Friday, September 6, 2013

ಹೀಗೆರಡು ಪತ್ರಗಳು

 

ಅಚೂ,
ಅನಿರೀಕ್ಷಿತವಾಗಿ ನಿನ್ನೆ ನೀನು ಮಾಡಿದ ಕರೆಯಿಂದಾಗಿ ಎಲ್ಲೋ ಮರೆಯಲ್ಲಿ ಒಂದುಕಡೆ ಒತ್ತ ಡದಿಂದ ಕಣ್ಮುಚ್ಚಿ ಮುದುರಿ ಕೂತಂತಿದ್ದ ಆ ಮೃದು ಮಧುರ ನೋವು-ನಲಿವುಗಳೆಲ್ಲ ನರ್ತಿಸತೊಡಗಿದ್ದಾವೆ. ಅಲ್ಲಲ್ಲ, ನರ್ತಿಸುವುದು ಎಂಬ ಸುಂದರ ಶಬ್ಧಕ್ಕಿಂತ ಕುಣಿಯುತ್ತಿದ್ದಾವೆ ಎಂಬ ಒರಟು ಶಬ್ಧ ಸರಿಯಾದೀತು. ಯಾಕೆಂದರೆ ಆ ಕ್ರಿಯೆ ನರ್ತನದಂತೆ ಒಪ್ಪವಾಗಿಲ್ಲ. ಎಲ್ಲಾ ತರದ ಸಮ್ಮಿಶ್ರ ಭಾವನೆಗಳ ಒಂದುಗೂಡುವಿಕೆಯ ಪರಿಣಾಮವೋ ಎಂಬಂತೆ ವಕ್ರ ವಕ್ರವಾಗಿದೆ.
ಮೊದಮೊದಲ ನಮ್ಮ ಒಡನಾಟದ ದಿನಗಳ ನೆನಪಾಗುತ್ತಿದೆ.ಆಚಲಾ ಎಂಬ ಹೆಸರಿಗೆ ತಕ್ಕಂತೆ ನಿಶ್ಚಿತ ಮತ್ತು ದೃಢವಾದ ನಡವಳಿಕೆಗಳನ್ನು ನಿನ್ನ ವ್ಯಕ್ತಿತ್ವದಲ್ಲಿ ಹದಿನಾಲ್ಕರ ವಯಸ್ಸಿನಲ್ಲೇ ರೂಢಿಸಿಕೊಂಡವಳು ನೀನು. ನಿನ್ನ ಕಟುಸತ್ಯವನ್ನು ಕಟುವಾಗಿಯೇ ನುಡಿಯುವ ಪರಿ, ಅನ್ಯಾಯಕ್ಕೆ ಎದುರಾಗಿ ನಿಲ್ಲುವ ದಿಟ್ಟ ನಿಲುವುಗಳು ನಿನ್ನ ಸುತ್ತಲೆಲ್ಲ ನಿನಗೆ ಶತ್ರುಗಳನ್ನೇ ಹುಟ್ಟು ಹಾಕಿದ್ದವು. ಮನೆಕಡೆಯೂ ಮತ್ತು ಹೊರಗಡೆಯೂ ಬರೀ ಕಷ್ಟಗಳ ರಾಶಿಯಲ್ಲೇ ಹೊರಳಾಡಿ ಮನಸ್ಸಿನ ಮೃದುತ್ವವನ್ನೇ ಹೆಚ್ಚುಕಮ್ಮಿ ಕಳಕೊಂಡಿದ್ದ ನಿನಗೆ ಆಗಾಗ ನಾನು ನೀಡುತಿದ್ದ ಸಾಂತ್ವನದ ಮಾತುಗಳು ನೆನಪಿದೆಯಾ ಅಚೂ? "ಜೀವನ ನಾಟಕದ ಅಂಕದಲ್ಲಿ ನಿನಗೆ ಸಿಕ್ಕಿರುವ ಪಾತ್ರದಲ್ಲಿ ನೀನು ಇಂದಿಗೆ ಇದಿಷ್ಟೇ ಅನುಭವಿಸಬೇಕಾದುದು. ನಾಟಕದಲ್ಲಿ ಪಾತ್ರವಹಿಸಲೆಂದೇ ಬಂದಿರುವ ನಾವು ಇಂಥಹುದೇ ಪಾತ್ರ ಬೇಕೆಂದು ಹಠ ಹಿಡಿದರೂ ಅಥವಾ ಇಂಥಹುದೇ ನಿರ್ದಿಷ್ಟ ಪಾತ್ರ ನೀಡುವೆನೆಂದು ಆಡಿಸುವವನು ಅಂದುಕೊಂಡರೂ, ಕಾಲದ ನಿರ್ಧಾರದ ಮುಂದೆ ನಡೆಯದು .ಇತರ ಪಾತ್ರಧಾರಿಗಳ ಒದಗುವಿಕೆ, ಆಡಬೇಕಾದ ಸಂಧರ್ಭ, ಸ್ಥಳಗಳಿಗನುಸಾರವಾಗಿ ಪಾತ್ರ ನೀಡುವವನೂ, ಪಾತ್ರ ವಹಿಸುವವನೂ ತಲೆ ಬಾಗಲೇ ಬೇಕು, ವೈವಿಧ್ಯತೆ ಬರಲೇಬೇಕು. ನಾಳೆ ಏನಾದರೂ ಬದಲಾವಣೆ ಬಂದೇ ಬರುವುದು , ಧೈರ್ಯವಾಗಿರು" ಅಂತ ನಾನು ಅನ್ನುತಿದ್ದರೆ, ಶೂನ್ಯಭಾವದಿಂದ ನನ್ನ ಬಾಯನ್ನೇ ನೋಡುತ್ತಾ ಕೂತಿರುತಿದ್ದ ನೀನು ನನ್ನ ಮಾತು ಮುಗಿಯುತ್ತಲೇ ನಿನ್ನ ಕೈಗಳೆರಡನ್ನೂ ನನ್ನದರೊಳಗೆ ತೂರಿಸಿ, ನನ್ನ ಹೆಗಲ ಮೇಲೆ ತಲೆಯಿಟ್ಟು ಅದರ ಭಾರವನ್ನೆಲ್ಲ ನನ್ನ ಮೂಲಕ ಸಹನಾಮಯಿ ಭೂಮಿತಾಯಿಗಿಳಿಸುತ್ತಿದ್ದೆಯೇನೋ ಎಂಬಂತೆ ಕಣ್ಮುಚ್ಚಿ ಕೂತುಬಿಡುತ್ತಿದ್ದೆ. ನಾನು ನುಡಿದಂತೇ ಆಗಿಲ್ಲವೇನೇ ಅಚೂ? ನಿಜವಾಗಿಯೂ ಹೇಳೇ-ನೀನಿಂದು ಸುಖವಾಗಿಲ್ಲವೇನೆ? ಸಾಮಾನ್ಯ ಹೆಣ್ಣೊಂದು ಬಯಸುವ ಗಂಡ , ಮಕ್ಕಳ ಸುಖ ಕಂಡಿರುವೆ, ದೇವರ ದಯೆಯಿಂದ ನಿನ್ನ ನಿನ್ನೆಯ ದನಿಯಲ್ಲಿನಿನಗೆ ತಕ್ಕದಾದುದ್ದೇ ಎಲ್ಲ ಸಿಕ್ಕಿದೆಯೆಂದೂ ಗ್ರಹಿಸಿಕೊಂಡೆ ನಾನು. ಹೆಣ್ಣು ಹೆಣ್ಣೆನಿಸಿಕೊಂಡದ್ದಕ್ಕೆ ದೊರಕಬೇಕಾದ ಹೆಣ್ಣಿನ ಪರಿಪೂರ್ಣತೆಯನ್ನು ಅನುಭವಿಸಿದ ಮೇಲೂ ಅದಕ್ಕಿಂತ ದೊಡ್ಡ ಸುಖ ಬೇರೆ ಇದೆಯೇನೇ? ಹಾಂ, ಇದ್ದಿರಲೂಬಹುದು. ಆದರೆ ಅದಿಲ್ಲವಾಗಿದ್ದಾಗ ಬೇರೆಯವೆಲ್ಲ ಇದ್ದರೂ ಬಹುಶಃ ಉಪಯೋಗವಿರಲಾರದು ಅಲ್ವಾ?
ಅದೇಕೆ ನಿನ್ನೆ ಇದ್ದಕ್ಕಿದ್ದಂತೆ ನನ್ನ ನೆನಪಾಯಿತೋ!? ಹೌದು ಅಚೂ, ನೆನಪಾಗುತ್ತಲೇ ಇತ್ತು -ನನಗೂ ಅಷ್ಟೆ. ಆದರೆ ಸಂಪರ್ಕಿಸುವ ವೇಳೆ ಬಂದಿರಲಿಲ್ಲ . ನಿನಗೂ ಕಾರಣಾಂತರಗಳಿಂದಾಗಿ ಅಡೆತಡೆಗಳು ಬಂದಿದ್ದಿರಬಹುದು ಅಲ್ಲವೇ? ನನಗಾ? ಬದುಕು ಸಾಗುತ್ತಿರುವ ಹಾದಿಯಿಂದಾಗಿ ನಾನು ನನ್ನ ಸುತ್ತ ಒಂದು ಪಾರದರ್ಶಕ ತಡೆಗೋಡೆ ನಿರ್ಮಿಸಿಕೊಂಡಿದ್ದೇನೆ ಅಚೂ. ಅದು ಹೇಗಿದೆಯೆಂದರೆ ನನಗೂ ನೀವೆಲ್ಲ-ಅವರೆಲ್ಲ ಅಲ್ಲೇ ಇದ್ದಾರೆ ಅನ್ನಿಸುತ್ತಿರಬೇಕು, ಅವರಿಗೆಲ್ಲರಿಗೂ ನಾನಲ್ಲೇ ಅವರಿಗೆಟಕುವಲ್ಲೆ ಇದ್ದೇನೆ ಅನ್ನಿಸುತ್ತಿರಬೇಕು, ಆದರೆ ಭಾವನಾತ್ಮಕವಾಗಿ ಎಟುಕದಷ್ಟು ದೂರ ಇರಬೇಕು. ಈ ತರಹದ ಜೀವನ ನನ್ನದು ಅಚೂ. ಇಲ್ಲ ಕಣೇ, ನಾನಾರಿಸಿಕೊಂಡಿಲ್ಲ, ಈ ಪ್ರದರ್ಶನದಲ್ಲಿ ಈಗಕ್ಕೆ ನನಗೊದಗಿದ ಪಾತ್ರದ ಪರಿಮಿತಿ ಇಷ್ಟೇ. ಈಗ ಸ್ವಲ್ಪ ಹೊತ್ತಿನವರೆಗೆ ಆ ಕೋಶದಿಂದ ಹೊರಬಂದು ನಿನ್ನೆದುರು ವಾಸ್ತವತೆಯನ್ನು ಬಿಚ್ಚಿಡಲಾರಂಭಿಸಿದ್ದೇನೆ. ಯಾವಗಳಿಗೆಯಲ್ಲಿ ಮತ್ತೆ ಆ ಪಾತ್ರಕ್ಕೆ ಜೀವ ತುಂಬಲು ಹೋಗುತ್ತೆನೋ ಗೊತ್ತಿಲ್ಲ, ಅಲ್ಲಿಯವರೆಗೆ ಆದಷ್ಟು ನಿನ್ನನ್ನು ಸಮೀಪಿಸಲು ಓಡಿ ಬರುತ್ತಿದ್ದೇನೆ ಅಚೂ.
"
ಹೇಗಿದ್ದೀ ಮಧೂ" ಎಂದು ಪದೇಪದೇ ಒತ್ತಿ ಕೇಳುತ್ತಿದ್ದೆಯಲ್ಲ? ನನ್ನೊಳಗೆ ಕುದಿಯುತ್ತಿರುವ ಲಾವಾರಸ ಒಮ್ಮಿಂದಿಮ್ಮೆಗೆ ಸಿಡಿಯಲಾರದಿದ್ದರೂ, ತನ್ನ ಬಿಸಿಯನ್ನು ಸ್ವಲ್ಪ ಸ್ವಲ್ಪ ಸುತ್ತ ಹರಡಿ ತಾನು ಅಷ್ಟರಮಟ್ಟಿಗೆ ತಣ್ಣಗಾದೆ ಎಂಬ ಭ್ರಮೆಯಲ್ಲಿ ನಗುವಿನ ಮುಖವಾಡದೊಂದು ಹೊದಿಕೆ ಹೊದ್ದು ಕೂತಿದೆ. ಅದರ ಬಿಸಿ ಎಷ್ಟೆಂದರೂ ನನ್ನ ಪಾಲಿಗೆ ಬಂದದ್ದು. ಭರಿಸಲಾರೆನೆಂಬಂತೆ ಇತರ ಕಡೆಗಳಿಗೆ ಹರಿಸಿ ನನ್ನ ಅಸಾಮರ್ಥ್ಯತೆಯನ್ನೇಕೆ ತೋರಿಸಿಕೊದಲಿ? ಅಥವಾ ಈ ಪಾತ್ರ ನೀಡಿರುವವನದು ತಪ್ಪುಗ್ರಹಿಕೆಯೆಂದೇಕೆ ಸೂಚಿಸಲಿ? ಇದು ನನ್ನ ಪಾತ್ರದ ಒಂದು ಘಟ್ಟದ ನಿರೀಕ್ಷೆ. ಅದನ್ನು ಪೂರ್ತಿಮಾಡಲು ನನ್ನ ಶಕ್ತಿ ಮೀರಿ ಪ್ರಯತ್ನಿಸುತ್ತಿರುವ ಸಮಯದಲ್ಲೇ ಬಂದದ್ದು ನಿನ್ನ ಫೋನ್. "ಗೆಳೆತನದ ಸುವಿಶಾಲ--------"ಹಾಡು ನೆನಪಿದೆಯಾ ಅಚೂ? ಸಾಮರ್ಥ್ಯವೆಂಬುದು ಎಷ್ಟು ವಿಶೇಷವಾಗಿರಲು ಸಾಧ್ಯವೋ ಅಷ್ಟೂ ವೈಶಿಷ್ಠ್ಯತೆಯನ್ನು ಗೆಳೆತನದ ಸಾಮರ್ಥ್ಯಕ್ಕೊದಗಿಸಿದ್ದು ಈ ಹಾಡು. ಆ ದಿನಗಳ ಅಂಥಹ ಸಂಬಂಧದ ಯಾವುದೋ ಒಂದು ಶಕ್ತಿ ನನ್ನನ್ನು ನನ್ನ ಚಿಪ್ಪಿನಿಂದ ಇಂಚಿಂಚಾಗಿ ಹೊರಗೆಳೆಯುತ್ತಿದೆ ಅಚೂ. ಆದರೆ ಭೂತ ಭವಿಷ್ಯಗಳೆರಡಕ್ಕಿಂತಲೂ ಪ್ರಬಲವಾದದ್ದು ವರ್ತಮಾನ. ಅದು ಮತ್ತೆ ಒಳಗೆಳೆಯುತ್ತಿದೆ, ನೀ ಹೊರಗೆಳೆಯುತ್ತಿದ್ದೀಯ. ಇರಲಿ. ಬಹುಶಃ ನನ್ನ ಒಳಗುದಿಯ ಮುಚ್ಚಿಟ್ಟ ಬಿಸಿ ಎಲ್ಲಿಂದಲೋ ನಿನ್ನ ತಲುಪಿ ನಿನ್ನೊಳಗೇನೋ ಕಲಕಿರಬೇಕು. ಅದಕ್ಕೆ ನನ್ನ ಜೀವನದಲ್ಲೇನೋ ಸರಿಯಾಗಿಲ್ಲ ಅಂತ ನಿನಗನಿಸಿರಬೇಕು, ಅದಕ್ಕೆ ಹಾಗೆ ಪದೇ ಪದೇ ಕೇಳಿರಬೇಕು ಅಲ್ಲವೆ ಅಚೂ.
ಇಲ್ಲ ಅಚೂ, ನನ್ನತನ ಈ ಮೂವತ್ತು ವರ್ಷಗಳಲ್ಲಿ ಮೂರ್ತರೂಪ ಪಡೆಯುವ ದಿಸೆಯಲ್ಲಿ ಮುಂದುವರಿದದ್ದಕ್ಕಿಂತ ಚಲ್ಲಾಪಿಲ್ಲಿಯಾಗಿ ನುಚ್ಚುನೂರಾಗುವ ದಿಕ್ಕಿನಲ್ಲೇ ಹೊಡಕೊಂಡು ಹೊರಟುಹೋದದ್ದೇ ಹೆಚ್ಚು. ಈ ನಿರ್ಜೀವ ಮಿಶನರಿಯ ಮುಂದೆ ಏಕತಾನತೆಯ ಎ ಸಿ ಗಳ ಸದ್ದು ಕೇಳುತ್ತಾ ಬೆಟ್ಟದಲ್ಲಿ ಒಂದು ಕಾಡಿನ ನಡುವಿರುವ ಈ ಟೆಲಿಫೋನ ಆಫೀಸಿನಲ್ಲಿ ಏಕಾಂಗಿಯಾಗಿ ಕಾಲ ಕಳೆಯುವಾಗ ಎಷ್ಟೊಂದು ವೈಭವೀಕರಿಸಿಕೊಳ್ಳಬಹುದಾದ ಬದುಕಿನ ಅಮೂಲ್ಯ ದಿನಗಳನ್ನು ಹಾಳು ಮಾಡಿಕೊಳ್ಳುತ್ತಿರುವ ನನ್ನ ಬಗ್ಗೆ ನನಗೇ ತೃಪ್ತಿ ಇಲ್ಲ ಅಚೂ. ಪರಿಸ್ಥಿತಿಗಳು ಬಂದಾಗ ಬಂದಂತೆ ಸ್ವೀಕರಿಸಿದರೆ ಬಾಳು ಸುಂದರ ಎಂಬುದೊಂದು ಪ್ರಸಿಧ್ಧ ಮಾತು. ಆದರೆ ನನ್ನದೀಗ ಒಂದು ಸಣ್ಣ ತಿದ್ದುಪಡಿ-ಪರಿಸ್ಥಿತಿಗಳು ಬಯಸಿದಂತೆ ಬಂದರೆ ಮಾತ್ರ ಬಾಳು ಸುಂದರ ಅಂತ, ಏನಂತೀಯಾ? ಈ ಸೌಂದರ್ಯವೆಂಬುವುದು ನೋಡುವವರ ಕಣ್ಣಲ್ಲಿದೆ ಅಂತ ನಾನ್ಯಾವಾಗಲೂ ಹೇಳ್ತಾ ಇದ್ದೆ ಅಲ್ಲ್ವಾ? ಈಗ ಹೀಗೆ ಹೇಳ್ತೇನೆ-ಈ ಲೋಕದ ಸುಂದರ, ಒಳ್ಳೆಯ, ಸಂತೋಷದ,ತೃಪ್ತಿಯ, ನೆಮ್ಮದಿಯ ಪ್ರತಿಯೊಂದು ಸಂದರ್ಭವೂ ಅದನ್ನು ಎದುರಿಸುವವನ ಮನೋಸ್ಥಿತಿಯ ಮೇಲೆ ಅವಲಂಬಿತವಾಗಿ ಸ್ವಂತ ಅರ್ಥದ ಅನುಭೂತಿಯನ್ನೋ ಅಥವಾ ವ್ಯತಿರಿಕ್ತವಾದ ಅನುಭವವನ್ನೋ ನೀಡುತ್ತವೆ. ಇದಕ್ಕೆ ನಾನು ಮೇಲೆ ಹೇಳಿದ ನನ್ನ ಕಾರ್ಯಸ್ಥಳದ ವಿವರಣೆಯೇ ಉದಾಹರಣೆ. ಈ ಜಾಗದಲ್ಲಿ ನಿನ್ನೊಂದಿಗೆ ಅಂದು ಇರುತ್ತಿದ್ದ ಮಧು ದಿನಕಳೆಯಬೇಕಾಗಿದ್ದರೆ ನಾನಿದನ್ನೇ ಸ್ವರ್ಗ ಎನ್ನುತ್ತಿದ್ದೆ. ಕಿರುಚುತ್ತಾ ಹಾರುತ್ತಿದ್ದ ಕಾಗೆಯೂ ಸುಂದರವೆನಿಸುತ್ತಿದ್ದ ದಿನಗಳವು. ಈ ಬೆಟ್ಟ, ಅದರ ತುದಿಯಲ್ಲಿ ದೇವಿಯ ಸನ್ನಿಧಿ, ಹಾತೊರೆದು ಎಂದೋ ಒಮ್ಮೆ ಜನ ಸಂಭ್ರಮದಿಂದ ಜನ ಸಂದರ್ಶಿಸುವ ಜಾಗ, ಸದಾ ಬಗೆಬಗೆಯ ಜನರಿಂದ ತುಂಬಿ ತುಳುಕುವ ಲವಲವಿಕೆಯಿಂದಿರುವ ಊರು, ಅಲ್ಲಿ ಹೆಚ್ಚಿನ ಕೆಲಸದ ಭಾರವಿಲ್ಲದ ಕಾರ್ಯಸ್ಥಾನ, ಹಸಿರಿನ ಮಧ್ಯ ಒಂಟಿಯಾಗಿ ನಿಂತ ಈ ಕಟ್ಟಡ, ಒಳಗೋ ದೇಶದ ಮೂಲೆಮೂಲೆಗಳನ್ನು ಹತ್ತಿರವಾಗಿಸಲು ಪ್ರತಿಕ್ಷಣವೂ ದುಡಿಯುತ್ತಿರುವ ಸಿಸ್ಟಂಗಳು, ಅವುಗಳ ಲಯಬಧ್ಧ ಶಬ್ಧ ಇದೆಲ್ಲದರ ಮೇಲ್ವಿಚಾರಣೆಯ ಜವಾಬ್ದಾರಿಯ ಹೆಮ್ಮೆ, ಸುತ್ತಲೂ ಬಂದು ಬಂದು ಹೋಗುವ ಮಂಜು--ಹೀಗೆ ಎಷ್ಟೋ ವಿಷಯಗಳ ಶ್ರೇಷ್ಠತೆಗಳನ್ನು ಕಂಡುಕೊಳ್ಳಬಹುದಾಗಿತ್ತು. ಆದರೆ ಇಂದು ನೋಡುವ ಕಣ್ಣು, ಕೇಳುವ ಕಿವಿ, ಆಡುವ ಬಾಯಿಗಳೆಲ್ಲ ಬೇರೊಂದು ನಿಟ್ಟಿನಲ್ಲಿ ಯೋಚಿಸುತ್ತಿರುವುದರಿಂದ ಎಲ್ಲೆಲ್ಲೂ ದೂರುಗಳೇ
ಮೇಲೆದ್ದು ಬಂದಂತೆ ಅನ್ನಿಸುತ್ತಿದೆ
. ನನ್ನದೇ ಪುರಾಣ ಸ್ವಲ್ಪ ಉದ್ದ ಆಯ್ತೇನೋ ಅಲ್ಲ್ವಾ?
ಅಚೂ, ನಿನ್ನೆ ನಿನ್ನ ಮಗನ ಹುಟ್ಟುಹಬ್ಬ ಅಂದೆಯಲ್ಲ, ಅವನು ಈ ಲೋಕಕ್ಕೆ ಬಂದ ಆ ಗಳಿಗೆ ನಿನ್ನ ಸ್ಥಿತಿ ಹೇಗಿತ್ತೇ? ಆ ಸಂತೋಷದಿಂದ ಅತ್ತುಬಿಟ್ಟಿದ್ದೆಯಾ? ಸುಖದ ಒಂದು ನಿಟ್ಟುಸಿರು ಬಂದಿತ್ತಾ? ಅಥವಾ....... ನಾನು ಇನ್ನು ಎನೂ ಊಹಿಸಲಾರೆ. ಕುರುಡನೊಬ್ಬ ಆನೆಯನ್ನು ವಿವರಿಸಿದ್ದ ಕತೆಯಂತಾದೀತು.
ನಿನ್ನ ಬಗ್ಗೆ ಹೇಳು ಅಂದೆಯಲ್ಲಾ, ಇಂದು ನನಗೆ ನಾನು ಅಂದು ಆಡುತ್ತಿದ್ದ ಮಾತುಗಳನ್ನೆಲ್ಲ ನೆನಪಿಸಿಕೊಟ್ಟು ಅದೇ ನಿಜವೆಂದು ನಿರೂಪಿಸುವ , ಆ ಆಶಾಭಾವನೆಯ ನಿಲುವೇ ಸರಿಯೆಂದು ತಿಳಿಸಿಹೇಳುವ ಅನುಭವದ ಹೆಗಲೊಂದು ಬೇಕು. ಒರಗಿ ನನ್ನ ಮಣಭಾರದ ನೋವನ್ನೆಲ್ಲ ಅಲ್ಲಿ ಇಳಿಸಿ ನಾನು ನಿಶ್ಚಿಂತಳಾಗುವ ಸಂದರ್ಭ ಬೇಕು." ನಾನು ಯಾರೂ ಮಾಡದ ತಪ್ಪೇನು ಮಾಡಿದೆ"- ಮನದ ತುಂಬೆಲ್ಲ ಹರಡಿರುವ ಈ ಪ್ರಶ್ನೆಗೆ ಉತ್ತರ ಬೇಕು. ಈ ಜನ್ಮದ್ದಲ್ಲ ಎಂಬ ಪಲಾಯನವಾದದ ಉತ್ತರ ಬೇಡ, ಸಮಂಜಸವಾದ ನನಗೊಪ್ಪಿಗೆಯಾಗುವ ಉತ್ತರ ಬೇಕು. ನನ್ನೊಳಗೆಷ್ಟೋ ಇಣುಕಿ ನೋಡಿ, ಇನ್ನೆಷ್ಟನ್ನೋ ಕಂಡುಕೊಳ್ಳಲಾಗದ ಜನ ನನ್ನನ್ನ ಹೇಡಿ, ಸಿನಿಕ, ಕೆಟ್ಟದ್ದನ್ನೇ ಆಲೋಚಿಸಿ ವ್ಯತಿರಿಕ್ತವಾದದ್ದನ್ನೇ ಎದುರುನೋಡುವ ವ್ಯಕ್ತಿತ್ವ ಎಂದು ನಿರೂಪಿಸಹೊರಟಿರುವಾಗ ನನ್ನೊಳಗು ಏನೆಂದು ಅವರಿಗೆ ತೋರಲಾಗುತ್ತಿಲ್ಲ, ಆ ಸಾಮರ್ಥ್ಯ ಬೇಕು. ಇಷ್ಟೆಲ್ಲ ಬೇಕುಗಳಿಂದ ಸದಾ ಸುತ್ತುವರಿಯಲ್ಪಟ್ಟಿರುವ ನಾನು ಇನ್ನು ಹೇಗಿರಲು ಸಾಧ್ಯ ಹೇಳು ಅಚೂ.
ಯಜಮಾನರೇನು ಮಾಡ್ತಿದ್ದಾರೆ ಎಂದೆಯಲ್ಲಾ? ಟಿ ವಿ ಯಲ್ಲಿ ಬರುತ್ತಿರುವ ಯಾವುದೋ ಧಾರಾವಾಹಿ ನೋಡ್ತಾ ನಗುತ್ತಿದ್ದಾರೆ. ನಾನೂ ಅಳಲಾಗದ ಕರ್ಮಕ್ಕೆ ನಗುತ್ತಿದ್ದೆ. ನನ್ನ ಪೆಚ್ಚುನಗೆ ಕಂಡವರೇ "ಮುಕ್ತವಾಗಿ ನಗಬಾರದಾ" ಅನ್ನುತ್ತಿದ್ದಾರೆ. ಅವರಿಗೆ ತಿಂಗಳ ರಜೆಯ ಅನಾರೋಗ್ಯದ ಸಬೂಬು ಹೇಳುತ್ತಿದ್ದೆ. ಮದುವೆಯಾಗಿ ಎಪ್ಪತ್ತೆರಡು ತಿಂಗಳಾದರೂ ಪ್ರತಿ ಬಾರಿಯೂ ತಪ್ಪದೆ ತಿಂಗಳ ರಜೆ ಕೊಡುತ್ತಿರುವ ನನ್ನ ವಿಧಿ ಸಾಹೇಬನ ಕಾರ್ಯತತ್ಪರತೆಯ ಬಲಿಪಶು ನಾನು, ಇನ್ನ್ನೆಷ್ಟು ಮುಕ್ತವಾಗಿ ನಗಲು ಸಾಧ್ಯ ಹೇಳು ಅಚೂ.
ದೊಡ್ಡವಳಾದ ಮೇಲೇನಾಗುತ್ತೀ ಎಂಬ ಪ್ರಶ್ನೆಗೆ ಎಲ್ಲರೂ ದಾಕ್ಟ್ರೋ, ಇಂಜಿನಿಯರೋ ಎಂದುತ್ತರಿಸಿದರೆ, ನಾನು ಅಮ್ಮ ಆಗ್ತೇನೆ ಅಂತ ದೃಢವಾಗಿ ಉತ್ತರಿಸುತ್ತಿದ್ದೆ. ಭವಿಷ್ಯ ಸುಂದರವೇ ಆಗಿರುತ್ತದೆ ಎಂಬ ಭ್ರಮೆಯಿಂದ ಮುಗ್ಧವಾಗಿ ಅದರೆ ಅಷ್ಟೇ ಖಚಿತವಾಗಿ ಉತ್ತರಿಸುತ್ತಿದ್ದೆ. ಅಚೂ, ಆ ಮೊದಲ ಪಾತ್ರವೇನು ನಾನು ಮಾನಸಿಕವಾಗಿ ನಿಭಾಯಿಸಿದೆ ನೋಡು, ಅದರ ಪ್ರಭಾವದಿಂದ ಹೊರಬರಲಾಗುತ್ತಲೇ ಇಲ್ಲ ಕಣೇ. ಆ ಪಾತ್ರದ ಮೂಲಭೂತ ಗುಣಗಳೆಲ್ಲ ನನ್ನೊಳಗೆ ಮೇಳೈಸಿಬಿಟ್ಟಿವೆ. ಆದರೆ ಅವನ್ನು ಅಭಿವ್ಯಕ್ತಿಸುವ ಸಂದರ್ಭಗಳು ಮಾತ್ರ ಇಲ್ಲವಾಗಿವೆ. ಆ ಸಂದರ್ಭಕ್ಕಾಗಿನ ಹಂಬಲದೊಂದಿಗೆ, ಆ ಗುಣಗಳನ್ನೆಲ್ಲವನ್ನೂ ಅಂಟಿಸಿಕೊಂಡೇ ಹೊಸತೊಂದು ಕೋಶದೊಳಕ್ಕೆ ಪ್ರವೇಶ. ಇದೆ-ಇಲ್ಲಗಳ ಗೌಜು ಗದ್ದಲ, ಸಾಧ್ಯತೆ-ಅಸಾಧ್ಯತೆಗಳ ಕಸಕಲ್ಮಶಗಳ ನಡುವೆಯೇ ಸಫಲತೆಯ ಹುಡುಕಾಟ. ಈ ಪ್ರದರ್ಶನದ ನಂತರ ಇನ್ನ್ಯಾವುದೋ ಒಂದು ಪಾತ್ರದೊಳಗೆ ಪ್ರವೇಶಿಸುವ ಅಂಕದಾಟ. ಇದು ಸದ್ಯದ ನನ್ನ ಸ್ಥಿತಿಯಾಗಿದೆ ಅಚೂ.
ಅನ್ನಬೇಕೆನಿಸಿದ್ದನ್ನೆಲ್ಲ ಬರೆದು ಕಳಿಸು ಮಧೂ ಅಂದೆಯಲ್ಲಾ, ಈ ಕ್ಷಣದವರೆಗೆ ಹಾಗೇ ಮಾಡಿದ್ದೇನೆ. ಒಮ್ಮಿಂದೊಮ್ಮೆಗೆ ಮಾತುಗಳೆಲ್ಲ ಮುಗಿದವು ಅನ್ನಿಸುತ್ತಿದೆ. ಈಗ್ಯಾಕೋ ಮತ್ತೆ ನನ್ನ ಈ ನಾಟಕದ ಹಿಂದಿನಪಾತ್ರದ ಒಳಗೆ ಹೋಗುವ ಮನಸ್ಸಾಗುತ್ತಿದೆ ಕಣೆ. ಮುಂದಿನ ಕ್ಷಣಗಳೆಲ್ಲಾ ಆ ನಟನೆಗೆ ಮೀಸಲು. ಒಳಹೋಗುತ್ತಿದ್ದೇನೆ, ಬರಲಾ ಅಚೂ?
ನಿನ್ನ ,
ಮಧು.
ಪ್ರೀತಿಯ ಮಧೂ,
ನಿನ್ನ ಪತ್ರ ಸಿಕ್ಕಿತು. ಇನ್ನೂ ಅದೇ ಮಾನಸಿಕ ಸ್ತರದಲ್ಲೇ ಇದ್ದೀಯಲ್ಲೇ ನೀನು?! ಅದೇ ತೀವ್ರವಾದ ಚಿಂತನೆ, ಅದೇ ತುಂಬ ಆಳಕಿಳಿವ ಬರವಣಿಗೆ, ಎಲ್ಲಾ ಹಾಗೇ ಇವೆಯಲ್ಲೇ! ಸ್ವಲ್ಪ ಸಂತೋಷವಾಗ್ತಾ ಇದೆ, ಮತ್ತೆ ಆಶ್ಚರ್ಯನೂ ಆಗ್ತಾ ಇದೆ- ಇಷ್ಟೊಂದು ವರ್ಷಗಳು ನಿನ್ನ ಅನುಭವಗಳ ಮುಖಾಂತರ ನಿನ್ನನ್ನು ಬದಲಾಯಿಸಲೇ ಇಲ್ಲವೇ ಅಂತ! ಏನಂದೆ ನೀನು, ನೆನಪಾ? ದಿನಕ್ಕೆ ಹಲವಾರು ಬಾರಿ ನಿನ್ನ ಮುಖ ನೆನಪಾಗುತ್ತಿರುತ್ತದೆ. ನನ್ನ ಮಕ್ಕಳು ನನ್ನನ್ನು ಕೆರಳಿಸಿಯಾದರೂ ನನ್ನ ಬಯ್ಗುಳ ಪಡೆಯುವಲ್ಲಿ, ತನ್ಮೂಲಕ ನನ್ನ ಗಮನ ಸೆಳೆಯುವಲ್ಲಿ ಗೆಲ್ಲುವುದೇ ತಮ್ಮ ಗುರಿಯೆಂಬಂತೆ ವರ್ತಿಸಿದಾಗಲೆಲ್ಲ ನೀನೂ ಅದನ್ನೇ ಮಾಡಿ ನನ್ನ ಪೂರ್ತಿ ಗಮನ ನಿನ್ನ ಮೇಲಿರುವಂತೆ ಮಾಡುತ್ತಿದ್ದುದು ನೆನಪಾಗುತ್ತದೆ, ನನ್ನೊಂದಿಗೆ ಮುನಿಸಿಕೊಂಡು ನನ್ನ ಆರರ ಮಗಳು ಒಂದು ಬದಿ ಸೇರಿದಾಗ , ನೀನೂ ನಾನು ಮಾತಾಡಿಸಿದಾಗಲೂ, ಮಾತಾಡದೆ ನನ್ನ ಮೇಲೆ ಮುನಿಸಿಕೊಳ್ಳುತ್ತಿದ್ದುದ್ದು, ನಿನ್ನನ್ನು ನಾನು ನಗಿಸಲು ಹರಸಾಹಸ ಮಾಡುತ್ತಿದ್ದುದು ನೆನಪಾಗುತ್ತದೆ, ಹೀಗೇ ನಿನ್ನ ಮುಗ್ಧತೆ ನನ್ನ ಮಕ್ಕಳ ಮುಗ್ಧತೆಯಲ್ಲಿ ಪ್ರತಿಫಲನಗೊಂಡು, ಅದನ್ನು ನಾನವರಿಗೆ ಸದಾ ಹೇಳುತ್ತಿದ್ದುದರಿಂದ ಮಧುಆಂಟಿ ಅಂದರೆ ಅವರಿಗೆ ಚಿರಪರಿಚಿತೆ ಗೊತ್ತಾ?
ಹೌದು ಮಧೂ, ಸರಿಸುಮಾರು ಕಳೆದೆರಡುವರ್ಷಗಳ ಹಿಂದಿನವರೆಗೆ ನೀನು ಹೇಳಿ ಸಮಾಧಾನಿಸುತ್ತಿದ್ದ ಹಾಗೆಯೇ ಎಲ್ಲ ನಡೆದಿತ್ತು. ಆಡಿಸುವವನು ನನ್ನ ನಿರಾಶಾದಾಯಕವಾಗಿದ್ದ ಬಾಳಿನ ಪಾತ್ರವನ್ನು ಪೂರ್ತಿ ಬದಲಿಸಿ ತುಂಬುಬಾಳಿನ ಪಾತ್ರವೊಂದನ್ನು ನನಗಾಗಿ ಇತ್ತಿದ್ದ. ನಾನೂ ಸಮರ್ಪಕವಾಗಿಯೇ ಅದನ್ನು ನಿರ್ವಹಿಸುತ್ತಾ ಸಂತೋಷದಿಂದಿದ್ದೆ. ಆಗೆಲ್ಲ ತಿಂಗಳಿಗೊಮ್ಮೆ ಟೂರ್ ಎಂದು ಹೊರಗೆ ಹೋಗುತ್ತಿದ್ದ ನನ್ನ ಯಜಮಾನರು ಒಂದು ಬಾರಿಗೆ ಹತ್ತಾರು ಸೀರೆಗಳು, ಒಡವೆಗಳನ್ನು ತರುತ್ತಿದ್ದರು. ಹಠಾತ್ತನೆ ಬಂದ ಈ ಸಮೃಧ್ಧತೆಯಿಂದ ಆಶರ್ಯವೂ ಅಗುತ್ತಿತ್ತು, ಭಯವೂ, ಸಂಶಯವೂ ಆಗುತ್ತಿತ್ತು ಆದರೆ "ಇಲ್ಲ ಇಲ್ಲ" ಗಳ ನಡುವೆಯೇ ಬದುಕಿದ್ದ ನಾನು ಈ ಸಿಕ್ಕಿದ ಸೌಭಾಗ್ಯಗಳ ನಡುವೆ ಆ ಸಂಶಯವನ್ನು ಕಡೆಗಣಿಸಿದೆ. ಬಿಸಿನೆಸ್ ಎಂದರೆ ಹಾಗೇ ತಾನೇ, ಚೆನ್ನಾಗಿದ್ದಾಗ ದುಡ್ಡು ತುಂಬಾ ಬರುತ್ತದೆ, ಅಂದುಕೊಂಡು ಸುಮ್ಮನಾಗುತ್ತಿದ್ದೆ. ದೊಡ್ಡದೊಂದು ಮನೆ ಆಯ್ತು, ಮಕ್ಕಳೂ ತುಂಬಾ ವೈಭೋಗಗಳ ನಡುವೆಯೇ ಬದುಕುತ್ತಿದ್ದರು. ಹೀಗಿದ್ದಾಗಲೇ ಬರಸಿಡಿಲಿನಂತೆ ಒಂದು ದಿನ ಸುಧ್ಧಿಯೊಂದು ನಮ್ಮ ಮನೆಬಾಗಿಲಿಗೆ ಬಂತು. ಈ ಮನೆ, ಅದರೊಂದಿಗೆ ನಮ್ಮ ಯಜಮಾನರ ಹೆಸರಿನಲ್ಲಿದ್ದ ವಿಮಾಪಾಲಿಸಿಗಳು ಎಲ್ಲವನ್ನೂ ಅಡವಿಡಲಾಗಿದೆ, ಇನ್ನಾರು ತಿಂಗಳೊಳಗೆ ಸಾಲದ ಮೊದಲೆರಡು ಕಂತುಗಳನ್ನು ಕಟ್ಟದಿದ್ದರೆ ಮನೆಯ ವಿಷಯ ಗಂಭೀರವಾಗುತ್ತದೆ ಎಂಬುವುದೇ ಆ ಸುಧ್ಧಿಯಾಗಿತ್ತು . ನಮ್ಮ ಯಜಮಾನರ ಬಳಿ ಇದರ ಬಗೆಗಿನ ಯಾವುದೇ ಪ್ರಶ್ನೆಗಳಿಗೆ ಉತ್ತರವಿಲ್ಲ. ಅವರು ಮುದುರಿಕೊಂಡು ಗುಬ್ಬಚ್ಚಿಯಂತೆ ಮನೆಯೊಳಗೆ ಕೂತುಬಿಟ್ಟಿದ್ದಾರೆ, ಯಾವುದೇ ವಿಚಾರಣೆಗೂ, ಬಯ್ಗುಳಗಳಿಗೂ, ಪ್ರತಿಕ್ರಿಯಿಸುವುದಿಲ್ಲ. ಇವರೇನಾ ಆ ಕಾರುಬಾರಿನ ಮನುಷ್ಯ?! ಅನಿಸುತ್ತದೆ. ಆದರೆ ನಾನು ಅವರಂತೆ ಕೈಕಟ್ಟಿ ಕೂಡುವಂತಿಲ್ಲವಲ್ಲ? ನನ್ನ ಹಿಂಜರಿಕೆ ಮಕ್ಕಳ ದಕ್ಕದ ಆಸೆಯ ಬೊಕ್ಕಸದ ಮುಂದೆ ತಲೆತಗ್ಗಿಸಿ ಕುಳಿತಿದೆ. ಅನಿವಾರ್ಯವಾಗಿ ಹಣ ಸಂಪಾದನೆಯ ದಾರಿ ಹುಡುಕತೊಡಗಿದೆ, ಒಂದೆರಡು ಮೂಲಗಳಿಂದ ಸ್ವಲ್ಪ ಸಂಪಾದಿಸುತ್ತಿದ್ದೇನೆ. ಹೊಟ್ಟೆ ಬಟ್ಟೆಗೆ ಸಾಕಾದೀತು, ಆದರೆ ಎ ಸಿ , ಕಂಪ್ಯೂಟರ್ ಮುಂತಾದ ಐಷಾರಾಮಗಳಿಗೆ ಒಗ್ಗಿಕೊಂಡ ನನ್ನ ಮಕ್ಕಳು ನನ್ನ ಅಸಹಾಯಕತೆಯನ್ನು ಸ್ವಲ್ಪವೂ ಅರ್ಥ ಮಾಡಿಕೊಳ್ಳಲಾರರು. ಈಗ ಒಂದೆರಡು ತಿಂಗಳ ಹಿಂದೆ ಮನೆಯೆದುರು ಸೊಂಪಾಗಿ ಬೆಳೆಸಿದ್ದ ನನ್ನ ತೋಟವಿದ್ದ ಜಾಗವನ್ನೂ ಮಾರಿಬಿಟ್ಟೆವು. ಮಧೂ, ಪ್ರತಿ ದಿನ ಒಂದು ಮಾರು ಮಲ್ಲಿಗೆ, ಕನಕಾಂಬರ ಹೂವಿನ ಮಾಲೆ ಕಟ್ಟಿ ದೇವರಿಗಿಡುತ್ತಿದ್ದೆ ಗೊತ್ತಾ? ಆ ಜಾಗದೊಳಗೆ ಬರುತ್ತಿದ್ದದರಿಂದ ನಮ್ಮ ಮನೆಯೆದುರಿನ ಪೋರ್ಟಿಕೋ ವನ್ನೂ ಒಡೆಸಬೇಕಾಯಿತು, ಅಲ್ಲೊಂದು ಆಸೆಯಿಂದ ಕೊಂಡು ತಂದಿದ್ದ ತೂಗುಯ್ಯಾಲೆಯಿತ್ತು ಮಧೂ. ಅದರಲ್ಲಿ ಬಿಡುವಿನ ವೇಳೆ ಕೂತು ನನ್ನ ಬಾಲ್ಯಕ್ಕಿಳಿದು ಸಂಭ್ರಮಿಸುತ್ತಿದ್ದೆ. ಹೀಗೆ ವೈಭವಗಳೆಲ್ಲ ಹೋಗಿ, ಬಣಬಣಜೀವನವೆಂಬಂತಾಗಿದೆ, ತಿಂಗಳ ಕೊನೇ ವಾರ ನನ್ನನ್ನ್ನು ನಾನು ಅವಮಾನಗಳಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಹರಸಾಹಸ ಪಡಬೇಕಾಗುತ್ತದೆ. ಇರಲಿ ಬಿಡು, ಕಾಲಚಕ್ರದ ಗತಿಯಲ್ಲಿ ಹಿಂದೊಮ್ಮೆ ನನ್ನ ಪಾಲಿಗೆ ಬಂದಿದ್ದ ಸವಿಭಾಗ ಮುಂದೆ ಮತ್ತೊಮ್ಮೆ ಬಂದೀತು ಎಂಬ ಮಿಣಮಿಣ ಆಸೆಯೊಂದಿಗೆ ಬದುಕುತ್ತಿದ್ದೇನೆ.
ಹೌದಮ್ಮ. ಕೆಲದಿನಗಳಿಂದ ನೀನು ಸುಖವಾಗಿದ್ದೀಯಾ ಅಂತ ಎಂದು ತಿಳಿದುಕೊಳ್ಳಬೇಕೆಂದು ತುಂಬಾ ಅನ್ನಿಸುತ್ತಿತ್ತು. ನಿನ್ನ ಬಗ್ಗೆ ಯಾಕೋ ಏನೋ ಸರಿಯಿಲ್ಲವೆನಿಸುತ್ತಿತ್ತು. ಮಧೂ, ನನ್ನ ನೆರೆಕೆರೆಗೆ ಒಂದು ಜೋಡಿ ಬಂದಿದೆ. ಇಬ್ಬರೂ ಕೆಲಸಕ್ಕೆ ಹೋಗುತ್ತಾರೆ. ತುಂಬಾ ಮೃದು ಸ್ವಭಾವದಾಕೆ ಆಕೆ. ತುಂಬಾ ಜಾಣೆಯೂ ಹೌದು. ಬಾಡಿಗೆಯ ಮನೆಯಾದರೂ ತುಂಬ ಒಪ್ಪಓರಣಗಳಿಂದ ಅಲಂಕರಿಸಿದ್ದಾಳೆ. ಬೆಳಗ್ಗೆ ಬೇಗನೆದ್ದು ಮನೆಮುಂದೆ ತುಂಬಾ ದೊಡ್ದದಾಗಿರುವ ಅಂಗಳವನ್ನು ಪ್ರತೀದಿನ ತೊಳೆದು, ರಂಗೋಲಿಯಿಟ್ಟು, ಮನೆಯೆಲ್ಲ ಗುಡಿಸಿ, ಒರೆಸಿ ಒಂಭತ್ತರೊಳಗೇ ಎಲ್ಲ ಕೆಲಸ ಮುಗಿಸಿ ಸುಂದರವಾಗಿ ಅಲಂಕರಿಸಿಕೊಂಡು ಗಂಡನೊಂದಿಗೆ ಹೊರಡುತ್ತಾಳೆ. ಸಂಜೆ ಮತ್ತೆ ಆತ ಆರಕ್ಕೆಲ್ಲ ಆಕೆಯನ್ನು ಕರಕೊಂಡು ಮನೆಗೆ ಬರುತ್ತಾರೆ, ಮತ್ತೆ ಸಿಂಗರಿಸಿಕೊಂಡು ಹೊರಗೆ ತಿರುಗಾಡಲು ಹೋಗುತ್ತಾರೆ. ಏನೇನೋ ಕೊಂಡು ತರುತ್ತಾರೆ, ರಾತ್ರಿ ಊಟದ ನಂತರ ಅಂಗಳದಲ್ಲಿ ಎರಡು ಕುರ್ಚಿಗಳನ್ನಿಟ್ಟು ಕೂತು ಮಾತಾಡುತ್ತಾರೆ, ಹೀಗೇ ತುಂಬಾ ನಿರಾಳವಾದ ಸುಖೀ ಜೀವನ ನಡೆಸುತ್ತಾರೆ- ಇದು ನನ್ನ ನಿಲುವಾಗಿತ್ತು. ಅಲ್ಲದೇ ಸುತ್ತಲಿನವರೆಲ್ಲಾ "ಅವರಂತೆ ನಾವಿರಲೇ ಇಲ್ಲವಲ್ಲಾ, ಮದುವೆಯಾದ ಕೂಡಲೇ ಮಕ್ಕಳು, ಅವರ ಜವಾಬ್ದಾರಿಗಳ ನಡುವೆ, ಹೀಗೆ ಕಳೆಯಬಹುದಾಗಿದ್ದ ಗಳಿಗೆಗಳಿಂದ ವಂಚಿತರಾದೆವು" ಎಂದು ಅಲವತ್ತುಕೊಳ್ಳುತ್ತಿದ್ದದ್ದು ನಾನು ಕೇಳಿದ್ದೆ. ಅಷ್ಟಾಗಿ ಯಾರೊಂದಿಗೂ ಬೆರೆಯದ ಆಕೆ ಈಗ ಕಳೆದತಿಂಗಳು ಒಂದುದಿನ ನಮ್ಮ ಮನೆಗೆ ಬಂದಿದ್ದಳು. ಎರಡುವರ್ಷದ ನನ್ನ ಮಗನಿಗಾಗಿ ಹಾಲುಪಾಯಸ ಮಾಡಿ ತಂದಿದ್ದಳು. "ಅಯ್ಯೋ ಕೆಲಸಕ್ಕೆ ಹೋಗುವವರು ನೀವು, ಇವನಿಗಾಗಿ ಕಷ್ಟ ಯಾಕೆ ತಗೊಂಡಿರಿ?" ಅಂದದ್ದಕ್ಕೆ "ಇಲಪ್ಪ " ಅಂದು ಸುಮ್ಮನಾಗಿದ್ದಳು. ಮತ್ತೆ ಕಳೆದವಾರ ಅದೇ ಪಾಯಸ ಮಾಡಿ ತಂದುಕೊಟ್ಟಳು. ಮಧ್ಯೆ ಒಂದುಬಾರಿಯೂದರೂ ಬರದೆ ಒಂದು ತಿಂಗಳ ನಂತರ ಅದೂ ಅದೇ ಪಾಯಸದೊಂದಿಗೆ?! ನನಗೆ ಆಶ್ಚರ್ಯವಾದದ್ದು ಬಹುಶಃ ಗೊತ್ತಾಗಿರಬೇಕು. ಮೆತ್ತಗೆ ಮಾತು ಸುರುಮಾಡಿದಳು. ಮದುವೆಯಾಗಿ ವರ್ಷ ಐದಾದರೂ ಮಕ್ಕಳಾಗದಿದ್ದದ್ದಕ್ಕೆ ಅವರಿವರು ಹೇಳಿದ ವ್ರತವನ್ನೆಲ್ಲ ಮಾಡುತ್ತಾಳಂತೆ. ಇದೂ ಅದರಲ್ಲೊಂದಂತೆ, ಪ್ರತೀ ತಿಂಗಳ ಶ್ರವಣ ನಕ್ಷತ್ರದಂದು ಬೆಳಿಗ್ಗಿನಿಂದ ಸಂಜೆಯವರೆಗೂ ಉಪವಾಸವಿದ್ದು ಎರಡುವರ್ಷದೊಳಗಿನ ಮಗುವೊಂದಕ್ಕೆ ಹಾಲುಪಾಯಸ ತಿನ್ನಿಸಿ ತಾನುಣ್ಣಬೇಕಂತೆ. ಇದನ್ನು ಹೇಳುವಾಗ ಆಕೆ ಸಂಕೋಚ, ಕೀಳರಿಮೆಗಳಿಂದ ಹಿಡಿಯಾಗಿದ್ದಳು. ಎಷ್ಟು ತಡೆದರೂ ಅವಳ ಕಣ್ಣಲ್ಲಿ ನಿಲ್ಲದೇ ಹರಿದ ಕಣ್ಣೀರಿನ ಕಣಕಣದಲ್ಲೂ ನಾನು ನಿನ್ನ ಕಣ್ಣೀರನ್ನು ಕಂಡೆ ಮಧೂ. ಅದಕ್ಕೇ ಮತ್ತೆ ಮತ್ತೆ ಕೇಳಿದ್ದು ಹೇಗಿದ್ದೀಯಾ ಅಂತ.
ನಿನಗೆ ಗೊತ್ತಾ ಮಧೂ, ನಮ್ಮ ಜೀವನ ಅಪ್ಪ-ಅಮ್ಮನ ವಶದಿಂದೀಚೆಗೆ ನಮ್ಮದೇ ಕಾಲಿನ ಮೇಲೆ ಬಂದಾದ ಕೂಡಲೇ ಮುಖವಾಡಗಳ ಹಿಂದೆ ಬಾಳಬೇಕಾದ ಅನಿವಾರ್ಯತೆ ಬಂದಿರುತ್ತದೆ. ಅದರಲ್ಲಿ ಕೆಲವು ಮುಖವಾಡಗಳು ಹೆಚ್ಚಿನಂಶ ನಮ್ಮ ಮುಖವನ್ನು ಹೋಲುತ್ತಿರುವಂಥಹವೂ ಇರುತ್ತವೆ. ಹಾಗಾಗಿ ನೀನೊಬ್ಬಳೇ ಅಲ್ಲ, ಎಲ್ಲರೂ ನಟಿಸಲೇಬೇಕು. ಈಗ ನೋಡು, ನನ್ನ ಇಷ್ಟೊಂದು ಯಾತನೆಗಳ ಮಧ್ಯೆ ನಿಷ್ಕ್ರಿಯರೆಂಬಂತೆ , ತನಗೆ ಹಾಗೂ ಈ ಜವಾಬ್ದಾರಿಗಳಿಗೆ ಸಂಬಂಧವೇ ಇಲ್ಲವೆಂಬಂತೆ ಕೂತಿರುವ ನನ್ನ ಯಜಮಾನರನ್ನು ನೋಡು. "ಒಂದು ಕಪ್ ಚಾ" ಅಂತ ಆಗಿನಿಂದ ಕೂಗುತ್ತಿದ್ದಾರೆ. ನಾನೀಗ ಅದನ್ನ ಮಾಡಿ ನಗುತ್ತಲೇ ಕೊಂಡೊಯ್ಯಬೇಕು. ಯಾಕೆಂದರೆ, ಅವರ ಮಟ್ಟಿಗೆ ಅವರು ಈಗ ಅತ್ಯಂತ ದಯನೀಯ ಪರಿಸ್ಥಿಯಲ್ಲಿದ್ದಾರೆ, ಹಾಗೂ ನನ್ನೆಲ್ಲ ಸಹಾನುಭೂತಿಗೆ ಪಾತ್ರರಾಗಿದ್ದಾರೆ. ನಾನು ಅವರ ಕಷ್ಟದಲ್ಲಿ ಅವರಿಗೆ ಆಸರೆಯಾಗುವ ಮಹತ್ತರ ಪಾತ್ರವನ್ನು ನನ್ನೊಳಗಿನ ಅಹಂಗಾಗಿಯೋ, ಅಥವಾ ಮಕ್ಕಳೆಂಬ ನಿವಾರ್ಯತೆಗಾಗಿಯೋ ವಹಿಸಿಕೊಂಡಾಗಿದೆ. ಈಗ ಅದಕ್ಕೆ ತಕ್ಕಂತೆ ವೇಷ ಕಟ್ಟಿ ಕುಣಿಯಲೇಬೇಕು. .
ಹೋಗಲಿ ಬಿಡಮ್ಮ. ಇಲ್ಲ ಅನ್ನುವ ದುಖಃ ಕ್ಕಿಂತ ಇದ್ದವರ ಹೊಟ್ಟೆ ಹೊರೆಯಲಾಗದ ಅಸಹಾಯಕತೆ ಕೆಟ್ಟದ್ದೆಂಬುದು ನನ್ನ ಭಾವನೆ. ಅವರವರಿಗೆ ಅವರವರ ಗೋಳೇ ದೊಡ್ಡದು ಅಲ್ಲವೇ? ನಾನು ನಿನ್ನದೇ ಮಾತುಗಳಲ್ಲಿ ಹೇಳುತ್ತೇನೆ ಕೇಳು- ನಾವು ನಮಗರಿವಿರುವಂತೆ ಯಾವ ತಪ್ಪನ್ನೂ ಮಾಡಿಲ್ಲವಾದರೆ ದೊರಕಿದ್ದನ್ನು ಶಿಕ್ಷೆಯೆಂದೇಕೆ ಅಂದುಕೊಳ್ಳಬೇಕು ಹೇಳು? ಈ ಅನಿವಾರ್ಯತೆಗಳು ನನ್ನನ್ನೇ ನುಂಗುವಷ್ಟು ತೀವ್ರವಾದಾಗ ಎಷ್ಟೋ ಬಾರಿ "ಈ ಮಕ್ಕಳಿರದಿದ್ದರೆ!!!!!" ಅನ್ನಿಸಿದ್ದಿದೆ. ಯಾವುದು ನಿನಗೆ ಬೆಟ್ಟದಷ್ಟು ದೊಡ್ಡ ಕೊರತೆಯಾಗಿ ಕಾಡುತ್ತಿದೆಯೋ ನಾನು ಅದಕ್ಕಾಗಿ ಹಂಬಲಿಸುವಂಥಹ ಪರಿಸ್ಥಿತಿ. ನೋಡಿದೆಯಾ, ಯಾವ ದುಖಃವೂ ಎಲ್ಲಕ್ಕಿಂತ ದೊಡ್ಡದೆನಿಸಿಕೊಳ್ಳಲಾರದು. ಮೇಲಿರುವ ಆತನ ಇಂದಿನ ಈ ನಡೆ ಮುಂದಿನ ಯಾವುದೋ ಒಂದು ಸವಿಕೊಡುಗೆಯ ತಯಾರಿಯಿರಬಹುದು. ಹಾಗಂದುಕೊಂಡು ಬಾಳೋಣ. ಆ ಗಳಿಗೆಯ ನಿರೀಕ್ಷೆಯಲ್ಲಿ ಆಶಾವಾದಿಗಳಾಗಿರೋಣ , ಬೇರೆ ದಾರಿಯಿಲ್ಲವಲ್ಲಾ?
ನಿನ್ನ ಎಲ್ಲಾ ನೋವುಗಳೂ ಸಹಜವೇ, ನೀನು ಅನುಭವಿಸಿದ ತೀವ್ರತೆ ನಿನಗೊಬ್ಬಳಿಗೇ ಗೊತ್ತು- ಒಪ್ಪುತ್ತೇನೆ. ಆದರೆ ದಯವಿಟ್ಟು ನಿನ್ನ ಮೇಲೇ ನೀನು "ಅಯ್ಯೋ ಪಾಪ" ಅನ್ನುವುದನ್ನು ಬಿಟ್ಟು ಮುಂದೆ ನಡೆದರೆ ಮಾತ್ರ ಬೇರೆಯವರೂ ಹಾಗೆ ಹೇಳದ ಹಾಗೆ ನಿನ್ನ ಜೀವನವನ್ನು ರೂಪಿಸಿಕೊಳ್ಳಬಲ್ಲೆ. ಆತ್ಮವಿಶಾಸವಿಲ್ಲದ ನೊಂದವನಿಗೆ ಬೇರೊಂದು ಜೀವಿಯಿಂದ ಯಾವತ್ತೂ ಅಸರೆ ಸಿಗದು, ಸಿಕ್ಕುವುದೆಂದರೆ ಅದು ಪೊಳ್ಳು ಸಹಾನುಭೂತಿ ಮಾತ್ರ.
ಯಾವಾಗಲೂ ನನಗೇ ಬುಧ್ಧಿಮಾತು ಹೇಳಿ ಸಮಾಧಾನಿಸುತ್ತಿದ್ದ ನನ್ನ ಮಧೂಗೆ ನಾನು ಇವೆಲ್ಲ ಹೇಳುವಂತಾಯಿತಲ್ಲಾ? ಇರಲಿ ಬಿಡು, ಆಗೆಲ್ಲ ನಿನ್ನ ಕೊರೆತವನ್ನು ನಾನು ಕೇಳುತ್ತಿದ್ದೆ, ಈಗ ನೀನೂ ಕೇಳು, ಅದರ ಕಷ್ಟ ಏನೆಂಬುದು ನಿನಗೂ ತಿಳಿಯಲಿ.ಅರ‍ೇ, ನಿನ್ನ ಮುದ್ದು ಮುಖದಲ್ಲಿ ಅರಳಿದ ಹೂನಗೆ ನಾನು ಕಾಣುತ್ತಿದ್ದೇನೆ, "ಹೊಡೀತೀನಿ ನೋಡು" ಅಂದದ್ದೂ ಕೇಳಿತು. ಸಿಕ್ಕಿದಾಗ ಬೇಕಾದಷ್ಟು ಹೊಡಿ ಆಯ್ತಾ?
ಈಗ ಮುಗಿಸುತ್ತೇನೆ, ಆದಾಗಲೆಲ್ಲ ಬರೆಯುತ್ತಿರು,
ನಿನ್ನ
ಅಚೂ

No comments:

Post a Comment