Saturday, February 6, 2016

"..ಹಿಂದಿನ ಆಟ ಮುಗಿಸೋಣು ಬಾ
ಮುಂದಿನ ಆಟ ನಡೆಸೋಣು ಬಾ.."
                               ಬೇಂದ್ರೆ.

ತನ್ನೊಳಗೆ ಮಾತು ಮಾತು ಮಥಿಸಿ ಬಂದ ನಾದದ ನವನೀತವನ್ನು ಅತ್ಯಂತ ಪ್ರಾಮಾಣಿಕ ಪ್ರೀತಿಯಿಂದ ತನ್ನ ಕನ್ನಡಮ್ಮನ ಕಂದಗಳಿಗುಣಿಸಿದ ಕನ್ನಡ ಕಾವ್ಯಲೋಕದ ಗಾರುಡಿಗನ ಮಹಾಪ್ರಸ್ಥಾನವಾಗಿ ಮೂವತ್ತೈದು ವರ್ಷಗಳಾದರೂ ಇಂದಿಗೂ ತಮ್ಮ ಕವನಗಳ ಮತ್ತು ಅವುಗಳಲ್ಲಿನ ಜೀವಂತಿಕೆಯ ಮೂಲಕ ಓದುಗರ ಮನಸುಗಳೊಳಗೆ ಶ್ರೀ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ಜೀವಂತ! 

          ಸಣ್ಣ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು ತಾಯಿಯ ತವರು ಸೇರಿದ ಬಾಲಕ ದತ್ತು ಬಡತನದಲ್ಲೇ ಬೆಳೆದದ್ದು. ಹದಿನೇಳು ಹೆಡೆದು ಹೆಣ್ಣು ಒಂದಷ್ಟೇ ಉಳಿದ ಗೋಳಿನ ಜೊತೆಗೇ ಬದುಕಿ " ..ಜಗ್ಗದ ಕುಗ್ಗದ ಎದೆಯವಳು, ಹುಲಿ ಹಾಲ ಕುಡಿಸಿದಳು, ತಂತಿಯಲಿ ನಡೆಸಿದಳು, ಸೂಜಿಯ ಮೊನೆಯಲ್ಲಿ ನಿಲಿಸಿದಳು.." ಎಂದೆಲ್ಲ ವರ್ಣಿಸಿಕೊಂಡ ಅಜ್ಜಿ ಗೋದೂಬಾಯಿ ಮೊಮ್ಮಗನ ಜೀವನಕ್ಕೆ ತುಂಬುಸ್ಫೂರ್ತಿಯಾಗಿದ್ದವರು ಹಾಗೂ ನೆರಳಿನಂತೆ ಜೊತೆಯಾಗಿದ್ದ ಅಕ್ಕರೆಯ ತಮ್ಮ ರಘು ಇವರಿಬ್ಬರ ಸಾವು ಬಾಲ್ಯದಲ್ಲೇ ಕಂಗೆಡಿಸಿದರೆ ಮುಂದೆ ತಮಗೆ ಜನಿಸಿದ ಒಂಬತ್ತು ಮಕ್ಕಳಲ್ಲಿ ಒಂದರ ಹಿಂದೊಂದರಂತೆ ಆರು ಮಕ್ಕಳ ಸಾವು ಇನ್ನಷ್ಟು ನೋವಲ್ಲಿ ಬೇಯಿಸಿತು. ಎಲ್ಲ ಅನುಭವಿಸುತ್ತಲೇ ಬರೆಯುತ್ತಾ ಸಾಗಿದ ಬೇಂದ್ರೆಯವರು ಒಂದು ಕಡೆ "ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೆ ನೀಡುವೆನು ರಸಿಕ ನಿನಗೆ" ಅನ್ನುತ್ತ ಬವಣೆಗಳನ್ನು ಮರೆಯಲಿಡುವ ಇಂಗಿತ ತೋರಿದರೂ "ಬಡತನ ಸಿರಿತನ ಕಡೆತನಕ ಉಳಿದಾವೇನ?" ಎಂದು ಬಯಲಾಗುತ್ತಾ ತನ್ನನ್ನು ಸಂತೈಸಿಕೊಳುತ್ತಾ ಓದುಗನನ್ನೂ ಸಂತೈಸುತ್ತಾ ಬಂದವರು. 
 
            ಶಾಲೆಯ ನಾಕು ಗೋಡೆಗಳೊಳಗಿನ ಪಾಠಕ್ಕಿಂತಲೂ ಶಾಲೆಯ ಹಾದಿಯಲ್ಲಿ ಸಿಕ್ಕುತ್ತಿದ್ದ ಹಾವಾಡಿಗರಾಟ, ಜಾದುಗಾರರ ಆಟ, ಗುಡಿಯಲ್ಲಿನ ಕೀರ್ತನೆ-ಪುರಾಣಪ್ರವಚನ, ಶಿರಹಟ್ಟಿಯ ಕಂಪನಿ ನಾಟಕಗಳು, ಮರಾಠಿ ನಾಟಕಗಳು ಇವೆಲ್ಲವುಗಳಲ್ಲಿನ ಮೋಜು ಮತ್ತಲ್ಲಿ ಸಿಗುತ್ತಿದ್ದ ಬದುಕಿನ ಪಾಠಗಳು ಹಾಗೂ ತಮ್ಮ ವಾಸಸ್ಥಳ ಕಾಮನಕಟ್ಟೆಯ ಪಕ್ಕದಲ್ಲೇ ಇದ್ದ ಭಾರತ ಪುಸ್ತಕಾಲಯದಿಂದ ಕೈಗಡ ತಂದ ಪುಸ್ತಕಗಳ ಓದು ಇವುಗಳನ್ನೇ ತದೇಕಚಿತ್ತದಿಂದ ಒಳಗಿಳಿಸಿಕೊಂಡ ಬಾಲ್ಯ ಬೇಂದ್ರೆಯವರದು. ಕಾಳಿದಾಸನ ಶಾಕುಂತಲ, ಭಟ್ಟನಾರಾಯಣನ ವೇಣಿಸಂಹಾರಗಳ ಆಧಾರಿತ ವಾರ್ಷಿಕೋತ್ಸವದ ನಾಟಕಗಳು, ಹುಯಿಲಗೋಳ ನಾರಾಯಣರು "ಟೇಲ್ಸ್ ಫ್ರಮ್ ಶೇಕ್ಸ್ಪಿಯರ್" ಕಲಿಸಿ ಆಡಿಸಿದ "ಮರ್ಚಂಟ್ ಆಫ್ ವೆನಿಸ್" ನಾಟಕ, ಮುಂತಾದವುಗಳು ಕನ್ನಡವಲ್ಲದೆ ಸಂಸ್ಕೃತ ಹಾಗೂ ಇಂಗ್ಲಿಷ್ ಸಾಹಿತ್ಯಾಸಕ್ತಿಯ, ಆಕರ್ಷಣೆಯ ಬೀಜವನ್ನು ಬಿತ್ತಿರಬೇಕು. ಮುಂದೆ ಕಾಳಿದಾಸನ ಮೇಘದೂತ ಕನ್ನಡಾವತಾರ ತಾಳಲು, ಶಾಕುಂತಲದಲ್ಲಿನ ಮಿಸ್ಸಿಂಗ್ ಲಿಂಕ್ಸ್ ಬಗ್ಗೆ ಅಧ್ಯಯನ ಮಾಡಲು ಈ ಆಸಕ್ತಿಯ ಅಡಿಪಾಯವೇ ಕಾರಣವಿದ್ದಿರಬಹುದುಮುಂದೆ ಪುಣೆಯಲ್ಲಿ ಬಿ ಎ ಓದುವಾಗ ಪುಸ್ತಕಾಧ್ಯಯನ ಒಂದು ವ್ಯಸನವಾಗಿ ಬೆಳೆದದ್ದು. ಧಾರವಾಡದಲ್ಲಿ (೧೯೧೮) ನಡೆದ ನಾಲ್ಕನೆಯ ಕರ್ನಾಟಕ ಸಾಹಿತ್ಯ ಸಮ್ಮೇಳನದಲ್ಲಿ "ಕೋಗಿಲೆ" ಎಂಬ ಕವನವಾಚನ ಮಾಡಿ ಅಲೂರ ವೆಂಕಟರಾಯರಂಥ ಹಿರಿಯರಿಂದ ಮೆಚ್ಚುಗೆ ಪಡಕೊಂಡಾಗ ಬೇಂದ್ರೆಯವರಿಗೆ ಹತ್ತೊಂಬತ್ತು ವರ್ಷ. ಇಪ್ಪತ್ತರ ವಯಸ್ಸಿನಲ್ಲಿ ಮರಾಠಿ ಪತ್ರಿಕೆಯೊಂದರಲ್ಲಿ ಮೊದಲಬಾರಿಗೆ ಪ್ರಕಟವಾದ ಅವರ ಕವನ "ವೀಸವಯಾ ಝಾಲೀ" ಬದುಕಿನ ಮುಂದಿನ ದಿಕ್ಕು-ದಾರಿಗಳ ಬಗ್ಗೆ ತಾನು ಕಂಡುಕೊಂಡ ಉತ್ತರದಂತಿತ್ತು.
          ತಾನು ಓದಿದ ಹೈಸ್ಕೂಲ್ ನಲ್ಲೇ ಮಾಸ್ತರರಾದಾಗ ಬಂದ ಬೇಂದ್ರೆ ಮಾಸ್ತರ ಎಂಬ ಪ್ರೀತಿಯ ಹೆಸರು ಮುಂದೆ ಪ್ರೊಫೆಸರ್ ಅಗಿ, ಎರಡೆರಡು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪಡೆದುಕೊಂಡು, ಆಕಾಶವಾಣಿ ಸಾಹಿತ್ಯ ಸಲಹಾಗಾರರಾದಾಗಲೂ, ಜ್ಞಾನಪೀಠ ಪ್ರಶಸ್ತಿ ಪಡೆದಾಗಲೂ ಅದೇ ಅಕ್ಕರೆಯಲ್ಲಿ ಅವರ ಜೊತೆ ಉಳಿದುಬಂತು. ವಿದ್ಯಾರ್ಥಿಗಳ ಜೊತೆ ಸ್ನೇಹಿತರಂತಿರುತ್ತಾ "ಸಹನಾವವತು ಸಹ ನೌ ಭುನಕ್ತು ಸಹವೀರ್ಯಂ ಕರವಾವಹೇ.." ಎಂಬ ವೇದಮಂತ್ರವನ್ನು ನಿತ್ಯವೂ ಪಠಿಸುತ್ತಾ ಅದರಂತೆಯೇ ಬದುಕುವ ಭೋಧನೆಯಿತ್ತ ಸ್ನೇಹಜೀವಿ ಬೇಂದ್ರೆ ಮಾಸ್ತರರು ಬೇರೆಲ್ಲವುದಕ್ಕಿಂತ ಮನುಷ್ಯಸಂಬಂಧಗಳಿಗೆ ಹೆಚ್ಚು ಮಹತ್ವವಿತ್ತವರು. ಶ್ರೀಧರ ಖಾನೋಳಕರ,
ವಿ. ಕೃ. ಗೋಕಾಕ, ಶಂಬಾ ಜೋಷಿ, ಬೆಟಗೇರಿ ಕೃಷ್ಣ ಶರ್ಮ, ಮಧುರಚೆನ್ನ ಮುಂತಾದ ಗೆಳೆಯರ ಜೊತೆ ತಮ್ಮ ಕಲ್ಪನೆಯ ಕೂಸು "ಗೆಳೆಯರ ಗುಂಪು" ಅನ್ನುವ ಅನೌಪಚಾರಿಕ ಸಂಸ್ಥೆಯೊಂದನ್ನು ತುಂಬು ಅಭಿಮಾನದಿಂದ ಕಟ್ಟಿಕೊಂಡವರು ಮುಂದೊಮ್ಮೆ ಅದು ಚದುರತೊಡಗಿದಾಗ ತಮ್ಮ ಹಂಸಗೀತೆಯಲ್ಲಿ "ಗುಡಿಹೋಯ್ತು, ಹುಡಿಗೂಡಿ ಗಾಳಿಗೋಪುರ ಗಾಳಿಗೂಡಿತು, ಮಾಟದೋಲು... " ಅನ್ನುತ್ತಾ ಸಂಕಟವನ್ನು ತೋಡಿಕೊಂಡವರು.
         
          "ಬೆಂದರೆ ಬೇಂದ್ರೆಯಾದಾನು" ಅನ್ನುವ ಪ್ರಸಿದ್ಧ ಮಾತಿದೆ. ನವಕರ್ಣಾಟಕ ಸಾಹಿತ್ಯ ಸಂಪದ ಮಾಲೆಯಲ್ಲಿ ಶ್ರೀ ಎನ್ಕೆ ಕುಲಕರ್ಣಿಯವರು ಬರೆದ "ದ. ರಾ. ಬೇಂದ್ರೆ" ಅನ್ನುವ ಪುಸ್ತಕದಲ್ಲಿ ಹೀಗನ್ನುತ್ತಾರೆ, "ಅಂಬಿಕಾತನಯರ ಕಾವ್ಯಯಜ್ಞದಲ್ಲಿ ನೋವು ನೋಂಪಿಯಾಗುತ್ತದೆ, ತಾಪ ತಪವಾಗುತ್ತದೆ..". ಬದುಕುವ ಪ್ರಕ್ರಿಯೆಯಲ್ಲಿ ಅದೂ ಬದುಕಿನ ಒಂದು ಅಂಗ ಅನ್ನುವಷ್ಟರಮಟ್ಟಿಗೆ ಸಹಜವಾಗಿ ಹಾಸುಹೊಕ್ಕಾಗಿ ಬಂದ ಅವರ ಬರಹಗಳಲ್ಲಿ ನೋವು-ನಲಿವು, ಅಸಮಾಧಾನ-ಅಸಹಾಯಕತೆ, ಮೆಚ್ಚುಗೆ-ಅಚ್ಚರಿ ಮುಂತಾದೆಲ್ಲ ಅನುಭವಗಳೂ ಸರಳವಾಗಿ ಆದರೆ ತಮ್ಮೆಲ್ಲ ತೀವ್ರತೆಯೊಂದಿಗೆ ಸಶಕ್ತ ನಮ್ಮೆದುರು ಬರುತ್ತವೆ.

ಬೇಂದ್ರೆಯವರನ್ನು ಕಣ್ಣಾರೆ ಕಂಡ ಪುಣ್ಯಾತ್ಮರ ಜೊತೆಗೆ ಅವರ ಬರಹದ ಮೂಲಕ ಅವರನ್ನು ಕಂಡುಕೊಳ್ಳಲು ಯತ್ನಿಸಿರುವ ಮಹನೀಯರು ಕೆಲವರ ಮಾತುಗಳನ್ನು ನೆನೆಯುವುದರ ಮೂಲಕ ನಾವೂ ಸ್ವಲ್ಪ ಮಟ್ಟಿಗೆ ಅವರ ಹತ್ತಿರಕ್ಕೆ ಸಾಗೋಣವೇ?

          ಬೇಂದ್ರೆಯವರ ಪುತ್ರ ಶ್ರೀ ವಾಮನ ಬೇಂದ್ರೆಯವರು ಒಂದೆಡೆ ಹೇಳುವ ಹಾಗೆ, ಬಾಲ್ಯದಲ್ಲಿ ಕೇಳಿದ್ದ ಜಾನಪದ, ಲಾವಣಿ, ಗೊಂದಲಿಗರ ಹಾಡು, ಡೊಳ್ಳಿನ ಹಾಡುಗಳ ಧಾಟಿಯಲ್ಲಿ ರಚಿಸುತ್ತಿದ್ದ "ರವದಿ" ಯಂಥ ಕವನಗಳು ಅವರ ಅಪ್ಪಟ ಆನಂದದ ಅಭಿವ್ಯಕ್ತಿಗಳಾಗಿರುತ್ತಿದ್ದವು.
"ಕಸದಂತೆ ಬಿದ್ದಂಥ ರವದಿ ಕಂಡೆನು ನಾನು
ಕಸವೆಂದು ಬಗೆದಂಥ ರವದಿ ಕಸವಾಗಿತ್ತು
ಕಸವಲ್ಲವೆಂದು ನಾನೆತ್ತಿದೆನು; ಅಂತೆಯೇ ಕಸವಾಗಲಿಲ್ಲ ರವದಿ..."
ಆದರೆ ಆಗಿನ ಕಾಲದಲ್ಲಿ ಆ ಧಾಟಿಗೆ ಪಂಡಿತರ ಮನ್ನಣೆ ಸಿಗಲಿಲ್ಲವಾಗಿ ಬೇಂದ್ರೆಯವರು ತಮ್ಮ ಅಭಿವ್ಯಕ್ತಿಗೆ ಷಟ್ಪದಿಯ ಮಾಧ್ಯಮ ಆಯ್ದುಕೊಳ್ಳುತ್ತಾರೆ. ಆದರೂ ತನ್ನ ಉತ್ತಮ ಕವನವೆಂದರೆ ಬೇಂದ್ರೆಯವರಿಗೆ, " ಭೋಗಿಸಿದೆನೋ ನಿದ್ರೆಯಲ್ಲಿ ಮರೆತಿದ್ದ ಜನ್ಮಾಂತರ ಸುಖಗಳನ್ನು.." ಅನ್ನುವಂತಿರುತ್ತಿದ್ದವಂತೆ.

          ಶ್ರೀ ಶ್ಯಾಮಸುಂದರ ಬಿದರಕುಂದಿಯವರ ಅಭಿಪ್ರಾಯದಂತೆ ಬೇಂದ್ರೆಯವರ ಬದುಕು ನಿಂತುದೇ ಒಲವಿನ ಅರಿವು, ಪ್ರೀತಿಯ ಇರುವಿನ ಮೇಲೆ. 
"ಪ್ರೇಮ ಬೀಜ ಮೂಲ ನನಗೆ
ಪ್ರೇಮ ಬೀಜ ಫಲದ ಕೊನೆಗೆ"
ಈ ಭಾವದ ವಿಸ್ತಾರವನ್ನೇ ಹೆತ್ತ ತಾಯಿಗೆ, ಪಡೆದ ತಾಯ್ನಾಡಿಗೆಕೈಹಿಡಿದ ಬಾಳಸಖಿಗೆ ಗೆಳೆಯ ಗೆಳತಿಯರಿಗೆ, ಹಿರಿಯರಿಗೆ, ಗುರುಗಳಿಗೆ, ನಿಸರ್ಗಶಕ್ತಿಗೆ, ಕಾವ್ಯದ ಉಕ್ತಿಗೆ ಹೀಗೆ ಅವರು  ಬದುಕಿನ ಬೇರೆಬೇರೆ ಹಂತಗಳಲ್ಲಿ ತೋರಿದ ಪ್ರೀತಿಯ ಮತ್ತು ಪಡೆದ ಪ್ರೀತಿಯ ಧನ್ಯತಾಭಾವವನ್ನು ಅಭಿವ್ಯಕ್ತಿಸಿದ ಅವರ ಬರಹಗಳಲ್ಲಿ ಕಾಣಬಹುದು.

          ಬೇಂದ್ರೆ ಮಹಾಕಾವ್ಯ ಬರೆಯದಿದ್ದರೂ ಹಕ್ಕಿ ಹಾರುತಿದೆ ನೋಡಿದಿರಾ, ನಗೀ ನವಿಲು, ಶ್ರಾವಣಾ, ತುತ್ತಿನ್ ಚೀಲ, ನರಬಲಿ, ಯುಗಾದಿ, ಸಖೀಗೀತ, ನೀ ಹೀಂಗ ನೋಡಬ್ಯಾಡ ನನ್ನ, ಕುರುಡುಕಾಂಚಾಣ, ಅನ್ನಾವತಾರ ತುತ್ತಿನ ಚೀಲ, ಹೆಣದ ಹಿಂದೆ- ಇವೇ ಈ ಕವನಗಳೆಲ್ಲ ತಮ್ಮ ಚಿರನೂತನವೂ ಸಾರ್ವಕಾಲಿಕವೂ ಆಗಿರಬಲ್ಲ ಶಕ್ತಿಯ ಮೂಲಕ ಕವಿಯ ತ್ರಿಕಾಲ ಜ್ಞಾನ ಸಂಪನ್ನತೆ ಹಾಗೂ ಕಾವ್ಯಪ್ರತಿಭೆಗೆ ಸಾಕ್ಷಿಯಾಗುತ್ತವೆ. ಈ ಒಂದೊಂದೂ ಕವನ, ಮಹಾಕಾವ್ಯದ ಆಲ ಅಗಲಕ್ಕೆ ಹಬ್ಬಬಲ್ಲುವು- ಇದು ಶ್ರೀ ಸೋಮಶೇಖರ ಇಮ್ರಾಪೂರ ರವರ ಅಭಿಪ್ರಾಯ.  

           ಶ್ರೀ ಬಸವರಾಜ ಸಾದರ ಅವರು ಬೇಂದ್ರೆಯವರ ದಾಂಪತ್ಯದ ಪರಿಕಲ್ಪನೆಯನ್ನು ಹೀಗೆ ಹೇಳುತ್ತಾರೆ.
"ನಾನು ಬಡವಿ ಆತ ಬಡವ ಒಲವೆ ನಮ್ಮ ಜೀವನ... "
ಪತಿ-ಪತ್ನಿಯ ನಡುವಿನ ಬಂಧದ ಚಂದ ಹೀಗೆ ವರ್ಣಿಸುತ್ತಾ ಪತ್ನಿಯನ್ನು "ಅಂತಃಪಟದಾಚೆ ವಿಧಿ ತಂದ ವಧು ನೀನು" ಅನ್ನುತ್ತಾರೆ.
ಸಪ್ಪೆ ಬಾಳುವೆಗಿಂತ ಉಪ್ಪುನೀರೂ ಲೇಸು
ಬಿಚ್ಚುಸ್ಮೃತಿಗಳ ಹಾಯಿ ಬೀಸೋಣ ಬಾ
ಬೀಸೋಣ ಈಸೋಣ ತೇಲೋಣ
ಮುತ್ತಿನ ತವರ್ಮನೆ ಮುಟ್ಟನು ಮುಳುಗೋಣು ಬಾ..
ಬೇಂದ್ರೆ ಅನಿವರ್ಚನೀಯವಾದ ಆತ್ಮಸ್ಥೈರ್ಯವುಳ್ಳವರು. ಹತ್ತುಹಲವು ಆತಂಕಗಳ ನಡುವೆಯೂ  ಬದುಕನ್ನು ಸಪ್ಪೆ ಮಾಡಿಕೊಳ್ಳದೆಯೇ ಪ್ರಯತ್ನಶೀಲರಾಗಿ ಅರ್ಥಪೂರ್ಣವಾಗಿಯೇ ಬದುಕಿದವರು.

          ಅವರ ಭಾವಗೀತೆಗಳಲಿ ಅರಳಿದ ಪ್ರೇಮ ತತ್ವದ ಕುರಿತಾಗಿ ಸ್ವತಃ ಕವಿಯ ಜೊತೆಗೆ ಆ ಕವಿತೆಗಳ ಬಗ್ಗೆ ಸಂವಾದ ನಡೆಸಿದ ಡಾ. ರುಕ್ಮಿಣಿ ಪಾರ್ವತಿ ಅವರು ಹೀಗೆ ಬರೆಯುತ್ತಾರೆ.
" ಯಾಂತ್ರಿಕ ಯುಗದ ಯಾಂತ್ರಿಕ ಜೀವನದ ಚಿತ್ರಣದಲ್ಲೇ ಅಂಬಿಕಾತನಯರು ತೃಪ್ತರಾಗಿಲ್ಲ. ಅದರ ಆಳ ಅಗಲಗಳನ್ನು ಅವರು ಅರಿಯುವುದಕ್ಕೆ ಪ್ರಯತ್ನಿಸಿದ್ದಾರೆ. ಈ ಪ್ರಯತ್ನದ ನಾನಾ ಹಂತಗಳೇ ಕಾವ್ಯಗಳಾಗಿ ಹೊಮ್ಮಿವೆ. ಇಂಥ ಅನಂತದ ಆಳವನ್ನು ಅರಿಯಲು ಹಾತೊರೆಯುವ ಕವಿಗೆ ಪ್ರಕೃತಿ ಸೌಂದರ್ಯ ಶಾಲಿನಿಯಾಗಿ ಮಾತ್ರ ಕಾಣದೆ ಅನಂತ ಸತ್ಯದೆಡೆಗೆ ಕರೆದೊಯ್ಯುವ ಮಾರ್ಗದರ್ಶಿನಿಯಾಗಿದೆ. ಅಂತೇ ಅಂಬಿಕಾತನಯರು ಪ್ರಕೃತಿಯನ್ನು ಕಂಡ ರೀತಿ ಹೊಸದು.
ಅಂಬಿಕಾತನಯರು ಬಾಳನ್ನು ಸ್ಸಾಕ್ಷಿಯಾಗಿ ನಿಂತು ನೋಡಿದ್ದಾರೆ. ಅಲ್ಲಿಯ ಅಜ್ಞಾನ ದುಃಖವನ್ನು ಕಂಡು ನೊಂದಿದ್ದಾರೆ. ಉದ್ವೇಗಿತರಾಗಿದ್ದಾರೆ. ಆದರೆ ಬಾಳಿನಲ್ಲಿ ಕವಿಗೆ ಅಶ್ರದ್ಧೆ ಉಂಟಾಗಲಿಲ್ಲ.
ಅಂಬಿಕಾತನಯರ ಆಂತರಿಕ ವಿಕಾಸವಾದ ಹಾಗೆ ಅವರ ಪ್ರತಿಭೆ, ಹೊಸಹೊಸ ರೂಪಕಗಳನ್ನು ಸೃಷ್ಟಿಸಿ ಅವರ ತಾತ್ವಿಕ ವಿಚಾರಕ್ಕೆ ಅನನ್ಯ ಅಸಾಧಾರಣವಾದ ಸೌಂದರ್ಯವನ್ನು ತಂದುಕೊಟ್ಟಿದೆ. "

             ಶ್ರೀಯುತ ಎನ್ಕೆಯವರು ಕವಿಯ ಬಗ್ಗೆ ಬರೆಯುತ್ತಾ ಹೀಗನ್ನುತ್ತಾರೆ.  "ಬೇಂದ್ರೆಯವರ ಗದ್ಯವೆಂದರೆ ಕವಿ ಬರೆಯುವ ಗದ್ಯ, ಅದರಲ್ಲಿ ಪದ್ಯದ ಛಂದ, ಲಯ, ಬೆಡಗು ಬಿನ್ನಾಣಗಳೂ ಇರುತ್ತವೆ.

          ಕವನಗಳಷ್ಟೇ ಅಲ್ಲದೆ ಬೇಂದ್ರೆಯವರು ಸಾಯೋ ಆಟ, ತಿರುಕರ ಪಿಡುಗು, ದೆವ್ವದ ಮನೆ ಮುಂತಾದ ವ್ಯಂಗ್ಯ ನಾಟಕಗಳು, ಉದ್ಧಾರ, ನಗೆಯ ಹೊಗೆ ಮುಂತಾದ ತೀಕ್ಷ್ಣ ವಿಶ್ಲೇಷಣೆಯುಳ್ಳ ನಾಟಕಗಳೂ ಸೇರಿದಂತೆ ಹದಿನಾರು ಅತ್ಯುತ್ತಮ ನಾಟಕಗಳನ್ನು ಬರೆದಿದ್ದಾರೆ.  ಹುಚ್ಚಾಟಗಳು ಅನ್ನುವ ಸಂಕಲನದಲ್ಲಿ ಹಲವು ನಾಟಕಗಳು ಅಳವಡಿಸಲ್ಪಟ್ಟಿವೆ.
          ಅರವಿಂದರ ಇಂಡಿಯನ್ ರೆನೆಸ್ಯೆನ್ಸ್ ಅನ್ನುವ ಕೃತಿಯನ್ನು ಭಾರತೀಯ ನವಜನ್ಮ ಎನ್ನುವ ಹೆಸರಿನಲ್ಲಿ ಕನ್ನಡಿಸಿದ್ದುಅರವಿಂದರ ಕಬೀರರ ವಚನಗಳನ್ನು ಅನುವಾದಿಸಿದ್ದು, ಕನ್ನಡದ ಮೇಘದೂತ- ಇನ್ನೂ ಅನೇಕ ವಿಮರ್ಶೆ, ಪ್ರಬಂಧಸಂಶೋಧನೆ, ಸಣ್ಣಕತೆ ಮುಂತಾದವೆಲ್ಲ ಬೇಂದ್ರೆಯವರು ರಚಿಸಿದ ಗದ್ಯ ಪ್ರಕಾರಗಳು.

-ಸಾಹಿತ್ಯ ಅಧ್ಯಾತ್ಮ ದೀಕ್ಷಿತವಾಗಬೇಕು
-ಸಾಹಿತ್ಯವು ಹಠಯೋಗವಲ್ಲ, ರಸಯೋಗ. ರಸ ಮತ್ತು ಜನ್ಮ ಬೇರೆಬೇರೆಯಲ್ಲ
-ಸಾಹಿತ್ಯ ಶೈಲಿಯ ಸೊಗಸಲ್ಲ, ರಂಜನೆಯ ರಸವಲ್ಲ, ಸಿಂಗರದ ಸಡಗರವಲ್ಲ. ಸತ್ಯವು ಅಮೃತವಾಗುವುದು ಇಲ್ಲಿ. ಇಲ್ಲಿ ಸತ್ಯೋಪಾಸನೆಯೂ ಬೇಕು, ನಿತ್ಯೋಪಾಸನೆಯೂ
ಬೇಕು.
-ಬುದ್ಧಿಯೋಗ ಭಾವಯೋಗ ಇವೆರಡು ಸಾಹಿತ್ಯದ ಎರಡು ಪಕ್ಷಗಳು..
-ಶಬ್ದಾರ್ಥ ದಾಂಪತ್ಯದ ಬೀಜರಹಸ್ಯವನ್ನು ಅರಿತುಕೊಂಡದ್ದಾದರೆ ಶಬ್ದವು ಮಂತ್ರವಾದೀತು, ಅರ್ಥವು ಕೇವಲ ಮಾನಸಿಕ ಆಕೃತಿಯಾಗುಳಿಯದೆ ಸಜೀವವಾಗಿ ಪರಿಣಮಿಸೀತು.


          ಇವೇ ಇಂತಹ ಸಾಹಿತ್ಯ ರಚನೆಯ ಮಾರ್ಗದಲ್ಲಿ ದಾರಿದೀಪವಾಗಬಲ್ಲ ಮಾತುಗಳ ಮೂಲಕ ಮತ್ತು ತನ್ನ ಅಪ್ಪಟ ಪ್ರೀತಿ ತುಂಬಿದ ಬರವಣಿಗೆಯ ಮಾಂತ್ರಿಕ ಶಕ್ತಿಯ ಮೂಲಕ ಕನ್ನಡ ಸಾಹಿತ್ಯ ಜಗತ್ತನ್ನು ಶ್ರೀಮಂತಗೊಳಿಸಿದ ಈ ಮಹಾನ್ ಚೇತನಕ್ಕೆ ಈ ಜನವರಿ ಮೂವತ್ತೊಂದಕ್ಕೆ ನೂರಿಪ್ಪತ್ತು ತುಂಬುತ್ತದೆ. ಅಂದಿಗೂ, ಇಂದಿಗೂ, ಬಹುಶಃ ಮುಂದಿಗೂ ಪ್ರತಿಭೆ, ಅಭಿವ್ಯಕ್ತಿ ಹಾಗೂ ಮನುಷ್ಯ ಪ್ರೀತಿ ಇವೆಲ್ಲ ವಿಷಯಗಳಲ್ಲೂ ಅನುಪಮರೆನಿಸುವ ಬೇಂದ್ರೆ ಮಾಸ್ತರರ ಅಂತಃಶಕ್ತಿಗೆ ಇದೊಂದು ಅಕ್ಷರನಮನ.