Wednesday, August 28, 2013

**

ದ್ವಾಪರಯುಗದ ಹೆಂಗಳೆಯರ ಪಾಡು ನನಗೆ ಇವತ್ತು ಅನುಭವವೇದ್ಯವಾಯಿತು, ಅರ್ಥವಾಯಿತು.
ಬೆಳಗ್ಗೆ ಏಳುತಲೇ ಇಂದಿನ ದಿನ ಏನೋ ಮೈಮನ ತುಂಬ ಉಲ್ಲಾಸ, ಹುರುಪು, ಹುಮ್ಮಸ್ಸು, ಅಕಾರಣ ಖುಶಿ .. ಇವತ್ತು ನಮ್ಮ ಕೃಷ್ಣ ಹುಟ್ಟಿದ ದಿನ. ಅದಕ್ಕೇನು?! ಏನೂ ಇಲ್ಲ, ಇವತ್ತು ಅಂದರೆ ಅವನು ಪುನಃ ಪುನಃ ನನ್ನ ಮನಸಿನಲ್ಲಿ ವ್ಯಕ್ತವಾಗುವ ಗಳಿಗೆಗಳ ಸಂಚಯ. ಮನೆಯಲ್ಲೂ ಮನದಲ್ಲೂ ಎಡವುವ ಗೆಜ್ಜೆಕಾಲಿನ ಹೆಜ್ಜೆಯಿಡುತ್ತಾ ಪುಟುಪುಟು ಓಡಾಡುತ್ತಾ, ಕಾಲ್ತೊಡರುವ ಪೀತಾಂಬರ, "ಅಯ್ಯೋ ಬಿದ್ದೀತು ಮಗು!!" ಅಂತ ಗಾಭರಿಗೊಳಿಸುತ್ತಾ, "ನಾ ಬಿದ್ದೇನೇನಮ್ಮಾ. ಹಾಗೊಂದು ವೇಳೆ ಬಿದ್ದರೂ ಏನೀಗ, ನೀನಿಲ್ಲವೇ ಎತ್ತಿ ಮುತ್ತಿಕ್ಕಿ ನೋವು ಮರೆಸಲು?" ಅನ್ನುವ ಭಾವದಲೆಂಬಂತೆ ನಗುತ್ತಾ , ಸಿಂಗರಿಸಲ್ಪಟ್ಟ ಕೊಳಲು, ಅವನಷ್ಟೇ ಉದ್ದದ್ದು, ಕೈಯ್ಯಲ್ಲಿ ಅತ್ತಿತ್ತ ಬೀಸುತ್ತಾ ಓಡಾಡುವ ಸಂಭ್ರಮ ಅಕ್ಷರಶಃ ಅನುಭವಕ್ಕೆ ಬರುತ್ತದೆ.. . ತಲೆಯ ನವಿಲುಗರಿಯ ನವಿರುಸ್ಪರ್ಶಕೆ ಗಾಳಿಯೆಲ್ಲಾ ಘಮಘಮಿಸಿದಂತೆ, ಎಲ್ಲೆಡೆ "ಅನುಅಮ್ಮಾ... ಅನುಅಮ್ಮಾ..."ಅವನ ಕೀಟಲೆಯ ದನಿ ಹರಡಿ ಇಡೀ ವಾತಾವರಣವೇ ಇಂಪೆನಿಸಿದಂತೆ.. .. ಭಾವಜೀವಿಯೇ ಹೌದಾದರೂ ಬೇರಾವ ದಿನವೂ ಇಷ್ಟರಮಟ್ಟಿಗೆ ಭಾವವಶವಾಗದವಳು ನೆನಪಿನಲ್ಲಿ ಉಳಿದಿರುವಂತೆ ಎಲ್ಲಾ ಕೃಷ್ಣಾಷ್ಟಮಿಯ ದಿನಗಳಲ್ಲಿ ಮಾತ್ರ ಕಳೆದೇಹೋಗಿಬಿಡುತ್ತೇನೆ, ಅವನ ಕಲ್ಪನೆಯಲ್ಲಿ, ಅಲ್ಲಿನ ನನ್ನ ಅವನ ನಂಟಿನಲ್ಲಿ, ಅದು ಬೆಸೆವ ಬಂಧದಲ್ಲಿ...
ಯಾವತ್ತೂ ಕೃಷ್ಣ ನನಗೊಬ್ಬ ಶಕ್ತಿಶಾಲಿಯಾಗಿ, ಆಪದ್ಬಾಂಧವ, ಅನಾಥರಕ್ಷಕ, ಪವಾಡಗಳ ಮೊತ್ತ, ಜಗದ ಜವಾಬ್ದಾರಿ ಹೊರುವ ದೈವತ್ವವಾಗಿ ಕಂಡುಬರಲಿಲ್ಲ. ಅವನ ಬುದ್ಧಿವಂತಿಕೆ, ಚಾತುರ್ಯತೆ, ಯುದ್ಧನೈಪುಣ್ಯತೆ, ಶೌರ್ಯ, ಮುತ್ಸದ್ದಿತನಗಳು ಮೆರೆದ ಯಾವ ಪಾತ್ರದಲ್ಲೂ ಅವನ ಶ್ರೇಷ್ಠತೆ ವಿಶಿಷ್ಠ ಅನಿಸಲಿಲ್ಲ. ಗೋಕುಲದಲ್ಲಿ ಮುದ್ದುಕಂದನಾಗಿ ನಿರ್ವಹಿಸಿದ ಅವನ ಪಾತ್ರವೇ ಮನದಲ್ಲಿ ಅಚ್ಚಳಿಯದೆ ನಿಚ್ಚಳ ನಿಂತುಬಿಟ್ಟಿದೆ. ಅದಕ್ಕೇ ಅವನ ಹುಟ್ಟುಹಬ್ಬದ ದಿನ ಥೇಟ್ ನನ್ನ ಅರ್ಪಿತಾಳ ಹುಟ್ಟುಹಬ್ಬಕ್ಕೆ ಯಾವ ಸಂಭ್ರಮದಲ್ಲಿ ಅವಳಿಗಿಷ್ಟವಾದದ್ದೆಲ್ಲ ಮಾಡುವ ಆತುರದಲ್ಲಿರುತ್ತೇನೋ ಅದೇ ಆತುರ ಜನ್ಮಾಷ್ಟಮಿಯ ತಯಾರಿಯಲ್ಲೂ ಇರುತ್ತದೆ.. ಅವನಿಂದಿಗೂ, ಎಂದಿಗೂ ಅದೇ ಪುಟ್ಟುಕಂದ, ಮುದ್ದುಬಂಗಾರ ನನ್ನ ಪಾಲಿಗೆ...
ಈ ಬಾರಿ ಮನೆಯಲ್ಲಿ ವಿದ್ಯುಕ್ತವಾಗಿ ನಡೆಯಬೇಕಾದ ಗೋಕುಲಾಷ್ಟಮಿಯ ಆಚರಣೆಗಳಲ್ಲಿ ಪಾಲ್ಗೊಳ್ಳುವ ಅವಕಾಶ ನನಗಿಲ್ಲವಾದ ಕಾರಣ, ನಿನ್ನೆ ತಯಾರಿಸಿಟ್ಟ ಕೆಲ ತಿನಿಸುಗಳಷ್ಟೇ ಅವನ ನೈವೇದ್ಯಕ್ಕಿಟ್ಟು ಅಪ್ಪ ಮಗಳು ರಾತ್ರಿ ಅವನಿಗೆ ಅರ್ಘ್ಯವಿತ್ತು ಪೂಜಿಸಲಿದ್ದಾರೆ. ಆದರೂ ಮಗಳಿಗೇಕೋ ಕಸಿವಿಸಿ.. "ನೀನು ಮಾಡಿಟ್ಟದ್ದು, ನಿನ್ನ ಕೃಷ್ಣನಿಗೆ ನೀನೇ ತಿನ್ನಿಸಬೇಕಿತ್ತಮ್ಮಾ..ಯಾಕಮ್ಮಾ ಹೀಗಾಯ್ತು? " ಕೃಷ್ಣನ ಮಾತು ಬಂದಾಗ ಅತಿಭಾವುಕಳಾಗುವ ನನ್ನ ಪರಿ ಮುಂಚೆ ಅವಳಿಗೂ ಅರ್ಥವಾಗುತ್ತಿರಲಿಲ್ಲ.. ಈಗ ಹತ್ತುವರ್ಷದ ವಯಸ್ಸಿನ ಪ್ರಬುದ್ಧತೆಗೆ ತಕ್ಕಂತೆ ಸ್ವಲ್ಪ ಅರ್ಥ ಮಾಡಿಕೊಳ್ಳುತ್ತಾಳೆ. ನನ್ನ ಆ ಆನಂದದ ಕ್ಷಣಗಳಲ್ಲಿ ಅವಳೂ ಭಾಗಿಯಾಗಿ ಆಗಿ ಈಗ ಅವಳಿಗೂ ಕೃಷ್ಣ ನನ್ನಷ್ಟೇ ಪ್ರಿಯ. ಅವನ ಪೂಜೆಯಿಂದ ನಾನು ವಂಚಿತಳಾದೆ ಅನ್ನುವ ನೋವು ಅವಳದು. ದೈಹಿಕವಾಗಷ್ಟೇ ನನ್ನ ಭಾಗವಹಿಸುವಿಕೆಯಿಲ್ಲ, ಮಾನಸಿಕವಾಗಿ ನಾನು ಅವನ ನವವಿಧಪೂಜೆಯಲ್ಲೇ ಇದ್ದೇನೆ ಇಂದು ಮುಂಜಾನೆಯಿಂದ.. ಅವಳಿಗೆ ಹೇಗೆ ಅರ್ಥೈಸಲಿ ಇದನ್ನು?! ತಟ್ಟಂತ ಬಂದ ನನ್ನ ಉತ್ತರ ಹೀಗಿತ್ತು.. "ಇರಲಿ ಬಿಡೇ ಪುಟಾಣಿ, ಇಷ್ಟೊಂದು ಜನ ಕಾದಿರುತ್ತಾರೆ, ತುಂಬಿತುಳುಕುವ ಪ್ರೀತಿ ಅರ್ಪಿಸಲಿಕ್ಕೆ.. ಇವತ್ತು ಅಷ್ಟು ಜನರ ಅಗಾಧ ಪ್ರೀತಿಯುಂಡವನಿಗೆ ನಾಳೆ ಒಂದೇ ಸಲ ಎಲ್ಲ ಮುಗಿದು ಖಾಲಿ ಖಾಲಿ ಅನಿಸದೇ? ಮತ್ತೆ ನಾಳೆಯೂ ಸ್ವಲ್ಪಸ್ವಲ್ಪವಾದರೂ ಪ್ರೀತಿ, ಜನರ ಗಮನಗಳು ಬೇಕೆನಿಸದೇ? ಹಾಗೇ ನಿಧಾನವಾಗಿ ಜನರು ಮಾಮೂಲು ಜೀವನಕ್ಕೆ, ಮತ್ತೆ ಕೃಷ್ಣನೂ ಮಾಮೂಲು ದಿನಗಳಿಗೆ ಹೊಂದಿಕೊಳ್ತಾರೆ. ಅದಕ್ಕೆ ಕೆಲವೊಂದು ಮನೆಗಳಲ್ಲಿ ಇಂಥ ಸನ್ನಿವೇಶ ನಿರ್ಮಾಣ ಮಾಡಿ ನಾಳೆ, ನಾಡಿದ್ದೂ ತನಗೆ ಪ್ರೀತಿಯುಣ್ಣಲು ಸಾಧ್ಯವಾಗುವ ವ್ಯವಸ್ಥೆ ಮಾಡಿಕೊಳ್ಳುತ್ತಿರಬಹುದಲ್ವೇನೇ?" ಅವಳ ಮನಸಿಗೆ ಆ ಗಳಿಗೆಗೆ ಹೌದೆನಿಸಿತು.. "ಕಿಲಾಡಿಯಮ್ಮಾ ನಮ್ಮ ಕೃಷ್ಣ, ಎಷ್ಟು ಬುದ್ಧಿ ಅಲ್ವಾ ಅವನಿಗೆ?!" ನನ್ನ ತಂಗಿಯ ನಾಲ್ಕು ವರ್ಷದ ಪೋರ ಪ್ರವರ್ ಮಾಡುವ ಏನಾದರೊಂದು ಕೀಟಲೆಯ ಬಗ್ಗೆ ಮಾತಾಡಿದಂತಿತ್ತು ಅವಳ ಧಾಟಿ. ಇದು ಎಲ್ಲೆಲ್ಲೂ ಕೃಷ್ಣನೊದಗುವ ಪರಿ. ಅವನೆಲ್ಲೂ ನೆಲ ಬಿಟ್ಟು ಮೇಲಿನ ನೆಲೆಯವನೆನಿಸುವುದಿಲ್ಲ. ಇದೇ ನಾವು ನಿಂತು ನಡೆದಾಡುವ ನೆಲದ ಸಂಬಂಧಗಳಲ್ಲಿ ಅಡಕವಾಗಿರುತ್ತದೆ ಅವನತನ. ಆ ಪಾತ್ರದ ವಿಶಿಷ್ಠತೆಯೇ ಅದು. ಆ ಕಥೆಯ ಪಾತ್ರವೊಂದು ಬರೀ ಕಲ್ಪನೆಯಲ್ಲ, ಸಜೀವಬಂಧಗಳಲ್ಲಿ ಹಾಸುಹೊಕ್ಕಾಗಿರುವ ಅನುಭೂತಿಯೇ ಅನಿಸುವಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಪರಿಕಲ್ಪಿಸಿ, ನಮ್ಮ ಮುಂದಿಟ್ಟ ಆ ಮನಸ್ಸಿಗೆ ನಮೋನಮಃ.
ಸರಿ.. ಅವಳು ಶಾಲೆಗೆ ಹೋದಳು, ಅವಳಪ್ಪ ಆಫೀಸಿಗೆ. ಇವತ್ತು ಬುಧವಾರ.. ನನ್ನ ಸುಗಮಸಂಗೀತದ ಕ್ಲಾಸ್ ನಡೆಯುವ ದಿನ. ಎಲ್ಲರೂ ಬಂದರು, ಎಲ್ಲರ ಕಣ್ಣಲ್ಲೂ ಹೊಳೆಹೊಳೆಯುವ ಮಿಂಚು.. "ಅಷ್ಟಮಿಯ ಶುಭಾಶಯಗಳು ಅನೂ..." ಒಕ್ಕೊರಲಲಿ ಎಲ್ಲರೂ.. ಮಕ್ಕಳು ಬೆಳಿಗ್ಗೆ ಸ್ಕೂಲ್ ನಲ್ಲಿ "ಗುಡ್ ಮಾರ್ನಿಂಗ್ ಮ್ಯಾಮ್" ಅನುವಷ್ಟೇ ಉತ್ಸಾಹದಲ್ಲಿ... "ಏನಪ್ಪ ಎಲ್ಲರೂ ಸೀರೆ ಇವತ್ತು?" ಕೇಳಿದೆ.. "ಮತ್ತೆ ನಮ್ಮ ಕೂಸಿನ ಹುಟ್ಟುಹಬ್ಬ ಅಲ್ಲ್ವಾ ಅನೂ... " ಅವರ ಮನದುಂಬಿದ ಉತ್ತರ. ಒಡಲುತುಂಬಿ ಹಡೆದ ಜಗದೆಲ್ಲ ಮಡಿಲುಗಳಿಂದಲೂ, ಹಡೆಯದ ಮಡಿಲುಗಳಿಂದಲೂ ನಮ್ಮ ಕೂಸು ಅಂತಲೇ ಅನಿಸಿಕೊಳ್ಳುವ ಈ ವ್ಯಕ್ತಿತ್ವದ ವೈಶಾಲ್ಯತೆಗೆ ಏನನ್ನಬೇಕು ಗೊತ್ತಾಗಲಿಲ್ಲ.. ಈ ಕೃಷ್ಣ ಹೆಂಗಳೆಯರ ಮನಸನ್ನಾವರಿಸಿದಂತೆ ಗಂಡುಮನಗಳನ್ನೂ ಹೀಗೇ ತುಂಬಿಕೊಳ್ಳುತ್ತಾನೆಯೇ?.. ಗೊತ್ತಿಲ್ಲ. ಇವತ್ತು ಬರೀ ಕೃಷ್ಣನದೇ ಹಾಡುಗಳು ಅಂತ ನಿರ್ಧರಿತವಾಯ್ತು. ಹತ್ತೂವರೆಯಿಂದ ಹನ್ನೊಂದು ಮುಕ್ಕಾಲು ಹನ್ನೆರಡರವರೆಗೆ ನಡೆಯುವ ಕ್ಲಾಸು ಇವತ್ತು ಹನ್ನೆರಡುವರೆಯಾದರೂ ಮುಗಿಯುವ ಸೂಚನೆಯಿಲ್ಲ. ಕಲಿತವೆಲ್ಲ ಹಾಡಿ, ಹೊಸದು "ಬಾರೋ ಕೃಷ್ಣಯ್ಯಾ.." ಶುರು ಮಾಡಿ, ಯಥಾಪ್ರಕಾರ ಪಲ್ಲವಿ, ಅನುಪಲ್ಲವಿಗೆ ಇವತ್ತಿನ ಹೊಸಪಾಠ ಮುಗಿಯಿತು ಅನ್ನುವಂತೆ ನೋಡಿದರೆ, ಯಾರೂ ಪುಸ್ತಕ ಮಡಿಚುವ ಮೂಡಿನಲ್ಲಿಲ್ಲ.. ನಲವತ್ತರ ಆಸುಪಾಸಿನ ಮಂಡಿಗಳು ಚಕ್ಕಳಮಕ್ಕಳ ಹಾಕಿ ಕೂತು ನೋಯುತಿಲ್ಲ, ಬಾಯಿ ಆಕಳಿಸುತಿಲ್ಲ, ಬೆನ್ನು ನೋಯುತಿಲ್ಲ, ಕೂತ ಭಂಗಿ ಬದಲಿಸಬೇಕೆನಿಸುತಿಲ್ಲ.. ಏನಾಶ್ಚರ್ಯ!! ಇದೇ ಅಲ್ಲವೇ ಅವನ, ಅವನ ಭಕ್ತಿಯ, ಅವನ ಕೀರ್ತನೆಯ, ಅವನ ಸ್ಮರಣೆಯ, ಅವನ ಕಲ್ಪನೆಯ ಮೋಡಿ?!
ಹಾಗೇಹೀಗೇ ಮಾಡಿ ಅವರನ್ನು ಹನ್ನೆರಡುವರೆಗೆ ಕಳುಹಿಸಿಕೊಟ್ಟು ಅಡಿಗೆ ಮನೆಹೊಕ್ಕೆ. ಮಧ್ಯಾಹ್ನದ ಅಡಿಗೆಗೆ ಕುಕ್ಕರ್ ಕೂಗಿತ್ತು, ಉಳಿದುದು ಆಗಬೇಕಿತ್ತು. ಊಟಕ್ಕೆ ಒಂದುವರೆಗೆ ತಾನೇ ಬರುವುದು, ಸ್ವಲ್ಪ ಅವನ, ಅವನ ಮೋಡಿಯ, ಅವನೊಂದಿಗಿನ ಮನಸಿನ ತಾದಾತ್ಮ್ಯದ ಬಗ್ಗೆ ಬರೆಯುತ್ತೇನೆ ಅಂತ ಕಂಪ್ಯೂಟರ್ ಆನ್ ಮಾಡಿ ಕೂತೆ. ಹತ್ತು ಸಾಲಿಗಾಗುವಷ್ಟು ಯೋಚಿಸಿ, ಕಲ್ಪಿಸಿ, ಅನುಭವಿಸಿ, ಸವಿಸವಿದಾಗಲೊಮ್ಮೆ ಒಂದಕ್ಷರ ಮೂಡುತಿತ್ತು. ಹೀಗೇ ಕೆಲಹೊತ್ತು ಬರೆದು, ಹಲಹೊತ್ತು ಅವನ ಒಡನಾಟದಲ್ಲಿ ಮುಳುಗಿ ಕಳೆದುಹೋಗಿ, ಮತ್ತೆ ಈ ಲೋಕಕ್ಕೆ ಬಂದಾಗ ಗಂಟೆ ಒಂದೂವರೆ ತೋರಿಸುತ್ತಿತ್ತು. ದಢಕ್ಕನೆದ್ದವಳೇ ಅಡಿಗೆಮನೆಹೊಕ್ಕು ಗ್ಯಾಸ್ ಹಚ್ಚುವಷ್ಟರಲ್ಲಿ ಬೈಕ್ ನ ಹಾರ್ನ್ ಸದ್ದಾಗಿತ್ತು. ಬಾಗಿಲು ತೆಗೆದು ಬಂದವಳೇ ಮತ್ತೆ ಅಡಿಗೆ ಮನೆಗೋಡಿದೆ. ಬಹುಶಃ ಇಂದು ಅಷ್ಟಮಿಗೆ ಸಂಬಂಧ ಪಟ್ಟಂತೆ ಇದಾಗಬೇಕು, ಅದಾಗಬೇಕು ಅನ್ನುವ ಕಟ್ಟುಪಾಡಿನ ಆಚರಣೆಗಳ ಕಡೆಗಿರದ ಗಮನ ಪೂರ್ತಿಯಾಗಿ ಅವನಲ್ಲಿ ನೆಡಲ್ಪಟ್ಟುದುದಕೆ ನಾನು ಎಂದಿಗಿಂತ ಹೆಚ್ಚು ಅವನ ಹತ್ತಿರಕ್ಕೆ ಹೋಗುವುದು ಸಾಧ್ಯವಾಯಿತೇನೋ! ಹೆಚ್ಚು ತೊಡಗಿಕೊಂಡು ಕಳೆದುಹೋಗುವುದು ಸಾಧ್ಯವಾಯಿತೇನೋ! ದೂರವಿಟ್ಟು ಹತ್ತಿರಕೆ ಸೆಳೆದುಕೊಂಡಿದ್ದ ಮುಕುಂದ. "ಇನ್ನೂ ಆಗಿಲ್ವಾ, ಯಾಕೆ ಹೀಗೆ?" ಅಂತ ಗದರಿಸಿ ಪ್ರಶ್ನಿಸುವವರಿಲ್ಲದಿದ್ದರೂ, "ಹೀಗಾಯ್ತಲ್ಲಾ ಇವತ್ತು!" ಆಶ್ಚರ್ಯ ಅನಿಸಿತು ಒಂದು ಗಳಿಗೆ. ಹದಿನೆಂಟು ವರ್ಷದ ವೈವಾಹಿಕ ಜೀವನದಲ್ಲೆಂದೂ ಇಂಥದ್ದಾಗಿರಲಿಲ್ಲ, ಊಟದ ಹೊತ್ತಿಗೆ ಸರಿಯಾಗಿ ಅಡಿಗೆಯಾಗಿರಲಿಲ್ಲ ಅನ್ನುವ ಸಂದರ್ಭ ನೆನಪಿಲ್ಲ.
ಕಣ್ಮುಂದಿರದೇ ಇಷ್ಟರ ಮಟ್ಟಿಗೆ ನಮ್ಮನಾವರಿಸುವ ಆತ, ಇನ್ನು ಕೊಳಲೂದುತ್ತಾ, ನಗುನಗುತ್ತಾ, ಮಾತಾಡುತ್ತಾ, ಕಷ್ಟಕೊದಗಿ ಆಪ್ತನೆನಿಸುತ್ತಾ, ಅಕ್ಷರಶಃ ಕಣ್ಮುಂದಿದ್ದದ್ದೇ ಆದಲ್ಲಿ ಮನೆಮಠ, ಸಂಸಾರದ ಜವಾಬ್ದಾರಿ ಮರೆತು ಅವನೆದುರು ಪರವಶರಾಗಿ ಆ ಹೆಣ್ಮನಗಳು ಕಳೆದುಹೋಗುತ್ತಿದ್ದುದು, ಮತ್ತೆ ಮನೆಯವರ ಉರಿಗಣ್ಣಿಗೆ ತುತ್ತಾಗುತ್ತಿದ್ದುದು ಕಥೆಯಲ್ಲಿ ಓದಿದ್ದು ಕೃಷ್ಣನ ಬಗೆಗೆ ಓದಿದ ಎಲ್ಲ ವಿಷಯಗಳಲ್ಲಿ ಅನಿಸುವಂತೆ ಬರೀ ಕಥೆಯಿರಲಿಕ್ಕಿಲ್ಲ, ಬರೀ ಕಥೆಯಲ್ಲವೇ ಅಲ್ಲ ಅನಿಸಿತು.

1 comment:

  1. ನಿಜ ಮೇಡಂ, ಮನೆ ನಂದ ಗೋಕುಲವಾಗಿಸುವ ಮತ್ತು ಮನಸ್ಸುಗಳನ್ನು ದ್ವಾಪರವಾಗಿಸುವ ಪವಾಡ ಬಹುಶಃ ಬಾಲಕೃಷ್ಣನಿಗಲ್ಲದೆ ಇನ್ನಾರಿಗೂ ಸಾದ್ಯವಿಲ್ಲ.

    ReplyDelete