Wednesday, July 22, 2015

ತಪ್ಪು ಗ್ರಹಿಕೆಗಳ ಬೆನ್ನು ಹತ್ತಿ: ಶ್ರೀಯುತ ಎಸ್ ಎಲ್ ಭೈರಪ್ಪನವರ ಕವಲು ಕಾದಂಬರಿಯ ಮಂಗಳಾ ಪಾತ್ರದ ವಿಶ್ಲೇಷಣೆ


---------------------------------------------------------------------------------------------------------------------------------------

ವೇದಿಕೆಯ ಮೇಲಿರುವ ಮತ್ತು ಸಭೆಯಲ್ಲಿರುವ ಹಿರಿಯರಿಗೆ ನಮನಗಳು, ಕಿರಿಯರಿಗೆ ಸಪ್ರೇಮ ವಂದನೆಗಳು.

ನಾನು ಬಾಲ್ಯ ಕಳೆದ ಹಳ್ಳಿಯಲ್ಲೆಲ್ಲ ಹುಲ್ಲಿನ ಮಾಡಿನ ಗುಡಿಸಲುಗಳಿರುತ್ತಿದ್ದವು. ವರ್ಷ ವರ್ಷವೂ ಮಾಡಿಗೆ ಹೊಸ ಹುಲ್ಲು ಹೊಚ್ಚಿಸುತ್ತಿದ್ದರು. ಕಳೆದ ವರ್ಷ ಬಿಸಿಲಿಗೆ ಒಣಗಿ ಪುಡಿಪುಡಿಯಾಗಿ, ಮಳೆಯಲ್ಲಿ ನೆಂದು ಮುದ್ದೆಯಾದ ಹುಲ್ಲನ್ನು ಬಿಚ್ಚಿ ಹೊಸ ಹುಲ್ಲಿಂದ ಮಾಡನ್ನು ಕಟ್ಟುವ ಈ ಕೆಲಸ ರಾತ್ರಿಗಿಂತ ಮುಂಚೆ ಮುಗಿಸಿಬಿಡುತ್ತಿದ್ದರು. ಒಂದು ಕಡೆಯಲ್ಲಿ ಹೀಗೆ ಹುಲ್ಲು ಹೊಚ್ಚಿಸುವ ಕಾರ್ಯಕ್ರ,ಮ ರಾತ್ರಿಯಾಗುವವರೆಗೂ ಮುಂದುವರೆಯಿತಂತೆ. ಬುಡ್ಡಿ ದೀಪದ ಬೆಳಕಲ್ಲಿ ಅವಸರವಸರವಾಗಿ ಕೆಲಸ ಮುಗಿಸುತ್ತಿದ್ದವರಲ್ಲೊಬ್ಬರಿಗೆ ಇನ್ನೊಂದೇ ಒಂದು ಕಡೆ ಹುಲ್ಲು ಬಿಗಿದು ಗಂಟು ಕಟ್ಟುವಷ್ಟು ಹಗ್ಗದ ಅಗತ್ಯವಿತ್ತಂತೆ. ಪಕ್ಕದಲ್ಲಿಟ್ಟುಕೊಂಡಿದ್ದ ಹಗ್ಗದ ಉಂಡೆ ಖಾಲಿಯಾಗಿತ್ತು, ಅಲ್ಲೇ ಸ್ವಲ್ಪ ಆಚೆ ನೇತಾಡುತ್ತಿದ್ದ ಒಂದು ತುಂಡು ಹಗ್ಗವನ್ನು ತೆಗೆದು ಹುಲ್ಲನ್ನು ಬಿಗಿದು ಕಟ್ಟಿ ಕೆಲಸ ಮುಗಿಸಿದರಂತೆ. ಕಣ್ತುಂಬ ನಿದ್ದೆ ಮಾಡಿ ಎದ್ದ ಆತ ಮಾರನೆಯ ಬೆಳಿಗ್ಗೆ ನೋಡುವಾಗ ಆ ಹಗ್ಗವೆಂದು ತಾವು ಅಂದುಕೊಂಡು ಬಿಗಿದದ್ದು ಒಂದು ಹಾವನ್ನ ಅಂತ ಗೊತ್ತಾದ ತಕ್ಷಣ ಭಯಕ್ಕೆ ಹೃದಯಾಘಾತವಾಗಿ ಬಿದ್ದವರು ಮತ್ತೇಳಲಿಲ್ಲವಂತೆ. ಈ ತಪ್ಪುಗ್ರಹಿಕೆಯೆಂಬುವದ್ದು ಎಷ್ಟು ಪ್ರಬಲವಾಗಿ ಪ್ರಭಾವ ಬೀರುತ್ತದೆ ಅನ್ನುವ ಮಾತು ಹೇಳಲಿಕ್ಕಾಗಿ ಈ ಸಂದರ್ಭ ಹೇಳಿದೆ. ಮುಂಚಿನ ದಿನ ಹಾವನ್ನು ಹಗ್ಗವೆಂದು ತಪ್ಪಾಗಿ ಗ್ರಹಿಸಿ ಕೆಲಸ ಮುಗಿಸಿ, ನಿರಾಳ ನಿದ್ರಿಸಿ ಎದ್ದಿದ್ದರು ಆತ. ಹಾವು ಕಚ್ಚಿರಲಿಲ್ಲ, ಕಚ್ಚಿದ್ದರೆ ಬೆಳಿಗ್ಗೆಯ ತನಕ ಆತ ಬದುಕಿರುತ್ತಿರಲಿಲ್ಲ. ಅದರೆ ಮಾರನೆಯ ದಿನ ಅಷ್ಟೊಂದು ಬಿಗಿದಾಗ ಹಾವು ಕಚ್ಚದೆ ಬಿಟ್ಟಿರುತ್ತದೆಯೇ, ಆಗಲೇ ರಾತ್ರಿ ಕೈಗೇನೋ ಚುಚ್ಚಿದಂತನಿಸಿತಲ್ಲವೇ? ಅಂತ ಸುಮ್ಮಸುಮ್ಮನೆ ಯೋಚಿಸಿದವರು ಕಚ್ಚಿಯೇಬಿಟ್ಟಿದೆಯೆಂಬ ನಿರ್ಧಾರಕ್ಕೆ ಬಂದೂ ಬಿಟ್ಟರು ಮತ್ತು  ಆ ತಪ್ಪುಗ್ರಹಿಕೆಗಾಗಿ ಪ್ರಾಣವನ್ನೂ ತೆತ್ತರು.

ಆತ್ಮೀಯರೇ, ನಾವಿಂದು ಇಲ್ಲಿ ಸಂಸ್ಕಾರಭಾರತಿಯ ಸಾಹಿತ್ಯ ವಿಧಾದ ಉದ್ಘಾಟನೆಯ ಸಲುವಾಗಿ ಸೇರಿದ್ದೇವೆ. ಈ ವಿಚಾರ ಸಂಕಿರಣದ ಸ್ತ್ರೀ ಚಿಂತನೆಯ ವಿವಿಧ ಆಯಾಮಗಳು ಎಂಬ ಎರಡನೆಯ ಗೋಷ್ಠಿಯಲ್ಲಿ ನಾನು "ತಪ್ಪುಗ್ರಹಿಕೆಯ ಬೆನ್ನು ಹತ್ತಿ" ಅನ್ನುವ ಶೀರ್ಷಿಕೆಯಡಿಯಲ್ಲಿ ಶ್ರೀಯುತ ಭೈರಪ್ಪರವರ ಕವಲು ಕಾದಂಬರಿಯ ಮುಖ್ಯವಾಗಿ ಮಂಗಳಾ ಎಂಬ ಪಾತ್ರದ ಬಗ್ಗೆ , ಅವಳ ಬದುಕಿನಲ್ಲಿ ತಪ್ಪುಗ್ರಹಿಕೆಗಳು ವಹಿಸಿದ ಪಾತ್ರದ ಬಗ್ಗೆ ಮಾತಾಡಲಿದ್ದೇನೆ. ಜೊತೆಗೆ ಒಂದು ಬರಹದ ಸಾರ್ಥಕತೆಯ ಹಾದಿಯಲ್ಲಿ ಓದುಗನ ಪಾತ್ರ ಮತ್ತು ಅವನು ಆ ಬರಹವನ್ನು ಗ್ರಹಿಸುವ ರೀತಿಯ ಪಾತ್ರವೇನು ಅನ್ನುವ ಬಗೆಗೂ ನನ್ನ ಅನಿಸಿಕೆಗಳನ್ನ ಹಂಚಿಕೊಳ್ಳಲಿದ್ದೇನೆ.


ಬಾಲ್ಯದಿಂದಲೇ ಭವಿಷ್ಯದಲ್ಲಿನ ಭೌತಿಕ ಅವಶ್ಯಕತೆಗಳನ್ನ ಪೂರೈಸಿಕೊಳ್ಳಲು ಬೇಕಾಗಿ ವಿದ್ಯಾಭ್ಯಾಸ, ಉದ್ಯೋಗವೇ ಮುಂತಾದುವುಗಳ ಮೂಲಕ ಹೇಗೆ ಪೂರ್ವತಯಾರಿ ಮಾಡಿಕೊಳ್ಳುತ್ತೇವೋ ಹಾಗೆಯೇ ಮಾನಸಿಕ ಅವಶ್ಯಕತೆಗಳಿಗೂ ಬೇಕಾಗಿ ಕೆಲವು ನಿಲುವುಗಳು ನಮ್ಮೊಳಗೆ ಕೆಲವೊಮ್ಮೆ  ಸಪ್ರಯತ್ನ, ಮತ್ತೆ ಕೆಲವೊಮ್ಮೆ ಅಪ್ರಯತ್ನ ರೂಪುಗೊಳ್ಳುತ್ತಾಹೋಗಿರುತ್ತವೆ. ಈ ಜೀವನದ ಬಗೆಗಿನ ನಿಲುವುಗಳು ಪ್ರತಿಯೊಬ್ಬನಿಗೂ ಎದುರಾಗುವ ಅನುಭವಗಳಿಗೆ ಅನುಸಾರವಾಗಿ ಹುಟ್ಟಿಕೊಳ್ಳುತ್ತವೆ. ನಮಗೆ ಸಂಬಂಧಿಸಿದಂತೆ ಎಲ್ಲ ಅನುಭವಗಳನ್ನೂ ಆಗುಹೋಗುಗಳನ್ನೂ ನೋಡಲು ಎರಡು ದೃಷ್ಟಿಕೋನಗಳು ನಮ್ಮೆದುರಿರುತ್ತವೆ, ಒಂದು ಅದು ನಮಗೆ ಎದುರಿನವರ ದೆಸೆಯಿಂದ ಪ್ರತಿಕೂಲವಾಗಿಯೋ, ಅನುಕೂಲವಾಗಿಯೋ ಸಂಭವಿಸಿಬಿಟ್ಟಿತು ಅನ್ನುತ್ತಾ, ಅವರನ್ನು ಬಾಧ್ಯರನ್ನಾಗಿ ಮಾಡುವದ್ದಾದರೆ, ಎರಡನೆಯದ್ದು ಎದುರಿನವರು ಹಾಗೆ ನಡೆದುಕೊಳ್ಳುವ ಹಾಗೆ ಮಾಡಿದ ಅವರ ಆ ಪರಿಸ್ಥಿತಿ ಯಾವುದು ಮತ್ತು ಅದರಲ್ಲಿ ನಮ್ಮ ಪಾತ್ರವೇನು ಅನ್ನುವದ್ದಾಗಿರುತ್ತದೆ. ಎರಡನೆಯ ದೃಷ್ಟಿಕೋನ ತನ್ನಂತೆ ಪರರ ಬಗೆದೊಡೆ.. ಅಂತ ಬಸವಣ್ಣನವರು ಹೇಳಿದ ಒಂದು ಉದಾತ್ತ ಚಿಂತನ ಶೈಲಿಯ ಕವಲೇ ಹೌದು, ಆದರೆ ನಮ್ಮಂಥ ಸಾಮಾನ್ಯ ಜನರಿಗೆ ಬಹಳ ಆದರ್ಶವಾದ ಅನ್ನಿಸುವಂತದ್ದೂ ಹೌದು. ಈ ನಿಟ್ಟಿನಲ್ಲಿ ವಿಷಯವನ್ನ ಗ್ರಹಿಸುವುದು ಬಹುಶಃ ಪರಿಸ್ಥಿತಿಯ ಬಗ್ಗೆ ನಮಗೆ ಸ್ವಲ್ಪ ಹೆಚ್ಚು ಸ್ಪಷ್ಟ ಮತ್ತು ಪೂರ್ವಗ್ರಹಪೀಡಿತವಲ್ಲದ ಚಿತ್ರಣ ಕೊಡಬಲ್ಲುದು ಅನಿಸುತ್ತದೆ. ಆದರೆ ಮಗುವಿದ್ದಾಗಿನಿಂದಲೇ ಪ್ರಕೃತಿ ಮನುಷ್ಯನಿಗೆ ಸ್ವಾನುಕಂಪವನ್ನು ಮತ್ತು ಅದರ ಮಾರ್ಗದರ್ಶನದಲ್ಲಿ ನಡೇದು ಪರರ ಅನುಕಂಪವನ್ನೂ ಗಳಿಸುವುದನ್ನು ಅತಿಪ್ರಿಯ ವಿಷಯವನ್ನಾಗಿ ಮಾಡಿಕೊಟ್ಟುಬಿಟ್ಟಿದೆ. ಹಾಗಾಗಿ ಸ್ವಾನುಕಂಪದ ಹಿನ್ನೆಲೆಯಲ್ಲಿಯೇ ಸಾಧಾರಣ ಮಟ್ಟಿಗೆ ನಾವು ಎಲ್ಲವನ್ನೂ ಎಲ್ಲರನ್ನೂ ಎದುರುಗೊಳ್ಳುತ್ತೇವಾದದ್ದರಿಂದ ಮೊದಲನೆಯ ದೃಷ್ಟಿಕೋನವನ್ನು ಅಪ್ಪಿಕೊಳ್ಳುವುದೇ ಹೆಚ್ಚು.  ನಮ್ಮ ವ್ಯಕ್ತಿತ್ವಕ್ಕೊಂದು ರೂಪುರೇಷೆ ಸಿಕ್ಕುವ ಯೌವ್ವನದ ಆರಂಭದ ದಿನಗಳಲ್ಲಿ ನಮಗೆ ವ್ಯತಿರಿಕ್ತವಾಗಿ ನಡೆಯುವ ಅಥವಾ ವ್ಯತಿರಿಕ್ತವಾದವುಗಳು ಅನ್ನಿಸುವ ಎಲ್ಲ ಘಟನೆಗಳೂ ಮನಸ್ಸಿನಲ್ಲಿ ರೋಷ, ದ್ವೇಷ, ಸೇಡು ಹೀಗೆ ಅಂತೂ ಒಂದು ನೇತ್ಯಾತ್ಮಕ ಮನೋಭಾವನೆಯನ್ನು ತಟ್ಟಂತ ಹುಟ್ಟುಹಾಕಿಬಿಡುತ್ತವೆ. ಮತ್ತು ಲೋಕವನ್ನು ಅರ್ಥೈಸುವ, ವಿವೇಚನೆಯಿಂದ ಪುನಃ ಯೋಚಿಸುವ ಗೋಜಿಗೆ ಹೋಗದೆ ಇಲ್ಲಿ ಯಾವುದೂ ಸರಿಯಿಲ್ಲ, ಎಷ್ಟಿದ್ದರೂ ಇದು ಹೀಗೇ ಬಿಡು ಎಂದು ನಿರ್ಧರಿಸಿಬಿಟ್ಟು ದೂರುವ ಪ್ರವೃತ್ತಿಯನ್ನ ಬೆಳೆಸಿಕೊಳ್ಳುತ್ತೇವೆ. ಇನ್ನು ಮನುಷ್ಯ ಸ್ವಲ್ಪಮಟ್ಟಿಗೆ ಬುದ್ಧಿವಂತ,  ಏನಾದರೂ ಸಾಧಿಸುವ ಹುಮ್ಮಸ್ಸು, ಸಾಧ್ಯತೆಗಳಿರುವವ, ಹಠವಾದಿ ಅಂತಾದರೆ ಮತ್ತೆ ಅವನಿಗೆ ಇತರರು ಕೆಲವರಿಗಿಂತಲಾದರೂ ತಾನು ಹೆಚ್ಚು ಬಲ್ಲವ ಅನ್ನುವದ್ದು ಗೊತ್ತಾಗಿಯೂಬಿಟ್ಟಿದ್ದರೆ ಮುಗಿಯಿತು ಕತೆ. ತನ್ನ ಮನಸು ಎದುರಿನ ಘಟನೆಯ ಬಗ್ಗೆ ಮೊದಲ ಪೆಟ್ಟಿಗೆ ಏನು ಹೇಳುತ್ತದೋ ಅದನ್ನು ಆತ ಪ್ರಶ್ನಿಸುವ, ಪುನರ್ವಿಮರ್ಶಿಸುವ ಗೋಜಿಗೇ ಹೋಗುವುದಿಲ್ಲ. ತಪ್ಪಾದದ್ದನ್ನ ತಿದ್ದಿಕೊಳ್ಳದಷ್ಟು ಮೂಢನಾಗಿರದಿದ್ದರೂ, ತಾನು ತಪ್ಪಾಗಿ ಗ್ರಹಿಸಿರಬಹುದು ಅನ್ನುವ ಯೋಚನೆಯೂ ಅವನಿಗೆ ಬರುವುದಿಲ್ಲ.  ಆ ಮೊದಲ ಕ್ಷಣದ ಯೋಚನೆಗೆ ಕಟ್ಟುಬಿದ್ದು ತೀರ್ಪು ಕೊಟ್ಟೇಬಿಡುತ್ತಾನೆ, ನಿರ್ಧಾರ ತೆಗೆದುಕೊಳ್ಳುತ್ತಾನೆ, ಅದರಂತೆ ನಡೆದುಕೊಂಡೂ ಬಿಡುತ್ತಾನೆ ಕೂಡ. ಎಷ್ಟೋಬಾರಿ ನಮ್ಮ ನಡವಳಿಕೆಯಲ್ಲಿ ಇಷ್ಟೊಂದು ತೀವ್ರತೆಯ ಅಗತ್ಯವಿತ್ತೇ ಅಂತ ನಮಗೆಲ್ಲ ಆಮೇಲಿನ ಕ್ಷಣಗಳಲ್ಲಿ ಅನ್ನಿಸಿದರೂ ಮಾತು ತಲುಪಿಯೇಬಿಟ್ಟಿರುತ್ತದೆ, ಘಟನೆ ನಡೆದೇಹೋಗಿರುತ್ತದೆ, ಬಿಲ್ಲಿನಿಂದ ಹೊರಟ ಬಾಣದ ಹಾಗೆ. ಅದರ ಪರಿಣಾಮವನ್ನು ತಪ್ಪಿಸಲಾಗಿರುವುದಿಲ್ಲ. ಇದು ಎಲ್ಲ ಬಾರಿಯೂ ಒಂದು ನಿರ್ದಿಷ್ಟ ವ್ಯಕ್ತಿತ್ವದ ಜೊತೆ ಹೀಗೇ ನಡೆದುಹೋಗುತ್ತದೆ ಅಂತಲೂ ಹೇಳಲಾಗುವುದಿಲ್ಲ. ಒಮ್ಮೊಮ್ಮೆ ತಟ್ಟನೆ ಪ್ರತಿಕ್ರಿಯಿಸುವವರೂ ನಿಧಾನಿಸಿ ಯೋಚಿಸಿಯಾರು, ಅಥವಾ ಯಾವಾಗಲೂ ಸಮಾಧಾನದಿಂದ ಇರುವವರು ಒಮ್ಮೊಮ್ಮೆ ತಟ್ಟನೆ ಪ್ರತಿಕ್ರಿಸಿಯಾರು. ಮತ್ತೆ ಮನಸೆಂಬ ಮರ್ಕಟನೇ ಸೂತ್ರಧಾರ ಅನ್ನುತ್ತೇನೆ ನಾನು.
ಮಂಗಳಾ ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದವಳು.  ಹೆಣ್ಣಿನ ಬಾಳಿನ ಸಾರ್ಥಕತೆ ಮದುವೆಯಲ್ಲಿ, ಗಂಡಿನ ಬಾಳು ರೂಪುಗೊಳ್ಳಬೇಕಾಗಿರುವುದೇ ದುಡಿಮೆಗಾಗಿ ಮತ್ತು ಯಾವುದೇ ಕಾರಣಕ್ಕೂ ದುಡಿಮೆಗಾಗದಿದ್ದರೆ ಆ ಹಾದಿ ಬೇಕಿಲ್ಲ ಅನ್ನುವ ಇವೇ ಈ ಎಲ್ಲ ಮಧ್ಯಮವರ್ಗದ ಮೂಲಭೂತವಾದಕ್ಕೆ ಅವಳ ಕುಟುಂಬವೂ ಹೊರತಾಗಿದ್ದಾಗಿರಲಿಲ್ಲ. ಬುದ್ಧಿ ಬಂದಾಗಿನಿಂದ ಅಮ್ಮನ ಕೈಯ್ಯಲ್ಲಿ ಅಜ್ಜಿಯ ಕೈಯ್ಯಲ್ಲಿ ಗಂಡುಮಕ್ಕಳ ಹಾಗೆ ಹೊರಗೆ ಕತ್ತಲಾಗುವವರೆಗೆ ಆಡಬಾರದು, ಗಂಡುಮಕ್ಕಳ ಜೊತೆ ಬೆರೆಯಬಾರದು ಅಂತ ವಿಧಿಸಲ್ಪಡುವ ಕಟ್ಟುಪಾಡುಗಳಲ್ಲಿ, ಪಕ್ಕದ ಮನೆ ನಾಗರಾಜ ನನ್ನಲ್ಲಿರುವುದು ನಿನ್ನಲ್ಲಿದೆಯೇನೇ ಅನ್ನುತ್ತಾ ಚಡ್ಡಿ ಕಳಚಿ ತೋರಿದಾಗ ತಾನು ಹಾಗೆ ತನ್ನತನವನ್ನು ಬಿಡುಬೀಸಾಗಿ ವ್ಯಕ್ತಪಡಿಸಲಾಗದ ಅಸಹಾಯಕತೆಯಲ್ಲಿ, ಮತ್ತೆ ಅವನ ಆ ಕೊಳಕು ಕೆಲಸವನ್ನ ಅವನ ತಾಯಿಯೆದುರು ಹೇಳಲಿಕ್ಕೂ ತನ್ನ ಸ್ತ್ರೀಸಹಜ ಲಜ್ಜೆ ಅಡ್ಡಿ ಬರುವ ಪರಿಸ್ಥಿತಿಯಲ್ಲಿ ಎಲ್ಲ ಕಡೆಗಳಲ್ಲಿ ಗಂಡಿಗೆ ಗಂಡು ಅನ್ನುವ ಒಂದೇ ಕಾರಣಕ್ಕಾಗಿ ಸಿಗುವ ಸ್ವಾತಂತ್ರ್ಯ-ಸೌಲಭ್ಯಗಳು ತನಗೆ ಹೆಣ್ಣು ಅನ್ನುವ ಒಂದೇ ಕಾರಣಕ್ಕಾಗಿ ಸಿಗುತ್ತಿಲ್ಲ ಅನ್ನುವ ಕೊರಗು ಕಾಣುತ್ತದೆ.  ಅವಳು ಬೆಳೆಯುತ್ತಾ ಸಮಾಜದ ಒಂದೊಂದು ನಡೆಗಳಲ್ಲೂ ತನಗೆಲ್ಲವೂ ಇಲ್ಲಿ ವಿರುದ್ಧವಾಗಿಯೇ ನಡೆಯುತ್ತಿದೆ ಅನ್ನುವ ಸಂಶಯದ ದೃಷ್ಟಿ ಮತ್ತೆ ಗಂಡಿನ ಕಡೆಗೆ ಒಂದು ಸಣ್ಣ ಅಸಹನೆ, ಸಿಟ್ಟು ಬೆಳೆಯುತ್ತಾ ಹೋಗುವುದಕ್ಕೂ ಕಾರಣ ಈ ಕೊರಗೇ.

ಶಾಲೆಯಲ್ಲಿ ಹುಡುಗಿಯಾಗಿದ್ದೂ ಮಂಗಳಾ ಸಾಧಿಸಿ ತೋರಿಸುವದ್ದು ಗಂಡುಮಕ್ಕಳ ಕೈಲಾಗುತ್ತಿಲ್ಲ ಅಂತ ಅಧ್ಯಾಪಕರು ಮತ್ತು ಒಬ್ಬರು ಅಧ್ಯಾಪಕಿಯೂ ಹೇಳುವಾಗ ಅವಳಿಗೆ ಸಾಮಾನ್ಯ ಎಲ್ಲ ಹೆಣ್ಣುಮಕ್ಕಳಿಗಾಗುವಂತೆ ಹೆಮ್ಮೆಯ ಮಾತೆನಿಸದೇ ಸಾಧನೆಯೆಂಬುದು ಗಂಡಿನ ಹಕ್ಕು ಆಗಿದ್ದಾಗ್ಯೂ ಹೆಣ್ಣು ಸಾಧನೆ ಮಾಡುವುದು ಒಂದು ವಿಶೇಷ ಅಂತಲೂ ಮತ್ತು ಆ ಮೂಲಕ ವಾಸ್ತವದಲ್ಲಿ ಹೆಣ್ಣೇನಿದ್ದರೂ ಗಂಡಿಗಿಂತ ಕೆಳಗಿರುವುದೇ ಸಹಜ ಎಂತಲೂ ಸಾರುವ ಪುರುಷಪ್ರಧಾನ ಸಮಾಜದ ಆತ್ಮರತಿಯಂತೆಯೂ, ಹೆಣ್ಣನ್ನ ಕಿರಿದಾಗಿಸಿ ತೋರುವ ಹುನ್ನಾರವೆಂಬಂತೆಯೂ ಕಾಣಿಸುವುದು ಮತ್ತು ನಾಗರಾಜ ಒಳ್ಳೆಯವನೇ, ಹೆಂಡತಿಯನ್ನೂ ಅವಳ ಕಡೆಯವರನ್ನೂ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಾನೆ ಅಂತ ಬಾಲ್ಯದ ಗೆಳತಿಯೊಬ್ಬಳು ಹೇಳಿದಾಗ ಅದೆಷ್ಟೋ ವರ್ಷಗಳ ನಂತರವೂ ಆತ ಮರೆತೇಬಿಟ್ಟಿರುವ ಆ ಘಟನೆಯ ಮೂಲಕ ಮಂಗಳಾ ಹಸಿಯಾಗಿರಿಸಿಕೊಂಡ ಆತನೆಡೆಗಿನ ಅಸಹನೆ ಅವನಿಗೆ ಮಾನಸಿಕ ಅಸ್ವಸ್ಥತೆಯನ್ನು ಆರೋಪಿಸಿಯೇಬಿಡುವಂತೆ ಮಾಡುವುದು, ಮತ್ತು ಹೆಂಡತಿಯ ತಂದೆಯ ಅಂತ್ಯಸಂಸ್ಕಾರವನ್ನು ತಾನೇ ಖರ್ಚು ಹಾಕಿ ಮಾಡಿದ್ದು ತನ್ನ ಬಿಟ್ಟರಿಲ್ಲವೆಂಬ ಅವನ ಮೇಲ್ ಇಗೋವನ್ನ ತಣಿಸಲಿಕ್ಕಾಗಿ ಅನ್ನುವ ನಿರ್ಧಾರ ತಳೆದುಬಿಡುವುದು- ಇವೆಲ್ಲವೂ ಅವಳ ಮನಸ್ಸಿನಲ್ಲಿ ಗಂಡಿನ ಮೇಲೆ ರಾಶಿಗುಡ್ಡೆಯಾಗುತ್ತಾ ಹೋಗುತ್ತಿರುವ ಅಪನಂಬಿಕೆಯನ್ನೂ, ಸಿಟ್ಟನ್ನೂ ತೋರಿಸುತ್ತವೆ.
ಮುಂದುವರೆದು ಮಗನ ಇಚ್ಛೆಯಂತೆ ಅವನನ್ನ ಇಂಜಿನಿಯರಿಂಗ್ ಓದಿಸಲು ಸಹಜವಾಗಿ ಒಪ್ಪುವ ಅಪ್ಪ ತನ್ನ ಇಷ್ಟದಂತೆ ಎಮ್ ಎ ಗೆ ಹಣ ಹೊಂದಿಸುವಲ್ಲಿ ಅಡಚಣೆಯ ಬಗ್ಗೆ ಮಾತಾಡುವಾಗ ದುಡಿದು ಸಂಪಾದಿಸಿಕೊಡಲಿರುವ ಗಂಡುಮಗನಿಗೆ ವಿದ್ಯಾಭ್ಯಾಸ ಉದ್ಯೋಗಗಳೆಲ್ಲವುದರಲ್ಲೂ ಆಯ್ಕೆಯ ಸ್ವಾತಂತ್ರ್ಯ ಕೊಡುವ ಸಮಾಜ ಹೆಣ್ಣಾಗಿರುವ ತನ್ನ ಆಕಾಂಕ್ಷೆಯನ್ನ ಲೆಕ್ಕಕ್ಕೆ ತೆಗೆದುಕೊಳ್ಳದೆ ಇರುವಲ್ಲಿ ಅವಳ ಮನಸಿನಲ್ಲಿ ತನಗೆ ಅನ್ಯಾಯವಾಗುತ್ತಿದೆಯೆನ್ನುವ ಭಾವ ಅಸಹನೆಯಾಗುತ್ತಾ ಹೋಗುತ್ತದೆ. ಹೆಣ್ಣಿಗೆ ಪ್ರಕೃತಿ ವಿಧಿಸಿರುವ ಹೆಣ್ತನದ ಬದ್ಧತೆಗಳೆನಿಸಿರುವ ಹೆರಿಗೆ, ಮೊಲೆಯೂಡುವಿಕೆಗಳು ಸಾಮಾನ್ಯ ಹೆಣ್ಣಿಗನಿಸುವ ಹಾಗೆ ಅವಳ ಪಾಲಿನ ವರಗಳೆನಿಸದೆ, ಹಿರಿಮೆ ಗರಿಮೆಗಳೆನಿಸದೆ ಮಂಗಳಾಗೆ ನಾಲ್ಕು ಗೋಡೆಗಳ ನಡುವೆ ಬಂಧಿಸಿಟ್ಟು, ದೇವತೆಯ ಪಟ್ಟ ಕೊಟ್ಟುಬಿಟ್ಟು ಹೇರಿದ ಕಠಿಣ ದುಡಿಮೆಗಳೆನಿಸಿಬಿಡುತ್ತವೆ. ತಂದೆತಾಯಿ ವಾಸ್ತವದಲ್ಲಿ ಬಿ ಇ ಹಣಗಳಿಕೆಗೆ ಒದಗುತ್ತದೆ, ಎಮ್ ಎ ಯಲ್ಲ ಅನ್ನುವ ತೀರಾ ಸಾಮಾನ್ಯ ಸತ್ಯದ ಅಧಾರದ ಮೇಲೆ ಅವಳಿಗೆ ಅವಳ ಇಚ್ಛೆಯ ವಿದ್ಯಾಭ್ಯಾಸವನ್ನು ನಿರಾಕರಿಸುತ್ತಾರಾದರೂ ಅವಳು ತಾನು ಹೆಣ್ಣು, ಮದುವೆಯಾಗಿ ಹೋಗಲಿರುವವಳು ಅನ್ನುವ ಕಾರಣಕ್ಕಾಗಿ ನಿರಾಕರಿಸುತ್ತಾರೆ ಅನ್ನುವ ತಪ್ಪುಗ್ರಹಿಕೆಗೆ ಕಟ್ಟುಬಿದ್ದು ಮದುವೆ, ತಾಯ್ತನವೇ ಮುಂತಾದುವುಗಳ ಕಡೆಗೆ ಒಂದು ಶಿಕ್ಷೆ ಎನ್ನುವ ನಿಲುವನ್ನ ಬೆಳೆಸಿಕೊಳ್ಳುತ್ತಾಳೆ.
ಮಂಗಳಾ ಬುದ್ಧಿವಂತೆಯೂ ಹೌದು. ತನ್ನನ್ನು ತನ್ನ ಹಕ್ಕುಗಳಿಂದ ಗಂಡಿನೆದುರು ವಂಚಿತಳನ್ನಾಗಿ ಮಾಡುತ್ತಿರುವ ಸಮಾಜದೆದುರು ತನ್ನ ಬುದ್ಧಿವಂತಿಕೆಯನ್ನು ಬಿಂಬಿಸಿಕೊಳ್ಳುವ ಸಲುವಾಗಿ ಮಾತುಮಾತಿಗೆ ಸಿಗ್ಮಂಡ್ ಫ್ರಾಯ್ಡ್ ನನ್ನು ತನ್ನೆದುರಿಗೇ ಎಳೆದು ತಂದುಕೊಳ್ಳುತ್ತಾಳೆ. ಪಾಶ್ಚಾತ್ಯ ಸಂಸ್ಕೃತಿ, ಸಾಹಿತ್ಯ, ಭಾಷೆ, ಪಾಶ್ಚಾತ್ಯ ತಜ್ಞರು ಮಂಡಿಸಿರುವ ಸಿದ್ಧಾಂತಗಳನ್ನು ಓದಿಕೊಂಡವರೇ ಮೇಲ್ಮಟ್ಟದ ಜ್ಞಾನ ಹೊಂದಿರುವವರು ಅನ್ನುವ ತಪ್ಪು ತಿಳುವಳಿಕೆಯ ಹಿನ್ನೆಲೆಯಲ್ಲಿ ಗಂಡಿನ ಮನಸನ್ನು ಅರ್ಥ ಮಾಡಿಕೊಳ್ಳುತ್ತಿದ್ದೇನೆ ಅಂದುಕೊಳ್ಳುತ್ತಾ ತನ್ನ ನಿಲುವಿಗೆ ಸರಿಯಾಗಿ ಅವನನ್ನು ಅರ್ಥೈಸಲು ಬೇಕಾಗಿ ಫ್ರಾಯ್ಡ್ ನ ಸಿದ್ಧಾಂತಗಳನ್ನು ಉಪಯೋಗಿಸಿಕೊಳ್ಳುತ್ತಾಳೆ, ಉಲ್ಲೇಖಿಸುತ್ತಾಳೆ. ಹಾಗೆ ಅರ್ಧದಷ್ಟು ಹಾಲಿರುವ  ಗ್ಲಾಸಿಗೆ ಅರ್ಧ ತುಂಬಿದೆ ಎನ್ನುವ ಹಾಗೂ ಅರ್ಧ ಖಾಲಿಯಿದೆ ಅನ್ನುವ ಎರಡು ಆಯಾಮಗಳಿರುವ ಹಾಗೆ ಗಂಡಿನ ಸ್ವಭಾವಕ್ಕೂ ಇರಬಹುದಾದ ಇನ್ನೊಂದು ಆಯಾಮವನ್ನು ಯೋಚಿಸದೆಯೇ ಎಲ್ಲ ಕಡೆಗಳಲ್ಲೂ ತನ್ನ ಔನ್ನತ್ಯಕ್ಕೆ ಕಂಟಕಪ್ರಾಯನಾಗಿಯೇ ಅವನ ಅಸ್ತಿತ್ವವಿರುವುದು ಅನ್ನುವ ಮನೋಭಾವ ಬೆಳೆಸಿಕೊಂಡುಬಿಡುತ್ತಾಳೆ.
ಸ್ನಾತಕೋತ್ತರ ವಿದ್ಯಾಭ್ಯಾಸದ ಹೊತ್ತಿನಲ್ಲಿ ಬಂಡಾಯವಾದ, ದಲಿತವಾದ, ಮಹಿಳಾವಾದಗಳೇ ಮುಂತಾದುವುಗಳು ಮತ್ತು ಅವನ್ನ ಪ್ರಚೋದನಕಾರಿ ರೀತಿಯಲ್ಲಿ ಬೋಧಿಸುವ ಅಧ್ಯಾಪಕವರ್ಗ ಮೊದಲೇ ಸ್ವಾನುಕಂಪದ ಮಸುಕು ದೃಷ್ಟಿಯುಳ್ಳ ಅವಳು ಈ ವಾದಗಳನ್ನು ತಪ್ಪಾಗಿ ಗ್ರಹಿಸುವ ಹಾಗೆ ಮಾಡುತ್ತವೆ. ಇದು ಅವಳೊಳಗೆ ಶೋಷಣೆಯ ಸಾಧ್ಯತೆಗಳನ್ನು ಊಹಿಸಿಕೊಳ್ಳುತ್ತಾ ಸದಾ ಎಚ್ಚರಗಣ್ಣಲ್ಲಿ ಬದುಕುವುದು ಮತ್ತು ಎಲ್ಲ ಸಂಭಾವ್ಯ ಎಡೆಗಳಲ್ಲೂ ತನ್ನ ಮೇಲೆ ಶೋಷಣೆಯೊಂದು ನಡೆಯುವ ಹುನ್ನಾರವಿದೆಯೇ ಎಂಬ ಸಂಶಯ ಮೊಳೆಯಿಸಿಕೊಳ್ಳುವುದನ್ನ ಹುಟ್ಟುಹಾಕುತ್ತದೆ. ಪಾಶ್ಚಾತ್ಯ ಸಂಸ್ಕೃತಿಯ ಹಿನ್ನೆಲೆಯಲ್ಲಿ ಸರಿಯೆನಿಸುವ ಆದರೆ ನಮ್ಮ ನೆಲದಲ್ಲಿ ಒಂದಿಷ್ಟೂ ಒಪ್ಪಿಗೆಯಾಗದ ಕೆಲವು ವಿಚಾರಗಳನ್ನು ಶಾರನ್ ಅನ್ನುವ ಮಿಡ್ ಲ್ಯಾಂಡ್ ನ ಹೆಣ್ಣುಮಗಳೊಬ್ಬಳ ಕತೆಯ ಮೂಲಕ ವೈಭವೀಕರಿಸುವ ಮತ್ತು ಆ ಮೂಲಕ ನಮ್ಮ ನೆಲದ ಮೌಲ್ಯಗಳನ್ನು ಹಳಿಯುವ ಇಳಾ ಮ್ಯಾಡಮ್ ನಮ್ಮ ಸಂಸ್ಕೃತಿ ಅನಿಸಿಕೊಳ್ಳುವ ಎಲ್ಲದರ ಕಡೆಗೂ ತಿರಸ್ಕಾರ ಬೆಳೆಸಿಕೊಳ್ಳುವಂತೆ ಮಾಡುತ್ತಾರೆ. ಈ ತಪ್ಪುಗ್ರಹಿಕೆಯ ಅಡಿಯಲ್ಲಿ ಮಿಡ್ ಲ್ಯಾಂಡ್ ನಲ್ಲಿ ತೀರಾ ಸಾಮಾನ್ಯವೆಂಬಂತೆ ಪರಿಗಣಿಸಲ್ಪಡುವ ಎಷ್ಟೋ ವಿಷಯಗಳು ನಮ್ಮ ನೆಲದಲ್ಲಿ ಅಪರಾಧವೆಂಬಂತೆ ನೋಡಲ್ಪಡುತ್ತವೆ ಮತ್ತು ಅದರ ಪರಿಣಾಮ ಇಲ್ಲಿ ತನಗೆ ತೀರಾ ಹಾನಿಕಾರಕವಾಗಿರುತ್ತದೆ ಅನ್ನುವ ಮಾತು ಮಂಗಳಾಳಿಗೆ ಹೊಳೆಯದೆಯೇ ಹೋಗುತ್ತದೆ. ಈ ಹಂತದಲ್ಲಿ ಮಂಗಳಾ ಲೈಂಗಿಕ ಸ್ವಾತಂತ್ರ್ಯದ ವಿಷಯದಲ್ಲಿ ಎಲ್ಲಿಯೂ ಯಾವುದೂ ಕೂಡ ಅಂಥ ಸರಿಪಡಿಸಲಾಗದಂಥ ತಪ್ಪು ಎಂಬುದಿಲ್ಲ ಅನ್ನುವ ನಿಲುವನ್ನು ತಳೆದುಬಿಡುತ್ತಾಳೆ. ಪ್ರಭಾಕರನ ಮರುಳಾಗಿಸುವ ಮಾತುಗಳ ಜೊತೆ ತನ್ನ ವಯೋಸಹಜ ಆತುರತೆಯೂ ಸೇರಿಕೊಂಡು ತನ್ನ ಆ ನಿಲುವಿನ ಬೆಂಬಲದಿಂದ ದೈಹಿಕ ಸಂಫರ್ಕಕ್ಕೆ ಒಪ್ಪುತ್ತಾಳೆ. ಗರ್ಭಿಣಿಯಾಗಿ, ಅದನ್ನು ತೆಗೆಸಬೇಕಾಗಿ ಬಂದಾಗ ಮತ್ತೆ ತಾನು ತನ್ನ ಬಸಿರಿನ ಮೇಲಿನ ಪ್ರೀತಿ ಹಾಗೂ ವಾಸ್ತವಿಕತೆಯೆರಡರ ನಡುವಿನ ದ್ವಂದ್ವ ಅನುಭವಿಸಬೇಕಾದಲ್ಲಿ ಮತ್ತು ಕ್ಲೀನ್ ಮಾಡಿಸಿಬಿಡು ಅಂತ ಸಹಜವಾಗಿಯೇ ಪ್ರಭಾಕರ ಉಪಯೋಗಿಸುವ ಪದಗಳಲ್ಲಿ "ಗಂಡಸು ತನ್ನ  ಯಜಮಾನಿಕೆ ದಬ್ಬಾಳಿಕೆಗಳನ್ನ ಮೆರೆಯುತ್ತಾ ಹೆಣ್ಣಿನ ಶಕ್ತಿಕೇಂದ್ರವೆನಿಸಿದ ತಾಯ್ತನವನ್ನು ಡರ್ಟಿ ಎಂದು ಭಾವಿಸಿ ಅದನ್ನ ಕ್ಲೀನ್ ಮಾಡಿಸುವಾ ಅಂತನ್ನುವಾಗ ಅವಳದೊಂದು ಅಭಿಪ್ರಾಯವನ್ನೂ ಕೇಳುವಷ್ಟೂ ಸೌಜನ್ಯವಿಲ್ಲದೆ ಹೋಗುತ್ತಾನೆ" ಅನ್ನುವ ಏಕಮುಖ ಅಭಿಪ್ರಾಯವನ್ನೇ ಆಶ್ರಯಿಸುತ್ತಾಳೆ. ಇನ್ನಷ್ಟು ಗಂಡು ಜಾತಿಯ ಕಡೆಗೆ ಅಸಹ್ಯ ಭಾವವನ್ನು ಮತ್ತು ಸಿಟ್ಟನ್ನು ಬೆಳೆಸಿಕೊಳ್ಳುತ್ತಾಳೆ. ಪ್ರಭಾಕರ ಹೇಳದೆ ಇದ್ದಿದ್ದರೂ ತನಗೆ ಅದಲ್ಲದೆ ಬೇರೆ ದಾರಿಯಿಲ್ಲ ಅಂತಲೂ, ತನ್ನ ಈ ಪರಿಸ್ಥಿತಿಯಲ್ಲಿ ತನ್ನದೇನಿತ್ತು ಪಾತ್ರ ಅನ್ನುವ ಬಗ್ಗೆ ಮತ್ತು ಬಸಿರನ್ನು ಉಳಿಸಿಕೊಂಡರೆ ಮುಂದೆ ಈ ನೆಲದಲ್ಲಿ ತನಗೆದುರಾಗುವ ಸಮಸ್ಯೆಗಳ ಬಗೆಗೂ ಯೋಚಿಸಿದ್ದರೆ ಪ್ರಭಾಕರ ಇದಲ್ಲದೆ ಇನ್ನೇನು ಹೇಳಲು ಸಾಧ್ಯವಿತ್ತು ಅನ್ನುವ ಮಾತು ಅವಳಿಗೆ ಹೊಳೆದಿರುತ್ತಿತ್ತು. ಇನ್ನೊಂದೇನಂದರೆ ತಾಯ್ತನವನ್ನು ಹೆಣ್ಣು ಜನ್ಮಕ್ಕೊಂದು ಶಿಕ್ಷೆಯೆಂದು ಕರೆಯುತ್ತಿದ್ದ ಇದೇ ಮನಸು ತನಗೇ ಅದರ ಅನುಭವವಾದಾಗ ತನ್ನ ಬಸಿರು ತನ್ನ ಶಕ್ತಿಕೇಂದ್ರ ಅಂತ ತಿರುಗುವುದನ್ನು ಗಮನಿಸಿದಾಗ ಮಂಗಳಾ ಹೆಣ್ಣಿನ ಸಹಜ ಕೋಮಲತೆ ಮತ್ತು ಬಲವಂತವಾಗಿ ರೂಢಿಸಿಕೊಳ್ಳಲು ಯತ್ನಿಸುತ್ತಿರುವ ಗಡಸುತನ ಈ ಎರಡರಲ್ಲಿ ಒಂದನ್ನೂ ಪೂರ್ತಿಯಾಗಿ ಅಪ್ಪಲಾರದೆ ಒದ್ದಾಡುತ್ತಿದ್ದಾಳೆ ಅನ್ನಿಸದೆ ಇರುವುದಿಲ್ಲ. ಸ್ನಾತಕೋತ್ತರ ಪದವಿ ಪಡೆದುಕೊಂಡ ಆನಂತರ ಇಳಾ ಮೇಡಮ್ ತನ್ನ ಹಾಗೂ ಪ್ರಭಾಕರನ ವಿಷಯ ತಿಳಿದಾಗ ಅವನನ್ನೇ ಮದುವೆಯಾಗಬೇಕಿತ್ತು ಅನ್ನುತ್ತಾರೆ. ಒತ್ತಾಯಿಸಿ ಮದುವೆಯಾದರೆ ಪ್ರೀತಿ ಇರುವುದೇ ಎಂದು ಕೇಳುತ್ತಾಳೆ ಮಂಗಳಾ. "ಬೇರೆ ಹೆಂಗಸಿನ ಸಂಪರ್ಕವಾಗದ ಹಾಗೆ ದಿಗ್ಬಂಧನ ವಿಧಿಸಿ ದಾಂಪತ್ಯದ ಬಂಧನದೊಳಗೆ ಕೂಡಿಹಾಕಿದರೆ ಪ್ರೀತಿಸದೆ ಬೇರೆ ದಾರಿಯೇ ಇಲ್ಲ ವೈವಾಹಿಕ ಪ್ರೀತಿಯ ಒಳನಾಡಿ ಇದೇ" ಅಂತ ಅಧ್ಯಾಪಿಕೆಯಾದ ಅವರು ಹೇಳಿದಾಗ ಒಪ್ಪಲೊಲ್ಲದ ಮನಸಲ್ಲೂ ಆ ಮಾತು ಅಚ್ಚೊತ್ತುತ್ತದೆ ಮತ್ತು ವೈವಾಹಿಕ ಬದುಕೆಂದರೆ ಹೀಗೇ ಅನ್ನುವ ಇನ್ನೊಂದು ತಪ್ಪುಗ್ರಹಿಕೆ ಬೇರೂರಿಬಿಡುತ್ತದೆ. "ಹೆಂಗಸನ್ನ ಮುಟ್ಟುವ ಮೊದಲು ಗಂಡಸು ಅದರ ಪರಿಣಾಮದ ಬಗ್ಗೆ ಯೋಚಿಸಿ ಬದ್ಧನಾಗಬೇಕು, ಗಂಡಸಿಗೆ ಬುದ್ಧಿ ಕಲಿಸುವ ಸಾಕಷ್ಟು ಕಾನೂನಿದೆ"  ಅವಳ ಮನಸಲ್ಲಿ ಬೇರೂರುವ ಇಳಾ ಮೇಡಮ್ ರವರ ಈ ಇನ್ನೊಂದು ಮಾತು  ವಿವಾಹಿತ ಗಂಡು-ಹೆಣ್ಣಿನ ಪ್ರೀತಿಯಲ್ಲಿರಬೇಕಾದ ಮಾರ್ದವತೆಯ ಅಂಶವನ್ನು ಅಲ್ಲಿ ಪೂರ್ತಿ ಮರೆಮಾಡಿ ತನ್ನನ್ನು ತಾನು ಸಂರಕ್ಷಿಸಿಕೊಬೇಕಾದ ಅಗತ್ಯ ಮತ್ತು ಉಪಾಯಗಳ ಬಗೆಗಿನ ಚಿಂತನೆಯನ್ನಷ್ಟೇ ದೃಢ ಮಾಡಿಕೊಡುತ್ತದೆ. ಈ ಎಲ್ಲ ವಿಚಾರಗಳು ಗಂಡು ಎಂದರೆ ಒಂದು ಅಪಾಯ ಮತ್ತು ಆ ಅಪಾಯವನ್ನು ತುಂಬ ಹುಶಾರಾಗಿ ನಿಭಾಯಿಸಬೇಕು ಮತ್ತು ಬದುಕಿನಲ್ಲಿ ಯಾವಾಗಲೂ ಅವನನ್ನು ಸೋಲಿಸಿ ತಾನು ಗೆಲ್ಲುವುದೇ ಮುಖ್ಯವಾಗಬೇಕು, ಅನ್ನುವ ತೀರ್ಪನ್ನು ಕೊಟ್ಟುಬಿಡುತ್ತದೆ. ಇದು ಬದುಕಿನ ಕಡೆಗೆ ಅವಳು ಕಂಡುಕೊಂಡ ಅತಿದೊಡ್ಡ ತಪ್ಪುಗ್ರಹಿಕೆ. ಈ ತಪ್ಪುಗ್ರಹಿಕೆ ಮುಂದೆ ಜಯಕುಮಾರನ ಜೊತೆಗಿನ ಅವಳ ಜೀವನದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಸುಳ್ಳು ಹೇಳಿ ಅವನನ್ನು ತಪ್ಪಿಗೆ ಸಿಲುಕಿಸುವಲ್ಲಿ, ಅವನ ಮೇಲೆ ಪೋಲೀಸ್ ಕೇಸ್ ಹಾಕಿ ಅವಮಾನಿಸುವಲ್ಲಿ, ಅವನ ಮೊದಲ ಹೆಂಡತಿ ಮತ್ತು ಮಗಳ ಕಡೆಗೆ ಸದಾ ವಿಷ ಕಾರುತ್ತಾ ಅವನನ್ನು ಸಂಕಟಕ್ಕೀಡುಮಾಡುವಲ್ಲಿ ಗಂಡನ್ನು ಸೋಲಿಸಿದೆ ಅನ್ನುವ ತೃಪ್ತಿಯನ್ನೂ, ಕಡೆಗೆ ಅವನ ಆಸ್ತಿಯನ್ನು ಹೊಡೆದುಕೊಳ್ಳುತ್ತಾ ತನಗೆ, ತನ್ನ ಮಗನಿಗೆ ಅವನು ಮಾಡಹೊರಟಿದ್ದ ಮೋಸದ ಅಪಾಯದಿಂದ ತಪ್ಪಿಸಿಕೊಂಡ ಗೆಲುವನ್ನೂ ಕಂಡುಕೊಳ್ಳುತ್ತಾಳೆ. ಆದರೆ ಅಲ್ಲಿ ಅವನ ಮಗುವಿಗೆ ತಾಯಿಯಾಗಿದ್ದೇನೆ ಅನ್ನುವ ಕಾರಣಕ್ಕಾಗಿ ಎಲ್ಲ ವಿರಸದ ನಡುವೆಯೂ ತನ್ನ ಮೇಲೆ ನಿಧಾನ ಚಿಗುರುತ್ತಿದ್ದ ಅವನ ಪ್ರೀತಿ ಚಿವುಟಲ್ಪಡುತ್ತಿದೆ ಮತ್ತು ಅದು ತನ್ನ ಭವಿಷ್ಯಕ್ಕೆ ಮಾರಕವಾಗಲಿದೆ, ತನ್ನನ್ನು ಮತ್ತೆ ಒಂಟಿಯಾಗಿ ಉಳಿಸಲಿದೆ ಅನ್ನುವ ವಿಚಾರ ಹೊಳೆಯುವುದೇ ಇಲ್ಲ. ಜೀವನಸಂಗಾತಿ ಅನಿಸಿಕೊಂಡವನನ್ನ ಕೆಳಗಿಳಿಸಿದಾಗಲಷ್ಟೇ ನಾನು ಮೇಲೇರುವ ಅನುಭವ ಹೊಂದುತ್ತೇನೆ ಅನ್ನುವ ತಪ್ಪುಗ್ರಹಿಕೆಯ ಬದಲು ಗಂಡನ ಜೊತೆ ಸರಸ-ವಿರಸವೆಂಬ ಎರಡನ್ನೂ ಹದ ಬೆರೆಸಿದ ಸಮರಸದಲ್ಲಿ ಬದುಕಬಹುದು ಅಂದುಕೊಂಡಿದ್ದಿದ್ದರೆ ಮತ್ತೆ ಅದನ್ನ ಸಾಧ್ಯವಾಗಿಸುವಲ್ಲಿ ಮುರಿಯಲು ಉಪಯೋಗಿಸಿದ ಬುದ್ಧಿವಂತಿಕೆಯನ್ನು ಬಳಸಿದ್ದರೆ ಬಹುಶಃ ಮತ್ತೆ ಅವಳು ಖಾಲಿಯಾಗುಳಿಯುವುದು ತಪ್ಪುತ್ತಿತ್ತೇನೋ....

ಮುಂದೆ ಖ್ಯಾತ ಉದ್ಯಮಿಯೂ ಸುಪ್ರಸಿದ್ಧ ವ್ಯಕ್ತಿಯೂ ಆದ ಸರಾಫ್ ಮೇಡಮ್ ಕೈಯ್ಯಲ್ಲಿ ಒಲ್ಲದ ಸಲಿಂಗ ಕಾಮಕ್ಕೆ ತುತ್ತಾಗಿ ತಾನು ಮತ್ತೆ ಬಳಸಲ್ಪಟ್ಟೆ ಅನ್ನಿಸುವಾಗ ಪ್ರತಿಭಟಿಸಲಾಗದ ತನ್ನ ಅಸಹಾಯಕತೆಗೆ ಸರಾಫ್ ರವರ ಸಾಮಾಜಿಕ  ಅರ್ಥಿಕ ಸಬಲತೆ ಮತ್ತು ಆ ಮೂಲಕ ಅವರು ಗಳಿಸಿಕೊಂಡಿರುವ ಅಧಿಕಾರಯುತ ಧ್ವನಿಯೇ ಕಾರಣ ಅನಿಸುತ್ತದೆ ಮತ್ತು ಅಲ್ಲಿ ಅವಳಿಗೆ ಇಲ್ಲೀಗ ಕ್ಯಾಪಿಟಲಿಸ್ಟ್ ಮನೋಭಾವನೆಯ ಅಡಿ ತಾನು ಶೋಷಿತಳಾದೆ ಅನಿಸುತ್ತದೆ. ಇದು ಮುಂದೆ ಜಯಂತಿ ಹೈ ಪ್ರೆಸಿಶನ್ಸ್ ನ ಮಾಲಕಿ ವೈಜಯಂತಿಯ ಎಲ್ಲ ಸಾತ್ವಿಕ ನಡೆಗಳಲ್ಲೂ ಮಂಗಳಾಳಿಗೆ ಕ್ಯಾಪಿಟಲಿಸ್ಟ್ ಮನೋಭಾವನೆಯನ್ನೇ ತೋರಿಸಿಕೊಡುತ್ತದೆ ಮತ್ತು ಅವಳು ಅನುಸರಿಸುತ್ತಿದ್ದ ಎಲ್ಲ ಸಂಸ್ಕಾರಯುತ ನಡವಳಿಕೆಗಳನ್ನು ನಿರಾಕರಿಸುವಂತೆ ಮಾಡುತ್ತದೆ. ಉದಾಹರಣೆಗೆ ಲಕ್ಷಣವಾಗಿ ಭಾರತೀಯ ಸಂಸೃತಿಯಂತೆ ಅಲಂಕರಿಸಿಕೊಂಡು ಬರುತ್ತಿದ್ದ ವೈಜಯಂತಿ ದೇವರ ಫೋಟೊಗೆ ನಮಸ್ಕರಿಸುವುದು ಎಲ್ಲವೂ ಪೊಳ್ಳು ಅನಿಸಿ ತಾನು ಅದಕ್ಕೆ ವಿರುದ್ಧವಾಗಿ ಬೋಳು ಹಣೆ, ಬೋಳು ಕುತ್ತಿಗೆ, ಬೋಳು ಕೈಗಳಲ್ಲಿರುವುದೇ ತನ್ನ  ಹಕ್ಕು ಅನ್ನುವಂತೆ ಭಾವಿಸುವುದು. ಮುಂದೆ ಪ್ರತಿಬಾರಿ ಅವಳ ಬೋಳು ಹಣೆ ಕಂಡಾಗ ಜಯಕುಮಾರನಿಗೆ ಅವಳಲ್ಲೊಂದು ಸೂತಕದ ಕಳೆ ಕಾಣಿಸುತ್ತಾ ಹೋಗುತ್ತದೆ. ಇದು ಅವನ ಒಂದು ತಪ್ಪು ದೃಷ್ಟಿಯೇ ಆಗಿರಬಹುದು. ಆದರೆ ಸರಾಫಳ ವ್ಯಕ್ತಿತ್ವವನ್ನು ಎಲ್ಲ ಮಹಿಳಾ ಉದ್ಯಮಿಗಳಿಗೂ ಅಥವಾ ಎಲ್ಲ ಶ್ರೀಮಂತ ಕೈಗಾರಿಕೋದ್ಯಮಿಗಳಿಗೂ ಆರೋಪಿಸುವಂತೆ ಮಾಡುವ ಅವಳಿಗೆ ಯಾವುದೇ ಕಾರಣಕ್ಕೂ ಯಾವುದೇ ವಿಷಯದಲ್ಲೂ ವೈಜಯಂತಿಯ ಹಾಗಿರಬಾರದು ಅಂತ ಅನಿಸುತ್ತದೆ. ಅದರಿಂದ ಅವಳೇ ತನ್ನ ಸ್ತ್ರೀಸಹಜ ಚೆಲುವಿಗೆ, ಅದರ ಅಭಿವ್ಯಕ್ತಿಗೆ ವಿರೋಧವಾಗಿಬಿಡುತ್ತಾಳೆ. ಅಲ್ಲದೆ ತಾನು ಹೆಣ್ಣಾಗಿರುವುದೇ ತನ್ನೆಲ್ಲ ನೋವಿಗೆ ಕಾರಣ ಅನ್ನುತ್ತಾ ಸಪ್ರಯತ್ನ ತನ್ನಲ್ಲಿ  ಹೆಣ್ತನದ ಇನ್ನುಳಿದ ಎಲ್ಲ ಮಾರ್ದವತೆಯನ್ನೂ ಕಾಣೆಯಾಗಿಸಿಕೊಳ್ಳುವುದು ಗಂಡನಿಗೆ ಅವಳ ಕಡೆ ಅಸಹನೆ ಹುಟ್ಟುವಂತೆ ಮಾಡುವುದಲ್ಲದೆ ಅವಳಲ್ಲಿ ಆಸಕ್ತಿ ಕಡಿಮೆಯಾಗುವ ಹಾಗೆ ಮಾಡುತ್ತದೆ. ಅವಳ ಜೊತೆ ತೊಡಗಿಕೊಳ್ಳಲಾಗದೆ ತನ್ನ ಪುರುಷತ್ವ ನಿರೂಪಿಸಿಕೊಳ್ಳಲು ಬೇರೆ ಹೆಂಗಸರ ಸಹವಾಸ ಮಾಡುವಂತಾಗುತ್ತದೆ, ಸಂಬಂಧವೊಂದು ಪೂರ್ತಿ ಮುರಿಯಲು ಇದೂ ಕಾರಣವಾಗುತ್ತದೆ.

ಕೊನೆಗೆ ಜಯಕುಮಾರನಿಂದ ಸಂಬಂಧ ಮುರಿದುಕೊಂಡು ಹಳೆಯ ಮೋಸಗಾರ ಪ್ರೇಮಿ ಪ್ರಭಾಕರನಿಂದಲೂ ಮತ್ತೆ ಮತ್ತೆ ಬಳಸಲ್ಪಟ್ಟು ಮತ್ತೆ ಮೋಸಹೋಗಿಯಾದ ಹಂತದಲ್ಲಿ ಒಂದು ಸಮಾವೇಶದಲ್ಲಿ ಭೇಟಿಯಾಗೆ ತನ್ನನ್ನು ಡ್ರಾಪ್ ಮಾಡುವೆನೆಂದ ಸರಾಫಳಿಗೆ ತನಗಾಗಿ ತನನ್ನು ತುಂಬ ಪ್ರೀತಿಸುವ ಪತಿ ಹೊರಗೆ ಕಾಯುತ್ತಿದ್ದಾನೆ ಅಂತ ಸುಳ್ಳು ಹೇಳಿ ಯಾರೂ ಕಾಯುತ್ತಿಲ್ಲದೆಡೆಗೆ ನಡೆದುಕೊಂಡುಬರುವಾಗ ಅವಳ ಜೊತೆ ಅಂಥ ಒಂದು ಪತಿಯ ಅಮೂರ್ತ ವ್ಯಕ್ತಿತ್ವ ನಡೆದುಬರುತ್ತಿರುತ್ತದೆ ಅನ್ನುತ್ತಾರೆ ಲೇಖಕರು. ಅಂಥ ಒಂದು ಸಾಂಗತ್ಯ ಎಲ್ಲ ಹೆಣ್ಣುಮಕ್ಕಳಂತೆ ಅವಳದೂ ಆಸೆಯಾಗಿತ್ತು. ಆದರೆ ಗಂಡು ಅನ್ನುವ ವಿಷಯವನ್ನು ಬಾಲ್ಯದಿಂದಲೂ ತಪ್ಪಾಗಿಯೇ ಗ್ರಹಿಸುತ್ತಾ ಬಂದ ಅವಳಿಗೆ ಗಂಡು ಅಥವಾ ಹೆಣ್ಣು ಇಬ್ಬರೂ ಸಂತೃಪ್ತವಾಗಿ ಬದುಕುವುದಕ್ಕೆ ಅಗತ್ಯ ಬೇಕಾದ ಪರಸ್ಪರರ ಸಖ್ಯವೇನಿದೆ ಅದನ್ನು ಸಾಕ್ಷಾತ್ಕಾರಗೊಳಿಸಿಕೊಳ್ಳುವುದೇ ಸಾಧ್ಯವಾಗುವುದಿಲ್ಲ. ಬದಲಿಗೆ ಕ್ಷಣಕ್ಷಣಕ್ಕೂ ಅವ ತನಗೆ ಪ್ರತಿಸ್ಪರ್ಧಿ ಎನ್ನುವ ದೃಷ್ಟಿಯೇ ಅವಳಲ್ಲಿ ಮೂಡುತ್ತಿರುತ್ತದೆ.

ಮಂಗಳಾಳ ಮನಸ್ಸಿನಲ್ಲಿ ಇಷ್ಟೆಲ್ಲ ಋಣಾತ್ಮಕ ನಿಲುವುಗಳನ್ನ ಪೋಷಿಸಿದ್ದ ಇಳಾ ಮೇಡಮ್ ರವರ ಬದುಕಿನಲ್ಲೂ ಸ್ತ್ರೀ ಸ್ವಾತಂತ್ರ್ಯ ಅನ್ನುವದ್ದನ್ನ ಸ್ತ್ರೀ ಹೊಂದಬಹುದಾದ ಸ್ವೇಚ್ಛೆ ಮತ್ತು ಗಂಡಿನೆಡೆಗೆ ತೋರಬಹುದಾದ ಅನಾದರ ಮತ್ತು ತಿರಸ್ಕಾರ ಅಂತನ್ನುವ ತಪ್ಪುಗ್ರಹಿಕೆ ಅವರಿಗೆ ಪತಿ ಮತ್ತು ಮಗಳು ಇದ್ದೂ ಅವರಿಲ್ಲದೆ ಬಾಳುವಂತೆ ಮಾಡುತ್ತದೆ. ಮತ್ತೆ ಓರ್ವ ವ್ಯಕ್ತಿಯ ಸಹವಾಸ ದೊರೆತರೂ ಅಲ್ಲೂ ಆಕೆಯ ಅತಿಯಾದ ಅಧಿಕಾರಯುಕ್ತ ನಡವಳಿಕೆ ಕೊನೆಗೊಮ್ಮೆ ಅವರು ಒಂಟಿಯಾಗುಳಿಯುವಂತೆ ಮಾಡುತ್ತದೆ.

  ಈ ಕತೆಯಲ್ಲಿ ಕಂಡುಬಂದಂತೆ ಒಂದು ಹೆಣ್ಣಿನ ಪಾತ್ರವನ್ನಷ್ಟೇ ನಾವು ಇಂದು ಮಾತುಕತೆಗೆ ವಿಷಯವಾಗಿ  ಆಯ್ದುಕೊಂಡಿರುವುದರಿಂದ ಮಂಗಳಾ ಗಂಡಿನ ಕಡೆಗೆ ಮೂಡಿಸಿಕೊಂಡ ತಪ್ಪುಗ್ರಹಿಕೆಯ ಪರಿಣಾಮದ ಬಗೆಗಷ್ಟೇ ಮಾತಾಡಿದ್ದಾಯಿತು. ಅದರ ಅರ್ಥ ಅವಳ ಸಂಸಾರದಲ್ಲಿ ಆದ ಅನಾಹುತಕ್ಕೆ ಅವಳ ತಪ್ಪುಗ್ರಹಿಕೆಯಷ್ಟೇ ಕಾರಣವಾಯಿತು ಅಂತ ಖಂಡಿತಾ ಅರ್ಥವಲ್ಲ. ಮಂಗಳಾ ಮತ್ತು ಇಳಾ ಇವರಿಬ್ಬರ ಬದುಕಿನಲ್ಲೂ ಜಯಕುಮಾರ್ ಮತ್ತು ವಿನಯಚಂದ್ರ ಇಬ್ಬರ ಮನಸ್ಸಿನಲ್ಲೂ ಬದಲಾದ ಕಾಲಕ್ಕೆ ತಕ್ಕಹಾಗೆ ಸಹಜವಾಗಿಯೇ ಆಧುನಿಕತೆಯನ್ನು ಮೈಗೂಡಿಸಿಕೊಂಡ, ಕಲಿತ ಹೆಣ್ಣುಮಕ್ಕಳ ಬಗೆಗಿನ ತಪ್ಪು ಅಭಿಪ್ರಾಯಗಳೂ, ಅನುಚಿತ ನಿರೀಕ್ಷೆಗಳೂ ಇದ್ದವು . ಉದಾಹರಣೆಗೆ ಜಯಕುಮಾರನಿಗೆ ಕಲಿತ ಹೆಣ್ಣುಗಳೆಲ್ಲವೂ ಗಂಡಸರಾದಂತೆ ಕಲಿತ ಗಂಡಸರೆಲ್ಲರೂ ಹೆಣ್ಣುಗಳಾದಂತೆ ಅನಿಸುವುದು. ಕಲಿತ ಮೇಲೂ ಹೆಣ್ಣು ಹೆಣ್ಣಾಗಿದ್ದರಿಂದ ದೊರೆತ ತನ್ನ ಪ್ರಾಕೃತಿಕ ಜವಾಬ್ದಾರಿಗಳನ್ನೂ ಸಮರ್ಥವಾಗಿ ನಿರ್ವಹಿಸಬಲ್ಲಳು ಅನ್ನುವದ್ದನ್ನ ಅವನಿಗೆ ಒಪ್ಪಲಾಗುವುದಿಲ್ಲ. ಇದು ಹೆಣ್ಣಿಗೆ ಬಹುಕಾಲದ ನಂತರ ದೊರೆತ ಸಮಾನ ಶಿಕ್ಷಣದ ಅವಕಾಶವನ್ನು ಇನ್ನೂ ಅರಗಿಸಿಕೊಳ್ಳಲಾಗದ ಪುರುಷಪ್ರಧಾನ ಸಮಾಜದ ಒಂದು ಮುಖವನ್ನ ಮನಸ್ಥಿತಿಯನ್ನು ತೋರಿಸುತ್ತದೆ.  ವಿನಯಚಂದ್ರನಿಗೋ ಕಲಿತ ಹೆಣ್ಣು, ಸಂಸಾರವನ್ನು ಮನೆಯ ಒಳಹೊರಗೆ ಅವನ ಅನುಪಸ್ಥಿತಿಯಲ್ಲೂ ತನ್ನಷ್ಟಕ್ಕೆ ನಿಭಾಯಿಸಿಕೊಂಡುಹೋಗುವ ಸಾಮರ್ಥ್ಯವಿರುವ ಹೆಣ್ಣು ಅವನ ಹೆಂಡತಿಯೆಂಬ ಹೆಮ್ಮೆ ಬೇಕು. ಆದರೆ ಅವನ ಸಫಲತೆ ಮತ್ತು ಅವಳ ಉದ್ಯೋಗ ಎರಡರ ನಡುವೆ ಆಯ್ಕೆಯ ಮಾತು ಬಂದಾಗ ಅವಳು ತಟ್ಟಂತ ತನ್ನ ಔದ್ಯೋಗಿಕ ಆಸೆ ಆಕಾಂಕ್ಷೆ, ಎದುರಿರುವ ಉನ್ನತಿಯ ಅವಕಾಶಗಳನ್ನೆಲ್ಲ ಗಾಳಿಗೆ ತೂರಿ ತನ್ನ ಬಳಿಗೆ ಓಡಿಬಂದುಬಿಡಬೇಕು, ತಾನು ಆಯೋಜಿಸುವ ಪಾರ್ಟಿಗಳಲ್ಲಿ ಬರೀ ಪರಿಚಾರಿಕೆಯಾಗಿರುವುದೂ ಯುನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗಿರುವಷ್ಟೇ ಮಹತ್ಕಾರ್ಯವೆಂಬಂತೆ ಬದುಕಿಬಿಡಬೇಕು ಅಂದುಕೊಳ್ಳುವುದು ಅನುಚಿತ ನಿರೀಕ್ಷೆಯಲ್ಲದೆ ಇನ್ನೇನು? ಈ ತಪ್ಪು ತಿಳುವಳಿಕೆಗಳೂ ಹುಸಿಗರ್ವಗಳೂ ಆ ಸಂಸಾರಗಳು ಒಡೆಯಲು ಅಷ್ಟೇ ಕೈಜೋಡಿಸಿದ್ದವು ಅನ್ನುವದ್ದನ್ನ ಖಂಡಿತಾ ಅಲ್ಲಗಳೆಯಲಾಗುವುದಿಲ್ಲ. ಇಲ್ಲಿ ಆಯ್ದುಕೊಂಡ ವಿಷಯ ಸ್ತ್ರೀ ಚಿಂತನೆಯ ಬದಲಾದ ಆಯಾಮಗಳು ಅನ್ನುವದ್ದಾಗಿದ್ದರಿಂದ ಆ ಬಗೆಗೆ ವಿಸ್ತರಿಸುವುದು ವ್ಯಾಪ್ತಿಯ ಹೊರಗಿನದಾಗುತ್ತದೆಯೆಂದು ಆ ಬಗ್ಗೆ ಹೆಚ್ಚು ಮಾತಾಡುತ್ತಿಲ್ಲ ಅಷ್ಟೇ.

  ಕಾದಂಬರಿಯನ್ನು ಓದುತ್ತಾ ನಾನು ಅದರ ಪಾತ್ರಗಳನ್ನು ಪರಿಚಯಿಸಿಕೊಂಡು, ಒಳಗೊಂಡು ಅನುಭವಿಸುತ್ತಾ ಹೋಗುವಲ್ಲಿ ಬೇರೆಬೇರೆಯವರು ಅಳವಡಿಸಿಕೊಳ್ಳಬಹುದಾದ ಬೇರೆಬೇರೆ ಆಯಾಮಗಳ ಬಗೆಗೂ ಆಲೋಚನೆ ಬಂತು. ಅದನ್ನೂ ತಮ್ಮ ಜೊತೆ ಹಂಚಿಕೊಳ್ಳಬಯಸುತ್ತೇನೆ.

ಬರವಣಿಗೆ ಅನ್ನುವದ್ದು ಬದುಕನ್ನು ಪ್ರತಿಬಿಂಬಿಸುವ ಕನ್ನಡಿ. ಬದುಕಲ್ಲಿ ಇಲ್ಲದೆ ಇದ್ದದ್ದು ಅಲ್ಲಿ ಬರಲಾರದು, ಇದ್ದದ್ದು ಅಲ್ಲಿ ಬಾರದೆ ಉಳಿಯಲಾರದು. ಹಾಗಾಗಿ ಬದುಕು ಬದುಕುತ್ತಾ ನಮಗೆ ಎದುರಾಗುವ ತಪ್ಪುಗ್ರಹಿಕೆಗಳು ಬರವಣಿಗೆಯೊಂದರ ಓದಿನಲ್ಲೂ ಎದುರಾಗುವುದು ಸಹಜ. ಗಿರೀಶ್ ರಾವ್ ಹತ್ವಾರ್ ಅವರು ಒಂದು ಕಡೆ ಬರೆಯುತ್ತಾರೆ, ಬರವಣಿಗೆ ಬರಹಗಾರನಿಗೆ ಹೇಗಿರಬೇಕೆಂದರೆ ಹೆತ್ತು, ಪೆಟ್ಟಿಗೆಯಲ್ಲಿ ಮುಚ್ಚಿಟ್ಟು ಗಂಗೆಯಲ್ಲಿ ಗಂಗೆಯ ಮೇಲೊಂದು ನಂಬಿಕೆಯಿಟ್ಟು ತೇಲಿಬಿಡುತ್ತಾಳಲ್ಲಾ ಕುಂತಿ, ಅವಳಿಗೆ ಆ ಕಂದ ಕರ್ಣನಿದ್ದ ಹಾಗಿರಬೇಕಂತೆ. ಬರೆದು ಮುಗಿಸಿದ ಬರಹಗಾರ ಬರಹವನ್ನ ಓದುಗನ ವಶಕ್ಕೊಪ್ಪಿಸಿಬಿಡುತ್ತಾನೆ. ಆಮೇಲೆ ಅದು ಓದುಗನ ಸೊತ್ತು. ಸೊತ್ತು ನಮ್ಮದಾಗಿಸಿಕೊಳ್ಳುತ್ತಾ ಅದನ್ನು ಅನುಭವಿಸುವ ಸೌಲಭ್ಯದ ಜೊತೆಗೆ ಅದರ ಹಿತಾಸಕ್ತಿಯ ಜವಾಬ್ದಾರಿಯೂ ನಮ್ಮದಾಗುತ್ತದೆ ಎಂಬುವುದು ನಿಜವೇ ತಾನೇ? ಹಾಗಾಗಿ ನಮ್ಮ ಕಾವ್ಯವಿಮರ್ಶೆಯ ಹಾದಿಯಲ್ಲಿ ಹಿರಿಯರು ಕವಿ ಎನ್ನುವವನ ಅರ್ಹತೆಯ ಬಗ್ಗೆ ಹೇಳಿದಂತೆಯೇ ಸಹೃದಯ ಓದುಗನಿಗಿರಬೇಕಾದ ಅರ್ಹತೆಗಳನ್ನೂ ನಿಯಮಿಸಿದ್ದಾರೆ. ಸಹೃದಯ ಓದುಗನೊಬ್ಬ ತಾನು ಸಾಕಷ್ಟು ಅಧ್ಯಯನಶೀಲನಾಗಿರಬೇಕು, ಕವಿಯ ಮನಸಿನ ಜೊತೆಗೆ ಒಂದು ಅಮೂರ್ತ ಸಂವಾದವನ್ನು ಸಾಧ್ಯವಾಗಿಸಿಕೊಳ್ಳಬಲ್ಲವನಾಗಿರಬೇಕು, ತನ್ನ ಇಷ್ಟಾನಿಷ್ಟಗಳನ್ನು ಬಿಟ್ಟು ಸಮಷ್ಟಿಯ ದೃಷ್ಟಿಯಿಂದ ಕೃತಿಯನ್ನು ಪರಿಗಣಿಸಬಲ್ಲವನಾಗಿರಬೇಕು, ಕಾಲದೇಶಗಳ ಹಂಗಿಲ್ಲದೆಯೇ,  ಕವಿಯ ಇನ್ನುಳಿದ ಪೂರ್ವಾಪರಗಳ ಬಗ್ಗೆ ಪೂರ್ವಗ್ರಹಗಳಿಲ್ಲದೆಯೇ ಅವನ ಕೃತಿಯನ್ನು ನಿಷ್ಪಕ್ಷಪಾತವಾಗಿ ಕಾಣುವ ಶಕ್ತಿಯಿರಬೇಕು- ಇವೆಲ್ಲವೂ ಸಹೃದಯ ಓದುಗನೆನಿಸಿಕೊಳ್ಳಲು ವಿಧಿಸಲ್ಪಟ್ಟ ಅರ್ಹತೆಗಳು.

ಸಹೃದಯ ಓದುಗನೊಬ್ಬನು ಬರಹವನ್ನು ತನ್ನದಾಗಿಸಿಕೊಳ್ಳುತ್ತಾ ಸಾಗುವಾಗ ಬರಹದ ವಸ್ತು, ಆಶಯ ಅಥವಾ ಉದ್ದೇಶ ಮತ್ತು ಅದು ಸಾರಹೊರಟಿರುವ ಸಂದೇಶಗಳನ್ನ ಬರಹಗಾರನ ಮನಸಲ್ಲೇನಿತ್ತೋ ಅದೇ ನಿಟ್ಟಿನಲ್ಲಿಯೂ ಗ್ರಹಿಸಬಹುದು ಅಥವಾ ಇನ್ನೊಂದು ನಿಟ್ಟಿನಲ್ಲೂ ಗ್ರಹಿಸಬಹುದು. ಅದು ಅವರವರ ಪರಿಕಲ್ಪನೆಯ ವ್ಯಾಪ್ತಿಗೆ ಬಿಟ್ಟ ವಿಷಯ.  ಆದರೆ ಒಮ್ಮೊಮ್ಮೆ ಬರಹಗಾರ ಬರೆಯುತ್ತಾ ಅಲ್ಲಿ ಅಡಕವಾಗಿ ಉಳಿದುಬಿಡುವ ಅವನ ಉದ್ದೇಶ ಓದುಗನಿಗೆ ಒಂದಿಷ್ಟೂ ಸ್ಪಷ್ಟವಾಗದೆಯೇ ಹೋದಾಗ ಮೇಲುಮೇಲಿನ ನೋಟ ಗ್ರಹಿಸುವ ಸಂದೇಶವನ್ನೇ ಆ ಒಟ್ಟೂ ಬರಹದ ಉತ್ಪತ್ತಿಯಾಗಿ ಕಂಡುಕೊಳ್ಳುವ ಎಲ್ಲ ಸಾಧ್ಯತೆಗಳೂ ಇರುತ್ತವೆ. ಇದು ಬರಹದ ತಪ್ಪು ಗ್ರಹಿಕೆ ಅನಿಸಿಕೊಳ್ಳುತ್ತದೆ. ಅಧುನಿಕ ಪಾಶ್ಚಾತ್ಯ ಮೀಮಾಂಸೆಯ ಹರಿಕಾರರಲ್ಲೊಬ್ಬರಾದ ಐ ಅ ರಿಚರ್ಡ್ಸ್ ರವರು ಸಂವಹನ ಮತ್ತು ಮೌಲ್ಯಮಾಪನದ ಸಿದ್ಧಾಂತವನ್ನು ವಿಮರ್ಶೆಯ ಬಗೆಗೆ ಮಂಡಿಸಿದ್ದಾರೆ.  ಅದರಲ್ಲಿ ಮೌಲ್ಯಮಾಪನ ಸಿದ್ಧಾಂತ ನನಗೆ ತುಂಬ ಮನಸೊಪ್ಪಿದ ಮತ್ತು ನೆನಪಿನಲ್ಲುಳಿದುಕೊಂಡಿರುವ ಸಿದ್ಧಾಂತ. ಅದರಲ್ಲಿ ಅವರು ಹೇಳುವುದನ್ನ ಸಣ್ಣದಾಗಿ ಹೇಳುವುದಾದರೆ ಒಂದು ಕೃತಿಯಲ್ಲಿ ಕಂಡುಬರುವ ಬರಹಗಾರನ ಅಧ್ಯಯನಶೀಲತೆ, ಪಾಂಡಿತ್ಯ, ಭಾಷೆಯ ಮೇಲಿನ ಹಿಡಿತ, ಪ್ರತಿಭೆಗಳೆಲ್ಲವುಗಳಿಗಿಂತಲೂ ಆ ಕೃತಿ ಸಮಾಜಕ್ಕೆ ಏನನ್ನು ಹೇಳಹೊರಟಿದೆ ಅನ್ನುವದನ್ನ ವಿಮರ್ಶಕ ಮುಖ್ಯವಾಗಿ ಪರಿಗಣಿಸಬೇಕು ಅಂತ ಹೇಳಿದ್ದಾರೆ. ವಿಮರ್ಶೆಯನ್ನು ಸರಳೀಕರಿಸಿ ಹೇಳಿದ ಅಷ್ಟೂ ನಮ್ಮಲ್ಲಿನ ಮತ್ತು ಪಾಶ್ಚಾತ್ಯ  ಹಿರಿಯ ಮೀಮಾಂಸಕರು ಸಹೃದಯ ಓದುಗ ಮತ್ತು ವಿಮರ್ಶಕ ಈ ಎರಡು ವ್ಯಕ್ತಿತ್ವಗಳು ಒಂದು ಹಂತದಲ್ಲಿ ಬೇರೆಬೇರೆಯಲ್ಲ ಅಂತ ಹೇಳಿದ್ದಾರೆ. ಓದುಗನೂ ಓದುತ್ತಾ ಅವನಿಗೆ ಗೊತ್ತಿಲ್ಲದ ಹಾಗೆ ಕೃತಿಯನ್ನು ವಿಮರ್ಶಿಸುತ್ತಲೇ ಸಾಗಿರುತ್ತಾನೆ ವಿಮರ್ಶಕನೂ ಒಬ್ಬ ಸಹೃದಯ ಓದುಗನಾಗಿದ್ದರೆಯಷ್ಟೇ ವಿಮರ್ಶೆಯ ಉದ್ದೇಶ ಸಾರ್ಥಕವಾದೀತು ಅಂತ ಎಲ್ಲರೂ ಹೇಳಿದ್ದಾರೆ. ಹಾಗಾಗಿ ಓದುಗನಿಗೂ ಕೃತಿಯೊಂದು ಎತ್ತಿಹಿಡಿಯಹೊರಟಿರುವ ಅಥವಾ ಕೀಳ್ಮಟ್ಟದ ವಿಷಯವೊಂದನ್ನು ಚಿತ್ರಿಸಿ ಉಚಿತವಲ್ಲದ್ದನ್ನು ಕೂಡದು ಅಂತ ಸಾರಹೊರಟಿರುವ ಮೌಲ್ಯವೇನಿದೆಯೋ ಅದರ ಬಗ್ಗೆ ಹೆಚ್ಚು ಗಮನ ಹರಿಸಬೇಕು ಅನ್ನುವದ್ದೇ ಈ ಸಿದ್ಧಾಂತದ ತಿರುಳು. ಮೌಲ್ಯಗಳು, ಸರಿತಪ್ಪುಗಳು ಅವರವರ ಭಾವಕ್ಕೆ ತಕ್ಕಂತೆ ಅನ್ನುವ ಮಾತಿದೆಯಾದರೂ ಬದುಕಿನ ಕೆಲವು ಮೂಲಭೂತ ಮೌಲ್ಯಗಳು ಯಾವತ್ತೂ ಎಲ್ಲರ ಮನಸ್ಸಿನಲ್ಲೂ ಒಂದೇ ಸ್ಥಾನವನ್ನು ಹೊಂದಿರುತ್ತದೆ. ಒಂದು ಬರಹದಲ್ಲಿ ಒಂದು ಋಣಾತ್ಮಕ ವ್ಯಕ್ತಿತ್ವವನ್ನು ಬರಹಗಾರ ವೈಭವೀಕರಿಸಿ ಬರೆದಿರುತ್ತಾನೆ ಅಂದುಕೊಳ್ಳೋಣ. ಕಡೆಗೊಮ್ಮೆ ಆ ಋಣಾತ್ಮಕ ಗುಣಗಳು ತಂದು ಆ ವ್ಯಕ್ತಿತ್ವದ ಎದುರು ಇಡುವ ವಿನಾಶವನ್ನೂ ಅಷ್ಟೇ ವೈಭವೀಕರಿಸಿ ಬರೆದಿದ್ದಲ್ಲಿ ಆ ಕೃತಿಯ ಉದ್ದೇಶ ಆ ಋಣಾತ್ಮಕ ಗುಣ ಸಲ್ಲದು ಅಂತ ಹೇಳುವುದೇ ಆಗಿರುತ್ತದೆ. ಓದುಗಳು ಒಬ್ಬಳು ಹೆಣ್ಣಾಗಿದ್ದು ಆ ಋಣಾತ್ಮಕ ವಕ್ತಿತ್ವವೂ ಒಂದು ಹೆಣ್ಣಾಗಿದ್ದಲ್ಲಿ  ಲೇಖಕ ಆ ಸಲ್ಲದ ಗುಣಗಳನ್ನ ವೈಭವೀಕರಿಸಿದ್ದನ್ನಷ್ಟೇ ಓದುವ ಹಂತದಲ್ಲಿ ಓದುಗ ಮನಸ್ಸು ಅದು ಹೆಣ್ಣು ಜಾತಿಗೆ ಮಾಡುವ ಅವಮಾನ, ಹೆಣ್ಣು ಜಾತಿಯನ್ನು ಕೀಳಾಗಿ ಚಿತ್ರಿಸುವುದು ಅಂತೆಲ್ಲ ನಿರ್ಧಾರ ತಳೆದುಬಿಡುವುದು ಆ ಕೃತಿಯನ್ನು ತಪ್ಪಾಗಿ ಗ್ರಹಿಸುವುದೇ ಆಗುತ್ತದೆ. ಮುಂದೆ ಆ ಮನಸ್ಸು ಕತೆಯ ಯಾವುದೇ ಬೆಳವಣಿಗೆಯನ್ನು ಒಂದು ತಟಸ್ಥ ಮನೋಭಾವದಿಂದ ನೋಡಲಾಗುವುದಿಲ್ಲ. ಹಾಗಾಗಿ ಲೇಖಕನ ಉದ್ದೇಶ ಅಲ್ಲಿ ಓದುಗನನ್ನು ತಲುಪದೆಯೇ ಉಳಿದುಬಿಡುತ್ತದೆ. ಓದುಗನಿಗೆ ಕವಿಯ ಜೊತೆ ಸಂವಾದವೂ ಸಾಧ್ಯವಾಗುವುದಿಲ್ಲ, ಪೂರ್ವಾಗ್ರಹವಿಲ್ಲದೆ ಆ ಕೃತಿಯನ್ನು ಕವಿಯನ್ನು ಪರಿಗಣಿಸುವುದೂ ಸಾಧ್ಯವಾಗುವುದಿಲ್ಲ, ಆ ಕೃತಿ ಎತ್ತಿಹಿಡಿಯಹೊರಟಿರುವ ಒಳ್ಳೆಯ ಮೌಲ್ಯದ ಅರಿವೂ ಆಗುವುದಿಲ್ಲ. ಹಾಗಾಗಿ ಓದುಗ ಸಹೃದಯನಾಗುವುದಾಗುವುದಿಲ್ಲ. ಬರಹಕ್ಕೂ ಓದುವಿಕೆಗೂ ನ್ಯಾಯ ಒದಗಿಸಿದಂತಾಗುವುದಿಲ್ಲ.
  ತಪ್ಪುಗ್ರಹಿಕೆಯ ಬೆನ್ನು ಹತ್ತಿ... ಅಂತ ನಾನು ಹೀಗೆ ತಮಗೆ ಒಂದಷ್ಟು ಮಾತು ತಲುಪಿಸುವ ಪ್ರಯತ್ನ ಮಾಡಿದ್ದು ನನ್ನನ್ನೂ ಸೇರಿದಂತೆ ಎಲ್ಲರನ್ನೂ ಮುಂದೊಮ್ಮೆ ಈ ತಪ್ಪುಗ್ರಹಿಕೆ ಸಂಭವಿಸುವ ಸಾಧ್ಯತೆ ಎದುರಾದಲ್ಲಿ ಒಂದಿಷ್ಟಾದರೂ ಎಚ್ಚರಿಸಲಿ ಮತ್ತು ಆ ಮೂಲಕ ಅಂತಿಮವಾಗಿ ಒಂದು ಘಟನೆ, ಒಂದು ಅನುಭವ, ಒಂದು ಬರಹ ನಮ್ಮ ಬದುಕಿಗೆ ಹೇಗೆ  ಧನಾತ್ಮಕವಾಗಿ ಪ್ರಭಾವ ಬೀರಬೇಕೋ ಹಾಗೆಯೇ ಪ್ರಭಾವಿಸುವುದು ಸಾಧ್ಯವಾಗಲಿ ಅಂತ ಹಾರೈಸುತ್ತೇನೆ, ಧನ್ಯವಾದಗಳು.