Friday, August 9, 2013

ಬದಲಾಗುವ ಪಾತ್ರಗಳು.


ಆಸ್ಪತ್ರೆಯ ಸ್ಪೆಶಲ್ ವಾರ್ಡ್ ನ ಮಂಚದ ಮೇಲೆ ಜೀವಂತಶವವಾಗಿ ಮಲಗಿದ್ದ ನಾಯಕರ ನಿಶ್ಚಲದಂತೆ ಕಾಣುತ್ತಿದ್ದ ಶರೀರದಲ್ಲಿ ಕಣ್ಣಗುಡ್ಡೆಗಳು ಮಾತ್ರ ಇನ್ನಿಲ್ಲದ ಚಟುವಟಿಕೆಯಿಂದ ಮೇಲೆಕೆಳಗಾಡುತಿದ್ದವು. ಹೊರಗೆ ಅಷ್ಟೇ ಕಾಣುತ್ತಿದ್ದರೂ ಮನಸಿನಾಳದಲ್ಲಿ ಒಂದೇ ಸವನೆ ಭಾವನೆಗಳ ಅಂಕೆಯಿಲ್ಲದ ಹಾರಾಟ..ಕಾಯಿಲೆಗಳ ಮೂಟೆಯಾಗಿದ್ದುದು ದೇಹ; ಮನಸಲ್ಲವಲ್ಲಾ, ವಯಸ್ಸಾದಂತೆ ದೇಹ ಬಲ ಕಳೆದುಕೊಳ್ಳುತ್ತಾ ಸಾಗಿದ್ದರೆ ಮನಸಿನ್ನೂ ಸೂಕ್ಷ್ಮ ಹಾಗೂ ಪ್ರತಿಕ್ರಿಯಿಸುವುದರಲ್ಲಿ ತೀವ್ರವಾಗುತಲೇ ನಡೆದಿತ್ತು
ಚಿಕ್ಕಂದಿನಲ್ಲಿ ಸುಳಿಗಾಳಿಯೆಂದು ಶಂಕುವಿನಾಕಾರದಲ್ಲಿ ಬೀಸುತ್ತಾ ತನ್ನೊಡಲೊಳಗೆ ಹಗುರವಾದದ್ದನ್ನೆಲ್ಲ ಸೇರಿಸಿಕೊಂಡು ಸುರುಳಿ ಸುತ್ತುತ್ತಿದ್ದ ಹಾಗೂ ಅದರ ಜೊತೆ ದುಷ್ಟಶಕ್ತಿಗಳ ಇರುವಿಕೆಯ ಮಾತಿಗೆ ಪಡುತಿದ್ದ ಗಾಭರಿಯ ನೆನಪು ಇಂದೂ ಸಣ್ಣಗೆ ಬೆವರಿಸಿತು. ಬೆನ್ನಲ್ಲೇ ಅಮ್ಮನ ಒದ್ದೆ ಸೆರಗು, ಅದರ ಹಿಂದೆ ಓಡಿಬಂದು ಅವಿತುಕೊಂಡಾಗ ಸಿಗುತ್ತಿದ್ದ ಸುರಕ್ಷಿತತೆಯ ಭಾವನೆಯ ನೆನಪು, ಕಣ್ಣೀಗ ಒದ್ದೆಒದ್ದೆ. ಅಲ್ಲ, ಅಮ್ಮನ ನೆನಪಿಗಲ್ಲ. ತುಂಬುಬಾಳು ಇತ್ತ ಕಣ್ಣೀರ್ಗರೆಸುವ ಬಲುಕಾಟಗಳ ನಡುವೆ ಅಮ್ಮನ ನೆನಪಿನ ಕಾಟ ತುಂಬ ಹಳೆಯದಾಗಿ ತೀವ್ರತೆ ಕಳಕೊಂಡಿತ್ತು. ಇಂದಿನ ಕಣ್ಣೀರೇನಿದ್ದರೂ ತಾನೆದುರು ನೋಡಬಲ್ಲ ಒಂದೇ ಒಂದು ಜೊತೆ ಕಂಗಳ ಆಸರೆಯೂ ಇಲ್ಲದ ತನ್ನ ಒಂಟಿತನದ ಅಸಹಾಯಕತೆಗೆ.
ಮೆಲ್ಲನೆ ಬಾಗಿಲು ದೂಡಿದಂತಾಯಿತು. ಪುನಃ ಚುಚ್ಚಲು ಬಂದಳೇ ನರ್ಸ್?! ಮನಸು ಬೆಚ್ಚಿತು, ದೇಹಕಾಗುವ ನೋವು ಸಹಿಸಿಸಹಿಸಿ ಅದು ಜಡ್ಡುಗಟ್ಟಿದ್ದರೂ ಮನಸು ಅವಲೋಕಿಸುತಲೇ ಇರುತಿತ್ತು. ಸೂಜಿಯ ಮೊನೆ ರಟ್ಟಿನಂತಾದ ಚರ್ಮಕ್ಕೆ ತಗುಲುತ್ತಿದ್ದಂತೇ ಅಯ್ಯೋ ಅಮ್ಮಾ... ನೋವಿನ ಸಂಭಾವ್ಯತೆಗೆ ಪ್ರತಿಯಾಗಿಯೇ ನರಳುವಿಕೆ ಮನಸಲ್ಲಿ ಹುಟ್ಟುತ್ತಿತ್ತು. ಆದರೆ ದನಿಯಾಗಿ ಹೊರಹೊಮ್ಮಲು ಕಾರ್ಯನಿರ್ವಹಿಸಬೇಕಾದ ಅಂಗಗಳೆಲ್ಲ ನಿಷ್ಕ್ರಿಯವಾಗಿದ್ದು ಆ ಮಾತಲ್ಲೇ ಉಡುಗಿ ಹೋಗುತ್ತಿತ್ತು. ಇದೆಂಥ ಯಾತನೆ..! ಎಲ್ಲ ಸಂವೇದನೆಗಳಿದ್ದೂ ಕಲ್ಲಿನಂತೆ ಬಿದ್ದುಕೊಂಡಿರಬೇಕಾದ ಶಾಪ. ಸದ್ಯ ಕಣ್ಣೊಂದು ಚಲನೆ ಕಳಕೊಂಡಿಲ್ಲ, ನೀರೂ ಬತ್ತಿಲ್ಲ. ಅಲ್ಲೊಳಗೊಂದು ಅಕ್ಷಯಪಾತ್ರೆಯಿದೆಯೋ ಎಂಬಂತೆ ಸದಾ ಕಂಬನಿಯ ಒರತೆಯೊಂದು ಒಸರುತಿರುತಿತ್ತು. ಅಲ್ಲಿ ಬಿಳಿಬಟ್ಟೆಯ ಬದಲು ಬಣ್ಣಬಣ್ಣ ಕಂಡು ನಿರಾಳತೆ, ಬೆನ್ನಲ್ಲೇ ಲಕ್ಷವೆಷ್ಟಕ್ಕೋ ಮೀರಿದಷ್ಟು ಬಾರಿ ನಿರಾಸೆಯಾಗಿ ಪರಿವರ್ತಿತವಾಗಿದ್ದರೂ ಮತ್ತೆ ಚಿಗುರೊಡೆದು ಬರುವ ಮೂರ್ಖ ಆಸೆ- ತುಳಸಿಯಿರಬಹುದೇ, ತುಂಗಾಳೇ, ತನ್ಮಯ್ ಇರಬಹುದೇ...?!
"
ಮಾಮಾ... "ಅಕ್ಕರೆಯ ಕಾಳಜಿಪೂರ್ಣ ದನಿ.."ಯಾರಿದು.. ಪರಿಚಿತ ದನಿಯಂತೂ ಅಲ್ಲ..." ತನ್ನ ಯೋಚನೆಗೆ ಮನಸು ತಾನೇ ನಕ್ಕಿತು.. ಪರಿಚಿತ-ಅಪರಿಚಿತ ದನಿಗಳನ್ನು ದೂರವಿಟ್ಟು ಬಂದು ವರ್ಷಗಳೆಷ್ಟೋ ಆಗಿಹೋದವು. ಕಾಲ ಆ ನೆನಪಿನ ಚೀಲ ಬರಿದಾಗಿಸುತ್ತಲೇ ಸಾಗಿದೆ. ಈಗ್ಯಾವುದು ಎದುರು ಬಂದರೂ ಅಪರಿಚಿತವೆನಿಸದಿದ್ದರೂ ತೀರಾ ಪರಿಚಿತವೆನಿಸುವುದೂ ಇಲ್ಲ. "ಏ ಹಾಗೇನೂ ಇಲ್ಲ, ಈಗಲೂ ತುಳಸಿಯೋ, ತುಂಗಾಳೋ ಬಂದು ಕೂಗಿದರೆ ನಾ ಗುರುತಿಸಬಲ್ಲೆ.."ತನಗೆ ತಾನೇ ಹೇಳಿಕೊಂಡಿತು. ಹಿಂದೆಯೇ ಬಿಕ್ಕಿತು.."ತನ್ಮಯ್..ಅತನಿಗೆ ಮಾತೇ ಬರುವುದಿಲ್ಲವಲ್ಲಾ..." ಮತ್ತೆ ಯೋಚನೆ.. ಏನೇ ಆದರೂ ಅವರು ಯಾರೇ ಬಂದರೂ ಅವರ ದೇಹದ ಪರಿಮಳದ ಆಗಮನವೇ ನನ್ನನ್ನೆಚ್ಚರಿಸಬಲ್ಲುದು, ಕೂಗಿ ಹೇಳಬಲ್ಲುದು .."ಇಗೋ ನಿನ್ನವರು ನಾವು ಬಂದಿದ್ದೇವೆ.." ಪುನಃ ಕರೆ.."ಮಾಮಾ, ನಾನು, ನೋಡಿ ನಾನು ಅದಿತಿ ಬಂದಿದ್ದೇನೆ, ನಿಮ್ಮನ್ನ ನೋಡಲೆಂದೇ ಉಡುಪಿಯಿಂದ ಬಂದಿದ್ದೇನೆ, ಹೇಗಿದ್ದೀರಿ?" ಒಂದೂ ಚಲನೆಯಿಲ್ಲ, ಕಣ್ಣಷ್ಟೇ ತುಂಬಿಕೊಳುತಿತ್ತು, ಎದುರಿದ್ದುದನ್ನೂ ಜೊತೆಗೆ ಪ್ರತಿಕ್ರಿಯಿಸಲಾಗದ ನೋವನ್ನೂ.
ಅದಿತಿ ಮೊದಲೆರಡು ವರ್ಷ ತನ್ನೆದೆಯ ಮೇಲೇ ಆಡಿಕೊಂಡು ಬೆಳೆದ ಮಗು, ತನ್ನ ಮುದ್ದಿನ ಸೊಸೆ. ತನ್ನಕ್ಕ ಅನುಸೂಯಳ ಒಬ್ಬಳೇ ಮಗಳು.
"ಮಾಮಾ ನೋಡಿಲ್ಲಿ, ನನ್ನ ಗುರ್ತಾಗ್ತಾ ಇದೆಯಾ, ಇಲ್ಲ್ವಾ, ಏನಾದರೂ ಒಂದು ಸೂಚನೆ ಕೊಡೋ ಮಾಮಾ...ಇರ್ಲಿ ಬಿಡು, ಯೋಚಿಸಬೇಡ, ಎಲ್ಲ ಸರಿಯಾಗ್ತದೆ, ಸರಿಯಾಗಲೇಬೇಕು, ನಿನ್ನ ತುಂಗಾಳ ಮದುವೆ ಮಾಮಾ, ಅದಕ್ಕಾದರೂ ಬರಬೇಕೋ ಬೇಡವೋ, ಬರುವುದೇನು, ನೀನೇ ಎಲ್ಲ ತಯಾರಿ ಮಾಡುವವನಿರುವಾಗ ಹೀಗಿಲ್ಲಿ ಕೈಕಾಲು ಆಡಿಸದೆ ಬಿದ್ದುಕೊಂಡಿದ್ದರಾದೀತೇ? ಎಲ್ಲಿ ನೋಡುವಾ ಕೈ ಕೊಡು ಇಲ್ಲಿ, ನೀನು ನನದು ತೆಗೆದು ತೆಗೆದು ಅಳಿಸ್ತಿದ್ದೆ ಅಲ್ಲ್ವಾ, ಇದೀಗ ನನ್ನ ಬಾರಿ, ನೆಟಿಗೆ ಇದೆಯಾ ನೋಡುವಾ..." ಕಣ್ತುಂಬಿಕೊಂಡು ಇನ್ನಿಲ್ಲದ ಕಳಕಳಿಯಲ್ಲಿ, ನಿಷ್ಕ್ರಿಯ ಬಿದ್ದುಕೊಂಡಿರುವ ಕೈಗಳನ್ನು ಈಗಷ್ಟೇ ಅರಳಿದ ಹೂ ಹಿಡಿದಂತೆ ಹಿಡಿದು ಚಲನೆಗದನ್ನು ಹಚ್ಚುವ ವ್ಯರ್ಥ ಪ್ರಯತ್ನ ಮಾಡುತ್ತಿರುವ ಅಸಹಾಯಕಳ ಈ ನಿಷ್ಕಾಮ ಅಸೀಮ ಪ್ರೀತಿಗೆ ಮತ್ತು ತಾನು ಆ ಬಂಧಗಳಿಗೆ ನೀಡಿದ್ದನ್ನು ನೆನೆದು ತುಂಬಿದ ಕಣ್ಣು ಇನ್ನಷ್ಟು ತುಂಬಿಹರಿದವು.ನಾಲ್ಕರ ಹರಯದಲ್ಲೇ ಅಮ್ಮನನ್ನು ಕಳಕೊಂಡು, ಎರಡನೇ ಮದುವೆಯಾಗಿ ಇದ್ದೂ ಇಲ್ಲದಂತಾದ ಅಪ್ಪನ ಆಶ್ರಯದಲ್ಲಿ ಬಾಳುತ್ತಿದ್ದ ತನಗೆ ಅಕ್ಕ ಒಬ್ಬಳೇ ಆಸರೆಯಾಗಿದ್ದವಳು. ಅಮ್ಮನಾಗಿ ಮತ್ತೆ ಓರಗೆಯವಳಾಗಿ ತನ್ನೆಲ್ಲ ಕಷ್ಟ ಸುಖಗಳಿಗೆ ಪಾಲುದಾರಳಾಗಿದ್ದವಳು. ಅಪ್ಪನೂ ಸತ್ತಾಗ ತಾನಿನ್ನೂ ಮಿಡಲ್ ಸ್ಕೂಲ್ ನಲ್ಲಿದ್ದೆ. ಚಿಕ್ಕಮ್ಮನ ಕೈಯ್ಯಿಂದ ಮನೆಯಿಂದ ಹೊರಗೆ ದಬ್ಬಿಸಿಕೊಂಡಾದ ಮೇಲೆ ತಮ್ಮಿಬ್ಬರನ್ನು ಅತಿಯಾದ ಆಸ್ಥೆ ಎನ್ನಲಾಗದಿದ್ದರೂ ತಕ್ಕಮಟ್ಟಿಗೆ ಸಾಕಿದ್ದು ದೊಡ್ದಪ್ಪ-ದೊಡ್ಡಮ್ಮ. ಮಕ್ಕಳಿರದಿದ್ದ ಅವರಿಗೆ ಆ ಕೊರತೆ ತುಂಬಿಸುವುದಕೆರಡು ಜೀವಗಳು ಮತ್ತೆ ತಮಗೆ ಹೊಟ್ಟೆಬಟ್ಟೆಗೊಂದು ಆಸರೆ ಅಷ್ಟೇ.. ಅದಕ್ಕಿಂತ ಮುಂದಿನ ಹಂತಕ್ಕೆ ಆ ಸಂಬಂಧ ತಲುಪಲೇ ಇಲ್ಲ. ಆದರೆ ಬೆಳಗ್ಗೆ ಎಬ್ಬಿಸುವಾಗಿನ ಹೂಮುತ್ತೊಂದರಿಂದ ಹಿಡಿದು ರಾತ್ರಿ ಲಾಲಿಯ ಅಥವಾ ಕತೆಯೊಂದರ ಜೊತೆ ಮಲಗುವವರೆಗಿನ ಎಲ್ಲಾ ಅಮ್ಮ ಮಾಡುತ್ತಿದ್ದ ಕೆಲಸಗಳನ್ನು ತಪ್ಪದೇ ಮಾಡಿ ತನ್ನ ಜೀವನದಲ್ಲಿ ಯಾವುದೇ ಮುಚ್ಚಟೆಗೆ ಕೊರತೆಯಿಲ್ಲದಂತೆ ಪಾಲಿಸಿದ್ದವಳು ತನ್ನಕ್ಕ. ಅಂಥ ಅಮ್ಮನಂಥ ಅಕ್ಕ ಸಣ್ಣ ವಯಸ್ಸಿಗೇ ಕುಡುಕ ಗಂಡನೊಂದಿಗೆ ಬಾಳಲಾರೆನೆಂದು ಬಿಟ್ಟು ಬಂದಿದ್ದಳು. ಅವಳೇನೂ ಭಾರೀ ಧೈರ್ಯಸ್ಥೆಯೆಂದಲ್ಲ, ತಮ್ಮ ಕೈಬಿಡಲಿಕ್ಕಿಲ್ಲ ಅನ್ನುವ ತನ್ನ ಮೇಲಿನ ನಂಬಿಕೆಯಿಂದ. ಅವನೂ ರಸಹಿಂಡಿದ ಜಲ್ಲೆಯಂತಾಗಿದ್ದ ಅಕ್ಕ ಕಳಚಿಕೊಂಡರೆ ಸಾಕೆಂದಿದ್ದವನು, ನಿರಾಳ ಬಿಟ್ಟುಕೊಟ್ಟ. ಡೈವೋರ್ಸ್ ಬಗ್ಗೆ ಅಕ್ಕ ಯಾಕೋ ಒಲವು ತೋರಲಿಲ್ಲ, ತಾನೂ ಎರಡನೇ ಬಾರಿ ಮಾತಾಡಿರಲಿಲ್ಲ. ದೊಡ್ಡಪ್ಪನ ಹೋಟೆಲ್ ಚೆನ್ನಾಗೇ ನಡೆಯುತ್ತಿದ್ದು ದುಡ್ಡುಕಾಸಿಗೆ ತೊಂದರೆಯಿಲ್ಲವಾಗಿದ್ದು ಅವನಿಂದ ಜೀವನಾಂಶದ ಅಪೇಕ್ಷೆಯೂ ಇರಲಿಲ್ಲ. ಅಂದು ಅವಳು ಈ ಐದಾರು ವರ್ಷದ ಕಂದನ ಕೈಹಿಡಿದು ಬಂದು ತನ್ನ ಕದ ತಟ್ಟಿದಾಗ ನಿರೀಕ್ಷೆ ತುಂಬಿದ ಆ ಕಣ್ಣುಗಳಲ್ಲಿದ್ದ ನಂಬಿಕೆಯ ನೋಟ ತನ್ನನ್ನಿಂದಿಗೂ ತಪ್ಪಿತಸ್ಥ ಭಾವದಿಂದ ಬಿಡುಗಡೆಗೊಳಿಸಿಲ್ಲ.. ತಾನಾಗಷ್ಟೇ ಮದುವೆಯಾಗಿದ್ದು ತುಳಸಿಯ ಪ್ರೀತಿಯ ಹೊಳೆಯಲ್ಲಿ ಕೊಚ್ಚಿಹೋಗುತ್ತಿದ್ದೆ, ವಾಸ್ತವದಿಂದ ಬಲುದೂರ, ಅವಳ ಬಿಟ್ಟಿನ್ನೆಲ್ಲವೂ ಅರ್ಥಹೀನವೆನ್ನುವ ಭ್ರಮೆಯ ಬಲೆಯೊಳಗೆ. ನಯವಾಗಿಯೇ ತುಳಸಿಯ ಮಾತುಗಳನ್ನು ತನ್ನ ದನಿಯಲ್ಲಿ ಅಕ್ಕನೆದುರು ತುಂಬ ಸರಾಗ ನುಡಿದಿದ್ದೆ
"ಅಕ್ಕಾ, ಬೇರೆ ಮನೆ ಮಾಡಿ ಕೊಡುತ್ತೇನೆ, ವಾರಕ್ಕೊಮ್ಮೆ ಬಂದು ನೋಡಿಕೊಂಡು ಹೋಗುತ್ತೇನೆ, ಅದಿತಿ ನಿನದಲ್ಲ, ನನ್ನ ಮಗಳೆಂದು ನೋಡಿಕೊಳ್ಳುತ್ತೇನೆ, ಬೇಕಾದ್ದೆಲ್ಲ ತಂದುಹಾಕುತ್ತೇನೆ ..." ಹೀಗೇ ಇನ್ನೂ ಏನೇನೋ... "ಬೇಕಾದ್ದೆಲ್ಲ....." ಅನ್ನುವಾಗ ಬಾಯಿಷ್ಟೂ ತಡವರಿಸಿರಲಿಲ್ಲ, ಅಕ್ಕನಿಗೆ ಆಗ ಬೇಕಾಗಿದ್ದದ್ದೇನು ಎನ್ನುವುದರ ಅರಿವಿದ್ದೂ. ತನ್ನ ಬುದ್ಧಿಯ ಮೇಲೆ ಅಂಥ ಹಿಡಿತವಿತ್ತು ತುಳಸಿಯ ಆಕರ್ಷಣೆಗೆ. ಅಕ್ಕ ಉತ್ತರಿಸಿರಲಿಲ್ಲ, ಮೌನವಾಗಿ ತೋರಿಸಿದ ದಾರಿಯಲ್ಲಿ ನಡೆದಿದ್ದಳು. ಅಂಥ ಘಟ್ಟದಲ್ಲೂ ಅವಳು ಬರೀ ಪ್ರೀತಿಯನ್ನುಳಿದು ಬೇರೇನೂ ತೋರಿರಲಿಲ್ಲ, ಮನಸಲ್ಲೇನೇನಿತ್ತೋ ಆ ದೇವರಿಗೇ ಗೊತ್ತು. ಅಂಥ ಅಮ್ಮನಂಥ ಅಕ್ಕ ಮಗು ಚಿಕಗುನ್ಯಾದಿಂದ ಒದ್ದಾಡುತ್ತಿದ್ದಾಗ ಒಬ್ಬಳೇ ಇರಲು ಭಯವೆಂದು ದಾಕ್ಷಿಣ್ಯದಿಂದಲೇ "ಒಂದು ನಾಲ್ಕಾರು ದಿನ ಬರಲೇನೋ?" ಅಂದಿದ್ದಳು..ತಾನು ಯಥಾಪ್ರಕಾರ ತುಳಸಿಯ ಮುಖ ನೋಡಿದ್ದೆ. ಅವಳು ಸಕಾರಾತ್ಮಕವಾಗಿ ತಲೆಯಾಡಿಸಿದಾಗ ದೇವತೆ ಎನಿಸಿದ್ದಳು. ರಾತ್ರಿ ತಬ್ಬಿಕೊಂಡು "ನಿನ್ನ ಪಡೆಯಲು ಪುಣ್ಯ ಮಾಡಿದ್ದೆ ಚಿನ್ನಾ" ಅಂದಿದ್ದೆ. ನಿಜವಾಗಿ ಹಾಗನಿಸುವಷ್ಟು ಮಂಕು ಬಡಿದಿತ್ತೋ ಅಥವಾ ಬರೀ ತೋರಿಕೆಯ ಸುಳ್ಳಾಡುವುದು ಅಭ್ಯಾಸವಾಗಿ ಬಿಟ್ಟಿತ್ತೋ ಈಗ ನೆನಪಾಗುತ್ತಿಲ್ಲ. ಆಗ ಬಂದ ಅಕ್ಕ ನರಕವನ್ನೇ ನೋಡಿಬಿಟ್ಟಳು ತನ್ನ ಮನೆಯಲ್ಲಿ. ಮೊದಲ ಬಾರಿಗೆ ತುಳಸಿಯ ರಾಕ್ಷಸೀಯ ವರ್ತನೆ ಕಂಡು ತಾನು ಬೆಚ್ಚಿದ್ದೆ, ಆದರೆ ಎದುರಿಸಲಾರದಷ್ಟು ಗುಲಾಮಗಿರಿಯೊಳಗೆ ಕಳೆದುಹೋಗಿದ್ದೆ. ಚಿನ್ನದ ಸೂಜಿಯಲ್ಲಿ ಚುಚ್ಚುವ ಮತ್ತು ಆ ಮೂಲಕ ತನ್ನ ನಿಲುವನ್ನೇ ಪ್ರತಿಪಾದಿಸಿ ಸಾಧಿಸಿಕೊಳ್ಳುವ ತುಳಸಿಯ ಚಾಕಚಕ್ಯತೆಗೆದುರಾಗಿ ನಡೆಯಲಾಗದೆ ಅಸಹಾಯಕತೆಯೆನಿಸಿದರೂ ಅವಳ ತನ್ನೊಂದಿಗಿನ ಅತಿ ಸೌಹಾರ್ದ ಬಾಳ್ವೆ ಮೂಕನನ್ನಾಗಿಸಿತ್ತು. ಹೇಗೋ ಮಗು ಹುಶಾರಾದ ಮೇಲೆ ಹೋದ ಅಕ್ಕ ಮನೆಗೆ ಕಾಲಿಟ್ಟಿರಲಿಲ್ಲ, ತುಳಸಿ ಅದಾಗಗೊಟ್ಟಿರಲಿಲ್ಲ ಅಂದರೆ ಸರಿಯಾದೀತೇನೋ..ಆಮೇಲೆ ತನ್ನ ತುಂಗಾ ಹುಟ್ಟಿದ್ದು, ಆ ಸಮೃದ್ಧತೆಯ ಹೊಳೆಯಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ವರ್ತಮಾನದೆದುರು ಭೂತ-ಭವಿಷ್ಯಗಳೆರಡೂ ಮರೆತೇ ಹೋದಂತಿತ್ತು ತನಗೆ. ನೆನಪುಗಳು ಕನಸುಗಳಿಂದ ಮುಕ್ತವಾದ ದಿನಗಳು. ಬರೀ ಸಫಲತೆ, ಪ್ರೀತಿ, ಯಾವುದೇ ಅಡೆತಡೆಯಿರದ ಸುಖದ ಹೊನಲು. ಕೈತುಂಬಾ ಸಂಬಳ, ಚಂದದ ಮನೆ, ಓಡಾಡಲು ಕಾರು, ಮನಮೆಚ್ಚುವ ಮಡದಿ, ಮುದ್ದು ಮಗು..ಬದುಕಿಗೆ ಬೇಕಾದದ್ದು ಬೇಡದಿದ್ದದ್ದು ಎಲ್ಲ ಸವಲತ್ತುಗಳ ನಡುವೆ ಅಕ್ಕ ಎಲ್ಲೋ ಆಗಾಗ ನೆನಪಾಗುತ್ತಿದ್ದರೂ ಅವಳಿಗೆ ಬೇಕಾದ್ದೆಲ್ಲ ಒದಗಿಸಿಕೊಡುತ್ತಿರುವ ಅನುಕೂಲಶಾಸ್ತ್ರದ ಸಮಾಧಾನ ಒದಗುತ್ತಿತ್ತು. ತಪ್ಪಿತಸ್ಥ ಭಾವನೆ ಅಲ್ಲಲ್ಲಿ ಇಣುಕುತ್ತಿದ್ದರೂ ತಲೆಮೇಲೆ ಮೊಟಕಿ ಸುಮ್ಮನಿರಿಸುವ ಈ ಇವೆಲ್ಲಾ ಇದ್ದವಲ್ಲಾ... ಹೀಗೆ ಅದೇ ಊರಲ್ಲಿದ್ದೂ ತಾನು ಅಕ್ಕನನ್ನು ಭೇಟಿ ಮಾಡದೆಯೇ ಅದೆಷ್ಟೋ ಸಮಯ ಕಳೆದೇ ಹೋಯಿತು. ಎಂಟೇ ತಿಂಗಳ ಕೂಸು ಕೈಲಿದ್ದಾಗ ಮತ್ತೆ ತುಳಸಿ ಬಸುರಿಯಾದಳು. ತಮಗದು ಬೇಕಿರಲಿಲ್ಲ, ಆದರೆ ಅವಳ ಅನಿಯಮಿತ ಮುಟ್ಟಿನ ತೊಂದರೆಯ ಕಾರಣದಿಂದಾಗಿ ಮೂರುತಿಂಗಳು ತುಂಬಿದ ಮೇಲೇ ಗರ್ಭ ನಿಂತದ್ದರ ಅರಿವಾಗಿದ್ದು, ಯಾವ ವೈದ್ಯರೂ ತೆಗೆಸಲು ಒಪ್ಪದೇ ಇದ್ದ ಸಂದರ್ಭ, ಇವಳು ಹುಡುಗಾಟಿಕೆಯ ಬುದ್ಧಿಯಲ್ಲಿ ಏನೇನೋ ಮಾತ್ರೆ ತಿಂದೂ ಉಳಕೊಂಡ ಗರ್ಭ ಒಂಬತ್ತು ತಿಂಗಳು ಕಳೆದು ದಯಪಾಲಿಸಿದ್ದು ತನ್ಮಯ್ ನನ್ನು. ಆಕಾಶದಲ್ಲೇ ತೇಲಾಡುತ್ತಿದ್ದ ತಾನು ಈ ಮುದ್ದು ಮಗು ಮಾನಸಿಕ ನ್ಯೂನತೆಗಳ ಮೂಟೆಯಾಗಿದ್ದುದರ ಅರಿವಾದಾಗಲೇ ಧೊಪ್ಪೆಂದು ಧರೆಗಿಳಿದದ್ದು. ಮಗು ಬೆಳೆಯುತ್ತಾ ಬೆಳೆಯುತ್ತಾ ಅದರ ಬೆಳವಣಿಗೆಯಲ್ಲಿನ ಕೊರತೆ ಹೆಚ್ಚುಹೆಚ್ಚು ಕಾಣಿಸಿಕೊಳ್ಳತೊಡಗಿದಂತೆ ಬಾಳಿನೆಲ್ಲ ಸುಖಸಮೃದ್ಧಿಗಳೂ ಕಣ್ಣುತಪ್ಪಿಸಿಕೊಳ್ಳತೊಡಗಿದವು. ಹೆಚ್ಚುಕಮ್ಮಿ ಮಗು ತನದಲ್ಲವೇನೋ ಎಂಬಂತೆ ಉದಾಸೀನಳಾಗಿರುತ್ತಿದ್ದ ತುಳಸಿಯ ವರ್ತನೆ ಚಿಟ್ಟುಹಿಡಿಸುತ್ತಿತ್ತು. ಮತ್ತೆ ಅಕ್ಕ ನಾನೂ ಎದುರುಬದುರಾಗಿದ್ದೆವು. ಸಂಕಟ ಬಂದಾಗ ವೆಂಕಟರಮಣನೆನುತಾ ನಾನು, ನಾನಿಲ್ಲವೇನೋ ಅನುತಾ ಅವಳು. ತನ್ಮಯ್ ನ ಮೊದಲಾರು ವರ್ಷಗಳು ಅಕ್ಕನ ಮಡಿಲಲ್ಲೇ ಅವಳ ಮನೆಯಲ್ಲೇ ಕಳೆದವು. ಅದಿತಿಗಾಗ ಹದಿನೈದು ವರ್ಷ. ಆಮೇಲೆ ಆತನನ್ನು ಬುದ್ಧಿಮಾಂದ್ಯ ಮಕ್ಕಳ ಶಾಲೆಗೆ ಸೇರಿಸಿದಾಗಲೂ ಕಣ್ಣೀರಾದದ್ದು ಅಕ್ಕನೇ ಹೊರತು, ತುಳಸಿಯಲ್ಲ. ಆಮೇಲೂ ಅಲ್ಲಿಗೆ ಹೋಗಿಹೋಗಿ ಅವನನ್ನು, ವಯಸಿನೊಂದಿಗೆ ಸ್ವಲ್ಪವೂ ಮುನ್ನಡೆಯದ ಅವನ ಬೆಳವಣಿಗೆಯನ್ನು, ಅಭಿವೃಧ್ಧಿಯನ್ನು ಕಂಡುಕೊಂಡು ಬಂದು ಮರುಗುತ್ತಿದ್ದವಳೂ ಅವಳೇ. "ಅಯ್ಯೋ ನಾನು ಹೋದರೂ ಅಷ್ಟೆ, ಹೋಗದಿದ್ದರೂ ಅಷ್ಟೆ, ಅವನು ಪಡಕೊಂಡು ಬಂದದ್ದು ಇಂಥ ಬಾಳು, ಸರಿ ಇಲ್ಲದವನಿಗಾಗಿ ಸರಿ ಇರುವ ನನ್ನ ಬಾಳನ್ನು ಅಂದಗೆಡಿಸಿಕೊಳ್ಳಲು ತಯಾರಿಲ್ಲ ನಾನು "ಅನ್ನುತ್ತಿದ್ದ ತುಳಸಿಯ ವರ್ತನೆ ತನಗೆ ವಿಚಿತ್ರವೆನಿಸಿದರೂ ತುಂಬಾ ಪ್ರಾಕ್ಟಿಕಲ್ ಹೆಣ್ಣುಮಗಳೀಕೆ ಅಂದುಕೊಂಡು ಸಮಾಧಾನ ಮಾಡಿಕೊಂಡಿದ್ದೆ. ಹಗಲು ಅವಳ ಬಗೆಗೆಷ್ಟು ಸಂಶಯ ಮೊಳೆಯಿಸಿದರೂ ರಾತ್ರಿಯ ಏಕಾಂತದಲ್ಲಿನ ಅವಳ ಸಾಮೀಪ್ಯ ಮತ್ತು ಅಲ್ಲಿ ಅವಳು ತೋರುತ್ತಿದ್ದ ವಿಶಿಷ್ಠ ಪ್ರೀತಿ ಇತರರ ಗಮನಕ್ಕಾಗಿ ಹಾತೊರೆಯುತ್ತಲೇ ಬೆಳೆದ ತನಗೆ ಹಗಲಿನೆಲ್ಲ ಅಸಮಾಧಾನವನ್ನೂ ಚಿವುಟಿಹಾಕುವಂತೆ ಮಾಡುತ್ತಿದ್ದವು. ಪುನಃ ಮಾರನೆಯ ಬೆಳಿಗ್ಗೆ ಅವಳ ಇಚ್ಛೆಯೆಲ್ಲವನ್ನೂ ಪೂರೈಸುವುದೇ ತನ್ನ ಬಾಳಿನ ಆದ್ಯತೆ ಎನುವಂತೆ ದಿನ ಶುರುಹಚ್ಚಿಕೊಳ್ಳುತ್ತಿದ್ದೆ. ಏನೂ ಕಡಿಮೆ ಮಾಡಿರಲಿಲ್ಲ ಅವಳಿಗೆ ತಾನು. ಐದು ವರ್ಷಕ್ಕೊಮ್ಮೆ ಸುಸ್ಥಿತಿಯಲ್ಲಿರುವ ಮನೆಯ ಮೆಶಿನರಿ ಸಾಮಾನುಗಳನ್ನು ಅವಳ ಖುಶಿಗಾಗಿ ಬದಲಿಸಿಕೊಡುತ್ತಿದ್ದೆ, ಹಳತು ಕೊಟ್ಟು ಹೊಸತು ತಂದಾಗಿನ ಕೆಲಕ್ಷಣ ಅವಳ ಮುಖದಲ್ಲಿ ಕಾಣುವ ಸಂತೃಪ್ತಿಗಾಗಿ ಲೆಕ್ಕವಿಡದೆ ಹಣ ವ್ಯಯಿಸುತ್ತಿದ್ದೆ. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಮನೆಗೆ ಬಣ್ನ ಹೊಡೆಸುತ್ತಿದ್ದೆ. ಎಲ್ಲವನ್ನೂ ಅವಳಿಗಾಗಿ ನಳನಳಿಸುವಂತೆ ಇಡುವಲ್ಲಿ ತುಂಬಾ ಮುತುವರ್ಜಿ ವಹಿಸುತ್ತಿದ್ದೆ. ತನ್ನನ್ನು ಅಷ್ಟರಮಟ್ಟಿಗೆ ವಶೀಕರಣಗೊಳಿಸಿದ ಅವಳ ಸತ್ವವಾದರೂ ಎಂಥದ್ದು ಎಂಬುದು ಅಂದಿನಂತೆಯೇ ಇಂದೂ ಒಗಟಾಗಿಯೇ ಉಳಿದಿದೆ. ತೀರಾ ಸಾಧಾರಣ ರೂಪು, ಮಧ್ಯಮ ದರ್ಜೆಯ ವಿದ್ಯಾಭ್ಯಾಸ ಅದಕ್ಕೆ ತಕ್ಕ ಬೌದ್ಧಿಕತೆ, ಅತಿ ಅಪರೂಪ ಅನ್ನುವ ನಗು, ತೀರಾ ನಾಜೂಕಲ್ಲದ ಸಾಮಾಜಿಕ ನಡವಳಿಕೆ, ತನ್ನನ್ನು ಮಿಕ್ಕೆಲ್ಲ ಸಂಬಂಧಗಳಲ್ಲಿ ಸಣ್ಣ ಅನಾದರ, ಅಕ್ಕಪಕ್ಕದಲ್ಲೂ ಸಾಮಾನ್ಯ ಹೊಂದಾಣಿಕೆ..ಇವೇ ಮುಂತಾದ ಅತಿಸಾಮಾನ್ಯ ಗುಣಗಳಿದ್ದೂ ತನ್ನನ್ನು ಅಷ್ಟರಮಟ್ಟಿಗೆ ಸೆಳೆದದ್ದು ಏನು ಅಂಬುದೇ ಅರ್ಥವಾಗಲೇ ಇಲ್ಲ ನಾಯಕರಿಗೆ. ಹ್ಮ್ಮ್...ಬಿಳಿಯ ಬಣ್ಣ ಸಮೀಪಿಸಿತು, ಏನಪ್ಪಾ, ಮತ್ತೆ ಉಚ್ಚಿನಾ, ಅದೆಷ್ಟು ಸಲ ಹರಿಸ್ತೀರೂ ಹೊಳೆ, ಬೊಳ್ಳ ಬಂದೀತು.. ಅನ್ನುತ್ತಾ ನಗುನಗುತ್ತಾ ಮೂತ್ರದ ಚೀಲವೆತ್ತಿಕೊಳ್ಳುತ್ತಿದ್ದ ಹೆಣ್ಣುಮಗಳು ಸಿಸ್ಟರ್ ಶೀಲಾ, ತುಂಗಾಳನ್ನು ಹೋಲಿಸಿ ನೋಡಿತು ಮನಸು. ತಾನಿಲ್ಲಿಗೆ ಬಂದು ಅದೆಷ್ಟು ವರ್ಷವಾಯಿತೋ, ಆವತ್ತಿಂದ ಇಂದಿನವರೆಗೆ ಅವಳು ತನ್ನ ಅಪ್ಪಾ, ಅಂದು ಕರೆದದ್ದು ನೆನಪಿಲ್ಲ, ಹತ್ತಿರ ಬರುವುದು, ಮುಟ್ಟಿ ಸ್ಪಂದಿಸುವುದು ದೂರದ ಮಾತು, ದೂರದಲ್ಲೇ ಮೂಗು ಮುಚ್ಚಿಕೊಂಡು ಕಣ್ಣಲ್ಲಿ ಇನ್ನಿಲ್ಲದ ಅಸಹ್ಯದ ಭಾವ ಬೀರುತ್ತಾ ಬಾಗಿಲಲ್ಲೇ ನಿಂತು ಹೋಗುತ್ತಿದ್ದಳು ಅವಳಮ್ಮನಂತೆ. ಕಣ್ಣು ಅದಿತಿಗಾಗಿ ತಡಕಾಡಿತು,. ಅರ್ಥವಾಯ್ತೆಂಬಂತೆ "ಇಲ್ಲೇ ಕೂತಿದ್ದರು ಇಷ್ಟು ಹೊತ್ತು, ನೀವೇನೂ ಹೇಳುವುದಿಲ್ಲ, ಕೊನೆಪಕ್ಷ ಅವರನ್ನು ಗುರ್ತಿಸಿದ್ದನ್ನೂ ಅವರಿಗರಿವಾಗಿಸುವುದಿಲ್ಲ, ಕಣ್ಣೀರ್ಗರೆಯುತ್ತಾ ನಿಮ್ಮ ಒಂದು ಕಣ್ಣರಳುವಿಕೆಗಾಗಿ ಕಾದಿದ್ದಾರು. ನೋಡಲಾಗದೆ ನಾವೇ ಊಟ ಮಾಡಿಕೊಂಡು ಬನ್ನಿ ಅಂತ ಕಳಿಸಿದ್ದೇವೆ, ಇನ್ನೇನು ಬರ್ತಾರೆ" ಅಂದಳು ಶೀಲಾ. ಮತ್ತೆ ಕಣ್ಣು ಮಳೆಗರೆಯಲಾರಂಭಿಸಿತು...ದೇಹದೆಲ್ಲ ಭಾಗದ ಸಂಕಟದ ಬಿಸಿ ತಣಿಸಲೋ ಎಂಬಂತೆ.
ತನ್ಮಯ್ ವಸತಿಶಾಲೆ ಸೇರಿದ ಮೇಲೆ ಮತ್ತೆ ಅಕ್ಕ ಅವಳ ಪಾಡಿಗೆ ತಾವು ತಮ್ಮ ಪಾಡಿಗೆ.. ಅವಳು ತನ್ಮಯ್ ನ ಇಷ್ಟು ವರ್ಷಗಳ ತನ್ನ ಸೆರಗಲ್ಲಿ ಭರಿಸಿದ್ದೂ, ನಾವೊ ಅವನು ನಮಗ್ಯಾರೂ ಅಲ್ಲವೆಂಬಂತೆ ಇದ್ದದ್ದು ಅತಿ ಸಹಜವೆಂಬಂತೆ ಬಾಳಲಾರಂಭಿಸಿ ಸಾಗಿಸಿದ್ದ ದಿನಗಳು.. ಅದೇ ದಿನಗಳಲ್ಲೊಂದು ದಿನ ತಾನು ಕಾರ್ ಪಾರ್ಕ್ ಮಾಡಿ ಅಂಗಡಿಯೊಂದಕ್ಕೆ ನಡೆದುಹೋಗುತ್ತಿದ್ದಾಗ ಸ್ವಲ್ಪ ತಲೆ ತಿರುಗಿದಂತಾಗಿದ್ದು, ಸಾವರಿಸಿಕೊಂಡು ಮುನ್ನಡೆದರೂ ಯಾಕೋ ದೇಹ ಸ್ಥಿಮಿತ ಕಳಕೊಳ್ಳುತ್ತಿದ್ದಂತನಿಸಿದ್ದು, ಕೆಲಸ ಮುಗಿಸಿಕೊಂಡು ಕಾರ್ ನ ಹತ್ತಿರ ವಾಪಾಸಾಗುತ್ತಿದ್ದಾಗ ತಲೆ ತಿರುಗಿ ಬಿದ್ದದ್ದು. ಸುಮಾರು ಇಪ್ಪತ್ತನಾಲ್ಕು ಘಂಟೆಕಾಲ ತನಗೆ ಎಚ್ಚರ ಬಂದಿರಲಿಲ್ಲವಂತೆ. ಅಂದಿನಿಂದ ಶುರುವಾಗಿದ್ದು ಈ ಆಸ್ಪತ್ರೆಯ ಓಡಾಟ. ಅದೆಷ್ಟೋ ಪರೀಕ್ಷೆಗಳು, ಚಿಕಿತ್ಸೆಗಳ ನಂತರ ಯಾವುದೋ ನರವೊಂದು ಅತಿಯಾದ ಒತ್ತಡಕ್ಕೊಳಗಾಗಿ ತನ್ನಷ್ಟಕ್ಕೆ ತಾನು ಚಪ್ಪಟೆಯಾಗಿದ್ದೇ ಅಂದಿನ ತಾನು ಬೀಳುವುದಕ್ಕೆ ಕಾರಣವೆಂದರು. ಒಂದಾದ ನಂತರ ಒಂದು ನರ ಹೀಗೆ ಚಪ್ಪಟೆಯಾಗುತ್ತಲೇ ಸಾಗುವ ಈ ಚಟುವಟಿಕೆಯೊಂದು ಹಲವರ ದೇಹದಲ್ಲಿ ಒಮ್ಮಿಂದೊಮ್ಮೆ ಶುರುವಾಗಬಹುದಂತೆ, ಮತ್ತು ಒಂದು ನಿರ್ದಿಷ್ಟ ವಯಸ್ಸಿನ ನಂತರ ಆ ನರಗಳ ಮತ್ತೆ ಚೇತರಿಸಿಕೊಳ್ಳುವಿಕೆ ಅಸಾಧ್ಯವೆಂತಲೂ ಹೇಳಿಬಿಟ್ಟರು. ಆಗ ತುಂಗಾಗೆ ಹನ್ನೆರಡು, ತನ್ಮಯ್ ಗೆ ಹನ್ನೊಂದು ವರ್ಷ. ಅಲ್ಲಿಂದ ಶುರುವಾದ ಈ ತೊಂದರೆ ತನ್ನ ದೇಹದ ಸ್ವಾಧೀನ ತಪ್ಪಿಸುತ್ತಲೇ ನಡೆದಿತ್ತು. ಮುಂದೊಂದು ಹಂತದಲ್ಲಿ ತಾನು ಸ್ವಲ್ಪ ಮಟ್ಟಿಗೆ ಬುದ್ಧಿ ಸ್ವಾಧೀನ ತಪ್ಪಿದಂತೆಯೂ ಆಡತೊಡಗಿದ್ದೆನಂತೆ. ತುಳಸಿ ಮತ್ತು ತುಂಗಾ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದರು, ಹೋಟೆಲ್ ನೋಡಿಕೊಳ್ಳಲಿಕ್ಕೆ ತುಳಸಿಯ ಅಕ್ಕನ ಗಂಡ ಬಂದರು, ಎಲ್ಲ ಸುಸೂತ್ರವಾಗಿಯೇ ಒಂದಷ್ಟು ವರ್ಷ ನಡೆಯಿತು. ಅಕ್ಕ ಮಾತ್ರ ಆಗಾಗ ಬಂದು ಹೇಗಿದ್ದವ ಹೇಗಾಗಿಬಿಟ್ಟೆಯಲ್ಲೋ ಅನ್ನುತ್ತ ಮತ್ತವಳ ಜೊತೆ ಈ ಕಂದನೂ ಅಳುವುದು ಬಿಟ್ಟರೆ ಇನ್ಯಾರೂ ತನ್ನ ಈ ದುಸ್ಥಿತಿಯಿಂದ ತುಂಬಾ ವಿಚಲಿತರಾದಂತೆ ಅನಿಸುತ್ತಿರಲಿಲ್ಲ. ಅಲ್ಲೂ ತುಳಸಿಯ ಮನಸ್ಥೈರ್ಯವೇ ತನಗೆ ಕಂಡದ್ದು, ಮೆಚ್ಚುಗೆಯಾದದ್ದು. ಇದ್ದಕಿದ್ದಂತೆ ಒಂದು ದಿನ ತುಳಸಿಯ ಕಣ್ಣುತಪ್ಪಿಸಿ ಮನೆಯಿಂದಾಚೆ ಬಂದವನು ಸುಮ್ಮನೆ ನಡೇಯುತ್ತಾ ಹೋದೆ ಒಂದು ಹತ್ತು ನಿಮಿಷಗಳವರೆಗೆ. ತಿರುಗಿ ನೊಡುತ್ತೇನೆ ಯಾವ ದಾರಿಯೂ ಪರಿಚಿತವೆನಿಸುತ್ತಿಲ್ಲ, ಎಲ್ಲಿದ್ದೇನೆಂಬುದೇ ತಿಳಿಯಲಿಲ್ಲ, ಯಾರ ಮುಖವೂ ಪರಿಚಯದ್ದೆನಿಸುತ್ತಿಲ್ಲ, ಗಾಭರಿಯಾಗಿಬಿಟ್ಟೆ... ಕಂಗೆಟ್ಟು ಕುಸಿದು ಕೂತವನನ್ನು ಕಂಡು ಹಾದುಹೋಗುತ್ತಿದ್ದವರು "ಯಾರಮನೆ?" ಅಂದರು.. ಅವಳ ಹೆಸರೂ ನೆನಪಾಗುತ್ತಿಲ್ಲ. ಅಯ್ಯೋ ಇದೇನಾಯಿತು, ತಾನು ಯಾರು ಎಲ್ಲಿಗೆ ಹೋಗಬೇಕು, ಒಂದೂ ಗೊತ್ತಾಗುತ್ತಿಲ್ಲ, ನಿಮ್ಮ ಹೆಸರೇನು ಅಂದರು ಅದೂ ನೆನಪಾಗುತ್ತಿಲ್ಲ. ಭಾರೀ ಗಾಭರಿಯಾಯಿತು. ಆಚೀಚೆ ನೋಡುತ್ತಿರುವಷ್ಟರಲ್ಲೇ ಅವಳು ಬಂದಳು.. ಯಾರವಳು.. ಛೇ ಹೆಸರೂ ನೆನಪಾಗುತ್ತಿಲ್ಲ, ತನ್ನವಳು ಅವಳೆಂಬುದಷ್ಟೇ ಗೊತ್ತಿತ್ತು ಆಕ್ಷಣ... ತನ್ನಿಂದ ತಾನು ಕಳೆದುಹೋದ ಕ್ಷಣ, ತನ್ನಿಂದಲೇ ಏನು, ತನ್ನದೆಂಬ ಬಾಳಿನಿಂದಲೇ ತಾನು ಸಂಪೂರ್ಣವಾಗಿ ಕಳೆದು ಹೋದ ಕ್ಷಣ.. ಬಂದವಳೇ ದುರುದುರು ನೋಡಿದಳಷ್ಟೇ, ಕೈ ಹಿಡಿದು ಆಧರಿಸಿ ಹಿಡಿದುಕೊಂಡಿದ್ದವರ ಕೈಯ್ಯಿಂದ ಕಿತ್ತುಕೊಂಡಂತೇ ಎಳೆದು ತನ್ನ ಕೈ, ಅವರಿಗೊಂದು ಮಾತು ಕೃತಜ್ಞತೆಯೂ ಹೇಳದೆ ದರದರ ಒಯ್ದಿದ್ದಳು ಮನೆಗೆ. ಅದುವರೆಗೆ ಮೂರುಕೋಣೆಗಳ ಮಿತಿಯಲ್ಲಿ ಸೆರೆಯಲ್ಲಿದ್ದ ತನಗೆ ಅಂದಿನಿಂದ ಒಂದು ಕೋಣೆಯ ಸೆರೆವಾಸ. ಕೆಲವೊಮ್ಮೆ ಎಲ್ಲ ನೆನಪಿರುತ್ತಿತ್ತು, ಅದೇ ಮುಂದಿನ ಕ್ಷಣ ತಲೆಯೊಂದು ಖಾಲಿ ಬಯಲಾಗುತ್ತಿತ್ತು. ಬರುಬರುತ್ತಾ ಹೋಮಿಯೋಪಥಿ ಚಿಕಿತ್ಸೆಯಿಂದ ದಿನದಲ್ಲಿ ನೆನಪಿನ ಶಕ್ತಿ ಹೆಚ್ಚುಕಾಲ ಚಾಲ್ತಿಯಲ್ಲಿರುವಂತೆ ಆಗುತ್ತಾ ಇತ್ತು .ತಾನು ಕಳೆದುಹೋದ ಸುದ್ಧಿ ಯಾರಿಂದಲೋ ತಿಳಿದು ಅಕ್ಕ ಓಡಿ ಬಂದಿದ್ದಳು. ಗೇಟ್ ನಿಂದಲೇ "ಇಲ್ಲ, ಆವರ ಮಾನಸಿಕ ಸ್ಥಿತಿ ತುಂಬಾ ಸೂಕ್ಷ್ಮವಾಗಿದೆ, ಯಾರೂ ಅವರನ್ನು ಭೇಟಿ ಮಾಡಿ, ಇನ್ನೂ ದುರ್ಬಲವಾಗಿಸಬಾರದು ಅಂದಿದ್ದಾರೆ ಡಾಕ್ಟರ್" ಎಂದು ಹೇಳಿ ಕಳುಹಿಸುತ್ತಿದ್ದದ್ದು ಮಹಡಿ ಮೇಲಿನ ಕೋಣೆಯಲ್ಲಿ ಕಂಡಿಗಾತುಕೊಂಡು ನಿಂತಿದ್ದ ತಾನೂ ನೋಡಿದ್ದೆ, ಮೊದಲ ಬಾರಿಗೆ ಅವಳನ್ನಷ್ಟು ದಯನೀಯವಾಗಿ ಕರೆದಿದ್ದೆ.."ತುಳಸೀ... ಅಕ್ಕ...". ತಿರುಗಿ ನೋಡಿದವಳು ಮುಂದೆ ಮಾತಾಡಗೊಟ್ಟಿರಲಿಲ್ಲ. "ಅಕ್ಕನೂ ಇಲ್ಲ, ಅಮ್ಮನೂ ಇಲ್ಲ ಹೋಗಿ ಒಳಗೆ" ಅಂದಿದ್ದಳು ಕೆಕ್ಕರಿಸಿ ನೋಡುತ್ತಾ.. ಅದೂ ಕೆಲತಿಂಗಳಷ್ಟೇ... ಅವಳ ಅಕ್ಕನ ಗಂಡನ ಜೊತೆ ಸೇರಿ ಈ ಒಂದು ಟರ್ಮಿನಲ್ ಕೇರ್ ಯುನಿಟ್ ನ ವಿಳಾಸ ಸಂಪಾದಿಸಿಬಿಟ್ಟಳು. ಇನ್ನಿಲ್ಲದ ಸರ್ಕಸ್ ಎಲ್ಲಾ ಮಾಡಿ, ಅವಳಿಗಾಗದ ಹೃದಯಾಘಾತದ ನೆಪ, ಇದ್ದೊಬ್ಬ ಮಗಳನ್ನೂ ಇಲ್ಲವೆಂದು ಹೇಳುವ ತಾವು ಮಕ್ಕಳಿಲ್ಲದ ದಂಪತಿಯೆಂಬ ಸುಳ್ಳು, ತನ್ನ ಕಾಯಿಲೆಯ ಪರಿಣಾಮಗಳ ಉತ್ಪ್ರೇಕ್ಷೆಯ ವರ್ಣನೆ ..ಇವುಗಳ ಆಧಾರದ ಮೇಲೆ ತನ್ನನ್ನು ನೋಡಿಕೊಳ್ಳುವವರಾರೂ ಇಲ್ಲವೆಂದು ಹೇಳಿ ಇಲ್ಲಿಗೆ ಉಡುಪಿಯಿಂದ ನೂರಾರು ಮೈಲಿ ದೂರದ ಕಾಸರಗೋಡಿನ ಆಶ್ರಯ ಸಂಸ್ಥೆಗೆ ತಂದು ಬಿಟ್ಟು ಹೋಗಿದ್ದಳು. ಅಕ್ಕನಿಗೆ ತಾನಲ್ಲಿ ಇಲ್ಲದಿದ್ದುದು ಯಾವಾಗ ತಿಳಿಯಿತೋ, ಅವಳೆಷ್ಟು ಮರುಗಿದಳೋ ಒಂದೂ ಗೊತ್ತಿಲ್ಲ. ಈಗ ತುಂಗಾಗೆ ಮದುವೆಯಂತೆ. ಅಂದರೆ ಇಪ್ಪತ್ತಾದರೂ ಆಗಿರಬಹುದು ಅವಳಿಗೆ. ಎಂಟು ವರ್ಷಗಳ ಕಾಲ ಇಲ್ಲಿದ್ದೆನೇ ತಾನು, ಒಂಟಿಯಾಗಿ, ಒಂದೇ ಒಂದು ವಾತ್ಸಲ್ಯದ ಸ್ಪರ್ಶಕಾಗಿ, ಪ್ರೀತಿಯ ನೋಟಕಾಗಿ ಹಂಬಲಿಸುತ್ತಾ..!!?ಇದೀಗ ಅಷ್ಟು ವರ್ಷಗಳ ನಂತರ ಅದಿತಿ ಅದು ಹೇಗೋ ತನ್ನನ್ನು ಹುಡುಕಿಕೊಂಡು ಬಂದಿದ್ದಾಳೆ. ಯಾರು ಹೇಳಿದ್ದೋ ತಾನಿಲ್ಲಿದ್ದೇನೆಂದು!
ಮತ್ತೆ ಮನಸ್ಸು ಇಂದಿನ ಈ ಕ್ಷಣಕ್ಕಿಳಿದು ಅದಿತಿಗಾಗಿ ಹುಡುಕಾಡಿದವು ಕಂಗಳು. ಅಲ್ಲೆಲ್ಲೋ ಯಾರನ್ನೋ ಗೋಗರೆಯುತ್ತಿರುವ ಆಕೆಯ ದನಿ.. "ದಯವಿಟ್ಟು ಅರ್ಥ ಮಾಡಿಕೊಳ್ಳಿ ಡಾಕ್ಟರೇ, ನಿಮ್ಮ ದಮ್ಮಯ್ಯ ಅಂತೀನಿ, ಅವರನ್ನು ಕಳಿಸಿಕೊಟ್ಟುಬಿಡಿ ಇದೊಂದು ಬಾರಿ. ಅವರ ಒಬ್ಬಳೇ ಒಬ್ಬಳು ಮಗಳ ಮದುವೆ, ಮಗನದ್ದೇನಾಗುತ್ತದೋ ಮುಂದೆ ಗೊತ್ತಿಲ್ಲ, ಅವನಂತೂ ಇದ್ದೂ ಇಲ್ಲದಂತೆ ನಮ್ಮ ಪಾಲಿಗೆ. ಈ ಒಂದು ಸಂದರ್ಭವಾದರೂ ಅವರಲ್ಲಿರಲಿ, ಕಣ್ತುಂಬ ನೋಡಿ ಅವಳನ್ನು ಹರಸಲಿ, ನಾನೇ ಕರ್ಕೊಂಡು ಹೋಗಿ ಮತ್ತೆ ತಂದಿಲ್ಲಿಗೇ ಬಿಡುತ್ತೇನೆ..."ಇನ್ನೂ ಏನೇನೋ..ಓ ನನ್ನನ್ನಲ್ಲಿಗೆ ಮತ್ತೆ ಒಯ್ಯುವ ಪ್ರಯತ್ನವೇ.. ಮನಸು ಹೂವಾಗಿ ಅರಳಿತು ಅದೆಷ್ಟೋ ದಿನದ ನಂತರ. ಓ ಕೂಸೇ, ಸಾರ್ಥಕವಾಯಿತು ಕಣೇ.. ನಿನ್ನನೊಂದೆರಡು ವರ್ಷವಾದರೂ ಹೊತ್ತಾಡಿಸಿದ್ದು. ಮತ್ತೆ ನನ್ನ ಮನೆಗೆ, ನನ್ನ ತುಳಸಿ, ತುಂಗಾ, ತನ್ಮಯ್, ಅಕ್ಕ..ಅಯ್ಯೋ ದೇವರೇ... ನನ್ನವರು ಅವರೆಲ್ಲರನ್ನೂ ನನ್ನ ಮನೆಯಂಗಳದಲ್ಲಿ ನೋಡಬಲ್ಲೆ. ಇದೊಂದು ಕನಸಾಗದಿರಲೆಂದು ಮನ ಹಾರೈಸಿತು
ಮುಂದಿನದೆಲ್ಲ ನಿಜವಾಗಿಯೂ ಸ್ವಪ್ನದಂತೆಯೇ ನಡೆದುಹೋಗಿತ್ತು. ಮೊದಲು ಇದಕ್ಕೆ ತುಳಸಿ ಒಪ್ಪಲಾರಳೆಂಬ ನೆಪ ಹೇಳಿ, ಅವಳ ಅನುಮತಿಪತ್ರ ತರಬೇಕಾಗಿ ಹೇಳುತ್ತಾ ಒಪ್ಪದೇ ಉಳಿದ ಡಾಕ್ಟರ್ ಆಮೇಲೆ ಅದಿತಿಯ ಗೋಗರೆಯುವಿಕೆ ನೋಡಲಾಗದೆ ಶೀಲಾಳನ್ನು ಜೊತೆಮಾಡಿ ಕಳಿಸಿದ್ದರು. ಉಡುಪಿಯ ತನ್ನ ಮಹಡಿಮನೆಯ ಮುಂದೆ ಬಂದಿಳಿದಾಗ ಮದುವೆಯ ಮನೆಯ ಎಲ್ಲ ಲಕ್ಷಣಗಳಿಂದ ಮನೆಯೂ, ನೆಂಟರಿಷ್ಟರ ಓಡಾಟದಿಂದ ಮನೆಯೊಳಗಿನ ವಾತಾವರಣವೂ ಕಳೆಗಟ್ಟಿತ್ತು. ಸಂತೋಷವಾಯಿತು, ಆದರೆ ಹಿಂದೆಯೇ ತೇಲಿಬಂದ ತುಳಸಿಯ ಮುಂಚಿನಿಂದಲೂ ಕಸಿವಿಸಿಯೆನಿಸುತ್ತಿದ್ದ ಗಟ್ಟಿದನಿಯ ನಗು ಅಲೆಅಲೆಯಾಗಿ ಕಿವಿ ಮನಗಳನ್ನು ಆವರಿಸಿ ಕಹಿಕಹಿಯೆನಿಸಿತು. ತಾನಿಲ್ಲದೇ ತುಳಸಿಯ ಬದುಕು ಇಂಥ ನಗುವಿನಿಂದ ತುಂಬಿದೆಯೇ?!ಇಳಿಸುತ್ತಾರೇನೋ... ಮನ ಕಾದೇ ಕಾಯುತ್ತಿತ್ತು. ಆದರೆ ಕಾರನ್ನು ಹಿಂದೆ ತಿರುಗಿಸಲು ಹೇ:ಳಿದ ಅದಿತಿಯತ್ತ ಮನಸಿಂದ ಪ್ರಶ್ನೆಗಳ ನಿಶ್ಯಬ್ಧ ಸರಮಾಲೆ. "ಇಲ್ಲ ಮಾಮಾ, ನಿನ್ನನ್ನೆಲ್ಲೂ ಕರ್ಕೊಂಡು ಹೋಗ್ತಾ ಇಲ್ಲ..ಮದುವೆ ನಾಳೆ ಅಲ್ಲ್ವಾ, ಸೀದಾ ಮಂಟಪಕ್ಕೇ ಬರುವಾ ಆದೀತಾ? ಈಗ ನಮ್ಮನೆಗೆ .." ಅಲ್ಲಿಂದ ಇಲ್ಲಿಯವರೆಗೂ ತನ್ನ ಕೈಯ್ಯನ್ನು ಕೈಯ್ಯೊಳಗಿರಿಸಿಕೊಂಡೇ ಮುತುವರ್ಜಿಯಿಂದ ಕರೆದುಕೊಂಡು ಬಂದಿದ್ದ ಅದಿತಿ ನಸುನಗುತ್ತಾ ಹೇಳಿದಳು. ಹಾಗಾದರೆ ಅಕ್ಕನನ್ನ ನೋಡಲು?! ಮತ್ತೆ ಮನ ಹುಚ್ಚೆದ್ದು ಕುಣಿಯಿತು. .. ತಾನು ಅಂದು ಮಾಡಿಕೊಟ್ಟ ಅದೇ ಮನೆಯಲ್ಲಿದ್ದಾರೆ ಅಕ್ಕ ಮತ್ತು ಅದಿತಿ. ಡ್ರೈವರ್ ಮತ್ತು ಶೀಲಾರ ಸಹಾಯದಿಂದ ಸ್ಟ್ರೆಚರ್ ನ ಮೇಲಿದ್ದಂತೇ ಮನೆಯೊಳಗೆ ಸಾಗಿಸಿದ ಅದಿತಿ ತನ್ನ ಮನಸೋದಿದವಳಂತೆ ಮಾತಾಡುತ್ತಿದ್ದಳು.. "ಹೂಂ ಮಾಮಾ, ನೀನಂದು ಬಾಡಿಗೆಗೆ ಕೊಡಿಸಿದ ಇದೇ ಮನೆನ್ನ ಖರೀದಿ ಮಾಡಿಬಿಟ್ಟೆ.. ನಮ್ಮ ಕಷ್ಟ-ಸುಖ ,ನಗು-ಅಳುಗಳಿಗೆ ಜೊತೆಯಾದ ಗೋಡೆ ಬಾಗಿಲುಗಳೊಡನೆ ಕಡಿದುಕೊಳ್ಳಲಾರದ ಸಂಬಂಧ ಹುಟ್ಟಿಬಿಟ್ಟಿತ್ತು, ಬಿಟ್ಟುಕೊಡಲಾರದಾದೆ, ಬಿಟ್ಟು ಹೋಗಲಾರದಾದೆ..." ಇವಳೆಲ್ಲಿ, ತನ್ನ ತುಳಸಿ-ತುಂಗಾರೆಲ್ಲಿ?! ಮನಸು ಅಕ್ಕನನ್ನು ಹುಡುಕುತಲೇ ಇತ್ತು... ಸಂಜೆ ಕಳೆದು ರಾತ್ರಿಯಾಯಿತು, ಅಕ್ಕನ ಸುಳಿವಿಲ್ಲ. ಬೆಳಿಗ್ಗೆಯೂ ಆಯಿತು. ಎಲ್ಲ ತನ್ನ ಮನದ ಭಾವಗಳನ್ನೋದಿ ಉತ್ತರಿಸುತ್ತಿದ್ದ ಅದಿತಿಗೆ ಅಕ್ಕನ ಕಾಣುವ ನನ್ನ ಹಪಹಪಿಯೇಕೆ ಅರ್ಥವಾಗುತ್ತಿಲ್ಲ... "ಎಲ್ಲಿಯಾದರೂ ಅಕ್ಕ...?!ಇಲ್ಲ ಇಲ್ಲ ಅಕ್ಕನಿಗೇನೂ ಆಗಲಾರದು, ಅಕ್ಕ ನಾನಿರುವವರೆಗೂ ಇರಬೇಕಾದವಳು ನನಗೆ ಬೇಕಾದಾಗಲೆಲ್ಲ ಆಸರೆಯಾಗಿ ಒದಗಲು..." ಮನಸು ಬಿಡದೆ ಬಡಬಡಿಸುತ್ತಿತ್ತು.
ಶೀಲಾಳ ಸಹಾಯದಿಂದ ಶೇವ್ ಮಾಡಿಸಿ, ಸ್ಪಾಂಜ್ ಬಾತ್ ಮಾಡಿಸಿ, ತನಗಾಗಿ ತಂದಿದ್ದ ಹೊಸ ಕೆನೆ ಬಣ್ಣದ ಜುಬ್ಬ ಪಾಯಿಜಾಮ ತೊಡಿಸಿ ತಯಾರು ಮಾಡಿ, ತಲೆ ಬಾಚುತ್ತ ಕೂತ ಅದಿತಿಯ ವಾತ್ಸಲ್ಯಮಯಿ ಮುಖಭಂಗಿ ಅಕ್ಕನ ಪ್ರತಿರೂಪವೆನಿಸಿತು. ಕಲ್ಯಾಣಮಂಟಪದೆದುರು ಪುನಃ ತನ್ನನ್ನು ಸ್ಟ್ರೆಚರ್ ಸಮೇತ ಒಳಗೊಯ್ದಾಗ ತನಗ್ಯಾರ ಮುಖವೂ ಕಾಣದಿದ್ದರೂ ಅವುಗಳಲ್ಲಿರಬಹುದಾದ ಪ್ರಶ್ನೆಗಳು, ಕರುಣಾಪೂರಿತ ದೃಷ್ಟಿಗಳ ಕಲ್ಪನೆಯೇ ಚುಚ್ಚಿದಂತೆನಿಸಿತು. ಆದರೂ ನನ್ನ ಕಂದಮ್ಮನ ಮದುವೆ, ಪುಳಕದ ಅನುಭವವನ್ನೇ ಮರೆತಿದ್ದ ಮೈಮನಗಳು ಮೊದಲಬಾರಿಗೆಂಬಂತೆ ಪುಳಕಿತವಾದವು.
ಮಂಟಪದೆದುರು ಬಂದು "ಬಾ ತುಂಗಾ.." ಕರೆದ ಅದಿತಿಯ ದನಿಗೆ ತುಂಗಾ ಬಂದಳು,
"ಮಾಮಾಗೆ ನಮಸ್ಕರಿಸಮ್ಮಾ..," ನಮಸ್ಕರಿಸಿದಳು, "ಬಾ ಇಲ್ಲಿ ಸರಿಯಾಗಿ ನಿನ್ನ ಚಂದದ ಮುಖ ನೋಡಲಿ" ಬಂದು ಗೊಂಬೆಯಂತೆ ಮುಂದೆ ನಿಂತ ತುಂಗಾಳ ಮುಖದಲ್ಲೂ ಅಕ್ಕನದೇ ಚೆಲುವು. ಸದ್ಯ ಇವಳು ತುಳಸಿಯನ್ನು ಹೋಲಿಕೊಂಡು ಹುಟ್ಟಿಲ್ಲ.. ಅರೇ..ಇದೇನು, ಮಗಳು ಅವಳಮ್ಮನನ್ನು ಹೋಲುತ್ತಿಲ್ಲವೆಂಬುದು ಅಪ್ಪನಿಗೆ ಖುಶಿ ಕೊಡುತ್ತಿದೆಯೇ?! ಹೌದು... ನಾನೀಗ ತುಳಸಿಯನ್ನು ದ್ವೇಷಿಸುತ್ತಿದ್ದೇನೆ ಚೀರಿಹೇಳಿತು ಅದೇ ಅಂದು ಬೆಟ್ಟದಷ್ಟು ಪ್ರೀತಿಸುತ್ತಿದ್ದ ಮನಸು. ತುಂಗಾಳನ್ನು ಮನಸು ಕೈಚಾಚಿ ಆಶೀರ್ವದಿಸಿತು.. ನೂರ್ಕಾಲ ನಿನ್ನವರೊಂದಿಗಿನ ಬಾಳು ನಿನ್ನನ್ನು ಸಂತೋಷದಲ್ಲಿಡಲಿ.. ಪಕ್ಕದಲ್ಲೇ ಬಾಗಿ ತನ್ನತ್ತ ನೋಡಿದ ತುಳಸಿಯ ಮುಖದಲ್ಲಿದ್ದದ್ದು ಅಸಹನೆಯೇ, ಸಿಟ್ಟೇ, ದ್ವೇಷವೇ, ತಿರಸ್ಕಾರವೇ ಒಂದೂ ಗೊತ್ತಾಗಲಿಲ್ಲ, ಅಲ್ಲಿ ಮಾರ್ದವ ಭಾವವ್ಯಾವುದೂ ಇರಲಿಲ್ಲವೆಂದಷ್ಟೇ ಅರ್ಥವಾಯಿತು. ಧಾರೆಯ ವೇಳೆ, ಕೈಮುಟ್ಟಿಸಿ ಧಾರೆಯ ಕಲಶವನ್ನು ಮಂಟಪದೊಳಕ್ಕೆ ಒಯ್ದರು. ಧಾರೆ ಮುಗಿದು, ಒಪ್ಪಿಸಿಕೊಡುವ ಸಂಪ್ರದಾಯವೂ ಮುಗಿದಾಗ, ಎಲ್ಲೋ ಏನೋ ಕಳಚಿಕೊಂಡಂಥ ಭಾವನೆ. ಅವರಾಗಲೇ ಕಳಚಿಕೊಂಡಿದ್ದರಾದರೂ ತಾನಂಟಿಕೊಂಡೇ ಇದ್ದೆನಲ್ಲಾ.. ಸಂಕಟದ ಗಳಿಗೆ.. ಮತ್ತೆ ಕಣ್ಣು ಅಕ್ಕನನ್ನರಸಿತು.. ಅಕ್ಕ ಕಾಣಲೇ ಇಲ್ಲ, ತನ್ಮಯ್ ನೂ ಕಾಣಲಿಲ್ಲ. ಮದುವೆಯ ಸಂಪ್ರದಾಯ ಎಲ್ಲ ಮುಗಿದಾದ ಮೇಲೆ ತನ್ನನ್ನು ತನ್ನ ಮನೆಗೊಂದು ಗಳಿಗೆಯಾದರೂ ಕರೆದುಕೊಂಡು ಹೋದಾರೇನೋ ಎಂಬ ನಿರೀಕ್ಷೆಯೂ ಅದಿತಿ "ಬಾ ಮಾಮಾ ಮನೆಗೆ ಹೋಗುವಾ.. ನಾಳೆ ನಿನ್ನನ್ನ ಮತ್ತೆ ಬೆಳಿಗ್ಗೆ ಬೇಗ ಅಲ್ಲಿಗೆ ಕರೆದೊಯ್ಯಬೇಕಲ್ಲಾ" ಅಂದಾಗ ಸುಳ್ಳಾಯಿತು. ಬೇಕೆಂದೇ ತುಳಸಿ ಅಕ್ಕಪಕ್ಕ ಇದ್ದಾಗಲೇ ಆ ಮಾತನ್ನು ಹೇಳಿದ್ದಳು ಅದಿತಿ, ಎಲ್ಲೋ ದೂರದ ಆಸೆ, ತಾನೇ ನಿಂತು ಮುತುವರ್ಜಿಯಿಂದ ಮಾಮಾ ಕಟ್ಟಿಸಿದ ಮನೆ, ಅತ್ತೆ ಒಂದು ಗಳಿಗೆಗಾದರೂ ಬರಮಾಡಿಸಿಕೊಂಡಾರೇನೋ ...ಅಂತ. ತುಳಸಿ "ಹೌದು ಹೌದು ಬೇಗನೇ ಹೊರಡಿ ನಾಳೆ, ಅಲ್ಲಿತನಕ ಹೋಗುವಾಗ ಸಂಜೆಯೇ ಆಗಿಬಿಡುತ್ತದೆ.. ನಿನಗೂ ನಾಡಿದ್ದಾದರೂ ಆಫೀಸಿಗೆ ಹೋಗಲೇಬೇಕಲ್ಲಾ" ಅನ್ನುತ್ತಾ ಅತ್ತ ನಡೆದಿದ್ದಳು, ತಾನ್ಯಾರೋ ಎಂಬಂತೆ.. ಅಲ್ಲಿಯವರೆಗೂ ತುಳಸಿಯ ಎಲ್ಲ ತನ್ನೊಂದಿಗಿನ ಸಲ್ಲದ ವ್ಯವಹಾರಗಳಿಗೂ ಏನೋ ಒಂದು ಸುಳ್ಳುಪಳ್ಳಾದರೂ ಸಮಜಾಯಿಷಿ ಕೊಟ್ಟುಕೊಂಡೇ ಬಂದಿದ್ದರಾದರೂ ಈಗಮಾತ್ರ ಮೊದಲ ಬಾರಿಗೆ ಇಲ್ಲೇ ಇದೇ ಗಳಿಗೆ ಸಾಯಬೇಕೆನಿಸಿತು ನಾಯಕರಿಗೆ. ಸಾವಿನ ಮುಂದೆ ಕೈಕಾಲು ಸರಿ ಇರುವವರೇ ನಿರ್ವೀರ್ಯರು, ಇನ್ನು ಇವರು..?! ಮತ್ತೆ ಮನಸು ಕೂಗಿ ಕರೆಯಿತು ಆರ್ತವಾಗಿ.."ಅಕ್ಕಾ..". ಯಾರೂ ಓಗೊಡಲಿಲ್ಲ. ..
ಮನೆಗೆ ಹಿಂತಿರುಗಿದ ಮೇಲೆ ಅದಿತಿ "ನಿನ್ನ ಪುತ್ಥಳಿಯನ್ನ ಅವಳ ಗಂಡನಿಗೊಪ್ಪಿಸಿಬಿಟ್ಟೆ ಅಂತ ಬೇಸರಾನಾ ಮಾಮಾ, ಬಿಡು, ತುಂಗಾಗೇನು, ಮಹಾರಾಣಿಯ ಹಾಗಿರ್ತಾಳೆ ಅನ್ನೋದಕ್ಕೆ ನಾನೇ ಜವಾಬ್ದಾರಿ. ಒಳ್ಳೆಯ ಹುಡುಗ. ನನ್ನ ಗಂಡನ ತಮ್ಮನೇ.. "ಅನ್ನುತ್ತಾ ಹೋದಳು. ಕಣ್ಣು ಅಪ್ರಯತ್ನ ಅವಳ ಕೊರಳ ಕಡೆ ಹೋಯಿತು. ಕರಿಮಣಿ ಇಲ್ಲ.. "ಹೂಂ ಮಾಮಾ, ಕರಿಮಣೀ ಇಲ್ಲ.. ಮದುವೆಯಾಗಿ ಒಂದೇ ವರ್ಷಕ್ಕೆ ವಿದ್ಯುಚ್ಛಕ್ತಿ ಇಲಾಖೆಯಲ್ಲಿ ಇಂಜಿನಿಯರ್ ಆಗಿದ್ದ ಇವರು ವಿದ್ಯುತ್ ಅವಘಡವೊಂದರಲ್ಲಿ ತೀರಿಕೊಂಡರು. ಥೇಟ್ ನೀನಲ್ಲಿ ಇದ್ದಂತೆ ನಾನಿಲ್ಲಿ ಒಂಟಿ ಮಾಮಾ" ಅಂದಳು, ಕಣ್ಣಲ್ಲಿಷ್ಟೂ ನೀರಿರಲಿಲ್ಲ. ಒಂಟಿ?! ಅಕ್ಕ ಎಲ್ಲಿ?! ಅವ್ಯಕ್ತವಾದದ್ದೊಂದು ಭಯದಿಂದಲೋ ಅಥವಾ ಅನಿಶ್ಚಿತತೆಯ ಅಬ್ಬರಕ್ಕೋ ಕಣ್ಣು ಪಟಪಟನೆ ಬಡಿದುಕೊಂಡವು. ಅರ್ಥವಾದವಳಂತೆ.."ಓ ನಿನ್ನಕ್ಕನಾ, ಅವಳಾಗಲೇ ನಾಳೆ ನಾವಲ್ಲಿಗೆ ಹೋದಾಗ ಅಲ್ಲಿ ಜಾಗ ಸರಿ ಇಲ್ದೇ ಇದ್ರೆ... ಅಂತ ನಮ್ಮ ಇರುವಿಕೆಗೆ ಆ ಜಾಗವನ್ನ ತಕ್ಕುದಾಗಿ ಮಾಡಲು ಅತ್ತ ಹೋಗಾಯಿತು.." ಅಂತ ಮೇಲೆ ಕೈತೋರಿದಳು. ಪುನಃ ಕಣ್ಣಲ್ಲದೇ ನಿರ್ವಿಕಾರತೆ. ಇವಳ ಕಣ್ಣೀರೆಲ್ಲಾ ನಾಯಕರೊಳಗೆ ಹರಿದುಬಂದಿದೆಯೇನೋ ಎಂಬಂತೆ ಅವರ ಕಣ್ಣು ಸುರಿಸುತ್ತಲೇ ಇತ್ತು. ಎದೆಯೊಡೆದು ಹೋದಂತೆ, ದುಖಃದ ಅಣೆಕಟ್ಟೊಡೆದು ಮೈಯ್ಯೊಳಗೆಲ್ಲ ಅದೇ ಅದು ತುಂಬಿ ಉಕ್ಕಿ ಹರಿದ ಹಾಗೆ, ತೀವ್ರವಾದ ನೋವೊಂದು ಸರ್ವತ್ರ ವ್ಯಾಪಿಸಿ ಒಂದು ಕ್ಷಣ ಸತ್ತೇ ಹೋದಂತನಿಸಿತು ನಾಯಕರಿಗೆ.. ಆದರೆ ಅವರಿನ್ನೂ ಸತ್ತಿರಲಿಲ್ಲ. ಮತ್ತೆ ಕಣ್ಣಷ್ಟೇ ತುಂಬಿದವು, ತುಂಬಿ ಹರಿದವು.
ಬೆಳಗಾಯಿತು. ಮತ್ತದೇ ಅಂಬುಲೆನ್ಸೆ ನಲ್ಲಿ ಕಾಸರಗೋಡತ್ತ ಪಯಣ..ಕೈ ಮತ್ತೆ ಅದಿತಿಯ ಕೈಯ್ಯೊಳಗೆ.. ಅಕ್ಕನ ಬೆಚ್ಚನೆ ಆತ್ಮೀಯತೆಯೆಲ್ಲ ತನ್ನೊಳಗೆ ಹರಿದುಬರುತ್ತಿದೆಯೇನೋ ಎನ್ನುವಷ್ಟು ಆಪ್ತವಾಗಿತ್ತು ಆ ಸ್ಪರ್ಶ. "ಬಿಟ್ಟುಬಿಡು ಮಾಮಾ.. ನೋಡು ಎಲ್ಲ ಇತರ ಸಂಬಂಧಗಳು ಒಂದು ಉದ್ದೇಶವಿಟ್ಟುಕೊಂಡೇ ಹುಟ್ಟುತ್ತವೆ ,ಉಳಿಯುತ್ತವೆ ಮತ್ತದು ಪೂರ್ತಿಯಾದ ಮೇಲೆ ಅಥವಾ ಎದುರಿನ ವ್ಯಕ್ತಿತ್ವದ ಮಿತಿಯೊಳಗೆ ತಮ್ಮ ನಿರೀಕ್ಷೆ ಫಲಪ್ರದವಲ್ಲ ಅನಿಸಿದಾಗ ಕಳಚಿಕೊಳ್ಳುತ್ತವೆ ಎನ್ನುವುದನ್ನು ಸುಲಭವಾಗಿ ಅರಗಿಸಿಕೊಳ್ಳುವ ನಾವು ಗಂಡ -ಹೆಂಡತಿ ಮತ್ತು ರಕ್ತ ಸಂಬಂಧಗಳ ವಿಷಯ ಬಂದಾಗ ಕೊನೆಯ ಗಳಿಗೆಯವರೆಗೂ ಸರಿಯಾದೀತು ಅನ್ನುವ ನಿರೀಕ್ಷೆಯಲ್ಲಿ ಮತ್ತದು ಸರಿಯಾಗದೆ ಉಳಿಯುವ ನಿರಾಸೆಯಲ್ಲಿ ಬಾಳುವುದು ಯಾಕೆ? ಬಿಡು, ಅವರು ನಿನ್ನಿಂದ ವಿಮುಖರಾಗುವುದೇ ಬಾಳಿನ ಅತ್ಯುತ್ತಮ ನಿರ್ಧಾರ ಅಂದುಕೊಂಡಿರುವಾಗ ಅಲ್ಲಿ ನಿನಗ್ಯಾಕೆ ಅವರ ಒಲವಿನ, ಗಮನದ ನಿರೀಕ್ಷೆ? ಅತ್ತೆ ಅವರ ಮಟ್ಟಿಗೆ ತಾನಿರುವುದೇ ಸರಿ ಅಂದುಕೊಂಡು ಬಾಳುತ್ತಿದ್ದಾರೆ, ತನ್ನಷ್ಟು ಕಷ್ಟದಲ್ಲಿರುವವರು ಯಾರೂ ಇಲ್ಲವೆಂದುಕೊಂಡಿರುವ ಅಲ್ಪಜ್ಞಾನ ಅವರದು. ತುಂಗಾ ಅವರನ್ನೇ ನೋಡಿಕೊಂಡು ಅವರದೇ ನಿಲುವನ್ನು ಒಪ್ಪಿಕೊಳಲಾಗದಿದ್ದರೂ ಸ್ವೀಕರಿಸಿಕೊಂಡು ಬಾಳಿದ ಜೀವ. ಇನ್ನು ತನ್ಮಯ್.. ನಮಗೆ ಅವನದೊಂದು ಶಾಪಗ್ರಸ್ತ ಜೀವನವೆನಿಸಿದರೂ ಅವನ ಮಟ್ಟಿಗೆ ಅವನು ಇವ್ಯಾವುವೂ ಬಂಧಗಳ ಗೋಜಿಲ್ಲದೇ ಬದುಕುತ್ತಿದ್ದಾನೆ. ಆದರೂ ಅಮ್ಮ ಸತ್ತ ಆಸುಪಾಸಿನ ದಿನಗಳಲ್ಲಿ ವ್ಯಘ್ರವಾಗಿತ್ತಂತೆ ಅವನ ನಡವಳಿಕೆ. ವಾರಕ್ಕೊಮ್ಮೆ ಅವನನ್ನೂ ಹೋಗಿ ನೋಡಿಕೊಂಡು ಬರುತ್ತಿದ್ದೇನೆ. ಅವನಿಗೆ ನನ್ನ ಗುರ್ತಿಲ್ಲ, ನನ್ನ ಮನಸಿನ ಸಮಾಧಾನಕ್ಕಷ್ಟೆ....ಮತ್ತೆ ನನ್ನ ಗಂಡನ ಆಫೀಸಿನಲ್ಲಿ ನನಗೆ ಕಾಂಪೆನ್ಸೇಟರಿ ಗ್ರೌಂಡ್ ಮೇಲೆ ಕೆಲಸ ಸಿಕ್ಕಿದೆ. ಹೇಗೋ ಬಾಳುತ್ತಿದ್ದೇನೆ. ನಿನ್ನನ್ನು ನನ್ನ ಮನೆಯಲ್ಲಿ ನಾನೇ ನೋಡಿಕೊಳ್ಳಬೇಕೆಂದು ತುಂಬಾ ಆಸೆಯಿದೆ. ಆದರೆ ನಿನಗೂ ಅತ್ತೆಗೂ ಒಂದೇ ಊರಿನಲ್ಲಿರಿಸಿ ಅದನ್ನೊಂದು ಧರ್ಮಸಂಕಟವಾಗಿಸುವುದು ಬೇಡವೆನಿಸುತ್ತಿದೆ. ಮತ್ತೆ ಇಷ್ಟು ವರ್ಷಗಳಲ್ಲಿ ನೀನೇನಾದರೂ ಕಳಚಿಕೊಳ್ಳುತ್ತ ನಡೆದಿದ್ದರೆ ಮತ್ತೆ ನಿನಗೆ ಅಂಟಿಸುವ, ಅಂಟಿಕೊಳ್ಳುವ ವ್ಯಾಪಾರ ಬೇಡವೆನಿಸುತ್ತಿದೆ. ಎಲ್ಲಕ್ಕಿಂತ ಹೆಚ್ಚು ನಿನ್ನ ಈ ಸ್ಥಿತಿ ನಾ ನೋಡಲಾರೆ ಮಾಮಾ.." ಮಾತಾಡುತ್ತಾ ಆಡುತ್ತಾ ಇದುವರೆಗೆ ತುಂಬ ಗಟ್ಟಿ ತಾನೆಂಬಂತೆ ಬಿಂಬಿಸಿಕೊಂಡು ಬಂದ ಹುಡುಗಿ ಬಿಕ್ಕಿಬಿಕ್ಕಿ ಅತ್ತುಬಿಟ್ಟಿತು. ಬಾಚಿ ತಬ್ಬಿ ಸಂತೈಸುವ ಮನಸಾಯಿತು ನಾಯಕರಿಗೆ. ಅದೆಷ್ಟೋ ದಿನಗಳ ನಂತರ ಒಮ್ಮೆ ಕಣ್ಣು ನೀರ್ಗರೆಯುವುದನ್ನು ನಿಲ್ಲಿಸಿದವು "ಬಾ ಕಂದಾ, ನಾನಿಲ್ಲವೇ ನಿನಗೆ, ನಿನ್ನ ಬಾಳಿನ ಒತ್ತಾಸೆಯಾಗಿ ಇಲ್ಲಿ ಹೀಗೆ ಇನ್ನಷ್ಟು ಕಾಲ, ನೀ ನಿಜವಾಗಿಯೂ ಒಂಟಿಬಾಳು ಬಾಳಬಲ್ಲಷ್ಟು ಪೂರ್ತಿ ಗಟ್ಟಿಯಾಗುವವರೆಗೂ ನಿನ್ನ ಪಾಲಿಗೆ ನಾನಿದ್ದೇನೆ..."
ಗಂಟಲುಬ್ಬಿ ಬಂದ ಮಾತುಗಳಲ್ಲೇ ಸೆರೆಯಾದವು. ಆದರೆ ಅವಳಿಗವು ಕೇಳಿಸಿದವು. "ಥ್ಯಾಂಕ್ಸ್ ಮಾಮಾ." ಅಂದಳು ಕೈಯ್ಯನ್ನ ಹಾಗೇ ಮೆಲ್ಲ ಅದುಮುತ್ತಾ, ಕಣ್ಣೊರೆಸಿಕೊಳ್ಳುತ್ತಾ.. ಮರುದಿನ ವಾಪಾಸು ಬಂದವಳೇ ಆಫೀಸಿಗೆ ಹೊರಡುತ್ತಿದ್ದಾಗ ಮೊಬೈಲ್ ರಿಂಗಣಿಸಿತು. ಎತ್ತಿಕೊಂಡು ಹಲೋ ಅಂದಳು. ಅತ್ತಲಿಂದ ಶೀಲಾ ಬಿಕ್ಕುತ್ತಿದ್ದಾಳೆ. "ಅಕ್ಕಾ, ಅಪ್ಪಾ..." ಮುಂದೆ ಹೇಳಲಾಗಲಿಲ್ಲ ಅವಳಿಗೆ. "ಅಯ್ಯೋ ನಿನ್ನಾ... ನಿನ್ನೆ ತಾನೇ ನಾನಿರುತ್ತೇನೆ ಅಂದಿದ್ದೆಯಲ್ಲೋ ಮಾಮಾ, ಅಕ್ಕನಿರುವ ಜಾಗ ಗೊತ್ತಾದ ಕೂಡಲೇ ಅಕ್ಕನ ಮಗಳ ಯೋಚನೆಗಿಂತ ಅವಳ ಸಾನ್ನಿಧ್ಯದ ಆಸೆಯೇ ಮೇಲಾಯಿತೇನೋ ನಿನಗೆ..." ತನ್ನಷ್ಟಕ್ಕೇ ಗೊಣಗುತ್ತಾ ಕುಸಿದು ಕೂತ ಅದಿತಿಗೆ ತನಗೇನಾದರೂ ಹುಚ್ಚು ಹಿಡಿಯುತ್ತಿದೆಯೇ ಅನ್ನಿಸಿತೊಂದು ಬಾರಿ. ಸಾವರಿಸಿಕೊಂಡು ಫೋನ್ ನಲ್ಲಿ "ಸರಿಸರಿ...ನಾವೆಲ್ಲ ಈಗಲೇ ಹೊರಟು ಬರುತ್ತಿದ್ದೇವೆ" ಅಂದಳು. ಮಾಮಾನ ಮನೆಗೆ ಹೋದರೆ ಅತ್ತೆ ಒಂದು ಕಡೆ ಸುಮ್ಮನೆ ಕೂತಿದ್ದರೂ, ಮುಖದಲ್ಲೇನೂ ನೋವಿನ ಸೂಚನೆಯಿಲ್ಲ, ಕೈ ತಲೆಯ ಮೇಲಿಲ್ಲ, ಬೆರಳು ಸೀರೆ ಸೆರಗಿನಂಚಿನೊಡನೆ ಆಟವಾಡುತ್ತಿವೆ, ತನ್ನನ್ನು ಕಂಡೊಡನೆ " ನಿನ್ನ ಮಾಮಾನ ನಿನ್ನೆ ಕರೆದುಕೊಂಡು ಬಂದು ನಮಗೆಲ್ಲ ಅವರ ಕೊನೆಯ ದರ್ಶನ ಮಾಡಿಸಿ ಪುಣ್ಯ ಮಾಡಿದೆ ಅನ್ನಬೇಕೋ, ಅಥವಾ ಅವರ ದೇಹಕ್ಕೆ ಇನ್ನಿಲ್ಲದ ಆಯಾಸ ಕೊಟ್ಟು ಅವರ ಸಾವಿಗೆ ಕಾರಣವಾದ ಪಾಪ ಮಾಡಿದೆ ಅನ್ನಬೇಕೋ ಗೊತ್ತಾಗುತ್ತಿಲ್ಲ" ಅಂದರು. ಅಯ್ಯೋ ನಿಮ್ಮದು ಇದ್ದದ್ದೇ ಅಂದುಕೊಂಡು "ಏನೂ ಅನ್ನಬೇಡಿ ಅತ್ತೆ, ನಡೀರಿ, ತುಂಗಾ, ಅವಳ ಗಂಡ ಎಲ್ಲರನ್ನೂ ಸೇರಿಸಿಕೊಂಡು ಹೋಗಿ ಮಾಮಾನ್ನ ಅವರ ಮನೆಗೆ ಈಗಲಾದ್ರೂ ಕರ್ಕೊಂಡು ಬರೋಣ" ಅಂದಳು. ".. ಸುಮ್ನಿರು, ತುಂಗಾ ಈಗಷ್ಟೇ ಅತ್ತೆ ಮನೆಗೆ ಕಾಲಿಟ್ಟಿದ್ದಾಳೆ, ಅವಳನ್ನೇನು ಕರೆದುಕೊಂಡು ಹೋಗುವುದು, ಇಷ್ಟಕ್ಕೂ ನಾವೇಕೆ ಹೋಗಬೇಕು, ಇಲ್ಲಿಗೇ ಹೆಣ ಕಳಿಸಲು ಹೇಳಿದ್ದೇನೆ. ಸಂಜೆಯೊಳಗೆ ಬರ್ತದೆ. .."ನಿರ್ವಿಕಾರ ಹೇಳುತ್ತಲೇ ಹೋಗುತ್ತಿದ್ದ ಅತ್ತೆಯ ಮಾತಿಗೆ ಅದಿತಿಯ ಮೌನ ಕಟ್ಟೆಯೊಡೆಯಿತು..
" ಮನುಷ್ಯರಾ ನೀವು? ಅವರ ಜೀವನದ ಒಂದೊಂದು ಕ್ಷಣವನ್ನೂ ನಿಮ್ಮದೊಂದು ನಗುವಿಗಾಗಿ ಮುಡಿಪಿಟ್ಟು ಬಾಳಿದವರು, ನಿಮಗಾಗಿ ಮಾಡಬಾರದ್ದನ್ನೆಲ್ಲ ಮಾಡಿ, ತನ್ನೆದೆಯ ಮೇಲೆ ಕಲ್ಲಿಟ್ಟುಕೊಂಡು ಬಾಳಿದವರು ಸತ್ತು ಮಲಗಿದಾಗಲೂ ನಿಮಗೇನೂ ಅನಿಸುತ್ತಿಲ್ಲವೇ ಅತ್ತೆ? ಅವರ ದುಡಿಮೆಯ ಕಾಸುಕಾಸನ್ನು ನೀರಿನಂತೆ ಖರ್ಚು ಮಾಡುವಾಗಲೂ ಅವರ ಕಡೆಗಿನ ಋಣೀ ಪ್ರಜ್ಞೆ ಎದ್ದೇಳಲಿಲ್ಲವೇ? ಅವರು ಬೆವರು ಸುರಿಸಿ ಕಟ್ಟಿಸಿದ ಮನೆಯೊಳಗೆ ಹಾಯಾಗಿ ಕೂತಿದೀರಲ್ಲಾ, ಬದುಕಿದ್ದಾಗ ಚಡಪಡಿಸಿಯೇ ಕಳೆದರು, ಈಗ ಸತ್ತಾಗಿದೆ, ಇನ್ನು ಅವರಿಲ್ಲಿಗೆ ಹೆಣ ತರುವಷ್ಟು ಹೊತ್ತು ಆ ಆತ್ಮ ತನ್ನವರು ಕೊಡುವ ಗಮನಕ್ಕಾಗಿ ಕಾಯುತ್ತಾ ಮುಳ್ಳಿನ ಮೇಲೆ ಕೂತಂತೆ ಚಡಪಡಿಸುತ್ತಿರುತ್ತದೆ ಅನ್ನುವ ಯೋಚನೆಯೂ ಬರುವುದಿಲ್ಲವೇ ನಿಮಗೆ? ಊದಿಕೊಂಡು ಗುರ್ತಿಸಲಾಗದಷ್ಟು ಅದು ಬದಲಾಗುವ ಮುನ್ನ ಸಾಧ್ಯವಾದಷ್ಟು ಬೇಗ ಹೋಗಿ ಅವರ ಮುಖದರ್ಶನ ಮಾಡುವ ಅನಿಸುವುದಿಲ್ಲವೇ? ಥೂ.. ನಿಮ್ಮನ್ನು ಕಟ್ಟಿಕೊಂಡ ದಿನವೇ ಮಾಮನ ಜೀವನದ ದುರ್ದೆಶೆ ಆರಂಭವಾಯಿತು, ಅವನದನ್ನೇ ಸುಖದ ಪರಮಾವಧಿ ಅಂದುಕೊಂಡು ಬಾಳಿದ ಪಾಪ, ನೀವು ಕಾಲಲೊದ್ದು ದೂಡಿದರೂ ನಿಮ್ಮ ನೆನಪಿನ ಕಾಟದಲ್ಲಿ ಬಾಳು ಅಸಹನೀಯವಾಗಿಸಿಕೊಂಡಾದರೂ ಮಾನಸಿಕವಾಗಿ ನಿಮಗಂಟಿಕೊಂಡೇ ನರಳಿ ನರಳಿ ಬದುಕಿದ. ಈಗ ಅವ ಸತ್ತದ್ದಲ್ಲ, ಅಂದುಕೊಳ್ತೇನೆ, ನೀವು ಕಾಲಿಟ್ಟ ಈ ನೆಲದ ಮೇಲಿದ್ದಷ್ಟೂ ಸಮಯ ನಿಮ್ಮಗಳ ಯೋಚನೆಯಿಂದ ಬಿಡುಗಡೆಯಾಗುವುದು ಸಾಧ್ಯ ಇರಲಿಲ್ಲ ಅವನಿಗೆ, ಸತ್ತು ಮುಕ್ತನಾದ. ಯಾರಂದದ್ದು ಅಂತಕನ ದೂತರಿಗೆ ದಯವಿಲ್ಲಾ ಅಂತ, ಅವರ ದಯೆಯಿಂದಲೇ ನನ್ನ ಮಾಮನಿಗೆ ಮುಕ್ತಿ ಸಿಕ್ಕಿದ್ದು ನಿಮ್ಮ ಸಹವಾಸದಿಂದ. ಹಾಳಾಗಿ ಹೋಗಿ, ನಾನಂತೂ ಹೋಗುವವಳೇ, ನನ್ನ ಮಾಮನ್ನ ನಾನೇ ಕರ್ಕೊಂಡು ಬರುವವಳು.." ಬುಸುಗುಡುತ್ತಾ ಎಂದೂ ತೋರದ ರೂಪತೋರಿದ ಅದಿತಿಯನ್ನು ಬಿಟ್ಟ ಬಾಯಿಂದ ನೋಡುತ್ತಾ ಕುಳಿತಳು ತುಳಸಿ. ಫೋನೆತ್ತಿಕೊಂಡು ಕಾಸರಗೋಡಿಗೆ ಮಾತಾಡಿದವಳೇ "ಛೇ...ಹೊರಟಾಯ್ತಾ?!" ಅಂದಳು. ಬುಸುಬುಸು ಎನ್ನುತ್ತಾ ಹೊರಬಂದವಳು ಗೇಟ್ ನ ಎದುರಿನ ಕಲ್ಲುಬೆಂಚಿನಲ್ಲೇ ಕೂತಳು ಮನೆಯೊಳಗೆ ಕಾಲಿಡುವುದಕ್ಕೇ ಅಸಹ್ಯವೆನಿಸಿದಂತೆ. ರಾತ್ರಿಯ ಆಯಿತು. ಹೆಣ ಬರುವಷ್ಟು ಹೊತ್ತಿಗೆ. ಅಲ್ಲಿನವರು ಗಾಡಿಯಿಂದಿಳಿದ ಕೂಡಲೇ ಧಾವಿಸಿ ಬಂದವಳು..ಹೊರತಂದ ಬಾಡಿಯನ್ನು ತನದೊಂದು ವಸ್ತುವನ್ನು ಯಾರೋ ದೂರದಿಂದ ತಂದುಕೊಟ್ಟಾಗ ಕಸಿದುಕೊಳ್ಳುವ ಹಾಗೆ ಎಲ್ಲಿ.. ಎಲ್ಲಿ..ಅನ್ನುತ್ತ ತಳ್ಳಿಕೊಂಡು ಬಳಿಸಾರಿದಳು. ಕೆಳಗಿಳಿಸಿದ ಕೂಡಲೇ "ಅಯ್ಯೋ ಕಣ್ಣು, ಬಾಯಿ ಮುಚ್ಚದೇ ಎಂಥದು ನೀವು?! ಕಾಲ್ಬೆರಳುಗಳನ್ನಾದರೂ ಸೇರಿಸಿ ಕಟ್ಟಬಹುದಿತ್ತಲ್ಲಾ, ನೋಡಿ ಹೇಗೆ ಸೆಟೆದುಕೊಂಡಿವೆ, ಈಗ ಬಲಾತ್ಕಾರದಲ್ಲಿ ಅವನ್ನ ಕಟ್ಟಬೇಕು.. ಛೇ..ಜೀವ ಇಲ್ಲದಿದ್ರೂ, ಅವ್ನಿಗೆ ನೋವಾಗದಿದ್ರೂ ನಮಗೆ ಅಷ್ಟು ಬಲಾತ್ಕಾರ ಮಾಡ್ಲಿಕ್ಕೆ ಹಿಂಸೆ ಆಗಲ್ವೇನ್ರೀ.. ಇರ್ಲಿ ಬಿಡಿ, ಅವನ ಋಣದಲ್ಲಿ ಬಿದ್ದು ಹೊರಳಾಡುತ್ತಿರುವವರೇ ಕೊಡಬೇಕಾದ ಕನಿಷ್ಠ ಗಮನ ಕೊಡುವ ಮನಸ್ಥಿತಿಯಲ್ಲಿಲ್ಲ, ಅಲ್ಲಿ ದಿನಕ್ಕೆಷ್ಟು ಇಂಥ ಹೆಣಗಳ ವಿಲೇವಾರಿ ಮಾಡಬೇಕೋ ಏನೋ ನೀವು, ನಿಮಗೆ ಅವನ ಕಾಳಜಿ ಬಂದೀತೆಂದು ನಾನು ಹೇಗೆ ನಿರೀಕ್ಷಿಸಬಲ್ಲೆ?!.."ಅನ್ನುತ್ತಾ ಮಾತಾಡುತ್ತಲೇ ಪುರೋಹಿತರನ್ನು ಕರೆಯುತ್ತಾ, ಚಟ್ಟ ಕಟ್ಟುವವರನ್ನು ವಿಚಾರಿಸಿಕೊಳ್ಳುತ್ತಾ, ಮುಂದಿನ ಕಾರ್ಯಗಳತ್ತ ಗಮನ ಹರಿಸತೊಡಗಿದ ಅದಿತಿಯನ್ನು ಬಿಟ್ಟ ಕಂಗಳಿಂದ ನೋಡುತ್ತಾ ನಿಂತಿದ್ದರು ತುಳಸಿ ಮತ್ತು ತುಂಗಾ.. ಮೊದಲಬಾರಿಗೆ ತಮ್ಮದೇ ಮನೆಯಂಗಳದಲ್ಲಿ ತಾವೇ ಪರಕೀಯರು ಅನಿಸತೊಡಗಿತು ಅವರಿಗೆ.
 

4 comments:

  1. ಉಳಿದದ್ದು ಸಣ್ಣ ಮೌನ ಅಷ್ಟೇ...

    ReplyDelete
    Replies
    1. ನನ್ನಲ್ಲೂ ಅದೇ ಶ್ರೀವತ್ಸ..

      Delete
  2. ಮಾವ - ಎಷ್ಟು ಬೇಗ ಬಾಡಿಯಾದರಲ್ಲ! :(

    ReplyDelete