Monday, July 29, 2013

2.ಇಂದು ಮುಂಜಾವಿನೊಂದು ಗಳಿಗೆ

 
ಬೆಳಿಗ್ಗೆ ಅಂಗಳ ಗುಡಿಸುತ್ತಿದ್ದೆ. ಆರು ಗಂಟೆಯ ಆಸುಪಾಸು. ಪ್ರತಿದಿನವೂ ಇದು ನನಗೆ ತುಂಬಾ ಪ್ರಿಯವಾದ ಹೊತ್ತು. ಧ್ಯಾನದ ಸಣ್ಣದೊಂದು ಸೆಶನ್ ನ ನಂತರ ತೇಲುವಂತೆ ಭಾಸವಾಗುತ್ತಿರುವ ದೇಹವನ್ನು ನಸುಕಿನ ತಂಗಾಳಿ ತಾಗಿದಾಗ ತುಂಬಾ ಮುದವೆನಿಸುತ್ತದೆ, ಅಪ್ರಯತ್ನ ಮುಖದಲ್ಲೊಂದು ಮುಗುಳ್ನಗು ಓಡಾಡುತ್ತದೆ..
 
ಇಂದಿನ ಮುಂಜಾವು ಇನ್ನೂ ಸವಿಯೆನಿಸುತಿತ್ತು.. ಏನೋ ಭಾರವೊಂದು ಕಳಚಿಕೊಂಡಾಗಿನ ನಿರಾಳ ಭಾವನೆ..
ಅಂಗಳದ ಸೆರಗನ್ನ ಪಾರಿಜಾತ ಹೂಗಳು ಹೆಚ್ಚಿನವು ಕೆಂಪು ತೋರುತ್ತಾ, ಇನ್ನಷ್ಟು ಬಿಳಿ ತೋರುತ್ತಾ, ಇನ್ನುಳಿದವು ಎರಡೂ ತೋರುತ್ತಾ ಅಲಂಕರಿಸಿದ್ದವು. ನಿಶೆ ಬಿಡುವ ಈ ಬಣ್ಣಬಣ್ಣದ ರಂಗೋಲಿಯ ಮುಂದೆ ನಾನು ಬೆಳಿಗ್ಗೆ ಬಹಳ ಆಸಕ್ತಿ, ಮುತುವರ್ಜಿಯಿಂದ ಬಿಡಿಸುವ ಬಿಳಿ ರಂಗೋಲಿ ಯಾವಾಗಲೂ ಪೀಚೆನಿಸುತ್ತದೆ ನನಗೆ... ಅಲ್ಲೇ ಸ್ವಲ್ಪ ದೂರದಲ್ಲಿ ಗಸಗಸೆ ಮರವುದುರಿಸಿದ ಉದ್ದುದ್ದ ಹಳದಿ ಎಲೆಗಳ ನಡುನಡುವೆ ರತ್ನಗಂಧಿಯ ಪುಟಾಣಿ ದುಂಡಗಿನ ಹಳದಿ ಎಲೆಗಳು ಹರಡಿದ್ದವು.. ಆ ವಿನ್ಯಾಸ ಅಸ್ತವ್ಯಸ್ತವಾಗಿದ್ದರೂ ಇಂದು ಮುಂಜಾನೆಯೊಳಗದು ಚಂದ ಇದೆ ಅನಿಸುತ್ತಿತ್ತು.. ಮನಸು ಪ್ರಸನ್ನವಾಗಿತ್ತು, ಕಂಡದ್ದೆಲ್ಲ ಚಂದವೆನಿಸುತ್ತಿತ್ತು. ಚಂದವೆನಿಸಿದ್ದನ್ನೆಲ್ಲ ಕೂಡಿಟ್ಟುಕೊಳ್ಳಲಾಗುವುದಿಲ್ಲವಲ್ಲ! ಎಲೆಯ ಕಸವೆತ್ತಿ ಹೊರಹಾಕಬೇಕು, ಹೂ ಉದುರಿದವನ್ನೂ ಮತ್ತೆ ಗಿಡದಲ್ಲಿರುವವನ್ನೂ ಕೊಯ್ದು ಒಳಗೆ ಒಯ್ಯಲೇಬೇಕು. ಹೊರಹಾಕಿದ ಕಸವೆತ್ತಿ ಒಟ್ಟು ಮಾಡಿ ಡಬ್ಬಿಯೊಂದಕ್ಕೆ ತುಂಬಬೇಕು, ಕಸವೆತ್ತುವವನ ಗಮನಕ್ಕೆ ಬರುವಲ್ಲಿ ಆ ಡಬ್ಬಿಯನಿಡಬೇಕು. ಅಂದರೆ ನಿರ್ಮಲವಾಗಿರಬೇಕಾದರೆ ಕಸ ನನ್ನಂಗಳದಿಂದ ದೂರ ಹೋಗಲೇಬೇಕು. ಸಾಮಾನ್ಯ ಎಲ್ಲರೂ ಬೆಳ್ಳಂಬೆಳಗ್ಗೆ ಮೊದಲು ಆ ಕೆಲಸವನ್ನೇ ನಿಗದಿ ಪಡಿಸಿಕೊಳ್ಳುವ ನಿಲುವೇ ಅದರ ಪ್ರಾಮುಖ್ಯತೆಗೆ ಸಾಕ್ಷಿ. ಗುಡಿಸುತ್ತಿದ್ದೆ, ಮೆಲುವಾಗಿ ಬೀಸುತ್ತಿದ್ದ ತಂಗಾಳಿಯ ವೇಗ ಮೆಲ್ಲಮೆಲ್ಲನೆ ಹೆಚ್ಚುತ್ತಾ, ಜೋರಾದ ಅಲೆಯೊಂದು ಅಷ್ಟೂ ಎಲೆಯ ಕಸವನ್ನು ಹರಡಿ ಮತ್ತೆ ಅಂಗಳದೊಳಕ್ಕೆ ತಳ್ಳಿತು, ಮತ್ತೆ ಗುಡಿಸಿ ನಾನೆಲ್ಲ ಹೊರತಳ್ಳಿ ಇನ್ನೇನು ಡಬ್ಬಿಗೆ ತುಂಬಬೇಕು, ಅಷ್ಟರಲ್ಲೇ ಇನ್ನೊಂದು ಅಂಥದ್ದೇ ತಂಗಾಳಿಯಲೆ... ನೆಲದ ಮಟ್ಟದಲೇ ಕಳ್ಳ ಹೆಜ್ಜೆಯಿಡುತ್ತಾ ಬಳಿಸಾರಿದ್ದು, ಹತ್ತಿರಾದಂತೆ ಭರ್ರನೇ ಬೀಸತೊಡಗುತಿತ್ತು... ಮುಂಗಾಲಿಗೆ ತಾಗುತ್ತಾ, ಹಿತವಾದ ಚಳಿಯ ಸ್ಪರ್ಶವಾಗಿಸುತ್ತಾ, ಕಚಗುಳಿಯಿಡುತ್ತಾ ಛೇಡಿಸಿದಂತನಿಸುವಂತೆ ಬೀಸುತ್ತಿರುವ ತುಂಟಗಾಳಿಯಲೆ.. ಆ ಗಳಿಗೆಗೆ ನನ್ನ ಕಂದಮ್ಮನಷ್ಟೇ ಮುದ್ದೆನಿಸಿತು, ಆಪ್ತವೆನಿಸಿತು.. ಅಲ್ಲೊಂದು ಹಿಡಿಹಿಡಿಯಾಟ ನಡೆಯುತ್ತಿದ್ದಂತಿತ್ತು. ತಂಗಾಳಿ ಎಲೆಗಳ ಹಿಂದೆ, ಎಲೆ ನನ್ನಂಗಳದ ಹಿಂದೆ, ನನ್ನ ಪೊರಕೆ ಚದುರಿದ ಎಲೆಗಳ ಹಿಂದೆ.. ಮತ್ತೆ ನಾನು ತಂಗಾಳಿಯ ಆಕರ್ಷಣೆಯ ಹಿಂದೆ.. ಒಮ್ಮೆಯಲ್ಲ, ಎರಡು ಬಾರಿಯಲ್ಲ, ನಾನು ಮುದಗೊಳ್ಳುತ್ತಿರುವುದು ಅರಿವಾಗಿದೆಯೋ ಎಂಬಂತೆ, ಮತ್ತೆ ಮತ್ತೆ ಆಡಿಸುತ್ತಿತ್ತು, ತಂಟೆಯೊಂದು ಜರುಗಿಬಿಟ್ಟಾಗಿದ್ದಾಗ, ಅಮ್ಮನ ಮುಖವನ್ನೇ ಕಳ್ಳದೃಷ್ಟಿಯಲಿ ನೋಡುವ ಕಂದ ಅಲ್ಲೊಂದು ಮುಗುಳ್ನಗು ಕಂಡರೆ ಮತ್ತೆ ನಿರಾಳವಾಗಿ ಆ ತುಂಟಾಟ ಮುಂದುವರೆಸುವ ಹಾಗೆ.. ಕೊನೆಗೂ ನನ್ನ ಹುಸುಮುನಿಸು "ಅಯ್ಯೋ..." ಅನ್ನುವೆರಡು ಅಕ್ಷರಗಳಲ್ಲಿ ವ್ಯಕ್ತವಾದ ಮೇಲೆಯೇ ಸುಮ್ಮನಾದದ್ದು ಅದು.  
ಗುಡಿಸಿ, ತೊಳೆದು ರಂಗೋಲಿಯಿಟ್ಟು ಒಳಬಂದವಳ ಯೋಚನೆ ಮನೆಯಂಗಳದಿಂದ ಮನದಂಗಳಕೆ ಚಾಚಿತು.

ಅಲ್ಲೂ ಹೀಗೆಯೇ. ಅಲ್ಲಿನ ಚಂದಕ್ಕೆ ಸರಿಹೊಂದದ ಆದರೆ ನಮಗಲ್ಲೇ ಇದ್ದರೂ ಅದೀತು ಅನಿಸುವ ಎಲೆಕಸ, ಚಂದ ಹೆಚ್ಚಿಸುವ ಹೂವು, ಮತ್ತೆ ಬಲಾತ್ಕಾರವಾಗಿ ಕಸ ಹೆಕ್ಕಿ ಹೊರಗೆಸೆವಲ್ಲಿ ಅದನ್ನು ಮತ್ತೆಮತ್ತೆ ಒಳನೂಕುವ ತಂಗಾಳಿ ಇವುಗಳನ್ನು ಕ್ರಮವಾಗಿ ಚಿಂತೆಗೆಡೆ ಮಾಡುವ ಕೆಲ ನೇತ್ಯಾತ್ಮಕ ವಿಷಯಗಳು, ಮುದಕೊಡುವ ಧನಾತ್ಮಕ ಸಂಗತಿಗಳು ಮತ್ತು ರಾಗಾದಿ ವ್ಯಸನಗಳ ಜೊತೆಗೆ ಸಮೀಕರಿಸಿ ನೋಡಿತು ನನ್ನೊಳಗಿನ ಭಾವನಾಲಹರಿ. ಹೂವು ಸಂತಸದ ಪ್ರತೀಕ. ಎಲೆಕಸವೆಂಬುವುದು ಅಂಗಳದ ಚಂದದ
ಪ್ರಶ್ನೆ ಬಂದಾಗ ವರ್ಜ್ಯಾರ್ಹ ಸಂಗತಿಯ ಪ್ರತೀಕ. ಹೂವರಳುವ ಪ್ರಕ್ರಿಯೆ ಹಲಕ್ರಿಯೆಗಳ ಸರಣಿಯ ಫಲ. ಎಲೆ ಚಿಗುರಿ ಆಹಾರ ತಯಾರಿಸುವ ಘಟ್ಟವೂ ಆ ಸರಣಿಯ ಒಂದು ಕೊಂಡಿ. ಆದರೆ ಕಾಲಕ್ರಮೇಣ, ಕಾಲವಶ ಆ ಎಲೆ ತನ್ನ ಸ್ವರೂಪ, ತನ್ನ ಪ್ರಾಮುಖ್ಯತೆ, ತನ್ನ ಬಂಧನದ ಬಿಗಿ ಎಲ್ಲವುದರಲ್ಲೂ ಬದಲಾವಣೆಗೊಳಗಾಗುತ್ತದೆ. ಅದು ನೈಸರ್ಗಿಕ ಬೆಳವಣಿಗೆ. ಹಾಗೆಯೇ ನಮ್ಮೊಳಗೊಂದು ಸಂತಸ ಹುಟ್ಟಬೇಕಾದರೆ ಅದು ಭಾವಸರಣಿಯೊಂದರ ಎಲ್ಲ ಕೊಂಡಿಗಳ ಮೂಲಕ ಹಾದು ಬಂದಿರುತ್ತದೆ. ಹಲಬಾರಿ ಮೇಲ್ಮೈಯ್ಯಲ್ಲಿ ನಮಗದರ ಬೆಳವಣಿಗೆಯ ಘಟ್ಟಗಳು ಗೋಚರವಾಗದಿದ್ದರೂ ಅದು ಹುಟ್ಟುವ ಪ್ರಕ್ರಿಯೆ ನವಮಾಸ ಮಗುವೊಂದು ಅಮ್ಮನ ಗರ್ಭದಲ್ಲಿ ರೂಪುಗೊಳ್ಳುವ ಹಾಗೆಯೇ ಸಾಗಿ ಬಂದಿರುತ್ತದೆ. ಅಲ್ಲಿ ಚಿಂತೆ, ನೋವು, ತ್ಯಾಗ, ಪರಿಶ್ರಮ, ಅಥವಾ ದುಖಃ ಎಂಬ ಈ ಯಾವುದದರೂ ಒಂದು ಅಸಹನೀಯ ನೆಲೆಯಲ್ಲಿ ನಾವು ಅರೆಗಳಿಗೆಯ ಮಟ್ಟಿಗಾದರೂ ಹಾದುಬಂದಿರುತ್ತೇವೆ. ಆದರೆ ಕಾಲಕ್ರಮೇಣ ಹೂವರಳಿ ಕಾಲವಶ ಆ ಅಸಹನೀಯವೆನಿಸುವ ವಿಷಯ ತನ್ನ ಪ್ರಾಮುಖ್ಯತೆಯನ್ನು ನಮ್ಮೊಳಗೆ ತಾನೇ ತಾನಾಗಿ ಕಳಕೊಂಡುಬಿಟ್ಟಿರುತ್ತದೆ, ಬಹುಶಃ ಅರಿವಿನೊಳಗಿಂದ ಕಳಚಿಕೊಂಡು ಮನದಂಗಳಕ್ಕೆ ಬಿದ್ದಿರುತ್ತದೆ. ಈಗ ಅದರ ವಿನ್ಯಾಸವೋ ಅಥವಾ ಅದರ ಅಂದಿನ ಪ್ರಾಮುಖ್ಯತೆಯ ಋಣೀಮನೋಭಾವವೋ ಅಥವಾ ನನ್ನದೆಂಬ ಮೋಹವೋ ಎತ್ತಿ ಹೊರಬಿಸುಡುವ ಮನಸಾಗುವುದಿಲ್ಲ. ಈ ಮೋಹ, ಮಾಯೆ, ರಾಗದಿ ವ್ಯಸನಗಳೆಂಬ ತಂಗಾಳಿ ಮತ್ತೆಮತ್ತೆ ಆ ವರ್ಜ್ಯಾರ್ಹ ವಿಷಯವನ್ನು ಒಳದೂಡುತ್ತದೆ, ಮನದಂಗಳದ ಅಂದಗೆಡಲು ಕಾರಣವಾಗುತ್ತದೆ. ಮನುಷ್ಯ ಎಂದ ಮೇಲೆ ರಾಗಾದಿ ವ್ಯಸನಗಳ ಇರುವಿಕೆ ಅಂಗಳದಲ್ಲಿ ತಂಗಾಳಿಯ ಬೀಸುವಿಕೆಯಷ್ಟೇ ಸಹಜ. ಆದರೆ ಇಲ್ಲಿ ಪ್ರಶ್ನೆ ಬರುವುದು ನಮ್ಮ ಪ್ರಯತ್ನದ್ದು.
 
ಅಂಗಳದಿಂದ ಹೊರಕ್ಕೆ ಗುಡಿಸಿದ ಎಲೆಕಸವನ್ನು ಅದೆಷ್ಟೋ ಬಾರಿ ಮತ್ತಂಗಳದೊಳಕ್ಕೆಳೆತಂದ ಗಾಳಿಯಲೆಯ ಮೇಲೆ ಮುನಿಸಿಕೊಳ್ಳದೇ ನಾನು ಅಷ್ಟೂ ಬಾರಿ ಮೊದಲ ಬಾರಿಯ ಶ್ರದ್ಧೆಯಿಂದಲೇ ಹೊರತಳ್ಳುವ ಪ್ರಯತ್ನದಲ್ಲಿ ತೊಡಗಿಕೊಳ್ಳಬಲ್ಲವಳು ಮನದಂಗಳದ ಕಸಕ್ಕಾಗುವಾಗ ಮೋಹವನ್ನು "ಬಿಟ್ಟೆನೆಂದರೆ ಬಿಡದೀ ಮಾಯೆ" ಎಂದು ದೂರುವುದೇಕೆ? ಕೆಲವೇ ಪ್ರಯತ್ನಗಳಲ್ಲಿ ನನ್ನ ತಾಳ್ಮೆ ಕಳೆದುಕೊಳ್ಳುವುದೇಕೆ? ಮನೆಯಂಗಳದಂತೆ ಮನದಂಗಳವೂ ಚೊಕ್ಕವಾಗಿರಬೇಕಾದರೆ ಕಸವದೆಷ್ಟೇ ಪ್ರಿಯವೆನಿಸಿದರೂ ಹೊರಗಟ್ಟಲೇಬೇಕಲ್ಲವೇ? ಮನೆಯಂಗಳದಂತೆ ಮನದಂಗಳವನ್ನೂ ಅಂದವಾಗಿಟ್ಟುಕೊಳ್ಳುವ ಜಾವಾಬ್ದಾರಿ ನನ್ನದೇ ಹೌದಲ್ಲವೇ... ಅನಿಸಿತು.

No comments:

Post a Comment