Tuesday, August 20, 2013

***

ಭಾವಗಳನ್ನು ಕಟ್ಟಿಹಾಕುವುದಾಗಲಿ, ಸೀಮಿತಗೊಳಿಸುವುದಾಗಲಿ, ಅಲ್ಲಿಷ್ಟು ಇಲ್ಲಿಷ್ಟು ಕೆತ್ತಿ ಮನಮೋಹಿಸುವಂತೆ ಮೂರ್ತೀಕರಿಸುವುದಾಗಲಿ ಸಾಧ್ಯವಿಲ್ಲದ ಮಾತು. ಅದು ಒಸರಿದರೆ ಮುಗಿಯಿತು, ಅದರ ಸ್ವರೂಪ ಮುಂದೆಷ್ಟೋ ಮಜಲುಗಳನ್ನು ಹಾದುಹೋಗಬೇಕಾಗಿ ಬಂದರೂ ಮೂಲಬಿಂಬವೆಂದಿಗೂ ಭಿನ್ನವಾಗುವುದೇ ಇಲ್ಲ. ಕಾಲಕ್ಕೆ ತಕ್ಕ ಕೋಲವೆಂಬಂತೆ ಕೆಲ ರೆಕ್ಕೆ ಪುಕ್ಕಗಳನ್ನು ಹಚ್ಚಿಕೊಂಡಿದೆಯೇನೋ ಅನಿಸಿದರೂ ಅದು ಒಸರಿದ್ದ ಗಳಿಗೆಯ ಅದರ ಸತ್ವತೀವ್ರತೆ ಮುಂದಿನ ಯಾವ ರೂಪಾಂತರ ವೇಷಾಂತರದಲ್ಲೂ ಉಳಿದುಕೊಳ್ಳದು, ಮತ್ತೆ ಆ ರೂಪಾಂತರ ವೇಷಾಂತರಗಳು ಆ ಭಾವದ ರೂಪಾಂತರ ವೇಷಾಂತರಗಳಷ್ಟೇ ಹೊರತು ಆ ಮೂಲ ಭಾವವಾಗುಳಿಯವು. ಇದು ನನ್ನ ಇಂದಿನವರೆಗಿನ ಅನುಭವ. ಬದುಕುತ್ತಾ ಸಾಗುವ ದಾರಿಯಲ್ಲೆ ಮುಖಾಮುಖಿಯಾಗುವ ವ್ಯಕ್ತಿತ್ವಗಳು ನಮ್ಮ ಅರಿವಿನೊಳಗೆ ಹೆಜ್ಜೆಯಿಕ್ಕಿದಾಗ ಗೊತ್ತಿಲ್ಲದೇ ಅವರೆಡೆಗೆ ಅನಿಯಂತ್ರಿತ, ಅನಿರೀಕ್ಷಿತ ಮತ್ತೆ ಕೆಲವೊಮ್ಮೆ ಅನಪೇಕ್ಷಿತವೂ ಹೌದು ಆದಂಥ ಭಾವನೆ ಹುಟ್ಟುತ್ತದೆ. ಅದು ಮುಂದೆ ಆ ಅಪರಿಚಯಗಳು ಹಿತಕರವಾದದ್ದೋ ಅಥವಾ ಅದಲ್ಲದ್ದೋ ಒಂದು ಸಂಬಂಧದಲ್ಲಿ ನಮ್ಮೊಂದಿಗೆ ಬೆಸೆದುಕೊಳ್ಳಲು ಕಾರಣವಾಗುತ್ತದೆ. ಸಂಬಂಧ ಹುಟ್ಟಲು ಈ ಭಾವನೆ ಕಾರಣವಾದರೂ ಆ ಭಾವನೆ ಹುಟ್ಟಲು ಕಾರಣವೊಂದಿರಲೇ ಬೇಕೆಂಬುದೇನೂ ಇಲ್ಲ. ಇಲ್ಲಿ ಎಫ್ ಬಿ ಯಲ್ಲಿ ಹಲವು ಬಂಧಗಳು ಸಿಕ್ಕಿವೆ ನನಗೆ. ಅವು ಹುಟ್ಟಿದ ಗಳಿಗೆಯ ಬಗ್ಗೆ, ಕಾರಣವಾದ ಆ ಭಾವನೆಯ ಬಗ್ಗೆ, ಅವು ಬದುಕಿನ ಭಾಗವಾದ ಬಗ್ಗೆ, ಮತ್ತವು ಕಾಲದೊಂದಿಗೆ ಬಲಯುತವಾಗಿ ಬೆಳೆಯುತ್ತಲೇ ಬರುತ್ತಿರುವ ಬಗ್ಗೆ ನನಗೆ ಹೆಮ್ಮೆಯಿದೆ. ಅದರಲ್ಲಿ ಬಹುಪಾಲು ಅಣ್ಣ-ತಮ್ಮಂದಿರದು. ಅಣ್ಣನೆನಿಸಿಕೊಂಡವರು ವಾತ್ಸಲ್ಯಪೂರ್ವಕ ನಡವಳಿಕೆಯಿಂದ ನನ್ನಲ್ಲಿ ಸುರಕ್ಷಿತತೆಯ ಅನಿಸಿಕೆಯನ್ನು ಮೂಡಿಸಿದರೆ, ತಮ್ಮನೆನಿಸಿಕೊಂಡವರು ಅಕ್ಕರೆ, ಆದರ, ಗೌರವ, ಮೆಚ್ಚುಗೆ..ಹೀಗೇ ಎಲ್ಲ ಪ್ರೀತಿಪೂರ್ವಕ ನಡವಳಿಕೆಗಳಿಂದ ನನಗೆ ನನ್ನ ಗರಿಮೆಯನ್ನು ತೋರಿಸಿಕೊಟ್ಟಿದ್ದಾರೆ. ಅಕ್ಕಾ, ತಂಗೀ ಎಂದು ಬಾಯ್ತುಂಬ ಕರೆದು ನನಗೆ ಸಂತೋಷ ತಂದುಕೊಡುವ ಈ ಎಲ್ಲ ಬಂಧಗಳಿಗೂ ನನ್ನ ನಮನಗಳು, ನಿಮ್ಮೆಲ್ಲರ ಬಾಳಿನಲ್ಲಿ ಬರುವ ಸಂಕಟಗಳ ನಿವಾರಣೆಯಲ್ಲಿ ನನ್ನ ಶುಭಹಾರೈಕೆಗಳ ಅಳಿಲುಸೇವೆ ಖಂಡಿತಾ ಸದಾಕಾಲ ಇರುತ್ತದೆ. ಇದೊಂದು ನಿತ್ಯಸತ್ಯ. ಆದರೆ ಇಂದಿನ ದಿನ ನಿಮ್ಮೆಲ್ಲರೊಂದಿಗೆ ಈ ಮಾತನ್ನ ಹಂಚಿಕೊಳ್ಳಬಯಸುತ್ತೇನೆ.


ರಕ್ಷಾಬಂಧನದ ಶುಭಹಾರೈಕೆಗಳು.



ಒಂದು ಮಾತು. ರಕ್ಷಾಬಂಧನದ ಬಗೆಗಿನ ನನ್ನ ಸ್ಟೇಟಸ್ ನ್ನು ಬೆಳಿಗ್ಗೆಯೇ ಹಾಕಬೇಕೆಂಬ ಆಸೆಯಿತ್ತು. ಆದರೆ ಎಫ್ ಬಿಯೊಳಗೆ ಬರುತ್ತಿದ್ದಂತೇ ಕೆಲ ಪೋಸ್ಟ್ ಗಳು ಸಾರಿದ ಮಾತು ಮನಸು ಒಪ್ಪಲಿಲ್ಲ. ಕೂಡಲೇ ಪ್ರತಿಕ್ರಿಯಿಸದೆ, ಕೆಲಹೊತ್ತು ಸುಮ್ಮನಿದ್ದುಬಿಟ್ಟು ಈಗ ಹಂಚ್ಕೊಳ್ಳುತ್ತಿದ್ದೇನೆ. ಬಂಧುಗಳೇ, ಯಾವುದೇ ಒಂದು ಕಡೆ ಒಳ್ಳೆಯ ಅಥವಾ ಒಳ್ಳೆಯದರ ಹಾಗೆ ಕಾಣುವ ವಿಷಯವೊಂದು ಎದುರಾದರೆ ಅದನ್ನು ಅದು ಹಾಗಿರಲಾರದು ಎಂಬ ಸಂಶಯದ ದೃಷ್ಟಿಯಿಂದ ನೋಡುವುದು ಅಗತ್ಯವೇ? ಪ್ರಪಂಚ ಒಳ್ಳೆಯದು ಒಂದಿಷ್ಟೂ ಎಲ್ಲೂ ಕಾಣದಷ್ಟು, ಕಂಡರೂ ಅದನ್ನು ಕೆಟ್ಟದರ ಛದ್ಮವೇಷವೆಂದು ನೋಡುವ ಅಗತ್ಯ ಇಷ್ಟು ತೀವ್ರವಾಗಿರುವಷ್ಟು ಕೆಟ್ಟು ಹೋಗಿದೆಯೇ? ಅಷ್ಟರ ಮಟ್ಟಿಗದು ನಮ್ಮನ್ನು ಭ್ರಮನಿರಸನಗೊಳಿಸಿದೆಯೇ? ಯೋಚಿಸಿನೋಡಿ.. ಒಳ್ಳೆಯದನ್ನು ಕೆಟ್ಟದೆಂದು ಬಿಂಬಿಸುವುದು ಚಿತ್ರದ ಹಸಿಬಣ್ಣದೊಳಗೊಂದು ಹನಿ ಮಸಿಯೆರಚಿದಂತಲ್ಲವೇ? ಒಂದು ಮನಸಿನಲ್ಲಿ ಹುಟ್ಟುವ ಪ್ರತಿಯೊಂದು ಮಾತೂ ಅದರ ಸ್ವಂತದ್ದು ಅದಕ್ಕೆ ಅದರದೇ ಆದ ಹಿನ್ನೆಲೆ ಮತ್ತು ಕಾರಣವಿರುತ್ತದೆ, ಒಪ್ಪುತ್ತೇನೆ. ಆದರೆ ಒಂದು ವಿಷಯವನ್ನು ಜನರಲೈಸ್ ಮಾಡಿ ಪ್ರಕಟಿಸುವಾಗ ಅದರ ಇನ್ನೊಂದು ಮಗ್ಗುಲಿನ ಬಗೆಗೂ ಯೋಚಿಸುವುದು ಒಳ್ಳೆಯದು ಅನ್ನುವುದು ನನ್ನ ಭಾವನೆ.


ಎಷ್ಟೋ ಕಡೆ ರಕ್ತಸಂಬಂಧಗಳಿಗಿಂತ ಮಿಗಿಲಾಗಿ ಯಾವುದೇ ಮೂರ್ತಕೊಂಡಿಗಳಿಲ್ಲದೇ ಬೆಸೆದುಕೊಂಡ ಸಂಬಂಧಗಳು ನಮಗೆ ಲೌಕಿಕವಾಗಿಯೂ, ಮಾನಸಿಕವಾಗಿಯೂ ಒದಗುವುದು ನಮ್ಮೆಲ್ಲರ ಗಮನಕ್ಕೆ ಬಂದಿರುವ ಮಾತೇ. ಮತ್ತೆ ಯಾವುದೇ ಕಾರಣಗಳಿಲ್ಲದೆ ಹುಟ್ಟುವ ಸಂಬಂಧದಲ್ಲಿನ ನಿಸ್ವಾರ್ಥ ಕಳಕಳಿ ಸಂತೋಷ ತಂದುಕೊಡುವುದೂ ಹೆಚ್ಚು ಮತ್ತವು ಪರಿಣಾಮಕಾರಿಯಾಗಿ ಕಷ್ಟಸುಖಗಳಲ್ಲಿ ನಮಗೊದಗುವುದೂ ಹೆಚ್ಚು. ಅಂದಮೇಲೆ ಒಡಹುಟ್ಟಿದ ಅಣ್ಣತಂಮಂದಿರ ಭಾಗ್ಯವಿಲ್ಲದ ನನ್ನಂಥ ಹೆಣ್ಣುಮಕ್ಕಳು ಮತ್ತು ಒಡಹುಟ್ಟಿದ ಅಕ್ಕತಂಗಿಯರಿಲ್ಲದ ಗಂಡುಮಕ್ಕಳು ಅಥವಾ ಇದ್ದವರೂ ಸರಿಯೇ..ಇಲ್ಲಿ ಎದುರಾಗುವ ಕೆಲವ್ಯಕ್ತಿತ್ವಗಳಲ್ಲಿ ಆ ಬಂಧುತ್ವದ ಛಾಯೆ ಕಂಡು ಅದನ್ನು ಹಾಗೇ ಸ್ವೀಕರಿಸಿದರೆ ಅದನ್ನು ಬಲಹೀನವೆನ್ನಲಾದೀತೇ? ತಮ್ಮೊಳಗಿನ ತುಡಿತಕ್ಕೆ ಅಲ್ಲಿ ಪ್ರತಿಕ್ರಿಯೆ ಕಂಡು ಪರಸ್ಪರರನ್ನು ಅಕ್ಕತಮ್ಮಂದಿರೆಂದೋ ಅಣ್ಣತಂಗಿಯಂದಿರೆಂದೋ ಕಂಡುಕೊಂಡರೆ ಅದನ್ನು ನಾಟಕೀಯವೆಂದೋ, ಸ್ವಾರ್ಥಪರ ಅಥವಾ ದೂರದ ಯಾವುದೋ ಉದ್ದೇಶದ ಸಲುವಾಗಿಯೋ ಹುಟ್ಟಿಕೊಂಡವುಗಳು ಎಂಬಂತೆ ಸಂಶಯಿಸುವುದು, ಹೀಗಳೆಯುವುದು, ಕೆಲಸವಿಲ್ಲದವರ ವ್ಯಾಪಾರವೆಂಬಂತೆ ಬಿಂಬಿಸುವುದು..ಇವೆಲ್ಲವುಗಳಿಂದ ಅವನ್ನು ಅತಿ ಪ್ರಾಮಾಣಿಕವಾಗಿ ಅನುಭವಿಸಿ ಸವಿಯುತ್ತಿರುವ ನನ್ನಂಥವರಿಗೆ ಖಂಡಿತಾ ಕಸಿವಿಸಿಯಾಗುತ್ತದೆ. ನಿರ್ಬಲ ಅಥವಾ ಅಶುದ್ಧ ಹಿನ್ನೆಲೆಯ ಮತ್ತು ಉದ್ದೇಶದ ಸಂಬಂಧಗಳೂ ಇಲ್ಲವೇ ಇಲ್ಲವೆಂಬುದು ನನ್ನ ವಾದವಲ್ಲ. ಆದರೆ ಎಲ್ಲವೂ ಅಂಥವುಗಳೇ ಅಥವಾ ಇಂಥವುಗಳೇ ಎಂದು ಸಾರಾಸಗಟಾಗಿ ಘೋಷಿಸುವುದಾಗದು. ಅಯಾಯಾ ಸಂದರ್ಭದಲ್ಲಿ ಅದಕ್ಕನುಗುಣವಾದ ಅಭಿಪ್ರಾಯವನ್ನು ಮಂಡಿಸುವುದೊಳ್ಳೆಯದೇ ಹೊರತು, ನನ್ನ ಅನುಭವ ಇದು, (ಅದರಲ್ಲೂ ಒಂದು ವ್ಯವಸ್ಥೆಯ ಕೆಡುಕನ್ನು ಬಿಂಬಿಸುವ ಮಾತು ಬಂದಾಗ) ಹಾಗಾಗಿ ಇದೇ ಸರ್ವತ್ರವ್ಯಾಪಿ ಸತ್ಯವೆನ್ನುವುದಾಗದು.

2 comments:

  1. ನಿಮ್ಮ ಈ ಬರಹ ಸಕಾಲೀನ.
    ಬಂಧನಗಳು ಬರೀ ಬಾಯಲ್ಲಿದ್ದಾರೆ ಎಲ್ಲಿ ಚೆನ್ನ? ಅವು ಮನಸ್ಸಿನಲ್ಲೂ ನೆಲೆ ಊರಿದಾಗಲೇ ಅವಕೂ ಸಾರ್ಥಕ್ಯ.

    ReplyDelete