Friday, September 6, 2013

ಕೆಂಪಾದ ಕೇಸರಿ ಬಣ್ಣ

"ಅರ್ಧ ಲೀಟರ್ ಹಾಲು ಅಂಕಲ್
" ದನಿ ಕೇಳಿ ದೂಜಪ್ಪ ಯಾಂತ್ರಿಕವಾಗಿ ಹಾಲಿನ ಡಬ್ಬಿಯೊಳಗೆ ಕೈ ಹಾಕಿ ಹಾಲು ತೆಗೆದುಕೊಟ್ಟ. ಚಿಲ್ಲರೆ ಎಣಿಸಿಕೊಡುವಾಗ ಅದೇ ಮುದ್ದಾದ ಕೈ, ಕೆನೆ ಬಣ್ಣದ ಚರ್ಮದ ಮೇಲೆ ಗಾಢವಾಗಿ ಕಾಣುತ್ತಿದ್ದ ಹರಿ ಎಂಬ ಹಚ್ಚೆ ಕಣ್ಸೆಳೆಯಿತು. ಎಂದಿನಂತೆ ಕಾಯಿನ್ ಬೂತಿನೆಡೆಗೆ ನಡೆದವಳನ್ನು ಕಣ್ಣುಗಳು ಸಹಜವಾಗಿ ಹಿಂಬಾಲಿಸಿದವು. ಗುಲಾಬಿ ಬಣ್ಣದ ಬಟ್ಟೆಯಲ್ಲಿ ಸುಮಾರು ಹದಿನೆಂಟರ ಸುಂದರಬಾಲೆ, ಮಾತಾಡುತ್ತಾ ನಿಂತವಳ ಮುಖದಲ್ಲಿ ನಾಚಿಕೆಯೋ, ಧರಿಸಿದ ಬಟ್ಟೆಯ ಪ್ರತಿಫಲನವೋ -ಗುಲಾಬಿರಂಗು.ಸಂಕೋಚದಿಂದ ಮಾತು ಮುಗಿಸುವ ಹುನ್ನಾರದಲ್ಲಿದ್ದರೂ, ಆ ಕಡೆಯ ಸೆಳೆತವೂ ಹೆಚ್ಚಾಗಿದ್ದು ಮಾತು ಮುಂದುವರಿಸದಿರಲಾಗದೇ,ಚಡಪಡಿಸುತ್ತಿದ್ದ ಕಣ್ಣುಗಳು. ಒಟ್ಟಲ್ಲಿ ಆಕೆಯ ಹಾವಭಾವಗಳು, ಆ ಒನಪು-ಒಯ್ಯಾರಗಳು, ಅತ್ತಲಿದ್ದವ ಅವಳ ಗೆಳೆಯನೇ ಇರಬೇಕೆನ್ನಿಸುವಂತಿದ್ದವು. ಮಾತು ಮುಗಿಸಿ ಉದ್ದಜಡೆ ಹಾರಿಸುತ್ತಾ ಹೊರಟವಳ ಚಿಗರೆನಡಿಗೆ ಕಂಡ ದೂಜ್ಪ್ಪನಿಗನ್ನಿಸಿತು- ಸೌಂದರ್ಯ ಸಂತೋಷದೊಡನಿದ್ದಾಗ ಎಷ್ಟು ಆಹ್ಲಾದಕಾರಿ, ಎಷ್ಟೊಂದು ಪರಿಣಾಮಕಾರಿ!!!
ಹಾಲಿನಬೂತಿಗೆ ಮುಂದಿನ ಗಿರಾಕಿ ಬಂದದ್ದರಿಂದ ದೂಜಪ್ಪನ ಯೋಚನಾಲಹರಿ ತುಂಡಾಯಿತು. ರಾತ್ರಿ ಎಂಟಕ್ಕೆ ಸರಿಯಾಗಿ ಯಜಮಾನರಿಗೆ ಲೆಕ್ಕ ಒಪ್ಪಿಸಿ, ಬಾಗಿಲು ಹಾಕಿಕೊಂಡು ಹೊರಟ ದೂಜಪ್ಪ ಮನೆಸೇರಿದಾಗ ಅವನಿಗಾಗಿ ಕಾದಿದ್ದು ಮತ್ತದೇ ಒಂಟಿತನ. ಅದರೊಂದಿಗೇ ಬಾಳನ್ನೊಪ್ಪಿಕೊಂಡಿದ್ದರೂ ಅದನ್ನೆದುರಿಸಲು ಪ್ರತಿದಿನವೂ ಹೆದರುತ್ತಿದ್ದ ದೂಜಪ್ಪ. ಇನ್ನೂ ಹೆಚ್ಚಿನ ಹೊತ್ತು ಬೂತ್ ನಲ್ಲೇ ಕಳೆಯಲು ತಯಾರಿದ್ದ. ಆದರೆ ಯಜಮಾನನ ಇಚ್ಛೆಯಂತೆ ಎಂಟಕ್ಕೇ ಬೂತ್ ನ ಬಾಗಿಲು ಹಾಕಿ ಅವರನ್ನು ಅದರ ಜವಾಬ್ದಾರಿಯಿಂದ ಮುಕ್ತಗೊಳಿಸಬೇಕಾಗಿತ್ತು
. ಏನೋ ಒಂದಷ್ಟು ಬೇಯಿಸಿಕೊಂಡು ತಿಂದವ ಮತ್ತೆ ಬೆಳಿಗ್ಗೆ ನಾಲ್ಕಕ್ಕೆದ್ದು , ಐದರವೇಳೆಗೆ ಪೇಟೆಯೊಳಗಿನ ಬೂತ್ ತಲುಪಿದ್ದ . ಮತ್ತದೇಕೆಲಸಗಳು ಸುರುವಾದವು. ದಿನನಿತ್ಯ ಆಕೆ ಬರುತ್ತಿದ್ದ ವೇಳೆಗೆ ಕಣ್ಣುಗಳು ಅಪ್ರಯತ್ನವಾಗಿ ಆ ಕಡೆ ವಾಲಿದವು. ಅದೇ ಹಾರುನಡಿಗೆಯಲ್ಲಿ ಬಂದೇ ಬಿಟ್ಟಳು. ಮನ ಮುದಗೊಂಡಿತ್ತು, ಆಶ್ಚರ್ಯವೂ ಆಗಿತ್ತು-ಯಾಕಿಷ್ಟು ಸಂತೋಷ?!!ಹಾಲು ಕೊಡುವಾಗ ಕೇಳಿಯೇಬಿಟ್ಟ-"ಯಾರ ಮನೆ ಮಗಾ?" "ಶೀನಪ್ಪಭಟ್ಟ್ರಮನೆ ಅಂಕಲ್, ಅವರ ಹೆಂಡತಿಯ ಅಣ್ಣನ ಮಗಳು ನಾನು- ತಾರಿಣಿ" ಉಲಿದಿತ್ತು ಗಿಣಿಕಂಠ. "ಒಳ್ಳೇದಮ್ಮಾ" ಅಂದಿದ್ದ ದೂಜಪ್ಪ. ಮತ್ತದೇ ಬೂತ್ ನೊಳಗಿನ ಮಾತುಕತೆ, ಕೊನೆಗೆ ಮನೆಯೆಡೆಗೆ ಓಟದನಡೆ.
ಮರುದಿನವೂ ಅದೇವೇಳೆಗೆ ಬಂದವಳು ಎಂದೂ ಇಲ್ಲದ್ದು ತಲೆಯೆತ್ತಿ ನಸುನಕ್ಕಳು. ಕೇಸರಿ ಬಣ್ಣದ ಚೂಡಿದಾರ್ ನಲ್ಲಿ ಇಮ್ಮಡಿಸಿದ್ದ ಸೌಂದರ್ಯದ್ದಲ್ಲದೇ ಇನ್ನೇನೋ ಸೆಳೆತವಿದೆ ಅನ್ನಿಸಿತು ದೂಜಪ್ಪನಿಗೆ. ಕಾಯಿನ್ ಬೂತ್ ನಡೆಗೆ ನಡೆದವಳನ್ನು ಕೇಳಿಯೇಬಿಟ್ತ-"ಅಮ್ಮಂಗೆ ಮಾತಡ್ಬೇಕಾ ಮಗಾ?" ಸಂಶಯದಿಂದಲೇ ಕೇಳಿದವನಿಗೆ ಹಿಂಜರಿಯದೇ ಉತ್ತರಿಸಿದ್ದಳು-"ಅಲ್ಲಾ, ಅತ್ತೆಯ ಮಗನಿಗೆ " ಆವಾಕ್ಕಾದವನನ್ನು ಕಂಡು "ಇನ್ನಾರು ತಿಂಗಳಲ್ಲಿ ಯಾರೊಂದಿಗೆ ನನ್ನ ಮದುವೆಯಾಗಲಿದೆಯೋ, ಅವನೊಂದಿಗೆ, ಮಾತಾಡಬಹುದಾ?" ತುಂಟತನದಿಂದಲೇ ಕೇಳಿದ್ದಳು. ಅರ‍ೇ, ಈಕೆಯ ಧೈರ್ಯವೇ!! "ಆ ಹಾ ಹಾ" ತಡವರಿಸಿದ್ದ. ನಗುತ್ತಾ ಮುನ್ನಡೆದಿದ್ದಳು ಆಕೆ.ದೂಜಪ್ಪನ ಮನದಲ್ಲಿ ತನ್ನವರದೇ ಏನೋ ಶುಭ ಸುದ್ಧಿ ಕೇಳಿದ ಸಂತಸದ ಅನುಭವ. ಮಾತು ಮುಗಿಸಿ ಹೊರಟವಳನ್ನು ತಡೆದು "ಹುಶಾರಮ್ಮಾ" ಅನ್ನಬೇಕೆನ್ನಿಸಿತು. ದನಿ ಮಾತ್ರ ಹೊರಡಲಿಲ್ಲ. "ಮತ್ತೆ ದಸರಾ ರಜೆಗೆ ಬರುತ್ತೀನಿ, ಇವತ್ತು ಊರಿಗೆ ಹೊರಟೆ
"ಅನ್ನುತ್ತಾ ಕೈಬೀಸುತ್ತಾ ಹೊರಟೇ ಬಿಟ್ಟಳು ಹುಡುಗಿ. ಭಟ್ಟ್ರಮಗ ಹರಿ ಕಳೆದವರ್ಷ ಓದುಮುಗಿಸಿ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ್ದ ವಿಷಯ ದೂಜಪ್ಪಕೇಳಿದ್ದ. ಮುದ್ದುಮುಖದ ಚೆಲುವನಿಗೆ ತಕ್ಕ ಚೆಲುವೆ ಅಂದಿತು ಮನ.
ಕೆಲಸ ಮುಗಿಸಿ ಮನೆಗೆ ಬಂದವನಿಗೆ ಮತ್ತದೇ ನಗುಮುಖದ ಗುಂಗು. ಅರೇ, ನಾಲ್ಕೈದು ದಿನಗಳ ಭೇಟಿಗಳಲ್ಲೇ ಇಷ್ಟೊಂದು ಛಾಪು ಒತ್ತಿದಳೇ ಅನ್ನಿಸಿತು. ಮರುಕ್ಷಣವೇ ಮನೆಯ ತುಂಬಾ ಗವ್ವೆನ್ನುತ್ತಿದ್ದ ಒಂಟಿತನ ಮಾರ್ನುಡಿಯಿತು.-"
ಇದೇ ಕೇಸರಿಬಣ್ಣಕ್ಕೊಂದೇ ಒಂದು ಹನಿ ಕಪ್ಪುಬಣ್ಣ ಬಿದ್ದು ಕಲಕಿದರೆ ಕೆಂಪಾಗುತ್ತದೆ". ಕೆಂಪು---, ಕೆಂಪುಬಣ್ಣ---, ಕೆಂಪುಬಣ್ಣದ ಚೂಡಿದಾರ--- ಅಯ್ಯೋ ಚೀರಿತು ಮನಸು.
ಸುಮಾರು ಐದುವರ್ಷಗಳ ಹಿಂದೆ ಇದೇಮನೆಯ ಮುಂದೊಂದುದಿನ ಕೆಂಪುಬಣ್ಣದ ಚೂಡಿದಾರ ಧರಿಸಿ ಬಾಲೆಯೊಬ್ಬಳು ಮಲಗಿದ್ದಳು. ಆಕೆಯೂ ಇದೇ ಹದಿನೆಂಟರ ಹರಯದವಳೇ. ಚಟ್ಟದ ಮೇಲೆ ಹೆಣವಾಗಿ ಮಲಗಿದ್ದವಳ ಮುಖ ಶಾಂತವಾದ ಮೆಲುನಗು ಸೂಸುತ್ತಿದ್ದರೂ ಹಿಂದೆ ಕಣ್ಣೀರಿನ ಅಶಾಂತಿಯ ಮಹಾಸಾಗರವೇ ಭೋರ್ಗರೆಯುತ್ತಿದ್ದುದು ಯಾರಿಗೂ ಕಾಣುವಂತಿರಲಿಲ್ಲ. ಆ ಬಾಲೆಯದೂ ಇದೇ ತರಹದ ವ್ಯಕ್ತಿತ್ವ. ತಾನಿದ್ದೆಡೆಯೆಲ್ಲ ಅಪ್ರಯತ್ನವಾಗಿ ಸಂತಸ ಹರಡುವ ನೇರ, ಮುಗ್ಧ , ಪಾರದರ್ಶಕ ನಡವಳಿಕೆ, ಮಚ್ಚುಮರೆಯಿಲ್ಲದ ಮುದ್ದು ಮಾತುಗಳು. ಈಗ ದೂಜಪ್ಪನಿಗರಿವಾಯಿತು- ತಾರಿಣಿಯೊಳಗೆ ತನ್ನನ್ನಷ್ಟು ಸೆಳೆದದ್ದು ತನ್ನಕರುಳಕುಡಿ ಶಶಿಯ ಬಿಂಬವೇ ಹೌದು. ಅಪ್ಪ ಅಮ್ಮನ ಒಬ್ಬಳೇ ವಿಧೇಯ ಮಗಳೇ ಆಗಿದ್ದವಳು, ಗೆಳೆಯನೊಬ್ಬನಿಗೆ ಮನಸೋತಳು, ವಿಷಗಳಿಗೆಯೊಂದರಲ್ಲಿ ತನುಮನವನ್ನವನಿಗೆ ಅರ್ಪಿಸಿಬಿಟ್ಟಿದ್ದಳು. ಎಚ್ಚೆತ್ತಾಗ ಕಳಕೊಂಡದ್ದು ಜೀವಕ್ಕಿಂತಲೂ ಅಮೂಲ್ಯವಾದದ್ದು ಎಂದರಿತಿದ್ದಳು. ಎಂದೂ ತಿರುಗಿಪಡೆಯಲಾರದ್ದನ್ನು ಕಳಕೊಂಡಮೇಲೆ ಜೀವನ ಬೇಡವೆಂದನಿಸಿ ಅದನ್ನು ಕಡೆಗಾಣಿಸಿದ್ದಳು. ಆ ಹೊಡೆತ ತಡೆಯಲಾರದೇ ಅವಳ ಹಿಂದೆ ಅವಳ ಅಮ್ಮನೂ ಹೊರಟು ಹೋಗಿ ಈಗ ತಾನು ಈ ಗಂಡುಜೀವದ ಭಂಡಧೈರ್ಯದ ಸುಳ್ಳುಸೋಗಿನೊಳಗೆ ಕ್ಷಣಕ್ಷಣವೂ ಸಾಯುತ್ತಾ ....... ಒಂಟಿಕೂಪದ ಪಾಪಿಬಾಳು ....... ಯೋಚಿಸಿ ಕಣ್ಣೀರಿಳಿಸಿ ಸುಸ್ತಾದ ಕಣ್ಣುಗಳು ತಾವೇ ತಾವಾಗಿ ಮುಚ್ಚಿದವು. ಮರುದಿನ ಎದ್ದು ಮತ್ತದೇ ದಿನಚರಿ.
ಹೀಗೆ ಹಾಲಿನ ಬೂತ್ ನ ಬಾಗಿಲು ತೆಗೆದು ಮುಚ್ಚಿ ತಿಂಗಳುಗಳೇ ಕಳೆದು ಹೋದವು.
ಒಂದುದಿನ ಬೆಳಿಗ್ಗೆ ಐದರ ವೇಳೆಗೇ ಭಟ್ಟ್ರ ಮನೆಯ ಆಳು ಕೆಂಚ ಅವರ ಮನೆಯೆಡೆಗೆ ಓಡುತ್ತಿದ್ದುದನ್ನು ಕಂಡ ದೂಜಪ್ಪ ಕೇಳಿದ್ದ- "ಇಷ್ಟು ಬೇಗ?" "
ಅಯ್ಯೋ ನಿಮಗಿನ್ನೂ ತಿಳಿದಿಲ್ಲ್ವಾ? ಭಟ್ಟ್ರ ಹೆಂಡತಿಯ ಅಣ್ಣನ ಮಗಳು ರಜೆಗೆಂದು ಬಂದಿತ್ತು, ನಿನ್ನೆ ರಾತ್ರಿ ನೇಣು ಹಾಕ್ಕೊಂಡು ಸತ್ತಿದೆ. ಇದಕ್ಕೇನು ಬಂದಿತ್ತೊ ಗ್ರಾಚಾರ ಇಲ್ಲಿ ಬಂದು ಸಾಯ್ಲಿಕ್ಕೆ?!, ದರಿದ್ರದ್ದು----------"ಮುಂದಿನದೇನೂ ಕೇಳಿಸಲಿಲ್ಲ ದೂಜಪ್ಪನಿಗೆ, ತಲೆ ಗಿರ್ರಂದಿತ್ತು. ಸಾವರಿಸಿಕೊಂಡು ಭಟ್ಟ್ರ ಮನೆಗೋಡಿದವನಿಗೆ ಕಂಡದ್ದು ಕೇಸರಿ ಬಣ್ಣದಲ್ಲಿ ಮಿಂಚುತಿರುವ ಮುದ್ದುಮುಖದೊಡತಿಯ ಜೀವ-ಅದೇ ತರಹ ಅಂಗಳದಲ್ಲಿ ಮಲಗಿಸಿದ್ದ ಭಂಗಿಯಲ್ಲಿ -ಚಟ್ಟದಮೇಲೆ, ಥೇಟ್ ಶಶಿಯ ಹಾಗೇ.
ಅರೆಬಿರಿದ ಕಂಗಳು "ಕಂಡ ಕನಸುಗಳು ನನಸಾಗದಿರುವುದನ್ನು ಸಹಿಸಲಾಗಲಿಲ್ಲ ಅಂಕಲ್" ಅಂದಂತಾಯಿತು. ಮುಚ್ಚಿದ ತಿಳಿಗುಲಾಬಿ ತುಟಿಗಳು "ಅತ್ತೆ ಮನೆಯಲ್ಲಿ ಬಾಳೋಕ್ಕಾಗಲ್ಲ ಅಂತ ಗೊತ್ತಾಯ್ತು, ಸಾಯೋಕ್ಕಾದ್ರೂ ಆಗುತ್ತಾ ಅಂತ ನೋಡಿದೆ ಅಂಕಲ್" ಅಂದಂತಾಯಿತು.
ಭರ್ರನೇ ಬಂದ ರಿಕ್ಷಾದಿಂದಿಳಿದ ಭಟ್ಟ್ರಮಗನೊಂದಿಗೆ ಅರೇ, ಅದುಯಾರು ಕೆಳಗಿಳಿದದ್ದು? ಕೈತುಂಬಾ ಬಳೆ, ಅರಿಶಿನದಾರದಲ್ಲಿ ಕಟ್ಟಿದ್ದ ಹೊಸಕೊಂಬು, ಮಿನುಗುತ್ತಿರುವ ಮುಖದ ಹುಡುಗಿ. ಹರಿಯ ತಪ್ಪಿತಸ್ಥಮುಖ ಎಲ್ಲ ಕತೆ ಹೇಳಿಬಿಟ್ಟಿತು.
ಕಣ್ಣೆರಿನಿಂದ ಮಂಜಾದ ದೂಜಪ್ಪನ ಕಣ್ಣುಗಳಿಗೆ ನಿಧಾನವಾಗಿ ಕೇಸರಿ ಬಣ್ಣ ಕೆಂಪಾದ ಹಾಗೆ, ಆ ಮುಖ ನಿಧಾನವಾಗಿ ಮರೆಯಾಗಿ ಅಲ್ಲಿ ಶಶಿಯ ಮುಖ ಬಂದಂತೆ ....................ಅಂದಿನ ದುಖಃದ ಅಲೆಗಳು ಬಂದು ಮತ್ತೆ ಇಂದೊಮ್ಮೆ ಆವರಿಸಿದಂತಾಗಿ, ಹೊಡೆತ ತಡೆಯಲಾರದೇ ಬಸವಳಿದು ದೊಪ್ಪೆಂದು ಕೆಳಗುರುಳಿತು ಆ ನೊಂದಜೀವ.    

No comments:

Post a Comment