ ಸಮಂಜಸವಾದೀತು. ಯಾಕೆ ಹೀಗಾಯಿತೋ ಕಂದಾ? ನನ್ನೊಳಗಿನ ನೀನು ನಿಸ್ಸಂಶಯವಾದ ಬೆಂಬಲವಿತ್ತರೆ ಮಾತ್ರ ಮುಂದುವರೆಯುವ ನಿರ್ಧಾರ ನನ್ನದಾಗಿತ್ತು. ಅದಿದ್ದಕ್ಕೇ ನಾನು ಮುಂದುವರೆದಿದ್ದು . ಅಂದು ಬೆಂಬಲಿಸಿದ್ದ ನೀನು ಇಂದು ಕಣ್ಣು ಮುಚ್ಚಾಲೆ ಯಾಡುತ್ತಿರುವುದ್ಯಾಕೋ ? ಮುದ್ದು ಸುರಿಸುವ ನಿನ್ನ ಮುಖವನ್ನು ನೋಡುತ್ತಿದ್ದರೆ ಬರೀ ದೂರುವುದು, ಪ್ರಶ್ನಿಸುವುದು ಇಷ್ಟವಾಗುವುದಿಲ್ಲ. ಬರೀ ನೋಡುತ್ತಿರಬೇಕು, ಅನುಭವಿಸುತ್ತಿರುವ ಆ ಆನಂದ ಕಣ್ಣೇರಾಗಿ ಹರಿಯಬೇಕು, ನನ್ನ ನಾನು ಮರೆಯಬೇಕು ಅನ್ನಿಸುತ್ತದೆ. ಆದರದಾಗುತ್ತಿಲ್ಲ, ಇಂದು ನಿನ್ನ ಮುಂದೆ ಬಂದೊಡನೆ "ಯಾಕೋ?" ಎಂಬ ಪ್ರಶ್ನೆ ಹುಟ್ಟುವುದೇ ಹೊರತು ಶಾಂತವಾತಾವರಣ ಹುಟ್ಟುತ್ತಿಲ್ಲ. ಅದು ಬೇಡವಾಗಿ ನಾನು ನಿನ್ನ ಮುಂದೆ ಬರುವುದಕ್ಕೇ ಹಿಂದೇಟು ಹಾಕುತ್ತಿರುವುದು ಕಣೋ ಕಂದಾ.
ನಿನ್ನಲ್ಲಿ ಅತಿ ಕ್ಷೀಣವಾದ ಒಂದು ಅಸಮಾಧಾನವೂ ಇದೆ , ಅದೇನನ್ನ ನಿನ್ನ ಮಧ್ಯ ಬಂದಿರುವುದೂ ಇರಬಹುದು. ಹೆಣ್ಣಾಗಿ ನಾನು ಏನೋ ಪಡೆಯುವ ಭರವಸೆಯಲ್ಲಿ ಏನೆಲ್ಲ ಕಳಕೊಳ್ಳಬಹುದೋ ಾದನ್ನೆಲ ಕಳಕೊಂಡು ಬಿಟ್ಟೆ.ಈಗ ಏನೋ ಕಳೆದುಹೋಯಿತು ಅನ್ನಿಸುತ್ತಿದೆಯಾದರೂ, ಆ ಕಳಕೊಂಡ ಗಳಿಗೆಗಳಲ್ಲಿ ಭರವಸೆಯ ಹಿನ್ನೆಲೆಯಲ್ಲಿನ ಸಾರ್ಥಕ್ಯ ಭಾವ ಮಾತ್ರ ಗೋಚರಿಸಿತ್ತು. "ಮತ್ತೆ ಕಳಕೊಂಡದ್ದೇಕೆ" ಅನ್ನುವೆಯಾ? ನನ್ನೊಡಲಲ್ಲಿ ಜನಿಸಿದರೆ ಅದು ನೀನೇ ಎಂದು ಪ್ರಬಲವಾಗಿ ನಂಬಿದ್ದ, ನಿನಗಾಗಿ ಹಾಗೆ ಎದುರು ನೋಡುತ್ತಾ, ನಿನ್ನನ್ನು ಕಾಲ್ಪನಿಕವಾಗಿ ಅನುಭವಿಸಿ ಖುಶಿ ಪಟ್ಟ ನಾನು, ಭೌತಿಕವಾಗಿಯೂ ಅನುಭವಿಸಬೇಕೆಂದು ಆಸೆ ಪಟ್ಟೆ ಕಣೋ. ಅದಕ್ಕಾಗಿ ಕಳಕೊಂಡೆ ಅಂದರೆ ನಂಬುತ್ತೀಯಾ? ನಂಬಬೇಕು ಕಣೋ ನೀನು. ನನೊಡಲಲ್ಲಿ ನೀನು ಬರುವ ಸಂಭ್ರಮದ ನಿರೀಕ್ಷೆಯಲ್ಲಿ ಯಾವುದೋ ಒಂದು ಸೂಕ್ಷ್ಮ ಗಳಿಗೆಯಲ್ಲಿ ಒಂದೆಡೆ ಮೀಸಲಾಗಿರಬೇಕಗಿದ್ದ ನನ್ನ ಹೆಣ್ತನ ಬೇರೊಂದೆಡೆಯ ಪಾಲಾಗಿಬಿಟ್ಟಿತು. ಅಲ್ಲಿದ್ದುದು ಸ್ತ್ರೀ ಪುರುಷರ ನಡುವಿನ ಕಾಮವಾಂಛೆಯಲ್ಲ, ದೇವ ಭಕ್ತರ ನಡುವಿನ ವಿಶ್ವಾಸ, ನಂಬಿಕೆ. ಎಲ್ಲಕ್ಕಿಂತ ಹೆಚ್ಚಾಗಿ ತೆತ್ತಬೆಲೆಗೆ ಸರಿಯಾಗಿ ದೊರಕಲಿದ್ದ ಪ್ರತಿಫಲದ ನಿರೀಕ್ಷೆ ಅಷ್ಟೆ. ಅಂದಿನ ಆ ನಿರ್ಧಾರ ಬಲಿಯುತ್ತಿದ್ದ ದಿನಗಳಲ್ಲಿ ನನ್ನೊಳಗಿನ ದ್ವಂದ್ವ ಭಾವ ನೀನಲ್ಲದೇ ಇನ್ಯಾರು ಅಷ್ಟು ನಿಖರವಾಗಿ ವೀಕ್ಷಿಸಿರಲು ಸಾಧ್ಯ ಹೇಳು. "ಬೇಡ, ಇದು ಸರಿಯಲ್ಲ" ಎಂಬ ಸೂಚನೆಯನ್ನು ಕೊಡುವಲ್ಲಿ ಯಾಕಷ್ಟು ಹಿಂದೇಟು ಹಾಕುತ್ತಿದ್ದೆಯೋ ನನಗೆತಿಳಿಯದು. ನಿನ್ನ ನಿರ್ವಿಕಾರ ನಿಲುವು "ಹೋಗು" ಎನ್ನಲೂ ಇಲ್ಲ "ಬೇಡ" ಅನ್ನಲೂ ಇಲ್ಲ. "
ನಿನ್ನೊಳಗೆ ಸಕಾರತ್ಮಕ ಬೆಂಬಲ ದೊರೆತರೆ ಮುಂದುವರೆ ಇಲ್ಲದಿದ್ದರೆ ಬೇಡ" ಎಂದು ನಿನ್ನವರಲ್ಲದವರಿಗೆ ಹೇಳುವಂತೆ ಹೇಳಿ ಜಾರಿಕೊಂಡೆ. ನನ್ನೊಳಗೋ ಒಂದೇ ಭಾವನೆ- "ಬೇಕು, ನನಗೆ ಬೇಗ ಬೇಕು, ಹೇಗಾದರೂ ಸರಿ , ನನ್ನದೊಂದು ಜೀವ ಬೇಕು, ಅದರ ವ್ಯಕ್ತಿತ್ವ ಸ್ವತಂತ್ರವಾಗುವವರೆಗೆ ನನ್ನನೇ ನಂಬಿ, ಅವಲಂಬಿಸಿ, ನನ್ನತನದ ಸ್ವಾರ್ಥವನ್ನೆಲ್ಲಾ ಬಗ್ಗುಬಡಿದು, ಸಮರ್ಪಣೆಯ ಅನುಭೂತಿಯ ಶಿಖರದೆತ್ತರಕ್ಕೆ ನನ್ನ ಅನುಭೂತಿಯನ್ನು ಕೊಂಡೊಯ್ಯಬಲ್ಲ ಒಂದು ಹಸುಳೆಯ ಸಂಗ ಬೇಕು ಇವಿಷ್ಟನ್ನೆ ನನ್ನೊಳಗೆ ನಾನು ಕೇಳಬಲ್ಲವಳಾಗಿದ್ದೆ. ಇವೇ ಮಾರ್ನುಡಿದಾಗ ತಪ್ಪು-ಸರಿಗಳ ಬೇರ್ಪಡಿಸುವಿಕೆ ಸೂಕ್ಷ್ಮವಾಗುತ್ತಾ , ಅತಿಸೂಕ್ಷ್ಮವಾಗುತ್ತಾ, ಕೊನೆಗೊಮ್ಮೆ ಅದೇ ಇಲ್ಲವಾಗಿ, ತಪ್ಪು-ಸರಿಗಳು ಒಂದರೊಳಗೊಂದು ಮಿಳಿತವಾದವು. ಏನೋ ಆ ಗಳಿಗೆಗಳು ಅತಿಸಣ್ಣವುಗಳಾಗಿ ಕಳೆದೇ ಹೋದವು.
ಆದರೆ ವಿಧಿ ಮಾತ್ರ ನನ್ನಿಂದೇನನ್ನೋ ಕಸಿದುಕೊಳ್ಳಲುಹೊರಟಿತ್ತು. ಅದೂ ಏನನ್ನು?!! ನನ್ನ ಜೀವಿತದ ಪರಮಧ್ಯೇಯವೆನಿಸಿದ ಅಮ್ಮನ ಪಟ್ಟಕ್ಕೇರುವ ಗುರಿಯನ್ನೇ ನನ್ನ್ನಿಂದ ದೂರ ಸೆಳೆಯಹೊರಟಿತ್ತು.ಕೊನೆಗೊಮ್ಮೆ ಆ ಗುರಿ ಭೂಮಿ-ಬಾನು ಸೇರುವ ಕ್ಷಿತಿಜದಲ್ಲಿರುವಂತೆ, ಹಿಡಿಯಹೋದಷ್ಟೂ ದೂರ ಹೋದಂತೆ ಭಾಸವಾಗತೊದಗಿತು. "ಅಲ್ಲೆಲ್ಲೋ ಇತ್ತಲ್ಲವೇ? ಭರವಸೆ ಯಾಕೆ ಕಳಕೊಂಡೆ?" ಅನ್ನುತ್ತೀಯಾ? ಅದಕ್ಕೂ ಕಾರಣವಿದೆ ಹರೀ. ನಾನು ಮಂತ್ರಕ್ಕೆ ಉದುರುವ ಮಾವಿನಕಾಯಿಯಲ್ಲಾಗಲಿ, ಬೀಜವಿಲ್ಲದೇ ಮೊಳಕೆಯೊಡೆಯುವ ಸಾಧ್ಯತೆಯಲ್ಲಾಗಲಿ, ನನ್ನ ಹೊಟ್ಟೆಯೊಳಗೆ ಯಾವುದೋ ಪವಾಡದಿಂದ ಒಂದು ಜೀವ ಹುಟ್ಟುವ ಆಶಯದಲ್ಲಾಗಲಿ ನಂಬಿಕೆಯಿಡಲಾರೆ. ನಿನ್ನ ಮೇಲೆಷ್ಟಿದೆಯೋ ಮನುಷ್ಯಪ್ರಯತ್ನಕ್ಕನುಗುಣವಾಗಿ ಸಿಗುವ ಪ್ರತಿಫಲದ ಸತ್ಯತೆಯಲ್ಲೂ ಅಷ್ಟೇ ನಂಬಿಕೆಯಿದೆ. ಯಾಕೆಂದರೆ, ಪ್ರಬಲ ಸತ್ಯವೊಂದರ ಆಧಾರದ ಮೇಲಿರುವ ಗುರಿಸಾಧನೆಯ ಕಡೆಗಿನ ನಿಷ್ಠಾವಂತ ಪ್ರಯತ್ನದಲ್ಲಿ ಮಾತ್ರ ನೀನಿರುತ್ತೀಯಾ ಎಂಬುದನ್ನು ನಾನು ನಂಬಿದ್ದೇನೆ. ಹಾಗಿರುವಾಗ ನನ್ನ ಪ್ರಯತ್ನವಿಲ್ಲದೇ ನೀನು ಕೃಪೆದೋರುವ ಪರಿಯಾದರೂ ಹೇಗೆ ಹೇಳು ಬಂಗಾರಾ.
ಸರಿ "ನಾನಿದ್ದೇನೆ ನಿನ್ನೊಂದಿಗೆ" ಎಂದು ನೀನಂದೆ. ನಾನೂ ನಂಬಿದೆ, ನಿನ್ನನ್ನ ಕಲ್ಪಿಸಿಕೊಂಡೆ-ಎಷ್ಟರಮಟ್ಟಿಗೆ? ತೊಂಭತ್ತೊಂಭತ್ತರಷ್ಟೂ ಕಲ್ಪಿಸಿಕೊಂಡೆ. ಆದರೆ ಒಂದರಷ್ಟಾದರೂ ನಿನ್ನ ಹಾಜರಿ ಬೇಕಲ್ಲವೇ ದೊರೆ? ನನ್ನ ನಂಬಿಕೆ ನೀನುಳಿಸಿಕೊಳ್ಳುವುದು ಆಗ ಮಾತ್ರ ಸಾಧ್ಯವಲ್ಲವೇ? " ನಾನ್ಯಾಕುಳಿಸಿಕೊಳ್ಳಬೇಕು?" ಅನ್ನುತ್ತೀಯಾ? ನಾನು ಹುಲುಜೀವಿ. ಸ್ವಾರ್ಥವೇ ಮೈವೆತ್ತು ಬಂದಿರುವ ಸಾಮಾನ್ಯ ಮನುಷ್ಯಪ್ರಾಣಿ. ನನ್ನ ಪ್ರೀತಿಗೆ ನಿನ್ನಿಂದ ಆಗಾಗಲೊಮ್ಮೆಯಾದರೂ ಪ್ರತಿಕ್ರಿಯೆ ಬೇಕು ಕಣೋ. ನಿಸ್ವಾರ್ಥವಾಗಿ ಯಾವುದನ್ನೂ ಅಷ್ಟೊಂದು ಹಚ್ಚಿಕೊಳ್ಳಲಾರದಷ್ಟು ಸಾಮಾನ್ಯಳು ನಾನು. ಹೌದಪ್ಪಾ , ನನ್ನ ಅಂಗಾಂಗಗಳೆಲ್ಲಾ ಸುಸ್ಥಿತಿಯಲ್ಲಿದ್ದುಕೊಂಡು, ಹೊಟ್ಟೆ ತುಂಬ ಊಟ-ಕಣ್ತುಂಬ ನಿದ್ದೆಗಳ ವರದೊಂದಿಗೆ ಬಾಳುತ್ತಿರುವುದೇ ನಿನ್ನ ದೊಡ್ಡ ದಯೆ, ನನಗೂ ಗೊತ್ತು. ಆದರೆ ಮನಸಿನ ಹಸಿವಿಗೇನು ಮಾಡಲೋ ಹರೀ? ಮಗುವೊಂದರ ಸಂಗದಿಂದಷ್ಟೇ ನೀಗಬಹುದಾದ ಅದು ನನ್ನೆಲ್ಲ ಸತ್ವವನ್ನೂ ನುಂಗಿಹಾಕುತ್ತಿತ್ತು. ಆ ಹತಾಶೆಯಲ್ಲೇ ಒಂದು ಬಾರಿ ಈ ದಿಶೆಯಲ್ಲಿ ಪಥವೂರಬೇಕಾಯ್ತು.
ನಾನೇನೋ ಪಡೆಯುವಾಸೆಯಲ್ಲಿ ಕಳಕೊಂಡೆ. ಆದರೆ ವಿಧಿಯ ನಿರ್ಧಾರ ಬೇರೆ ಎಂದು ಆಮೇಲೆ ತಿಳಿಯಿತು. ನೀ ಬರುವ ಆಸೆಯಲ್ಲಿ ನಾ ಕಳಕೊಂಡದ್ದಷ್ಟೇ ಬಂತು.ನನ್ನಿಂದೇನೇನು ಸಾಧ್ಯವೋ ಅದನ್ನೆಲ್ಲಾ ಮಾಡಿಯಾದ ಮೇಲೂ ಕೊನೆಗೆ ಬರಿದಾದ ಮಡಿಲಿನೊಂದಿಗೇ ಉಳಿದಿದ್ದೇನೆ ಮುಕುಂದಾ. ಹೀಗಾದಾಗಲೇ ನಾನು ನಿನ್ನಿಂದ ಸ್ವಲ್ಪ ಸ್ವಲ್ಪವೇ ದೂರಾಗತೊಡಗಿದೆ ಅನ್ನಿಸುತ್ತಿದೆ. ಉದ್ದೇಶಪೂರ್ವಕವಾಗಿಯೋ, ಪ್ರಯತ್ನಪೂರ್ವಕವಾಗಿಯೋ ಅಲ್ಲ, ನನಗರಿವಿಲ್ಲದಂತೆ ಅದಾಗತೊಡಗಿತ್ತು.
ಸರಿ ಬಿಡು, ನಿನಗೇನು ಪ್ರಿಯವೋ ಅದನ್ನೇ ಮಾಡು ದೊರೆ. "ನೀ ಹೇಳದಿದ್ದರೂ ನಾ ಮಾಡುವುದು ಅದನ್ನೇ" ಅನ್ನುತ್ತೀಯ? ಹೌದು ಕಣಪ್ಪಾ, ನಿನಗೆ ನಾ ಬೇಕಾದರೆ ನಿನ್ನೊಲವೇ ನನ್ನ ದಾರಿದೀಪವಾಗುವ ಜೀವನಪಥವನ್ನು ನನ್ನ ಮುಂದೆ ತಾ. "ನನ್ನೊಲವಿಲ್ಲದೇ ಒಂದುಸಿರಿಗೂ ತಾವಿಲ್ಲ" ಅನ್ನುತ್ತೀಯಾ? ಒಪ್ಪಿದ್ದೇನೆ ಕಣೊ. ಆದರೆ ನಿನ್ನ ಸಾಕ್ಷಾತ್ಕಾರ ನನ್ನ ಕಲ್ಪನೆಯಲ್ಲಿಲ್ಲದಿದ್ದರೆ, ನಾನುಳಿಯಲಾರೆ. ದೇಹವುಳಿದರೂ, ಒಳಗೆ ಜೀವನುಳಿಯುವುದಿಲ್ಲ. ಹಾಗಾಗಲಾರದು, ನನಗ್ಗೊತ್ತು. ನರನ ನಾರಾಯಣನಾಗಿಸುವ ನೀನು ಖಂಡಿತಾ ಬರಿದಾಗಿಸಲಾರೆ ಗೋವಿಂದಾ.
ಯಾವುದೋ ಅಶ್ವಾಸನೆ ಸಿಕ್ಕಂತೆ ನಿಟ್ಟುಸಿರಿನೊಂದಿಗೆ ಮೇಲೇಳುತ್ತಿದ್ದ ಪತ್ನಿಯನ್ನು ಕಂಡು ಸುಧೀರನಿಗೆ ನಿರಾಳವೆನಿಸಿತು. ಸುಮಾರು ಆರುವರ್ಷಗಳ ಹಿಂದೊಂದು ದಿನ ಅವಳು ಅವಳ ಗಂಡನ ಮಗುವಿನ ತಾಯಿಯಾಗಲಾರಳು ಎಂಬ ಸತ್ಯವನ್ನು ತಾನೇ ಅವಳಿಗೆ ಮನವರಿಕೆ ಮಾಡಿಕೊಡಬೇಕಾದ ಸಂದರ್ಭ ಬಂದಾಗ ಮೊದಲೊಮ್ಮೆ ಸ್ಥಂಭೀಭೂತಳಾಗಿ ಇದೇ ಫೊಟೋದೆದುರು ಸುಮಾರು ಒಂದುಘಂಟೆಯ ಕಾಲ ನಿಶ್ಚಲಳಾಗಿ ಕೂತದ್ದು ಕಂಡು ಕಂಗಾಲಾಗಿದ್ದ ತನಗೆ ಬರುಬರುತ್ತಾ ಅವಳ ಈ ಕ್ರಿಯೆ ಅಭ್ಯಾಸವಾಗಿತ್ತು. ಆ ಸಮಯದಲ್ಲಿ ಅವಳೆದುರು ಹೋಗಿ ನಿಂತರೂ ಅವಳಿಗೆ ತಿಳಿಯದಷ್ಟು ಆ ಸಂವಾದದಲ್ಲಿ ತಲ್ಲೀನಳಾಗಿರುತ್ತಿದ್ದಳು. ಈ ಆಶ್ವಾಸನೆಯ ನಿಟ್ಟುಸಿರು ಹೀಗಾಗಿ ತನಗೆ ಚಿರಪರಿಚಿತವಾಗಿದ್ದಾಗಿದೆ. ಯಾಕೆಂದರೆ ಆ ಸಂವಾದದಿಂದ ಅವಳು ಹೊರಬರುತ್ತಿದ್ದುದೇ ಇದರ ಜೊತೆ. ಅದಾದ ನಂತರದ ಸ್ವಲ್ಪ ಸಮಯ ಯಾವುದೋ ಭಾರ ಇಳಿಸಿದಂತೆ ನಿರುಮ್ಮುಳತೆಯ ಭಾವ ಅವಳಲ್ಲಿ ಇರುತ್ತಿತ್ತು.
ಯಾವುದೇ ಮುಚ್ಚುಮರೆಯಿಲ್ಲದ, ಒಳಹೊರಗಿನ ಅನಿಸಿಕೆಗಳಲ್ಲಿ ಅಂತರವಿಲ್ಲದ , ಯಾವುದೇ ಭಾವನೆಗಳ ಏರಿಳಿತವನ್ನು ಸ್ಪಷ್ಟವಾಗಿ ತೋರುವ ತೆರೆದ ಪುಸ್ತಕದಂಥಹ ಈ ಸೀದಾಸಾದಾ ಜೀವ ತನ್ನದು ಎನಿಸಿದಾಗ ಸುಧೀರನಲ್ಲಿ ಮಮತೆಯುಕ್ಕಿ ಬಂತು. ಮೇಲೆ ಮುಖವೆತ್ತಿ ನೋಡಿದ, ನೋವುಂಡು ನಲುಗಿಹೋದ, ತನ್ನ ಸುಮಬಾಲೆಯನ್ನು ಕೈಕೊಟ್ಟು ಏಳಿಸಿದ ಸುಧೀರ "ನಾನಿದ್ದೇನೆ ನಿನಗೆ" ಎಂಬ ನೋಟ ಅವಳತ್ತ ಬೀರಿದ. ತನ್ನ ಈ ಹುಚ್ಚು ನಡವಳಿಕೆಯನ್ನು ಬಾಯ್ಮುಚ್ಚಿ ಸಹಿಸುವ, ಅದರ ಬಗ್ಗೆ ಕೆಣಕದೇ, ಪ್ರಶ್ನಿಸದೇ ತಾಳ್ಮೆಯಿಂದಿರುವ ಪತಿಯನ್ನು ನೋಡಿ, ಅನಘಳಿಗೆ "ಇಂಥವರಿಗೆ ನನ್ನಿಂದ ಮೋಸ ಮಾಡಿಸಿದೆಯಲ್ಲಾ?" ಎಂದು ತಿರುಗಿ ಕೃಷ್ಣನನ್ನು ಕೇಳಬೇಕೆನಿಸಿತು. ಆದರೆ ಹಿಂದಿರುಗದೇ, ಏನನ್ನೂ ಮತ್ತೆ ಕೇಳದೇ ಪತಿಯೊಂದಿಗೆ ಆಚೆ ನಡೆದಳು. ಮೊದಲೇ ಹೇಳಿದ್ದಳಲ್ಲಾ, ಮುದ್ದು ಸುರಿಸುವ ಮುಕುಂದನೆದುರು ಪ್ರಶ್ನೆಯಿಡಲು ಮನಸಿಲ್ಲವೆಂದು!

No comments:

Post a Comment