Friday, September 6, 2013

ಅವಳಂತೆ ಇವಳಲ್ಲವೇ

ಹೆಲ್ಲೊ
, ಹಾಯ್, ನಮಸ್ಕಾರ, ಗುಡ್ ಡೇ, ನೀವು ಕೇಳುತಿದ್ದೀರಿ ನೈನ್ಟಿ ಟು ಪಾಯಿಂಟ್ ಸೆವೆನ್ ಎಫ್ ಎಮ್ ನಲ್ಲಿ ಕೇಳಿರಿ ಹೇಳಿರಿ ಇದು ನಮ್ಮ ನಿಮ್ಮನಿಲುವು ಕಾರ್ಯಕ್ರಮ-------- "
ಹೀಗೆ ಅರಳು ಹುರಿದಂತೆ ಮುಂದೆ ಸಾಗುತ್ತಿದ್ದ ಆ ರೇಡಿಯೊ ಜಾಕಿಯ ಧ್ವನಿ ಕರ್ಣಾಕರ್ಷಕವಾಗಿತ್ತು. ಸುಮಾರು ಇಪ್ಪತ್ತೆರಡರಿಂದ ಇಪ್ಪತ್ತೈದರವನಾಗಿರಬಹುದಾದ ಆ ತರುಣನ ವಿಷಯಜ್ಞಾನ, ಹಾಸ್ಯಮಯ ಹಿನ್ನೆಲೆಯಲ್ಲಿ ಲಘುವಾದ ನಿಲುವುಗಳನ್ನೂ ಸ್ವಾರಸ್ಯಕರವಾಗಿ ಸಾದರಪಡಿಸುತ್ತಿದ್ದ ರೀತಿ, ಆತನೊಳಗಿನ ಜೀವನಾಸಕ್ತಿಯ ಸಹಾಯದಿಂದ ಪರ ಹಾಗೂ ವಿರುಧ್ಧ ನಿಲುವುಗಳೆರಡರ ಮಾತುಕತೆಗಳಲ್ಲೂ ಸಮವಾದ ಭಾಗವಹಿಸುವಿಕೆ, ಅಲ್ಲೂ ಸಲ್ಲುವ, ಇಲ್ಲೂ ಗೆಲ್ಲುವ ಚಾಕಚಕ್ಯತೆ, ಮಧ್ಯೆ ಮಧ್ಯೆ ಬಿಚ್ಚುದನಿಯ ನಗು, ಸ್ವಲ್ಪ ನೇರದಾರಿಯಿಂದ ಆಚೆ ಈಚೆ ಸಾಗುವ ಶ್ರೋತೃಗಳ ಮಾತಿನ ಸರಣಿಯನ್ನು ಮತ್ತೆ ತನ್ನ ದಾರಿಗೆ ಎಳೆದು ತರುವ ಚುರುಕುತನ----------
ಈ ಎಫ್. ಎಮ್. ಎಂದರೆ ಲಘುವಾದ ಕಾರ್ಯಕ್ರಮಗಳು, ತೂಕವಿಲ್ಲದ ಕಾರ್ಯಕ್ರಮ ನಿರ್ವಹಣೆಗಳು ಎಂದೇ ಭಾವಿಸಿದ್ದ ಕಾವ್ಯಾಳನ್ನು ಈ ಮಾತುಗಾರನ ವರಸೆ ಆಕರ್ಷಿಸಿ ಈ ವೇಳೆಗೆ ಸರಿಯಾಗಿ ರೇಡಿಯೋದ ಮುಂದೆ ಕೂರುವಂತೆ ಮಾಡಿತ್ತು. ಇದರ ರುಚಿ ಹತ್ತಿಸಿದ್ದು ಮಗಳು ಶ್ರಾವ್ಯಾ. ಸಂಜೆ ನಾಲ್ಕಕ್ಕೆ "ಅಮ್ಮಾ ಬಂದೇ" ಎಂದು ಒಂದೇ ಉಸಿರಿಗೆ ಓಡಿ ಬಂದವಳು ಬ್ಯಾಗ್ ಎಸೆದು ಧಡ ಧಡನೇ ಮಹಡಿ ಏರಿ ರೂಮ್ ಸೇರಿಕೊಂಡರೆ ಆರೂವರೆಯವರೆಗೂ ಅವಳು ಎಫ್ ಎಮ್ -ನ ಜೊತೆ ,ಎಫ್ ಎಮ್ ಅವಳ ಜೊತೆ. ಎಷ್ಟೋ ಬಾರಿ ನಾಲ್ಕಕ್ಕೇ ಬಂದರೂ ಆರೂವರೆಯವರೆಗೂ ಇವಳ ಮುಖ ಕಾಣುವಂತಿಲ್ಲವಲ್ಲಾ ಎಂದು ಕಾವ್ಯ ಚಡಪಡಿಸಿದ್ದುಂಟು. ಎಷ್ಟೋ ಬಾರಿ ಆ ಹಿಂದಿನ ದಿನಗಳನ್ನು ನೆನೆಸಿಕೊಂಡು ಅವಕ್ಕಾಗಿ ಕಾತರಿಸಿದ್ದೂ ಉಂಟು.
ಒಂದು ಹೊತ್ತು ಶಾಲೆಗೆ ಹೋಗುವ ಬಾಲೆ ಶ್ರಾವ್ಯಾ ಆಗ. ಒಂದುಘಂಟೆಗೆ ಬಿಡುವ ಶಾಲೆಯ ಬಳಿ ಹನ್ನೆರಡೂಮುಕ್ಕಾಲಕ್ಕೇ ಹೋಗಿ ಕಾಯ್ತಾ ಕೂತಿರುತ್ತಿದ್ದಳು ಕಾವ್ಯಾ. ಒಂದಾಗುತ್ತಲೇ ಅವಳೂ ಅಷ್ಟೆ- ಎಲ್ಲರಿಗಿಂತ ಮೊದಲು ಬ್ಯಾಗನ್ನೆತ್ತಿಕೊಂಡು ಓಡಿ ಬಂದು ಅಮ್ಮಾ ಎಂದು ತಬ್ಬಿಕೊಳ್ಳದಿದ್ದರೆ ಅವಳಿಗೆ ಸಮಾಧಾನವೇ ಇರುತ್ತಿರಲಿಲ್ಲ. "ಮುಂದಿನ ವರ್ಷ ಸಂಜೆಯ ತನಕ ಸ್ಕೂಲ್ ಇದೆ ಮರೀ" ಎಂದು ಅವಳಿಗೆ ಪ್ರಿಯವಾದ ಮಧ್ಯಾಹ್ನದ ತುತ್ತಿನೂಟ ತಿನ್ನಿಸುತ್ತಾ ವಿವರಿಸುತ್ತಿದ್ದಳು ಕಾವ್ಯಾ. "ಆಗ ನೀನೇ ಊಟ ಮಾಡಬೇಕು. ನಾನು ತಿನ್ನಿಸಲು ಬರಲಾಗದು. ಈಗ್ಲೇ ಶುರುಮಾಡಮ್ಮ" ಎಂದರೆ "ಆಗ ಹೇಗೂ ನಾನೇ ತಿನ್ನ್ಬೇಕು ಅಲ್ಲಿಯವರೆಗಾದ್ರೂ ತಿನ್ನಿಸಮ್ಮಾ" ಎನ್ನುತಿದ್ದ ಪುಟಾಣಿ ಎಷ್ಟೋ ಬಾರಿ "ಮುಂದಿನ ವರ್ಷ ನಿನ್ನನ್ನು ಸಂಜೆಯವರೆಗೂ ಬಿಟ್ಟಿರಬೇಕಲ್ಲಮ್ಮಾ" ಎಂದು ಕಣ್ಣೀರಿಟ್ಟದ್ದಿತ್ತು. ಅದೇ ಪುಟ್ಟಮರಿ ಈಗ ಐದಡಿ ಎರಡು ಇಂಚಿನ ಷೋಡಶಿ. ಹಿಂದಿನವರ್ಷವಷ್ಟೇ ಕಾಲೇಜು ಸೇರಿರುವ ತನ್ನ ಮಗಳು ನೋಡನೋಡುತ್ತಿದ್ದಂತೆ ಜಗತ್ತಿನಲ್ಲಿ ಎಲ್ಲರೂ ಮಾಡುವಂತೆ ಅಪ್ರಯತ್ನವಾಗಿ ಮೃದುತನ ಕಳೆದುಕೊಂಡು ಕಾಠಿಣ್ಯತೆ ಮೈಗೂಡಿಸಿಕೊಳ್ಳುತ್ತಿರುವಳಲ್ಲಾ ಅನ್ನಿಸಿತು.ಅವಳು ರೂಮ್ ಸೇರಿ ಬಾಗಿಲು ಮುಚ್ಚಿಕೊಳ್ಳುತ್ತಿದ್ದಾಗ ಕುತೂಹಲದಿಂದ ತಾನು ಒಳಗೆ ಇಣುಕಹೋದರೆ ಅವಳಿಗದು ಇಷ್ಟವಾಗುತ್ತಿರಲಿಲ್ಲ. ಹಾಗಾಗಿ ಹೆಚ್ಚಾಗಿ ಕಾವ್ಯಾ ಅವಳನ್ನು ಹಿಂಬಾಲಿಸುತ್ತಿರಲಿಲ್ಲ. ಹೀಗೆ ಮೊದಲೊಂದು ಬಾರಿ ಅವಳ ಹಿಂದೆ ಹೋಗಿದ್ದಾಗ ಅವಳು ಕೇಳುತ್ತಿದ್ದ ಎಫ್. ಎಮ್. ನ ಚರ್ಚೆಯ ವಿಷಯ, ಆ ವಾದಸರಣಿಯ ಧಾಟಿಯನ್ನು ಗಮನಿಸಿ "ಏನಮ್ಮಾ ಚಿನ್ನೀ ನೀನೂ ಹೀಗೇ ಯೋಚಿಸ್ತೀಯಾ?" ಅಂದಿದ್ದಳು. "ಇಲ್ಲಮ್ಮಾ, ಇದರ ವಿಶಿಷ್ಠತೆನೇ ಇದು. ಒಂದೇ ವಿಷಯದ ಬಗ್ಗೆ ಪರ ಹಾಗೂ ವಿರುಧ್ಧ ಎರಡೂ ತರದ ವಾದಗಳು ನಡೆಯುತ್ತವೆ. ಹೆಚ್ಚಿನವರು ಕಾಲೇಜಿನ ಮಕ್ಕಳೇ ಭಾಗವಹಿಸುತ್ತಾರೆ. ಹಾಗಾಗಿ ನಮ್ಮ ನಿಲುವುಗಳೇನೇ ಇದ್ದರೂ ಅದರ ಒಳಿತು ಕೆಡುಕುಗಳನ್ನು ಚರ್ಚಾರೂಪದಲ್ಲಿ ಕೇಳಿ ಒಂದೋ ನಮ್ಮ ನಿಲುವು ಭದ್ರವಾಗುತ್ತದೆ ಇಲ್ಲಾ ಬದಲಾಗುತ್ತದೆ. ಸಾಕಷ್ಟು ಪುಷ್ಠಿ ಪಡೆದ ನಿಲುವು ನಮ್ಮದಾಗುವುದು ಒಳ್ಲೆಯದಲ್ಲ್ವಾ ಅಮ್ಮ? ಕೆಲವೊಮ್ಮೆ ಅಮ್ಮಂದಿರೂ ಈ ನೇರಪ್ರಸಾರದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತುಕತೆಗೆ ತಮ್ಮ ಅನುಭವದ ಮೆರುಗು ನೀಡುತ್ತಾರೆ. ಆಗ ನಿಲುವುಗಳು ಇನ್ನಷ್ಟು ಸುಂದರವಾಗುತ್ತವೆ- ಮತ್ತು ಹೆಚ್ಚಿನ ಆಧಾರ ಪಡೆಯುತ್ತವೆ. ನಮ್ಮ ಯೋಚನೆಗೆ ಸಾಕಷ್ಟು ಗ್ರಾಸ ಸಿಕ್ಕುವುದಂತೂ ಖಂಡಿತಾ. ಈ ಜೀವನ್ ನಡೆಸುವ ನಮ್ಮ ನಿಮ್ಮ ನಿಲುವು ಕಾರ್ಯಕ್ರಮ ಮತ್ತೆ ನಿವೇದಿತಾ ನಡೆಸುವ ಇದೇ ನನ್ನ ಉತ್ತರ ಕಾರ್ಯಕ್ರಮಗಳು ಎರಡು ಘಂಟೆಗಳ ಕಾಲ ನನ್ನ ಕಟ್ಟಿಹಾಕುವಷ್ಟು ಮೋಡಿ ಮಾಡಿ ಬಿಟ್ಟಿವೆಯಮ್ಮಾ" ಅಂದಿದ್ದಳು." ಒಂದೈದೇ ನಿಮಿಷ ಕೇಳಿ ಗಾಭರಿಯಾಗ್ಬೇಡಮ್ಮಾ, ಕೂತ್ಕೋ ಪೂರ್ತಿ ವಿಷಯ ಕೇಳು" ಎಂದು ಕೈ ಹಿಡಿದು ಕೂರಿಸಿಕೊಂಡಿದ್ದಳು. ಕೇಳುತ್ತಾ ಕೇಳುತ್ತಾ ಕಾವ್ಯಾಳ ಮನ ಹಗುರಾಗಿತ್ತು, ತಿಳಿಯಾಗಿತ್ತು, ಸ್ವಲ್ಪ ಗೆಲುವಾಗಿದ್ದೂ ನಿಜವೇ. ಕಾವ್ಯಾ ಗಾಭರಿಯಾಗಲು ಕಾರಣವೇನೆಂದರೆ ಅಂದು ಜೀವನ್ ಕೊಟ್ಟಿದ್ದ ವಿಷಯ "ಲೈಂಗಿಕ ಶಿಕ್ಷಣ ಶಾಲೆಗಳಲ್ಲಿ ಬೇಕೇ ಬೇಡವೇ" ಎಂದಾಗಿತ್ತು. ಮೊದಲಿಗೆ ಕಾವ್ಯಾ ಕೇಳಿಸಿಕೊಂಡ ಮಾತುಕತೆ "ಬೇಕು" ಎಂಬುದಕ್ಕೆ ಪೂರಕವಾಗಿದ್ದು, ತಲೆಯಾಡಿಸುತ್ತಾ ಕೇಳುತ್ತಿದ್ದ ಮಗಳ ಮುಖಚರ್ಯೆ ಆ ಮತುಕತೆಗೇ ಬೆಂಬಲವಾಗಿದ್ದಂತೆ ಅನ್ನಿಸಿ ತಾಯಿ ಮನ ಕಸಿವಿಸಿಗೊಂಡಿತ್ತು. ಆಮೇಲೆ "ಬೇಡ" ಎಂಬುವುದಕ್ಕೆ ಪೂರಕವಾಗಿಯೂ ನಡೆದ ಚರ್ಚೆ ಕೇಳಿ ಮನ ತಿಳಿಯಾಗಿತ್ತು. ಅಂದಿನಿಂದ ಪ್ರತೀದಿನ ಬೆಳಿಗ್ಗೆ ಮುಂಚಿನ ದಿನದ ಕಾರ್ಯಕ್ರಮ ಮರುಪ್ರಸಾರವಾಗುವ ವೇಳೆ ತನ್ನೆಲ್ಲ ಕೆಲಸ ಮುಗಿಸಿ ಚಹಾದ ಕಪ್ ನೊಂದಿಗೆ ರೇಡಿಯೋದೆದುರು ಹಾಜರಾಗುತ್ತಿದ್ದಳು ಕಾವ್ಯಾ.
ಇಂದು ಆತನಿತ್ತ ವಿಷಯ "ಮದುವೆ ಜೀವನಾನಂದಕ್ಕೆ ಪೂರಕವೇ ಮಾರಕವೇ" ಎಂದಾಗಿತ್ತು. ಈಗ ಹದಿನೈದು ವರ್ಷಗಳ ಹಿಂದೆ- ವಯಸ್ಸು ಮೂವತ್ತಾದರೂ ಇನ್ನೂ ಮದುವೆ ಒಲ್ಲೆ ಎನ್ನುತ್ತಿದ್ದ ದೊಡ್ಡಪ್ಪನ ಮಗನನ್ನು " ಯಾವಗಲೋ ಮುರಳಿ ಮದುವೆ?" ಎಂದು ಕೇಳಿದ್ದ ಸಂದರ್ಭ ನೆನಪಾಯಿತು. "ಬಿಡಿ ಅಕ್ಕಾ ಇನ್ನೂ ಒಂದೆರಡು ವರ್ಷ ಆರಾಮಾಗಿರ್ತೇನೆ, ಆಮೇಲೆ ಮದುವೆ" ಎಂದಾತ ಅಂದಾಗ " ಯಾಕೋ ತಮ್ಮಾ ಮದುವೆ ಅಂದರೆ ಅರಾಮ ಎಲ್ಲ ಮುಗಿದುಹೋದಂತೆ ಎಂದು ಯಾಕಂದುಕೊಳ್ಳಬೇಕು? ಅದು ಹಾಗಲ್ಲಾಪ್ಪಾ-----" ಎಂದೆಲ್ಲಾ ಒಂದೈದು ನಿಮಿಷ ಬಡಬಡಿಸಿ ಆತನ ಯೋಚನೆಯೇ ತಪ್ಪೆಂಬಂತೆ ಬಾಯಿ ಮುಚ್ಚಿಸಿದ್ದಳು. ಆದರೆ ಈಗ? ಬಾಳಿನಲ್ಲಿ ಮಧುರವೆಂದೋ, ಬೇಕೇ ಬೇಕು ಎಂದೋ, ಅನಿವಾರ್ಯವೆಂದೋ ಸುತ್ತಿಕೊಳ್ಳುವ ಬಂಧನಗಳೆಲ್ಲ ಮನಸ್ಸಿನ ಗೋಜಲನ್ನು ಇನ್ನಷ್ಟು ಕ್ಲಿಷ್ಟವಾಗಿಸುತ್ತವೆ ಎಂಬ ಸತ್ಯ ಗೋಚರವಾಗಿರುವ ಕಾವ್ಯಾಳಿಗೆ ಸಂಬಂಧಗಳ ಬಗ್ಗೆ ಯಾವುದೇ ನಿಲುವನ್ನೂ ಮುಂಚಿನಷ್ಟು ನಿಖರವಾಗಿ ಪ್ರಸ್ತುತ ಪಡಿಸುವುದು ಸಾಧ್ಯವಾಗದು, ಯಾಕೆಂದರೆ ನಿಖರನಿಲುವೊಂದನ್ನು ಹೊಂದುವುದೂ ಈಗ ಆಕೆಗೆ ಸಾಧ್ಯವಾಗದು. ಆದರೆ ಹಿಡಿದ ಮಾತಿನ ಎಳೆಯನ್ನು ಅತ್ತ ಇತ್ತ ಗೋಜಲಾಗಗೊಡದೆ ಭದ್ರವಾಗಿರಿಸಿಕೊಂಡು, ತಮ್ಮ ಮೂಗಿನ ನೇರಕ್ಕೇ ಪ್ರತಿಪಾದಿಸುವ ಮಕ್ಕಳ ವಾದ ಹಿತವಾಗಿತ್ತು. ಒಪ್ಪುವಂತಿಲ್ಲದಿದ್ದರೂ, ಸಾರಾಸಗಟಾಗಿ ನಿರಾಕರಿಸುವಂತೆಯೂ ಇರಲಿಲ್ಲ. ತೀರಾ ಪರಿಚಿತವೆನಿಸುವ ಒಂದು ದನಿ ಮಾತಾಡತೊಡಗಿತು. " ಮದುವೆ ಎಂಬುದನ್ನು ಸುಖದ ಸುಪ್ಪತ್ತಿಗೆಯ ಅನುಭವವೇ ಎಂದು ನಮ್ಮದಾಗಿಸಿಕೊಳ್ಳ ಹೊರಟರೆ ಭ್ರಮನಿರಸನವಾಗುವುದಂತೂ ಖಂಡಿತಾ. ಈಗ ನೋಡಿ ನಮ್ಮ ಅಪ್ಪ ಅಮ್ಮನ ಜೊತೆಗಿನ ಬಾಳು ನಾವಾಗಲಿ, ಅವರಾಗಲಿ ಬಯಸಿ ಪಡೆದದ್ದಲ್ಲ. ಆದರೆ ವಿಧಿಯ ಆಣತಿಯಂತೆ ನಾವೆಲ್ಲ ಒಂದು ಪರಿವಾರವೆನಿಸಿಕೊಂಡಿದ್ದೇವೆ. ಇಲ್ಲಿ ನಾವು ಹೆಚ್ಚಿನ ವಿಷಯಗಳನ್ನು ತೀರಾ ಸ್ವಾಭಾವಿಕವೆಂಬಂತೆ ಒಪ್ಪಿಕೊಂಡಿರುತ್ತೇವೆ. ಮುನಿಸುಗಳ ಆಯುಷ್ಯ ಹೆಚ್ಚಿರುವುದಿಲ್ಲ, ಪ್ರೀತಿ ಎಲ್ಲ ಸಂಭಾವ್ಯ ಎಡೆಗಳಲ್ಲೂ ಇಣುಕಿ ಇಣುಕಿ ಹೊರಸೂಸುತ್ತಿರುತ್ತದೆ, ಕ್ಷಮೆ ಸುತ್ತಲೆಲ್ಲ ಆವರಿಸಿರುತ್ತದೆ. ಅತೃಪ್ತಿಯನ್ನು ಶಮನ ಮಾಡಲು ಈ ಎರಡೂ ತುಂಬಾ ಶ್ರಮಿಸಿ ಕೊನೆಗೆ ತಾಳ್ಮೆಯ ಸಹಾಯದಿಂದ ಸದಾ ಒಬ್ಬರನ್ನೊಬ್ಬರು ಒಪ್ಪಿಕೊಳ್ಳುವಂತೆ ನಮ್ಮ ಬಾಳನ್ನು ರೂಪಿಸುತ್ತವೆ.ನಾವು ಯಾವತ್ತೂ ಅಪ್ಪ ಅಮ್ಮನಿಂದ ಭಾವನಾತ್ಮಕವಾಗಿ ಬೇರ್ಪಡುವ ಬಗ್ಗೆ ಯೋಚಿಸುವುದೇ ಇಲ್ಲ. ಇಂಥಹುದೇ ಒಂದು ಸುಂದರ ಬೆಸುಗೆ ಮದುವೆಯ ಪರಿಣಾಮವಾದರೆ ಅದು ಜೀವನಾನಂದಕ್ಕೆ ಪೂರಕವೇ ಹೌದು. ನಿಜ, .ಅಪ್ಪ ಅಮ್ಮ ಮಕ್ಕಳ ಹೊಂದಾಣಿಕೆ ಕರುಳಬಳ್ಳಿಯ ಮೂಲಕ ಅದರಷ್ಟಕ್ಕೆ ಬಂದದ್ದಾಗಿರುತ್ತದೆ. ಆದರೆ ಮದುವೆಯ ಬಂಧನವೇರ್ಪಡುವಾಗ ಅಲ್ಲಿ ಈ ತರಹದ ಬೆಸುಗೆಯ ಸಾಕ್ಷಾತ್ಕಾರಕ್ಕಾಗಿ ನಾವು ತುಂಬಾ ಯತ್ನಿಸಬೇಕಾಗುತ್ತದೆ. ನಾನು ಎಂಬುದು ಕಳೆದುಹೋಗಬೇಕಾಗಿಲ್ಲ- ಆದರೆ ಸಂಗಾತಿಯೊಳಗೆ ಮಿಳಿತವಾಗಬೇಕು. ಆದಾಗ್ಗ್ಯೂಅಲ್ಲಿ ನನ್ನತನ ಆ ವ್ಯಕ್ತಿತ್ವದೊಳಗೆ ವಿಶಿಷ್ಠವಾಗಿರಬೇಕು. ಆ ಎರಡು ವ್ಯಕ್ತಿತ್ವಗಳು ಪರಸ್ಪರ ಗುದ್ದಾಡದೇ ಮುದ್ದಾಡುವಂತಿರಬೇಕು. ಆದರ್ಶದ, ಅಸಂಭವ ಮಾತೆನಿಸಿದರೂ ಕಷ್ಟ ಪಟ್ಟು ಸಾಧಿಸಿದರೆ ಅಸಾಧ್ಯವೆನಿಸಲಾರದು" ಅರೇ!! ಇದು ನನ್ನ ಪುಟಾಣಿಯ ದನಿಯಲ್ಲವೇ? ಎಷ್ಟೊಂದು ಯೋಚಿಸುತ್ತಾಳೆ ನನ್ನ ಮಗಳು! ಇಷ್ಟೊಂದು ತಿಳಿದುಕೊಳ್ಳಬಲ್ಲ ಮನಸು ಅಷ್ಟೇ ಸರಳವಾಗಿ ಜೀವನವನ್ನು ಆದರ್ಶಗೊಳಿಸಬಲ್ಲದಾದರೆ ನನಗಿನ್ನೇನು ಬೇಕು ಅನ್ನಿಸಿತು ಕಾವ್ಯಾಳಿಗೆ. ಇದು ನನ್ನ ಆರೈಕೆಯ ಫಲ.... ನಾನು ಬೆಳೆಸಿದ ಭಾವನೆಗಳು...... ನನ್ನ ತಪಸ್ಸಿನ ವರ..... ಎಂದೆನಿಸಿ ಎದೆ ತುಂಬಿ ಬಂತು ಇನ್ನೂ ವಾದ ವಿವಾದಗಳು ಮುಂದುವರೆದಿದ್ದವು. ಕಿವಿಗಳು ರೇಡಿಯೋ ಕೇಳುತ್ತಿದ್ದರೂ ಕಾವ್ಯಾಳ ಯೋಚನೆಗಳು ಧಾವಿಸಿ ಹಿಂದಕ್ಕೋಡಿದವು. ತನ್ನ ಜೀವನದಲ್ಲಿ ಪ್ರೀತಿಯನ್ನೂ , ಮದುವೆಯೆಂಬ ವ್ಯವಸ್ಥೆಯನ್ನೂ ಉಳಿಸಲು ಹೆಣಗಿದ್ದು ನೆನೆದು ಕಣ್ತುಂಬಿ ಬಂತು.
ಬಯಸಿ ಮದುವೆಯಾದ ಗಂಡ, ಪ್ರೀತಿಸುವ ಅತ್ತೆ ಮಾವ, ಮಡಿಲು ತುಂಬಿದ್ದ ಮುದ್ದುಶ್ರಾವ್ಯಾ- ಈ ಪುಟ್ಟ ಸಂಸಾರದಲ್ಲಿ ಬಹಳ ಅದೃಷ್ಟವಂತೆ ತಾನೆಂದುಕೊಂಡು ಬಾಳುತ್ತಿದ್ದ ದಿನಗಳವು. ಇದ್ದಕ್ಕಿದ್ದಂತೆ ಕಂಕುಳ ಕೆಳಗೆ ಕಾಣಿಸಿಕೊಂಡ ಅಸ್ವಾಭಾವಿಕವಾದ ನೋವು ಮತ್ತು ಒಂದ್ದು ಗಡ್ಡೆ - ತನ್ನೊಳಗೆ ಮೌನವಾಗಿ ಕುಳಿತು ತನ್ನನ್ನು ಕಬಳಿಸಲು ಹೊಂಚು ಹಾಕುತ್ತಿದ್ದ ಕ್ಯಾನ್ಸರ್ ಎಂದು ತಿಳಿದಾಗ ಭೂಮಿಗಿಳಿದು ಹೋಗಿದ್ದಳು. ಅಲ್ಲಿಂದ ಮೊದಲಾಗಿತ್ತು ಚಿಕಿತ್ಸೆ- ಕೆಲವೊಮ್ಮೆ ಒಳ್ಳೆಯ ಪ್ರತಿಫಲ , ಕೆಲವೊಮ್ಮೆ ಕಾಯಿಲೆಯ ಉಲ್ಬಣಿಸುವಿಕೆ, ಕೆಲವು ಅಡ್ಡ ಪರಿಣಾಮಗಳು------ ಇವೇ ಮುಂತಾದುವುಗಳ ಮಧ್ಯೆ ವರ್ಷಗಳೆರಡು ಕಳೆದುಹೋಗಿದ್ದವು. ಆಗ ಈ ಶ್ರಾವ್ಯಾ ನಾಲ್ಕು ವರ್ಷದ ಬಾಲೆ. ದಿನ ಕಳೆಯುತ್ತಿದ್ದಂತೆ ಬಾಹ್ಯವಾಗಿ ಸ್ಪಷ್ಟವಾಗಿ ಗೋಚರವಾಗುವ ವಿಷಯಗಳೊಂದಿಗೆ ಪತಿ ವಿನಯ್ ನ ಸ್ವಭಾವದಲ್ಲೂ ಸ್ವಲ್ಪ ವ್ಯತ್ಯಾಸ ಕಾಣತೊಡಗಿತ್ತು. ಆದರೂ ಅದು ಸ್ವಾಭಾವಿಕ, ತೀರಾ ಮೂವತ್ನಾಲ್ಕು ವರ್ಷಕ್ಕೇ ಅವನು ಹೆಂಡತಿಯಿದ್ದೂ ಇಲ್ಲದವನಂತೆ ಬಾಳಬೇಕಾದ ಅನಿವಾರ್ಯತೆಯಿಂದಾಗಿ ತನ್ನೆಡೆಗೆ ಸ್ವಲ್ಪ ಉದಾಸೀನ ಭಾವ ತಳೆದಿದ್ದಾನೆ ಅನ್ನಿಸುತ್ತಿತ್ತು. ಆ ಹೊಡೆತದ ಪರಿಣಾಮವೇ ತನ್ನ ನೋವುಗಳೆಡೆಗೆ ಸ್ವಲ್ಪ ಕಿವುಡು.... ತನ್ನ ಅಳುನಗೆಗಳೆಡೆಗೆ ಸ್ವಲ್ಪ ಕುರುಡು..... ತನ್ನ ಪ್ರೀತಿಗೆ ಸ್ವಲ್ಪ ಅನಾದರ...ಗಳೆಂದೂ, ಇವನ್ನೆಲ್ಲ ಸಹಜವೆಂದೇ ಭಾವಿಸುತ್ತಾ ದಿನಕಳೆಯುತ್ತಿದ್ದಳು. ಆದರೊಂದು ದಿನ ತನ್ನೆಡೆಗಿನ ಈ ಉದಾಸೀನ ಇನ್ನೊಂದೆಡೆ ಮನಸು ನೆಟ್ಟಿದ್ದರ ಪರಿಣಾಮವೆಂದರಿವಾದಾಗ ತನ್ನನ್ನು ಕಿತ್ತು ತಿನ್ನುತ್ತಿದ್ದ ಕಾಯಿಲೆಗಿಂತಲೂ ದೊಡ್ಡ ಪೆಟ್ಟು ಬಿದ್ದಂತಾಗಿ ಪೂರ್ತಿಯಾಗಿ ಬಸವಳಿದುಬಿಟ್ಟಿದ್ದಳು.
ಆದರೆ ಬಹುಶಃ ಒಳ್ಳೆಯತನಕ್ಕೆ ಸಿಕ್ಕುವ ಪ್ರತಿಫಲ ನಾವು ಮುಂದೆಯೂ ಒಳ್ಳೆಯವರಾಗಿಯೇ ಬಾಳಬಲ್ಲ ಆತ್ಮಸ್ಥೈರ್ಯ ಮತ್ತು ವ್ಯತಿರಿಕ್ತ ಸಂದರ್ಭವನ್ನೂ ನಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಬೇಕಾದ ಸಮಯೋಚಿತ ವ್ಯವಧಾನಗಳೆಂದು
ತೀವ್ರವಾಗಿ ನಂಬಿದ್ದ ಕಾವ್ಯಾಳ ನಂಬಿಕೆ ಮುಂದಿನ ದಿನಗಳಲ್ಲಿ ಬಲವಾಯಿತು
. ಒಳಗಿನ ರೋಧನವನ್ನು ಆನಂತರ ಕಣ್ಣೀರಾಗಿ ಹೊರಹರಿಯಬಿಡಲಿಲ್ಲ. ಒಳಗೇ ಶೇಖರಿಸಿ ಮುಂದೊಮ್ಮೆ ಸ್ಫೋಟಿಸಬೇಕಾದ ಧೈರ್ಯದುಂಡೆಯನ್ನಾಗಿ ಘನೀಕರಿಸುತ್ತಾ ಬಾಳಿದಳು. ಬರುಬರುತ್ತಾ ತನ್ನದೆನುವ ಎಲ್ಲದರೆಡೆಗೆ, ಕೊನೆಗೆ ಮಗುವಿನೆಡೆಗೂ ತುಂಬಾ ಅನಾದರ ತೋರತೊಡಗಿದ ಪತಿಯ ಬುಧ್ಧಿ ಗೊಂದಲಗೊಂಡು ಮಂಕಾಗಿದೆ, ದುರ್ಬಲವಾಗಿದೆ ಎಂದರಿವಾದಾಗ ಇದೇ ಆತನನ್ನು ಆ ಕಡೆಯಿಂದ ಈ ಕಡೆಗೆ ಸೆಳೆಯಬೇಕಾದ ಸರಿಯಾದ ಸಮಯವೆಂದರಿತ ಕಾವ್ಯಾ ದೈವದೊಲುಮೆಯ ಸಹಾಯದಿಂದ ಆ ಕೆಲಸ ಮಾಡುವಲ್ಲಿ ಸಫಲಳಾದಳು. ಅವಳ ಕಾಯಿಲೆಯೂ ಸುಮಾರಾಗಿ ಗುಣವಾಗುತ್ತಾ ಬಂದಿತ್ತು. ಆ ಇನ್ನೊಂದು ಸಂಬಂಧವೂ ಹಳತಾಗುತ್ತಾ, ಹಳಸುತ್ತಾ ಬಂದಿತ್ತು. ಕೆಲವುಸಲ ಸಂದರ್ಭದ ಹಿಡಿತಕ್ಕೊಳಗಾಗಿ ತಪ್ಪೆಸಗುತ್ತಿರುವ ಸಜ್ಜನರ ಮನ ತಪ್ಪಿತಸ್ಥ ಭಾವನೆಯ ಭಾರದಿಂದ ದುರ್ಬಲವಾಗಿರುತ್ತದೆ. ಆ ಮನೋಸ್ಥಿತಿಯಲ್ಲಿ ಸ್ವಲ್ಪವೇ ಪ್ರತಿಕೂಲ ಪರಿಸ್ಥಿತಿ ಎದುರಾದರೂ ಸಾಕು, ಅಲ್ಲಿಂದ ತಪ್ಪಿಸಿಕೊಂಡು ಬರಲನುವಾಗಿರುವ ಅವರು ಅಲ್ಲಿ ಸುಖವಿದ್ದರೂ ಅದನ್ನು ಮನಸಾರೆ ಅನುಭವಿಸಲಾರರು. ಆ ಕಡೆಗಿನ ಎಳೆ ದುರ್ಬಲವಾದದ್ದು ಅರಿವಾದಂತೆ ಕಾವ್ಯಾ ಅತಿಯಾದ ತಾಳ್ಮೆಯಿಂದ ಅವರನ್ನು ಬರೇ ಪ್ರೀತಿಸತೊದಗಿದಳು. ತನ್ನವರನ್ನು ಅವರು ತನ್ನವರೆನ್ನುವ ಕಾರಣಕ್ಕಾಗಿ ಮಾತ್ರ ಪ್ರೀತಿಸುವುದೇ ನಿಜವಾದ ಪ್ರೀತಿ ಎಂದೆಲ್ಲೋ ಓದಿದ್ದಾಗ ಅದು ಬೊಗಳೆ ಎಂದುಕೊಂಡಿದ್ದವಳು ಈಗ ತನ್ನ ಬಾಳನಾವೆ ಮುಳುಗಗೊಡಬಾರದೆಂಬ ಅಗತ್ಯದಲ್ಲಿ ತನಗರಿವಿಲ್ಲದಂತೆ ಅದನ್ನು ಅಕ್ಷರಶಃ ಪಾಲಿಸತೊಡಗಿದ್ದಳು. ಅವರನ್ನು ಪ್ರೀತಿಸುತ್ತೇನೆ ಎಂದು ನೂರಾರು ಬಾರಿ ತನಗೇ ಹೇಳಿಕೊಂಡು ಅದರಂತೆ ನಡೆಯುತ್ತಿದ್ದಳು. ಆಗೆಲ್ಲ ತನ್ನತನಕ್ಕೆ ಬೀಳುತ್ತಿದ್ದ ಪೆಟ್ಟು, ತಾನೇ ತನ್ನ ಭಾವನೆಗಳನ್ನು ಹಗುರಾಗಿಸಿ ತನಗೆಸಗಿಕೊಳ್ಳುತ್ತಿದ್ದ ಅವಮಾನಗಳನ್ನು ಲವಲೇಶವೂ ಲೆಕ್ಕಿಸದೇ, ಹೊರಗೆ ತೋರದೇ, ತನ್ನೊಳಗೆ ಹುದುಗಿಸಿಕೊಂಡ ತನ್ನೆದೆ ತುಂಬಾ ವಿಶಾಲವೆಂದು ಬೀಗುವುದಷ್ಟೇ ಅವಳ ಕೆಲಸವಾಗಿತ್ತು ಆ ದಿನಗಳಲ್ಲಿ. ಆದರೆ ಪ್ರತಿಫಲ ಸಿಕ್ಕಿತು. ಮೊದಮೊದಲು ಬಲವಂತವಾಗಿ ಅಳವಡಿಸಿಕೊಂಡ ಧನಾತ್ಮಕ ಪ್ರೀತಿ ಬರುಬರುತ್ತಾ ಸ್ವಾಭಾವಿಕವೆಂಬಂತೆ ಆಕೆಯ ಗುಣವಾಗಿಬಿಟ್ಟಿತು. ಅನಾಯಾಸವಾಗಿ ಪತಿಯ ತಪ್ಪನ್ನೆಲ್ಲ ಒಪ್ಪಿಕೊಂಡು ಅವರನ್ನು ತೀವ್ರವಾಗಿ ಅರಾಧಿಸತೊಡಗಿದ್ದಳು. ಆತನೂ ಒಲಿದರು, ವಿಧಿಯೂ ಮಣಿಯಿತು, ತನ್ನಷ್ಟಕ್ಕೆ ಪೂರ್ಣಪ್ರಮಾಣದ ಗಮನವನ್ನರಸುತ್ತಾ ಆ ಇನ್ನೊಬ್ಬಾಕೆಯೂ ಹೊರಟುಹೋದಳು. ಜೀವನ ಮತ್ತೆ ಮೊದಲಿನ ತನ್ನದೇ ಹಳಿಗಳ ಮೇಲೆ ಚಲಿಸತೊಡಗಿತು.
ತುಂಬಿದ ಕಣ್ಣುಗಳಲ್ಲಿ ಮುಗುಳ್ನಗು ಸೂಸುತ್ತಾ ಕುಳಿತಿದ್ದ ತಾಯಿಯ ಭಂಗಿ ಶ್ರಾವ್ಯಾಳಿಗೆ ತುಂಬಾ ಸುಂದರವೆನಿಸಿತು. "ಅಮ್ಮಾ" ಎಂದು ಕರೆದು ಮುತ್ತಿಕ್ಕಿದಾಗಲೇ ಕಾವ್ಯ ಇಂದಿಗಿಳಿದದ್ದು.
"
ಬೇಗ ಬಂದಿಯೇನೇ ಬಂಗಾರೀ?" ಎನ್ನುತ್ತಾ ಎದ್ದಳು.
"
ಹೌದಮ್ಮಾ ಕ್ಲಾಸ್ ಗಳಿರಲಿಲ್ಲ. ಎಲ್ಲರೂ ಕಾಲೇಜುಡೇ ತಯಾರಿಗಳಲ್ಲಿದ್ದಾರೆ, ನಾನು ಬಂದುಬಿಟ್ಟೆ"ಅಂದಳು ಶ್ರಾವ್ಯಾ.
"
ಸರಿ ಕೈಕಾಲು ತೊಳ್ಕೊಂಡು ಬಾ ಬಿಸಿಬಿಸಿ ಬೋಂಡಾ ಮಾಡ್ತೀನಿ" ಆನ್ನುತ್ತಾ ಅಡುಗೆಮನೆಗೆ ನಡೆದವಳ ಕೈ ಹಿಡಿದು ಮುದ್ದುಸುರಿಯುವ ದೃಷ್ಟಿಯಿಂದ ಅವಳೆದುರು ಮುಖ ತಂದು ನುಡಿದಳು ಶ್ರಾವ್ಯಾ: " ಈಗಲೆ ಬೇಡಾಮ್ಮಾ, ಬಾ ನಿನಗೊಂದು ಅಚ್ಚರಿ ಕಾದಿದೆ" ಕೈಹಿಡಿದು ಹಾಲ್ ಗೆ ಕರೆತಂದಳು. ಅಲ್ಲಿ ಸೋಫಾದ ಮೇಲೆ ಕುಳಿತಿದ್ದ ತರುಣನ್ನು ಪರಿಚಯಿಸಿದಳು "ಅಮ್ಮಾ ನನ್ನ ಫ್ರೆಂಡ್, ಜೀವನ್".
"
ನಮಸ್ಕಾರ" ಕೈ ಜೋಡಿಸಿದವಳಿಗೆ ಪ್ರತಿಯಾಗಿ "ನಮಸ್ಕಾರ ಆಂಟಿ" ಎಂದ. ಗೋಡೆಗೊರಗಿಸಿಟ್ಟಿದ್ದ ಎರಡು ಊರುಗೋಲುಗಳ ಮೇಲೆ ನೆಟ್ಟಿದ್ದ ತಾಯಿಯ ಪ್ರಶ್ನಾರ್ಥಕ ದೃಷ್ಟಿಗೆ ಉತ್ತರಿಸಿದಳು ಮಗಳು. " ಅಮ್ಮಾ, ಜೀವನ್ ಏಳು ವರ್ಷದವನಿದ್ದಾಗಲೇ ಅಪಘಾತವೊಂದರಲ್ಲಿ ಕಾಲು ಕಳೆದುಕೊಂಡ.ಹಾಗಾಗಿ ಇದರ ಸಹಾಯ ಬೇಕೇ ಬೇಕು." ಪೆಚ್ಚಾದ ಕಾವ್ಯಾ ಮೆಲ್ಲಗೆ "ಸಾರಿ ಜೀವನ್" ಎಂದಳು. "ಅಯ್ಯೋ ಬಿಡಿ ಆಂಟಿ ಹೋದದ್ದ್ಯಾವುದೂ ನಮ್ಮದಲ್ಲ" ಅನ್ನುತ್ತಾ ನಕ್ಕ ಆತನ ದನಿ ಪರಿಚಿತವೆನಿಸಿತು. ಮೊದಲ ಭೇಟಿಯಲ್ಲೇ ತೀರಾ ಪರಿಚಿತವೆನಿಸುವ ಕೆಲವು ವ್ಯಕ್ತಿತ್ವಗಳನ್ನು ನೋಡಿದ್ದ ಕಾವ್ಯಾಳಿಗೆ ಆ ಗಳಿಗೆಗೆ ಈತನೂ ತುಂಬಾ ಪರಿಚಿತನೆನಿಸಿದ. "ಕಾಲಷ್ಟೇ ಅಲ್ಲ ಆಂಟಿ ನಮ್ಮಪ್ಪ ಅಮ್ಮನೂ ನನ್ನ ಒಂಟಿಯಾಗಿಸಿ ಬಿಟ್ಟು ಹೊಗಿಬಿಟ್ಟ್ರು, ಆದ್ರೆ ಸದ್ಯ ಬೇಕಾದಷ್ಟು ಆಸ್ತಿ ಬಿಟ್ಟು ಹೋಗಿದ್ದಾರೆ, ಅದನ್ನೂ ಕೊಂಡೊಯ್ದಿದ್ದರೆ ನನ್ನ ಗತಿ ಹೇಳಿ ಆಂಟಿ" ಮತ್ತೆ ಬಿಚ್ಚುನಗು. ತಟ್ಟನೇ ಹೊಳೆಯಿತು ಕಾವ್ಯಾಳಿಗೆ- "ಈತನೇ ಆ ಎಫ್ ಎಮ್ ನ ಚಾಲಾಕಿ ಹುಡುಗ ಜೀವನ್ ಅಲ್ಲ್ವೇನೆ ಮರೀ? " ಕೇಳಿದವಳ ಕಣ್ಣಲ್ಲಿ ಆತನೆಡೆ ಒಬ್ಬ ಅಭಿಮಾನಿಯ ಪ್ರೀತಿಯ ಹೊಳಪು. "ಹೌದು ಆಂಟಿ" ಎಂದು ಕೂತಲ್ಲಿಂದಲೇ ಬಗ್ಗಿ ತನ್ನ ಕಾಲುಮುಟ್ಟಿ ನಮಸ್ಕರಿಸಿದವನನ್ನು " ದೇವರು ಚೆನ್ನಗಿಟ್ಟಿರಲಿ ಕಂದಾ" ಎಂದು ಮನಸಾರೆ ಹಾರೈಸುವಾಗ ಕಣ್ತುಂಬಿ ಬಂದಿತ್ತು. ಇಂಥಹ ಅಸಹಾಯಕ ಪರಿಸ್ಥಿತಿಯಲ್ಲೂ ಇಷ್ಟು ಲವಲವಿಕೆ ತುಂಬಿಕೊಂಡು ಸುತ್ತಲೂ ಅದನ್ನು ಹರಡಬಲ್ಲ ಈ ಜೀವಿ ಶ್ರೇಷ್ಠತರದ್ದು ಅನ್ನಿಸಿತು. "ನಾನೂ ಇವಳಂತೆಯೇ ನಿನ್ನ ಅಭಿಮಾನಿನೇಪ್ಪಾ. ನೀನು ರೇಡಿಯೋದಲ್ಲಿ ಆಡುವ ಮಾತುಗಳು ನಿನ್ನನ್ನಾಗಲೇ ನನಗೆ ಪರಿಚಯಿಸಿಬಿಟ್ಟಿವೆ. ಹಾಗಾಗಿ ತೀರಾ ಹೊಸಬ ನೀನೆಂದೆನಿಸಲೇ ಇಲ್ಲ ನೋಡು. ಕೂತಿರು, ಕುಡೀಲಿಕ್ಕೇನಾದ್ರೂ ತರ್ತೀನಿ" ಎನ್ನುತ್ತ ಒಳನಡೆದವಳ ಮನದಲ್ಲಿ ಸಂತೋಷ ವಿಷಾದಗಳೆರಡೂ ಸೇರಿ ಏನೋ ಗೊಂದಲದ ಭಾವ.
ಕಾಫಿ ತಿಂಡಿ ತಿನ್ನುತ್ತಾ ಕ್ಷಣವೊಂದರ ಕಾಲವೂ ಮೌನವಾಗಿರದೇ ನಗುತ್ತಾ ನಗಿಸುತ್ತಾ ಇದ್ದ ಈ ಮಕ್ಕಳೊಡನೆ ಮುದವೆನಿಸಿತು ಕಾವ್ಯಾಳಿಗೆ. ನಾನಿನ್ನು ಹೊರಡಬೇಕು ಎನ್ನುತ್ತ ಎದ್ದ ಜೀವನ್ ತನ್ನ ಅಪಾಂಗರ ವಾಹನವನ್ನೇರಿ ಹೋದಾಗ "ಪಾಪ ಕಣೇ ಶ್ರಾವ್ಯಾ" ಅಂದಳು. "ಏ ಬಿಡಮ್ಮ ಪಾಪ ಅಂತೆ ಪಾಪ. ಪಾಪ ಅಲ್ಲ ಪಾಪಿ ಅವ್ನು" ಅಣಕಿಸುತ್ತಾ ಒಳಗೋಡಿದ ಮಗಳು ಚಿಗರೆಮರಿಯಂತೆ ಕಂಡಳು.
ಬಟ್ಟೆ ಬದಲಾಯಿಸಿ ಪಕ್ಕ ಬಂದು ಕೂತ ಮಗಳ ಮುಖದಲ್ಲಿ ಏನೋ ಹೇಳಬೇಕಾದ ಕಾತುರ. "ಎನು ಹೇಳಬೇಕೋ ಬೇಗ ಹೇಳಮ್ಮ್ಮಾಮಗಳೇ" ಅಂದಳು. "ಜೀವನ್ ದು ಎಷ್ಟೊಂದು ಮುದನೀಡುವ ವ್ಯಕ್ತಿತ್ವ ಅಲ್ಲ್ವಾಮ್ಮಾ? ಅವನ ಜೊತೆ ಇದ್ದಷ್ಟು ಹೊತ್ತೂ ನಗೂನೂ ಜೊತೆಲೇ ಇರುತ್ತೆ. ಅದಕ್ಕೆ ಅವನಂದ್ರೆ ನಂಗೆ ತುಂಬಾ ಇಷ್ಟ." ಅಂದಳು ಶ್ರಾವ್ಯಾ. "ನಂಗೂ ಅಷ್ಟೇ ಕಣೆ ಪುಟ್ಟಿ, ತುಂಬಾ ಇಷ್ಟ" ಅಂದಳು. "ಅದಕ್ಕೆ ನಾನು- ಜೀವನ್ ಮದುವೆಯಾಗ್ಬೇಕಂತ ಇದ್ದೇವೆ ಅಮ್ಮಾ......" ದಿಗ್ಗನೆದ್ದಳು ಕಾವ್ಯಾ. ಹದಿನೆಂಟರ ಮಗಳ ಬಾಯಲ್ಲಿ ಮದುವೆಯ ಮಾತೇ!!? "ಅಮ್ಮಾ....., ನನ್ನಮ್ಮಾ...., ಮದುವೆ ಅಂದ್ರೆ ಏನಂತ ಸರಿಯಾಗಿ ಗೊತ್ತೇನಮ್ಮಾ?" ಅಂದಳು. "ಹೌದಮ್ಮಾ ಮದುವೆ ಅಂದರೆ ಜೀವನದ ನೋವು-ನಲಿವುಗಳಲ್ಲೆಲ್ಲಾ ಅತ್ಯಂತ ಅವಶ್ಯಕವಾಗಿ ಬೇಕು ಅನ್ನಿಸುವ ಒಬ್ಬ ಪಾಲುದಾರನನ್ನು ಜೊತೆ ಮಾಡಿಕೊಳ್ಳುವುದು" ಅಷ್ಟೇ ಸರಳವಾಗಿ ಬಂತು ಉತ್ತರ. ಆದರದು ಅಷ್ಟು ಸರಳವೇ? " ಹೌದು ಮರೀ ಆದರೆ ಅಲ್ಲಿ ಇನ್ನೂ ಅನೇಕ ಕ್ಲಿಷ್ಟತೆಗಳಿವೆಯಮ್ಮಾ. ಅದರ ಬಗ್ಗೆ ಯೋಚಿಸಿ ನಿರ್ಧರಿಸುವ ವಯಸ್ಸು ನಿನ್ನದಲ್ಲವಮ್ಮಾ"- ಕಾವ್ಯಾಳ ದನಿ ಉಡುಗಿಯೇ ಹೋದಂತಿತ್ತು." ಒಪ್ತೇನಮ್ಮಾ. ನಾವೀಗಲೇ ಮದುವೆಯಾಗುವುದಿಲ್ಲ. ನನ್ನ ಓದು ಮುಗಿಯುವಷ್ಟರಲ್ಲಿ ಅವನ ವೃತ್ತಿಬದುಕೂ ದೃಢವಾಗಿರುತ್ತದೆ. ಆಗಲೇ ಮದುವೆ. ಆದರೆ ಈತನೇ ನನ್ನವನಾಗಬೇಕು ಎಂದು ನಿರ್ಧರಿಸುವ ಪ್ರೌಢತೆ ನನ್ನಲ್ಲಿಲ್ಲವೇನಮ್ಮಾ?" ಮಗಳ ಮಾತಿಗೆ "ಇಲ್ಲ" ಎಂದು ಘಂಟಾಘೋಷವಾಗಿ ಹೇಳಲು ತಾಯಿಯ ಕೈಲಾಗಲಿಲ್ಲ. ಆದರೆ ಕಾಲಿಲ್ಲದವನನ್ನು ಮೂರನೆಯವನನ್ನಾಗಿ ಮೆಚ್ಚುವುದೇ ಬೇರೆ, ತನ್ನವನನ್ನಾಗಿಸಿಕೊಳ್ಳುವುದೇ ಬೇರೆ. ಇದನ್ನು ಮಗಳಿಗೆ ಹೇಗೆ ತಿಳಿ ಹೇಳುವುದು? ಏನೋ ಹೇಳಹೊರಟವಳು ಇದು ಸರಿಯಾದ ಸಮಯವಲ್ಲ, ತಾನೇನು ಹೇಳಬೇಕೆಂದು ಸರಿಯಾಗಿ ನಿರ್ಧರಿಸಿ ಮಾತಾಡಬೇಕೆನಿಸಿತು.ಸುಮ್ಮನೆ ಒಳನಡೆದಳು. "ಅಮ್ಮಾ....." ಹಿಂಬಾಲಿಸಿ ಬಂದ ಮಗಳನ್ನು ಕೈಸನ್ನೆಯಿಂದ ಅಲ್ಲೇ ಇರು ಎಂದು ತಿಳಿಸಿ, ರೂಂ ಸೇರಿ ಬಾಗಿಲು ಹಾಕಿಕೊಂಡಳು. ಯೋಚಿಸುತ್ತಾ ಹೋದಂತೆ ಒಂದು ಗಳಿಗೆ.........
ತಟ್ಟನೆ ಹಿಂದಿನ ದಿನ ಟಿ.ವಿ. ಯಲ್ಲಿ ಕಂಡಿದ್ದ ಕಾರ್ಯಕ್ರಮವೊಂದರಲ್ಲಿ ಎರಡೂ ಕಣ್ಣು ಕಳೆದುಕೊಂಡ ಹುಡುಗನೊಬ್ಬನನ್ನು ಮದುವೆಯಾಗುತ್ತೇನೆಂದು ಮಾತನಾಡುತ್ತಿದ್ದ ಹುಡುಗಿಯ ಮುಖ ಕಣ್ಣೆದುರು ಬಂತು. ಆತ ಹಿಂದೆ ಪ್ರೀತಿಸಿದ್ದ ಹುಡುಗಿಯ ಎತ್ತರದ ಅಂತಸ್ತು ಒಡ್ಡಿದ್ದ ಎಲ್ಲಾ ತಡೆಗಳನ್ನೆದುರಿಸಿ ಮುನ್ನುಗ್ಗುತ್ತಿದ್ದ ಅವರ ಪ್ರೀತಿಯನ್ನು ತಡೆಯಲು ಕೊನೆಯ ಹೆಜ್ಜೆಯಾಗಿ ಅವನ ಎರಡೂ ಕಣ್ಣುಗಳನ್ನು ಕೀಳಿಸಿತ್ತು. ಆ ವಾರ್ತೆ ಬಿತ್ತರಿಸಿದ್ದ ಟಿ.ವಿ. ಚಾನೆಲ್ ಒಂದರ ಕಚೇರಿಗೆ ಓಡಿ ಬಂದಿತ್ತು ಈ ಹೆಣ್ಣು. ಇಷ್ಟಾದರೂ ತನ್ನ ಪ್ರೀತಿಯ ಹುಡುಗಿಗೆ ಒಳ್ಳೆಯದನ್ನೇ ಹಾರೈಸುತ್ತಿರುವ ಆತ ಹೃದಯವಂತಿಕೆಗೆ ಸೋತು ಅವನನ್ನು ಮೆಚ್ಚಿ ಮದುವೆಯಾಗಬಂದಿದ್ದೇನೆ ಎಂದು ಹೇಳುತ್ತಿದ್ದಳು ಆಹುಡುಗಿ. ಆ ಕಾರ್ಯಕ್ರಮದ ಸೂತ್ರಧಾರ, ಆ ಹೆಣ್ಣಿನ ತಾಯಿ ಮತ್ತು ತಮ್ಮ, ಸಾಲದೆಂಬಂತೆ ನೇರಪ್ರಸಾರದಲ್ಲಿ ಫೋನ್ ಮಾಡಿ ಮಾತಾಡುವ ಎಲ್ಲ ವೀಕ್ಷಕರು - ಆತನ ಮೇಲೆ ಆಕೆಗೆ ಆರಾಧನಾ ಭಾವ ಹುಟ್ಟಿದ್ದೇ ತೀರಾ ಅಸಂಭವವೆಂಬಂತೆ ರೂಪಿಸುವಲ್ಲಿ ಪಟ್ಟುಹಿಡಿದು ತೊಡಗಿದ್ದಂತಿತ್ತು.
ನೋಡಲು ಸುಮಾರಾಗಿ ಚೆನ್ನಾಗಿಯೇ ಇದ್ದ
, ಶಿಕ್ಷಕ ತರಬೇತಿ ಪಡೆದಿದ್ದ ಆ ಹುಡುಗಿ ಬೇರೆಲ್ಲೂ ಗಂಡು ಸಿಕ್ಕಿಲ್ಲವೆಂದು ಈ ಸಾಹಸಕ್ಕೆ ಧುಮುಕಿರಲಿಕ್ಕಿಲ್ಲ. ಆದರೆ ಹೆಣ್ಣೊಂದು ಕ್ಷಣಮಾತ್ರದಲ್ಲಿ ಈ ದಿಟ್ಟ ನಿರ್ಧಾರ ತೆಗೆದುಕೊಂಡು ತನ್ಮೂಲಕ ಶ್ರೇಷ್ಥಸ್ಥಾನಕ್ಕೇರುವುದು ಈ ಸಮಾಜಕ್ಕೆ ಅರ್ಥವಾಗದ್ದಾಗಿತ್ತು ಮತ್ತು ಬೇಡವಾದದ್ದೂ ಅಗಿತ್ತು. ಹಾಗಾಗಿ ಅವಳಿಗೆ ನಿರುತ್ಸಾಹವೆರಚಿ ಆ ಯತ್ನದಿಂದಾಚೆಗೆ ತರುವ ಪ್ರಯತ್ನವೇ ಒಂದು ಸ್ವಾರಸ್ಯಕರ ಕಾರ್ಯಕ್ರಮವೆಂಬಂತೆ ಮೂಡಿಬರುತ್ತಿತ್ತು. ಕೊನೆಯಲ್ಲಿ ಬಂದು ಕುಳಿತ ಆ ಕಣ್ಣು ಕಳೆದುಕೊಂಡ ಹುಡುಗನೂ ಈಕೆಯದು ಮೂರ್ಖನಿರ್ಧಾರವೆಂದು ಕಟುವಾಗಿ ಹೇಳತೊಡಗಿದಾಗ ಮೊದಲೇ ಕಸಿವಿಸಿಗೊಂಡಿದ್ದ ಮನ ರೊಚ್ಚಿಗೆದ್ದಿತ್ತು. ಸಾಮಾನ್ಯವಾಗಿ ಇಂಥಹದ್ದಕ್ಕೆ ಕೈಹಾಕದ ತಾನು ಅಂದ್ದು ಫೋನ್ ಕೈಗೆತ್ತಿಕೊಂಡಿದ್ದಳು. "ವೈಯುಕ್ತಿಕವಾಗಿ ನಿಮಗವಳ ನಿರ್ಧಾರ ತಪ್ಪೆನಿಸಿರಬಹುದು. ನೀವೆಲ್ಲ ಆಕೆಯ ಹಿತೈಷಿಗಳೆಂದುಕೊಳ್ಳುವಿರಾದರೆ, ಆ ನಿರ್ಧಾರದ ಹಿತಾಹಿತಗಳನ್ನು ಆಕೆಗೆ ತಿಳಿಹೇಳಬಹುದು. ಆದರೆ ಆ ದಿಟ್ಟ ಹೆಜ್ಜೆಯಿಡಲು ದೃಢವಾಗಿ ನಿರ್ಧರಿಸಿರುವ ಆಕೆಯನ್ನೊಂದು ಮೂರ್ಖ ಜೀವಿಯನ್ನಾಗಿ ಬಿಂಬಿಸಿ ಪ್ರೇಕ್ಷಕರ ಕಣ್ಣಲ್ಲಿ ನಿಮ್ಮನ್ನು ನೀವು ಏನೆಂದು ಬಿಂಬಿಸಹೊರಟಿರುವಿರಿ? ಏನಪ್ಪಾ, ಕಣ್ಣೆರಡೂ ಕಳಕೊಂಡಿರುವ ನಿನಗಾಗಿ ಹೆಣ್ಣುಮಕ್ಕಳು ಕೈಯ್ಯಲ್ಲಿ ಮಾಲೆ ಹಿಡಿದು ಕಾಯುತ್ತಿರುವರೆಂದುಕೊಂಡೆಯಾ? ಅಥವಾ ಒಂಟಿ ಜೀವನ ನಡೆಸುವ ನಿರ್ಧಾರ ನಿನ್ನದ್ದಾದರೆ ಅದನ್ನಾಕೆಗೆ ಸ್ಪಷ್ಟವಾಗಿ ಹೇಳು. ಹಿಂದಿನದನ್ನು ಮರೆಯಲು ಸಮಯ ಬೇಕು..........ಮುಂದಿನ ಬಾಳಿಗಾಗಿ ಜೀವನೋಪಾಯ ಕಂಡುಕೊಳ್ಳಲು ಸಮಯ ಬೇಕು.....ಇವೇ ಮುಂತಾದ ಕಳ್ಳನೆಪಗಳೇಕೆ? ಅಮ್ಮಾ, ಹೆತ್ತ ತಾಯಿ ನೀನು. ಮಗಳ ಮನದಾಳ ಮೊದಲೇ ತಿಳಿದುಕೊಳ್ಳದೇ ಈ ನಿರ್ಧಾರ ಇಷ್ಟು ಬಲಿತ ಮೇಲೆ ಅದನ್ನು ಬದಲಾಯಿಸುವ ಪ್ರಯತ್ನ ಈ ನೇರಪ್ರಸಾರದ ಕಾರ್ಯಕ್ರಮದಲ್ಲಾಗಬೇಕೆ? ಅಪ್ಪಾ ವರದಿಗಾರ, ವೈಯುಕ್ತಿಕ ವಿಷಯಗಳನ್ನು ಕೆದಕಿ ಇನ್ನಷ್ಟು ಹಸಿಮಾಡಿ, ಅಲ್ಲಿ ಇನ್ನೊಂದಿಷ್ಟು ನಿರುಪಯುಕ್ತ ಪ್ರಶ್ನೆಗಳನ್ನೆಸೆದು, ಮುಂದಿರುವಾಕೆಯ ಹೆಜ್ಜೆ ಸರಿಯಾದರೂ ಸರಿ, ತಪ್ಪಾದರೂ ಸರಿ- ಕಾರ್ಯಕ್ರಮವನ್ನು ಸ್ವಾರಸ್ಯಗೊಳಿಸಬೇಕೆಂಬ ಒಂದೇ ಕಾರಣಕ್ಕಾಗಿ ದೃಶ್ಯಮಾಧ್ಯಮದ ಮೂಲ ಉದ್ದೇಶವನ್ನೇ ಮೂಲೆಗಿಟ್ಟಿದ್ದೀಯಲ್ಲಾ......... ಇದು ಸರಿಯಾ....?..........
ಮಧ್ಯೆ ತಡೆಯಲೆತ್ನಿಸಿದಾಗಲೆಲ್ಲ , ಇನ್ನಷ್ಟು ಏರುದನಿಯಲ್ಲೇ ಮುಂದುವರಿಯುತ್ತಿದ್ದ ಅವಳ ಮಾತನ್ನು ತುಂಡರಿಸಲು ಆ ಮಾಧ್ಯಮದವರಿಗೆ ಇಷ್ಟು ಹೊತ್ತಾಗಿ ಬಿಟ್ಟಿತು. ಫೋನ್ ತನ್ನಷ್ಟಕ್ಕೇ ಕಟ್ ಆಗಿತ್ತು. ಆಗ ತುಂಡಾದ ಯೋಚನಾಸರಣಿ ಈಗ ಮುಂದುವರೆದಿತ್ತು.....
ಆ ಹುಡುಗಿಯ ನಿರ್ಧಾರ ಗೌರವಾತ್ಮಕವಾಗಿ ಕಂಡದ್ದಾದರೆ ತನ್ನ ಮಗಳದ್ದ್ಯಾಕೆ ಅಲ್ಲ? ಗಂಡ ಹೆಂಡಿರಲ್ಲಿ ಪರಸ್ಪರ ಒಳ್ಳೆಯತನ-ಕೆಟ್ಟತನ, ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳುವುದು, ಹೊಂದಿಕೊಳ್ಳುವುದು-ಇವ್ಯಾವುದನ್ನೂ ಮುಂಚಿತವಾಗಿ ಊಹೆ ಮಾಡಲಾಗದು. ಮದುವೆಯೆಂಬುದೊಂದು ಅದೃಷ್ಟದಾಟ. ವೈವಾಹಿಕ ಜೀವನ ಕ್ಷಣಕ್ಷಣಕ್ಕೂವಿವಿಧ ತಿರುವು ತೆಗೆದುಕೊಳ್ಳುವ ವಿಚಿತ್ರ ಬೆಳವಣಿಗೆಗಳ ಸರಮಾಲೆ. ಹಾಗಾಗಿ ಮಗಳ ಹಣೆಬರಹದಲ್ಲಿ ತಾನು ಕೈಯ್ಯಾಡಿಸಿ ಏನು ತಿದ್ದಬಲ್ಲೆ? ಈಗ ಅವಳ ನಿರ್ಧಾರವನ್ನು ತಾನು ಗೌರವಿಸಿದರೆ ಪತಿಯೂ ಆ ನಿಟ್ಟಿನಲ್ಲಿ ಯೋಚಿಸಿಯಾರು. ಜೀವನ್ ನ ಕೌಟುಂಬಿಕ ಹಿನ್ನೆಲೆ, ಜೀವನೋಪಾಯದ ಬಗೆ - ಇವೇ ಮುಂತಾದುವುಗಳ ಬಗ್ಗೆ ಮಗಳೊಂದಿಗೆ ಮಾತನಾಡಿ ಸ್ಪಷ್ಟಪಡಿಸಿಕೊಳ್ಳುವುದೇ ಈಗಿನ ಸರಿಯಾದ ಮುಂದಿನ ಹೆಜ್ಜೆ ಎನ್ನಿಸಿತು.
ಮುಖ ತೊಳೆದುಕೊಂಡ ಮೇಲೆ ಮನ ಹಗುರಾದಂತನ್ನಿಸಿತು. ಬಾಗಿಲು ತೆರೆದು ಹೊರಬಂದರೆ, ಬಾಗಿಲಲ್ಲೇ ಮೊಣಕಾಲ ನಡುವೆ ಮುಖ ಹುದುಗಿಸಿ ಕೂತಿದ್ದಳು ಶ್ರಾವ್ಯಾ. "ಏ ಚಿನ್ನಮ್ಮಾ" ಎಂದು ಬಾಗಿ ಮುಖ ಎತ್ತಿದವಳೇ "ನಿನ್ನ ಎಲ್ಲ ಹೆಜ್ಜೆಗಳಲ್ಲೂ ನಾನು ನಿನ್ನೊಂದಿಗಿದ್ದೇನಮ್ಮಾ" ಎಂದಳು. "ನನಗ್ಗೊತ್ತಿತ್ತಮ್ಮಾ .... ನೀನು ಹೀಗೆಯೇ ಹೇಳ್ತೀಯಾ ಅಂತ" ಅಂದವಳೇ ಶ್ರಾವ್ಯಾ ತಾಯಿಯನ್ನಪ್ಪಿಕೊಂಡಳು.

No comments:

Post a Comment