Monday, September 30, 2013

ನಾನು..

ನಾನು ಅಂದರೆ ಇದು ಅಂತ ಸ್ಪಷ್ಟಪಡಿಸುವ ನಿಟ್ಟಿನಲ್ಲಿ ತನ್ನ ಮನಸು, ಆತ್ಮ ಸೇರಿದಂತೆ ದೈಹಿಕ ಅಂಗಗಳು, ಅಥವಾ ಲೌಕಿಕ ಅಂಗಗಳಾದ ಸಂಬಂಧಗಳು, ಗಳಿಕೆಗಳು ಹೀಗೆ ಯಾವುವೂ ನೀ ನಾನು ಅನ್ನುವುದು ನಮ್ಮನ್ನೇ ಅಂತ ಘಂಟಾಘೋಷವಾಗಿ ಸಾರುವುದು ಬಿಡಿ, ಪಿಸುಗುಟ್ಟುತ್ತಲೂ ಇಲ್ಲ ಅನ್ನುವ ಗೆಳೆಯರೊಬ್ಬರ ಮಾತಿಗೆ ನನ್ನೊಳಗಿಂದ ಈ ವಿಚಾರಗಳು ಹೊರಬಂದವು.
ನಾನು ಅನ್ನುವ ಸಂಬೋಧನೆ ನಮ್ಮ ದೇಹದ ಮಾತು ಬಂದಾಗ ಪ್ರಾಯಶಃ ಆಯಾಯಾ ಸಂದರ್ಭಕ್ಕೆ ತಕ್ಕಂತೆ ಆ ಸಂದರ್ಭ ಯಾವ ಕ್ರಿಯೆಯನ್ನು ನಿರೀಕ್ಷಿಸುತ್ತದೋ ಆ ಕ್ರಿಯೆಯ ಕರ್ತೃವಾದ ಒಂದು ಅಂಗವನ್ನು ಉದ್ದೇಶಿಸಿದ್ದಾಗಿರಬೇಕಾದರೂ ಅಲ್ಲಿ ಮೂಲಕರ್ತೃವಾಗಿ ದರ್ಶಿಸಲ್ಪಡುವುದು ಆ ಅಂಗವೂ ಸೇರಿದಂತೆ ನಮ್ಮ ಇಡೀ ವ್ಯಕ್ತಿತ್ವದ ಒಂದು ಸಮಗ್ರ ಆಯಾಮ. ಉದಾಹರಣೆಗೆ ನಾನು ನೋಡಿದೆ ಅನ್ನುವಾಗ ನೋಡಿದ್ದು ಕಣ್ಣಾದರೂ ನನ್ನ ಕಣ್ಣು ನೋಡಿತು ಅನ್ನುವುದಿಲ್ಲ, ಇನ್ನೂ ಸ್ವಲ್ಪ ಮುಂದುವರೆದು ನಾನು ಕಣ್ಣಾರೆ ನೋಡಿದೆ ಅನ್ನುವಲ್ಲಿಯೂ ನೋಟಕ್ಕೊದಗಿದ್ದು ಕಣ್ಣು ಅನ್ನುವ ಅರ್ಥ ಬಂದರೂ ನೋಡಿದ್ದು ನಾನೇ ಅಂದ ಹಾಗಿರುತ್ತದೆ ನಾವು ಆ ಕ್ರಿಯೆಯನ್ನು, ಅದರ ಕರ್ತೃವನ್ನು ಪರಿಗಣಿಸುವ ರೀತಿ. ಇನ್ನೊಂದೆಡೆ ಹಾಲಿನ ಲೋಟ ತರುತ್ತಿರುವಾಗ ಅಕಾಸ್ಮತ್ತಾಗಿ ಲೋಟ ಕೆಳಗೆ ಬಿದ್ದು ಹಾಲು ಚೆಲ್ಲಿಹೋದ ಸಂದರ್ಭ. ಕಾಲು ಎಡವಿರುತ್ತದೆ, ದೇಹ ಮುಗ್ಗರಿಸಿರುತ್ತದೆ, ಕೈ ಆಯ ತಪ್ಪಿ ಆ ಲೋಟವನ್ನು ಕೆಳಹಾಕಿರುತ್ತದೆ. ಇಷ್ಟೆಲ್ಲ ವಿವರಣೆಗೆ ಹೋಗುವುದೇ ಇಲ್ಲ, ನಾನು ಹಾಲು ಚೆಲ್ಲಿದೆ ಅನ್ನುತ್ತೇವೆ. ಅಂದರೆ ಅದು ನನ್ನ ಕಾಲು, ನನ್ನ ಕೈ, ನನ್ನ ದೇಹಗಳ ಒಟ್ಟಾರೆ ಸಮತೋಲನ ಕಳಕೊಂಡ ಸಂದರ್ಭ, ಅದರ ಹೊಣೆಗಾರಿಕೆಯನ್ನು ಹೊರಬೇಕಾದದ್ದು ಬರೀ ಕಾಲಲ್ಲ, ಕೈಯಲ್ಲ, ಬದಲಿಗೆ ಅವೆಲ್ಲವೂ ನನ್ನವು ಎಂದು ಹೇಳಿಕೊಳ್ಳುವ ನಾನು. ಇಲ್ಲಿ ನಾವು ಎಷ್ಟರಮಟ್ಟಿಗೆ ನಮ್ಮ ದೈಹಿಕ ಅಂಗಾಂಗಗಳನ್ನು ಸಹಜವಾಗಿ ಸ್ವಂತದ್ದನ್ನಾಗಿ ಪರಿಗಣಿಸಿರುತ್ತೇವೆ ಅಂದರೆ ಅಲ್ಲಿ ಅದನ್ನೆಲ್ಲ ನಾನು ಎನ್ನುವ ಸಮಗ್ರ ದೃಷ್ಟಿಯೊಳಗಿಟ್ಟು ನೋಡುವುದು ಒಂದು ಕ್ಷಣದ ಮಟ್ಟಿಗೂ ಯಾವುದೇ ಪ್ರಯತ್ನವನ್ನು ನಮ್ಮಿಂದ ನಿರೀಕ್ಷಿಸುವದ್ದಾಗಿರುವುದಿಲ್ಲ. ಸಾಧನೆಯ ಮಾತೇ ಆಗಿರಬಹುದು, ಅಥವಾ ತಪ್ಪು ಘಟಿಸಿದ ಮಾತೇ ಆಗಿರಬಹುದು, ಸಣ್ಣದಿರಲಿ ಅಥವಾ ಬಹಳ ದೊಡ್ದ ಮಟ್ಟಿಗೆ ಜೀವನಕ್ಕೆ ಪ್ರಭಾವ ಬೀರುವದ್ದಾಗಿರಲಿ, ಅಲ್ಲೆಲ್ಲ ಅದು ನನ್ನಿಂದಾದದ್ದು ಅನ್ನುವಾಗ ಅದು ನಮಗೆ ಪ್ರಯತ್ನಪೂರ್ವಕವಾಗಿ ಸಂಭವಿಸುವ ಯೋಚನೆಯಲ್ಲ. ಅತಿ ಸಹಜವಾಗಿ ನಾನು ಸಾಧಿಸಿಬಿಟ್ಟೆ ಅಂತಲೋ ನಾನು ತಪ್ಪು ಮಾಡಿಬಿಟ್ಟೆ ಅಂತಲೋ ಅಂದುಬಿಡುತ್ತೇವೆ ಮಾತ್ರವಲ್ಲ ನೂರಕ್ಕೆ ನೂರು ನಾನು ಅನ್ನುವದ್ದೇ ಅಲ್ಲಿ ಆ ಘಟನೆಗೆ, ಅದರ ಹಿಂದುಮುಂದಿಗೆ, ಆಗುಹೋಗುಗಳಿಗೆ ಬದ್ಧವಾಗಿರುತ್ತದೆಯೇ ಹೊರತು ನನ್ನ ಮನಸು ತಪ್ಪು ಮಾಡಿತು, ನನ್ನ ಮೆದುಳು ಸಾಧಿಸಿಬಿಟ್ಟಿತು ಅಂದುಕೊಳ್ಳುವುದಾಗಲಿ, ಹೇಳಿಕೊಳ್ಳುವುದಾಗಲಿ ತುಂಬ ಅಸಹಜ ಅನಿಸುವುದಿಲ್ಲವೇ? ಒಂದುವೇಳೆ "ಅಯ್ಯೋ ಆ ಗಳಿಗೆ ನನ್ನ ಮನಸು ಹಿಡಿತ ತಪ್ಪಿಬಿಟ್ಟಿತು" ಅಂತಲೋ ಅಥವಾ "ಸದ್ಯ ಆ ಹೊತ್ತಿಗೆ ನನ್ನ ತಲೆ ಸರಿಯಾಗಿ ಕೆಲಸ ಮಾಡಿದ್ದರಿಂದ ಈ ಸಾಧನೆ ಸಾಧ್ಯವಾಯಿತು" ಅಂತಲೋ ಅನ್ನಬಹುದಾದರೂ ಆಗ ಪುನಃ ಅಲ್ಲಿ ಮೊದಲನೆಯ ಸ್ಥಾನದಲ್ಲಿ ಕರ್ತೃವಾಗಿ ನಾನು ಅನ್ನುವ ಪದವೇ ನಿಂತಿರುತ್ತದೆ. ಹೀಗೆ ನಾನು ಅನ್ನುವದ್ದು ಸಮಯೋಚಿತವಾಗಿ ಒಂದೊಂದು ನಮ್ಮದು ಅನಿಸಿಕೊಳ್ಳುವ ಅಂಗಾಂಗಗಳಲ್ಲಿ ತನ್ನನ್ನು ತಾನು ಕಂಡುಕೊಳ್ಳುವ ನಮ್ಮ ಒಟ್ಟಾರೆ ಸ್ವರೂಪ ಅನ್ನಬಹುದು. ನಾನು ಅನ್ನುವುದನ್ನು ಪ್ರತ್ಯೇಕವಾಗಿ ಮನಸು ಅನ್ನಲೂ ಆಗುವುದಿಲ್ಲ, ಆತ್ಮ ಅನ್ನಲೂ ಆಗುವುದಿಲ್ಲ ಅಥವಾ ಈ ದೇಹವೆಂದು ಅಂತೂ ಅನ್ನಲು ಸಾಧ್ಯವೇ ಇಲ್ಲ, ಆದಾಗ್ಯೂ ಅವೆಲ್ಲವೂ ಸಂದರ್ಭಾನುಸಾರ ಬಿಡಿಬಿಡಿಯಾಗಿ ಕೆಲವೊಮ್ಮೆ ಮತ್ತು ಸಮಗ್ರವಾಗಿ ಕೆಲವೊಮ್ಮೆ ನಾನು ಅಂತ ಅನ್ನಿಸಬಹುದು. ಒಂದು ಕಾರ್ಯಕ್ಕೆ ಪ್ರೇರೇಪಿಸುವಾಗ ಮನಸು ನಾನಾಗಿರುತ್ತದೆ, ಅದನ್ನು ಕಾರ್ಯರೂಪಕ್ಕೆ ತರುವ ಯೋಜನೆಯಾಗುವಾಗ ಜೊತೆಗೆ ಬುದ್ಧಿಯೂ ನಾನು ಅನ್ನುವ ಅವಕಾಶದೊಳಗೆ ಸೇರಿಕೊಳ್ಳುತ್ತದೆ, ಮುಂದುವರೆದು ಕಾರ್ಯಗತಗೊಳಿಸುವಾಗ ಭೌತಿಕ ಅಂಗಾಂಗಗಳೂ ಒಳಸೇರಿಕೊಳ್ಳುತ್ತವೆ. ಮುಂದುವರೆದು ಆ ಹೆಜ್ಜೆಯ ನಿತ್ಯಾನಿತ್ಯತೆಯನ್ನು, ಸರಿತಪ್ಪುಗಳನ್ನು ವಿವೇಚಿಸುವಾಗ ಮನಸಾಕ್ಷಿ ಅಲ್ಲಿ ಸೇರಿಕೊಳ್ಳುತ್ತದೆ. ಆತ್ಮ ಅನ್ನುವದ್ದು ಇವೆಲ್ಲದರೊಳಗೂ ಹಾಸುಹೊಕ್ಕಾಗಿರುತ್ತದೆ. ಹಾಗಾಗಿ ನಾನು ಅನ್ನುವದ್ದು ಯಾವುದೇ ಸಂದರ್ಭದಲ್ಲೂ ಆತ್ಮಕ್ಕೆ ಹೊರತಾದುದಲ್ಲ, ಮತ್ತು ಇದೇ ಅಂತ ಪ್ರಮಾಣೀಕರಿಸಲ್ಪಡಬಲ್ಲದ್ದೂ ಅಲ್ಲ, ಗುಣಲಕ್ಷಣಗಳಿಗೆ ಮತ್ತದಕ್ಕನುಸಾರವಾಗಿ ಒಂದು ನಿರ್ದಿಷ್ಟ ಸ್ವರೂಪಕ್ಕೊಳಪಡಬಲ್ಲದ್ದೂ ಅಲ್ಲ.
ಈಗ ನಮ್ಮ ಸಂಬಂಧಗಳ ಬಗ್ಗೆ ಮಾತಾಡುವುದಾದರೆ, ಅಲ್ಲಿ ನಾವು ಅತಿಹೆಚ್ಚಿನ ಮಟ್ಟಿಗಿನ ವಿಲೀನತೆ ಸಾಧಿಸುವ ಕನಸು ಕಾಣುತ್ತಿರುತ್ತೇವೆ. ಆದರದನ್ನು ನನಸಾಗಿಸುವ ನಿಟ್ಟಿನಲ್ಲಿ ಸ್ವಲ್ಪಮಟ್ಟಿನ ಚಿಂತನೆ ಅಗತ್ಯ.ಯಾಕೆಂದರೆ ನಮ್ಮದೇ ದೇಹದ ಅಂಗಗಳ ಮಾತು ಬಂದಾಗ ಒಂದೇ ಮನಸಿನ ಕಾರ್ಯಕ್ಷೇತ್ರದ ಮಿತಿಯೊಳಗೆ ಭಾವನೆಗಳೂ ಇರುತ್ತವೆ ಮತ್ತು ಆ ಅಂಗಾಂಗಗಳೂ. ಆದರೆ ಇನ್ನೊಂದು ವ್ಯಕ್ತಿತ್ವದ ಒಡನಾಟದ ಮಾತು ಬಂದಾಗ ಅಲ್ಲೆರಡು ಮನಸುಗಳಿರುತ್ತವೆ, ಎರಡು ನಾನುಗಳೊಳಗೆ. ಅವು ಒಂದೇ ಅನಿಸುವ ಹಾಗೆ, ತಾದಾತ್ಮ್ಯ ಸಾಧಿಸುವ ನಿಟ್ಟಿನಲ್ಲಿ ನಡೆಯಬೇಕಾದರೆ ಸ್ವಲ್ಪ ಮಟ್ಟಿನ ವಿಶಾಲ ಚಿಂತನೆ ಅಗತ್ಯ. ಚಿಂತನೆ ವಿಶಾಲವಾಗುವವರೆಗೆ ಭಾವನೆಗಳು ಮುಂದುವರೆಯುವುದಿಲ್ಲ. ಏಕಪಕ್ಷೀಯ ತಿಳುವಳಿಕೆಯ ಗೋಜಲುಗಳಲ್ಲಿ ಸಿಕ್ಕಿಹಾಕಿಕೊಂಡು ನರಳುತ್ತಿರುತ್ತವೆ. ಅಂದರೆ ನಾನು ಅನುಭವಿಸುವುದನ್ನೆಲ್ಲ ನನಗೆ ಸಂಬಂಧಪಟ್ಟವರು ನನ್ನಷ್ಟೇ ತೀವ್ರವಾಗಿ ಅನುಭವಿಸಬೇಕು, ನನ್ನದೇ ದೃಷ್ಟಿಕೋನದಲ್ಲಿ ಅದನ್ನು ನೋಡಿ, ನನ್ನಂಥದ್ದೇ ಪ್ರತಿಕ್ರಿಯೆ ನೀಡಬೇಕು ಅನ್ನುವುದು ಸಾಮಾನ್ಯ ಮನುಷ್ಯನಲ್ಲಿ ತನ್ನವರು ಅನಿಸಿಕೊಂಡವರ ಬಗೆಗಿನ ನಿರೀಕ್ಷೆಯ ಭಾವವಾಗಿರುತ್ತದೆ. ಒಂದು ಹಂತದವರೆಗೆ ನಮ್ಮವರೆನಿಸಿಕೊಂಡವರಲ್ಲಿನ ಸಲುಗೆಯಿಂದಾಗಿ ಆ ನಿರೀಕ್ಷೆ ಸಹಜ ಅನಿಸಬಹುದು. ಆದರೆ ಅವರನ್ನೆಷ್ಟರ ಮಟ್ಟಿಗೆ ನಮ್ಮವರನ್ನಾಗಿಸಿಕೊಂಡಿದ್ದೇವೆ ಅನ್ನುವುದು ಅಲ್ಲಿಂದ ನಮಗೆ ನಿರೀಕ್ಷಿಸದಿದ್ದ ಪ್ರತಿಕ್ರಿಯೆ ಎದುರಾದಾಗ ನಮ್ಮ ಮನದಲ್ಲೇಳುವ ಭಾವಗಳಿಂದ ಸ್ಪಷ್ಟವಾಗುತ್ತದೆ. ಇಲ್ಲಿ ನಮ್ಮ ಅಂಗಾಂಗಗಳನ್ನೊಪ್ಪಿಕೊಂಡಂತೆ ಇತರ ವ್ಯಕ್ತಿತ್ವಗಳನ್ನೊಪ್ಪಿಕೊಳ್ಳುವುದಾಗದು. ಒಂದೊಮ್ಮೆ ಒಂದೈದಾರು ಕಿಲೋಮೀಟರ್ ವರೆಗೆ ನಡೆಯಬೇಕೆಂದುಕೊಂಡಿರುತ್ತೇವೆ, ಎರಡು ಕಿಲೋಮೀಟರ್ ನಡೆಯುವಾಗ ಇದ್ದಕ್ಕಿದ್ದಂತೆ ಕಾಲು ಇನ್ನೊಂದು ಹೆಜ್ಜೆಯೂ ಮುಂದಿಡುವುದು ಅಸಾಧ್ಯ ಅನಿಸುವಂತೆ ಮುಷ್ಕರ ಹೂಡಿತು ಅಂತಿಟ್ಟುಕೊಳ್ಳುವಾ.. ಆಗ ನಮ್ಮ ಮನಸಿನಲ್ಲಿ ಯಾಕಿರಬಹುದು? ಮುಂಚೆ ಹೀಗಾಗುತ್ತಿರಲಿಲ್ಲವಲ್ಲಾ.. ವಯಸ್ಸಾಗುತ್ತ ಬಂತು ನನಗೆ, ಅದಕ್ಕೆ ಹೀಗಾಗಿರಬಹುದು ಅಂತಲೋ, ಇವತ್ತು ಮಧ್ಯಾಹ್ನ ಊಟ ಸರಿಯಾಗಿ ಮಾಡಿಲ್ಲ, ಅದಕ್ಕೆ ಸುಸ್ತು ಅನಿಸುತ್ತಿದೆ ಅಂತಲೋ, ಬೆಳಿಗ್ಗೆಯಿಂದ ಮನೆ ಕ್ಲೀನ್ ಮಾಡಿದ್ದಕ್ಕೆ ಇವತ್ತು ದೇಹಕ್ಕೆ ಹೆಚ್ಚಿನ ಶ್ರಮವಾಗಿದೆ ಹಾಗಾಗಿ ನಡೆಯಲಾಗುತ್ತಿಲ್ಲ ಅಂತಲೋ, ಕಾಲಿನ ಅಸಾಮರ್ಥ್ಯಕ್ಕೆ ಅನುಕಂಪ ಹುಟ್ಟುವ ನಿಟ್ಟಿಗೆ ಪೂರಕವಾಗಿ ಯೋಚನೆ ಮಾಡುತ್ತೇವೆಯೇ ಹೊರತು, ಕಾಲಿನ ಬಗ್ಗೆ ಅಸಹನೆ, ಸಿಟ್ಟು, ಅಸಮಾಧಾನಗಳನ್ನು ತಳೆಯುವುದಿಲ್ಲ ಅಲ್ಲವೇ? ಅದೇ ಅತ್ಯಂತ ಪ್ರೀತಿಪಾತ್ರ ವ್ಯಕ್ತಿತ್ವವೊಂದು ಹಲಕಾಲದ ಬಳಿಕ ನಮ್ಮನ್ನು ಭೇಟಿಯಾಗುವ ಅವಕಾಶ, ಕಾಣುವ ಮಾತಾಡುವ ತುಡಿತದಲ್ಲಿರುತ್ತೇವೆ, ನಾಳೆ ಖಂಡಿತಾ ನಿನ್ನ ಕಾಣಲು ಬರುತ್ತೇನೆ ಅಂದಿದ್ದವರು, ಬರಲೂ ಇಲ್ಲ, ಬರಲಾಗದ್ದನ್ನು ಮುಂಚಿತವಾಗಿ ತಿಳಿಸಲೂ ಇಲ್ಲ ಅಂತಿಟ್ಟುಕೊಳ್ಳಿ, ಕಾದುಕೂತು ನಾವು ನಿರಾಶರಾದ ಸಂದರ್ಭ, ಮೊದಲ ಕೆಲ ಕ್ಷಣಗಳಲ್ಲಿ ಅವರ ಮೇಲೇ ದೂರುಗಳು, ಅವರ ಅನಿರೀಕ್ಷಿತ ನಡವಳಿಕೆಯ ಬಗ್ಗೆ ಅಸಮಾಧಾನ, ವಿನಾಕಾರಣ ನೇತ್ಯಾತ್ಮಕ ಕಲ್ಪನೆ ಮತ್ತು ಅದರ ಮುಂದುವರಿಕೆಯಾಗಿ ತಪ್ಪುಗ್ರಹಿಕೆಗಳು..ಹೀಗೇ ಅಪ್ರಿಯವಾದದ್ದೊಂದು ನಡೆದುದರ ಹೊಣೆಗಾರಿಕೆಯನ್ನು ಎದುರಿದ್ದವರ ಮೇಲೆ ಹೊರಿಸುವ, ತನ್ನನ್ನು ಸ್ವಾನುಕಂಪದ ತೆರೆಯಲ್ಲಿ ಮುಳುಗೇಳಿಸುವ ತರಾತುರಿಯಲ್ಲಿ ಇರುವುದೇ ಹೆಚ್ಚು ಮನಸು. ಆ ಕ್ಷಣಗಳಲ್ಲಿ ಮನಸಿನ ಮೇಲೆ ಹಿಡಿತ ಸಾಧಿಸಿ ಅಲ್ಲಿಂದಾಚೆ ಬಂದು ಸ್ವಲ್ಪ ಬೇರೆ ದಿಕ್ಕಿನಲ್ಲಿ ಯೋಚಿಸಿದರೇನೋ ಬಚಾವಾಗಬಹುದು ಸ್ವಲ್ಪಮಟ್ಟಿಗೆ. ಅಂದರೂ ಅತೃಪ್ತಿ ಕೆಲಗಳಿಗೆಗಳ ಕಾಲ ಅಧಿಪತ್ಯ ಸಾಧಿಸಿ ಸಂಬಂಧದೊಳಗೆ ಅಶಾಂತಿ ಸಾಧಿಸುವ ತನ್ನ ಕೆಲಸ ಮಾಡಿಬಿಟ್ಟಿರುತ್ತದೆ. ಆದರೆ ಆ ಯೋಚನೆಯ ಎಳೆಯನ್ನು ಹಾಗೇ ಬೆಳೆಯಗೊಟ್ಟರೆ, ಪ್ರೀತಿಪಾತ್ರವಾಗಿದ್ದ ಆ ವ್ಯಕ್ತಿತ್ವ ತುಂಬಾ ಕಾಡುವ ಒಂದು ಅಸಹನೀಯ ವಿಷಯವಾಗಿ ಪರಿವರ್ತಿತವಾಗುವುದರಲ್ಲಿ ಸಂಶಯವೇ ಇಲ್ಲ. ಯಾಕೆ ಹೀಗಾಗುತ್ತದೆ? ಕಾಲು ನನದು, ಹಾಗಾಗಿ ಅದರ ಮೇಲೆ ಮುನಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಅನ್ನಬಹುದಾ? ಹಾಗಾದರೆ ಸಣ್ಣಸಣ್ಣ ವಿಷಯಕ್ಕೂ ನಮ್ಮ ದೂರುಗಳಿಗೀಡಾಗುವ, ತುಂಬಾ ನೋವಿಗೀಡಾಗಿಸಿದರು ಅನ್ನುವ ಆಪಾದನೆಗೀಡಾಗುವ ಪ್ರೀತಿಪಾತ್ರರನ್ನು ಇವರು ನಮ್ಮವರು ಅಂತ ನಾವು ಕರೆಯುವುದಷ್ಟೇ ಹೊರತು ವಾಸ್ತವದಲ್ಲಿ ಅವರು ನಮ್ಮವರಲ್ಲ ಅಂತಾಯಿತಲ್ಲಾ.. ಹೀಗೆ ನಮ್ಮವರು ಅಂತ ನಾವಂದುಕೊಂದವರು ನಮ್ಮ ಮನವರಿತು ನಡೆಯುವಷ್ಟರ ಮಟ್ಟಿಗೆ ನಮ್ಮ ಭಾವಗಳೊಂದಿಗೆ, ಇಷ್ಟಾನಿಷ್ಟಗಳೊಂದಿಗೆ ಪರಿಚಿತರಾಗಿರುವುದಷ್ಟೇ ಅಲ್ಲ, ಅವನ್ನೊಪ್ಪಿಕೊಂಡು ತಮ್ಮವಾಗಿಸಿಕೊಂಡಿರಬೇಕು, ಆ ಪ್ರಕಾರ ಸದಾ ನಾನು ಅನ್ನುವ ಅಸ್ತಿತ್ವದೊಡನೆ ತಾದಾತ್ಮ್ಯ ಸಾಧಿಸುವ ದಾರಿಯಲ್ಲಿರಬೇಕು ಅನ್ನುವುದು ಎಷ್ಟರಮಟ್ಟಿಗೆ ನಾವು ಅವರನ್ನು ನಮ್ಮದಾಗಿಸಿಕೊಂಡಿದ್ದೇವೆ ಅನ್ನುವದರ ಮೇಲೇ ನೂರಕ್ಕೆ ನೂರರಷ್ಟು ಅವಲಂಬಿತ. ಇದು ಹೆಚ್ಚು ಪೂರ್ಣತೆಯೆಡೆಗೆ ಸಾಗಿದಷ್ಟೂ ಅದೂ ಹೆಚ್ಚು ಪರಿಪೂರ್ಣ ಅನುಭೂತಿಯೆಡೆಗೆ ಸಾಗಬಲ್ಲುದು. ಈ ಸಾಪೇಕ್ಷ ಜಗತ್ತಿನಲ್ಲಿ ಪೂರ್ಣತೆ, ಪರಿಪೂರ್ಣತೆ ಅನ್ನುವದ್ದು ಅಥವಾ ಸರ್ವಕಾಲಿಕ ಸತ್ಯ, ಸರ್ವಕಾಲಿಕ ಸರಿ ಅನ್ನುವ ವಿಷಯಗಳು ಆಯಾ ಕ್ಷಣದಲ್ಲಿ ಘಟಿಸುವ ಒಂದು ಘಟನೆಯೆಂಬ ನಾಣ್ಯದ ಒಂದು ಮುಖದ ರೂಪರೇಷೆಗಳು. ಅದೇ ನಾಣ್ಯಕ್ಕೆ ಅಪೂರ್ಣತೆ, ಸುಳ್ಳು ಮತ್ತು ತಪ್ಪು ಅನ್ನುವ ಇನ್ನೊಂದು ಮುಖದ ಆಯಾಮಗಳಿರುತ್ತವೆ. ಹಾಗಾಗಿ ಒಂದು ವ್ಯಕ್ತಿತ್ವ ಇನ್ನೊಂದರೊಳಗೆ ಪೂರ್ಣ ವಿಲೀನವಾಗುವುದು ಅನ್ನುವುದು ಅದೇ ಸಾಪೇಕ್ಷತೆಯೊಳಗೆ ತನ್ನ ಮಿತಿಗಳನ್ನಿಟ್ಟುಕೊಂಡಿರುವ ವಿಷಯ. ಅಲ್ಲಿ ಸಾಧ್ಯವೆನಿಸಬಹುದಾದ ವಿಷಯ ಅಂದರೆ ಆ ವಿಲೀನವಾಗುವ ಪ್ರಕ್ರಿಯೆಯಲ್ಲಿ ಅತಿಹೆಚ್ಚಿನ ತೊಡಗಿಕೊಳ್ಳುವಿಕೆಯಲ್ಲಿರುವುದು. ಹೀಗೆ ನಾನು ಅನ್ನುವದ್ದನ್ನು ನಾವು ನಮ್ಮ ಅನುಬಂಧಗಳಲ್ಲಿ ಹುಡುಕಿದರೆ ತಪ್ಪಾದೀತು. ಅಲ್ಲಿ ಅದು ನನ್ನದು ಅನ್ನುವ ಆಪ್ತತೆ, ಆತ್ಮೀಯತೆ, ಪ್ರೀತಿ, ಪ್ರೇಮಗಳನ್ನು ಅತಿ ಸಹಜವಾಗಿ ಹಾಗೂ ಅತ್ಯಂತ ಪ್ರಾಮಾಣಿಕವಾಗಿ ಮೈಗೂಡಿಸಿಕೊಳ್ಳುವ ಮೂಲಕ ನನ್ನೊಳಗೆ ಅದು, ಅದರೊಳಗೆ ನಾನು ವಿಲೀನತೆ ಸಾಧಿಸುವ ಪ್ರಯತ್ನವಿರಬಹುದೇ ಹೊರತು ನಾನು ಅದೇ ಅನ್ನಿಸುವುದು, ಅಥವಾ ಅದು ನಾನೇ ಅನಿಸುವುದು ಸಾಧ್ಯವಿಲ್ಲದ ಮಾತು. ಯಾಕೆಂದರೆ ಪ್ರಪಂಚದಲ್ಲಿ ಎಷ್ಟು ಬೆರಳುಗಳೋ ಅಷ್ಟು ಬೆರಳಚ್ಚುಗಳು ಅನ್ನುವಷ್ಟೇ ಸತ್ಯ ಎಷ್ಟು ಅಸ್ತಿತ್ವಗಳೋ ಅಷ್ಟು ಆತ್ಮಗಳು ಮತ್ತು ಎಷ್ಟು ಆತ್ಮಗಳೋ ಅಷ್ಟು ಪ್ರತ್ಯೇಕ ವ್ಯಕ್ತಿತ್ವಗಳು ಅಂದರೆ ನಾನುಗಳು ಅನ್ನುವದ್ದು. ಇದನ್ನು ಮನಸಲ್ಲಿಟ್ಟುಕೊಂಡು ಇನ್ನೊಂದು ವ್ಯಕ್ತಿತ್ವ ಅದೆಷ್ಟೇ ಹತ್ತಿರದ್ದಾದರೂ "ನೀನೇ ನಾನು ನಾನೇ ನೀನು" ಅನ್ನುವ ಮಾತು ಒಂದು ಸುಂದರ ಕನಸಾಗಿಯೇ ಉಳಿಯುವದ್ದು, ಆದರೆ ಅದನ್ನು ನನಸಾಗಿಸುವ ನಿರಂತರ ಪ್ರಯತ್ನವಿದೆಯಲ್ಲಾ, ಅದು ಕಣ್ಮುಂದಿರುವ ಬಾಳನ್ನು ಆ ಕನಸಿನಷ್ಟೇ ಸುಂದರವಾಗಿಸುತ್ತಾ ಸಾಗುತ್ತದೆ ಅನ್ನುವ ಮಾತು ಸ್ಪಷ್ಟವಾಗುವಲ್ಲಿಗೆ ಆ ಆತ್ಮೀಯರಿಂದ ಚಾಲನೆ ಪಡೆದುಕೊಂಡ ನನ್ನ ಆಲೋಚನೆಯ ಸರಣಿ ಒಂದು ಘಟ್ಟಕ್ಕೆ ಬಂದು ನಿಂತಿತು. .

4 comments:

  1. ಒಳ್ಳೆಯ ವಿಶ್ಲೇಷಕ ಬರಹ. "ನೀನೇ ನಾನು ನಾನೇ ನೀನು" ಅನ್ನುವ ಮಾತು ಎಂದೋ ಮರೆತು "ನೀನು ನೀನೇ - ಇಲ್ಲಿ ನಾನು ನಾನೇ" ಎನ್ನುವುದು ಅಭ್ಯಾಸವಾಗಿ 'ನಾನು' ಮೆರೆದಿದೆ.
    ಮಠಾಧೀಶರ 'ನಾವೂ' ಸಹ ಕಲ್ಮಶವಲ್ಲ ಎನ್ನುವುದು ಅಳೆಯುವ ಮಾಪನವಾದರೂ ಎಲ್ಲಿದೆ?

    ReplyDelete
  2. ಅನುರಾಧ, ಹೊಸ ಚಿಂತನೆ! ಹೀಗೂ ಆಲೋಚನೆ ಮಾಡಬಹುದೆಂದು ನನಗನಿಸಿರಲೇ ಇಲ್ಲ. ಹಾಗಾದರೆ, ನಮ್ಮವರೆಂದುಕೊಂಡವರು ನಮ್ಮ ಭಾವಗಳಿಗೆ ಸ್ಪಂದಿಸದೇ ಇದ್ದರೆ ಅವರ ಮೇಲೆ ಅಸಮಧಾನ ಪಡಕೊಳ್ಳುವುದು ಸರಿಯಲ್ಲವೆಂದಾಗುತ್ತದೆ. ಅದೂ ಕೂಡ ಒಳ್ಳೆಯದೇ, ಮುಂದಿನ ಮಾನಸಿಕ ಗೊಂದಲವನ್ನು ತಡೆಯುತ್ತದೆ. ಆದರೂ ಎಂದಾದರೂ ನಮ್ಮ ಅಂಗಾಗಳು ತಮ್ಮ ಕಾರ್ಯಕ್ಷಮತೆಯಲ್ಲಿ ವೈಫಲ್ಯ ಹೊಂದಿದರೆ ನಮ್ಮ ಮನಸ್ಸು ಅದನ್ನು ನಿವಾರಿಸಲು ತಕ್ಕುದಾದ ಪರಿಹಾರವನ್ನು ಯೋಚಿಸಲು ತೊಡಗುತ್ತದೆ. ವೈದ್ಯರನ್ನು ಭೇಟಿಯಾಗಬೇಕೋ, ಎಣ್ಣೆ ಹಚ್ಚಬೇಕೋ, ಇಲ್ಲ ತಿಂದ ಆಹಾರದಲ್ಲೇನೋ ದೋಷವೋ ಹೀಗೆ ಹತ್ತು ಹಲವು ದಿಕ್ಕುಗಳಲ್ಲಿ ಮನ ಓಡುತ್ತದೆ. ಹಾಗೆಯೇ ನಮ್ಮವರು ಸ್ಪಂದಿಸದಿದ್ದಾಗ ಅವರನ್ನು ದೂರುವುದಕ್ಕಿಂತ ನೇರ ಸಂವಹನದ ರೂಪದಲ್ಲಿ ನಮ್ಮ ಅಸಮಧಾನದ ಚಿಗುರನ್ನು ಮೊಳಕೆಯಲ್ಲೇ ಚಿವುಟಬಹುದು. ಅಂತೆಯೇ ಅಂತೆಯೇ ಸಂಬಂಧದಲ್ಲ್ಲಿ ಏನಾದರೂ ತಪ್ಪು ಕಲ್ಪನೆಗಳಿದ್ದರೂ ದೂರವಾಗಬಹುದು. ಅಂತೆಯೇ ಅದೊಂದು ನೆವನವೂ ಆಗಿರಬಹುದು, ನಾನು ನಾನೇ, ನೀನು ನೀನೇ ಎನ್ನಲು! ಲೇಖನ ಮತ್ತಷ್ಟು ಚಿಂತನೆಗೆ ಹಚ್ಚಿತು, ಖಂಡಿತವಾಗಿಯೂ ಧನಾತ್ಮಕ! ಇನ್ನು ಬರವಣಿಗೆಯ ಬಗ್ಗೆಯಂತೂ ಹೇಳಬೇಕಾಗಿಲ್ಲ,,, ನಿಮ್ಮ ಫ್ಯಾನು ನಾನು!

    ReplyDelete
    Replies
    1. ನಿಜವೇ.. ಸಂವಹನದಷ್ಟು ದೊಡ್ಡ ಉಪಾಯವಿಲ್ಲ. ಅದನ್ನೇ ನಾನು ಮುಂದಿನ ಹೆಜ್ಜೆಗಳಾಗಿ ವಿಶೇಷ ಚಿಂತನೆಯ ಅಗತ್ಯವಿದೆ ಅಂದದ್ದು. ಆದರೆ ಈ ಹೊಣೆಗಾರಿಕೆಯನ್ನು ಅತ್ತ ಹೊರಿಸಿ ಸುಮ್ಮನಾಗುವ ಮನಸಿನ ಜಾಯಮಾನ ಉಂಟಲ್ಲಾ, ಅದು ಆ ಮುಂದಿನ ಹೆಜ್ಜೆಗಳವರೆಗೆ ಸಾಗಗೊಡುವುದಿಲ್ಲ. ನಿಮ್ಮ ಮಾತೂ ನಿಜವೇ.. ಸಂವಹನ ನೀನು ನಾನೇ ಅನ್ನುವ ಕನಸನ್ನ ನನಸಾಗಿಸುವತ್ತ ನಡೆಯುವ ಇನ್ನೊಂದು ಮುಂದಿನ ಹೆಜ್ಜೆ..

      Delete